ಬೆಂಗಳೂರು ವಿಶ್ವವಿದ್ಯಾಲಯದ ೩ನೆ ಸೆಮಿಸ್ಟರ್ ಪಠ್ಯದ ಅವ್ಯವಸ್ಥೆ

ಬೆಂಗಳೂರು ವಿಶ್ವವಿದ್ಯಾಲಯದ ೩ನೆ ಸೆಮಿಸ್ಟರ್ ಪಠ್ಯದ ಅವ್ಯವಸ್ಥೆ

ಬರಹ

ಮೂರನೆಯ ಸೆಮಿಸ್ಟರ್ ಬಿ.ಎ, ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಹುಮುಖಿ - ೩ ,ಕಾಲೇಜ್ ಪ್ರಾರಂಭವಾಗಿ ತಿಂಗಳ ನಂತರ ಮುದ್ರಣಗೊಂಡು ಮಾರುಕಟ್ಟೆಗೆ ಬಂದಿತು. ಅದರ ಗಾತ್ರ ನೋಡಿ ಸಮಾಧಾನವಾಯಿತು. ಕಾರಣ ಹಿಂದಿನ ಎರಡು ಸೆಮಿಸ್ಟರ್ ಗಳಲ್ಲೂ ತಲಾ ಮುನ್ನೂರು ಪುಟಗಳ ಪಠ್ಯ ನಿಗದಿಯಾಗಿತ್ತು. ( ೨೯೦+೩೪೦ ). ಈ ಬಾರಿ ೧೩೦ ಪುಟಗಳ ಪುಸ್ತಕ ನೋಡಿ ಸಮಾಧಾನವಾಗದಿರುತ್ತದೆಯೇ ? ಆದರೆ ಆ ಸಂತಸ ಕ್ಷಣಿಕವಾದದ್ದೆಂದು ಪುಸ್ತಕ ತೆರೆದು ನೋಡಿದ ಮೇಲಷ್ಟೆ ಅರ್ಥವಾದದ್ದು. ನೂರಕ್ಕೂ ಹೆಚ್ಚು ಪುಟಗಳಷ್ಟು ಗಾತ್ರದ ಎರಡು ಪಠ್ಯ ಭಾಗಗಳನ್ನು - ದೇವನೂರು ಮಹಾದೇವ ಅವರ " ಒಡಲಾಳ " , ಮತ್ತು ಗಿರೀಶ್ ಕಾರ್ನಾಡರ " ತುಘಲಕ್ " ನಾಟಕ - ಈ ಪಠ್ಯದಲ್ಲಿ ಮುದ್ರಿಸಿಯೇ ಇಲ್ಲ. ಆದರೆ ಆ ಪಠ್ಯಗಳಿಗೆ ಸಂಬಂಧಿಸಿದ ಪೂರ್ವ ಪಠ್ಯ , ಪೂರಕ ಪಠ್ಯ ಎಲ್ಲವನ್ನೂ ಈ ಪಠ್ಯ ಪುಸ್ತಕ ಒಳಗೊಂಡಿದೆ!.

ಈ ಎರಡೂ ಪಠ್ಯಗಳನ್ನು ಇಲ್ಲಿ ಮುದ್ರಿಸದಿರುವ ಬಗ್ಗೆ ಯಾವ ವಿವರಣೆಯನ್ನೂ ಪುಸ್ತಕದಲ್ಲಿ ಕೊಟ್ಟಿಲ್ಲ. ಆ ಪಠ್ಯಗಳು ಬಿಡಿಯಾಗಿ ಬೇರೆ ಮುದ್ರಣಗೊಳ್ಳುತ್ತಿವೆಯೇ ಅಥವಾ ಮುದ್ರಿತ ಪ್ರತಿಗಳು ದೊರೆಯುತ್ತವೆಯೇ ? ಎಂಬ ಬಗ್ಗೆಯೂ ಪ್ರಸ್ತಾಪವಿಲ್ಲ.ಈ ಪಠ್ಯಪುಸ್ತಕ ಸಿದ್ಧಪಡಿಸಲು ಒಟ್ಟು ಆರು ಜನ ಸಂಪಾದಕರು ಮತ್ತು ಒಬ್ಬ ಪ್ರಧಾನ ಸಂಪಾದಕರು ಇದ್ದುಕೊಂಡು ಇಂತಹ ಪ್ರಮಾದವಾಗಿರುವುದಕ್ಕೆ ಆಶ್ಚರ್ಯವಾಗುತ್ತದೆ. ಇನ್ನು ಕೇವಲ ಹದಿನೈದು ದಿನಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದೆ. ಅಷ್ಟರಲ್ಲಿ ಆ ಪಠ್ಯಗಳು ವಿದ್ಯಾರ್ಥಿಗಳ ಕೈ ಸೇರುತ್ತವೆಯೇ ?

ಇದೇ ಸಂದರ್ಭದಲ್ಲಿ ಮೂರು ಮತ್ತು ನಾಲ್ಕನೆಯ ಸೆಮಿಸ್ಟರ್ ಬಿ.ಎ. ಕನ್ನಡ ಭಾಷಾ ಪಠ್ಯ " ಸಾಹಿತ್ಯ ಸಂವಾದ - ೨ " ರ ಬಗ್ಗೆಯೂ ಪ್ರಸ್ತಾಪಿಸಬೇಕಿದೆ. ಪಠ್ಯದ ಕೊನೆಯಲ್ಲಿ ಪ್ರಶ್ನೆ ಪತ್ರಿಕೆಯ ಸ್ವರೂಪದೊಂದಿಗೆ ೩ನೆಯ ಸೆಮಿಸ್ಟರಿನ ಒಂದು ಮಾದರಿ ಪ್ರಶ್ನೆಪತ್ರಿಕೆ ಇದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ೪ನೆ ಸೆಮಿಸ್ಟರಿನ ಪ್ರಶ್ನೆಗಳೂ ಸೇರಿಕೊಂಡಿವೆ ! ( ಭಾಗ-೨ ೩ನೆಯ ಪ್ರಶ್ನೆ ಮತ್ತು ಭಾಗ-೩ ಎರಡನೆಯ ಪ್ರಶ್ನೆ. )

ಈಗಾಗಲೇ ಅವಧಿಯೊಳಗೆ ಮುಗಿಸಲಾಗದಷ್ಟು ಪಠ್ಯದ ಹೊರೆಯನ್ನು ತುಂಬಿರುವುದಲ್ಲದೆ ಈ ರೀತಿಯ ಅವ್ಯವಸ್ಥೆಗಳನ್ನೂ ಹೊರಿಸಲಾಗಿದೆ . ?

ಸೆಮಿಸ್ಟರ್ ವ್ಯವಸ್ಥೆಯಲ್ಲಿ ಲಭ್ಯವಿರುವ ಕಾರ್ಯಾವಧಿ ೯೦ ದಿನಗಳು. ವಾಸ್ತವವಾಗಿ ಒಂದೊಂದು ಭಾಷಾ ಪತ್ರಿಕೆಗೆ ಸಿಗುವುದು ಕೇವಲ ೪೮ ಗಂಟೆಗಳು.ಐಚ್ಚಿಕ ಕನ್ನಡಕ್ಕೆ ಸಿಗುವುದು ಕೇವಲ ೬೦ ಗಂಟೆಗಳು ಈ ಅವಧಿಯ ಒಳಗೇ ಪೂರ್ವ ಪಠ್ಯ, ಪಠ್ಯ, ಪೂರಕ ಪಠ್ಯ ಎಲ್ಲವನ್ನೂ ಅಧ್ಯಾಪಕರು ಮಾಡಬೇಕಿದೆ. ಪ್ರಶ್ನೆ ಪತ್ರಿಕೆ ಇವೆಲ್ಲವನ್ನೂ ಒಳಗೊಂಡಿರುತ್ತದೆ.. ಈ ಸೀಮಿತ ಅವಧಿಯಲ್ಲಿ ಇವೆಲ್ಲವನ್ನೂ ಪಾಠ ಮಾಡುವುದು ಸಾಧ್ಯವೇ ಇಲ್ಲ.

ಹೊಸ ಮಾದರಿಯ ಪಠ್ಯಗಳನ್ನು ಜಾರಿಗೆ ತರುವಾಗ ಈ ಪಠ್ಯಗಳ ಸ್ವರೂಪದ ಬಗ್ಗೆ ,ಎದುರಾಗುವ ಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆ ಅಗತ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet