ಬೆಂಡೆಕಾಯಿಯ ನಂಜಾಣು ರೋಗದ ನಿಯಂತ್ರಣ
ಬೆಂಡೆಕಾಯಿ ಪಲ್ಯ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿಳಿ ಬೆಂಡೆಕಾಯಿಗೆ ಉತ್ತಮ ಮಾರುಕಟ್ಟೆಯೂ ಇದೆ. ಬಿಳಿ ಅಷ್ಟಪಟ್ಟಿ ಬೆಂಡೆ ಹೆಚ್ಚು ಬೆಲೆಯ ಉತ್ತಮ ಇಳುವರಿ ನೀಡಬಲ್ಲ ಸ್ಥಳೀಯ (ದಕ್ಷಿಣ ಕನ್ನಡ, ಉಡುಪಿ) ತಳಿ. ಆದರೆ ಉತ್ತಮ ಫಸಲು ಪಡೆಯಲು ಮಾತ್ರ ಅದೃಷ್ಟ ಬೇಕೇ ಬೇಕು. ಕಾರಣವೇನೆಂದರೆ ಯಾವುದೇ ಸಮಯದಲ್ಲಿ ಈ ಗಿಡದ ಎಲೆ ಹಳದಿಯಾಗಿ ಇಳುವರಿ ಸಿಗದೇ ಹೋಗಬಹುದು. ಇದೊಂದು ರೋಗ. ಈ ರೋಗ ಏನು? ಹೇಗೆ ಬರುತ್ತದೆ? ಇಲ್ಲಿದೆ ಮಾಹಿತಿ.
ಬಿಳಿ ಬೆಂಡೆಯನ್ನು ಕರಾವಳಿ ಮಲೆನಾಡಿನಲ್ಲಿ ಹೆಚ್ಚಿನವರು ಕೈತೋಟದ ಬೆಳೆಯಾಗಿ ಬೆಳೆಸುವವರು. ಕೆಲವು ವಾಣಿಜ್ಯಿಕವಾಗಿಯೂ ಬೆಳೆಸುತ್ತಾರೆ. ಇದು ಊರ ಬೆಂಡೆ ಎಂಬ ಕಾರಣಕ್ಕೆ ಬೆಲೆ- ಬೇಡಿಕೆ ಚೆನ್ನಾಗಿರುತ್ತದೆ. ಆದರೆ ಹಳದಿ ಎಲೆಯಾಗುವ ವೈರಸ್ ರೋಗ ಬಂದರೆ ಮಾತ್ರ ಬೆಳೆ ಹಾಳಾಗಿ ಹೋಗುತ್ತದೆ. ನಂತರ ಬೀಜವನ್ನೂ ಬೇರೆ ಮೂಲದಿಂದಲೇ ಆರಿಸಬೇಕು. ಬಿಳಿ ಬೆಂಡೆಗೆ ಯಾವಾಗ ಬೇಕಾದರೂ ವೈರಸ್ ಖಾಯಿಲೆ ಬರಬಹುದು.
ಆಂಗ್ಲ ಭಾಷೆಯ ವೈರಸ್ ಅಂದರೆ ಕನ್ನಡದಲ್ಲಿ ನಂಜಾಣು. ಇದನ್ನು ‘ಮೊಝಾಯಿಕ್’ ಎನ್ನುತ್ತಾರೆ. ಇದು ಸಸ್ಯ ಶರೀರದ ಒಳ ಅಂಗಗಳಿಗೆ ತಗಲುವ ನಂಜು. ಇದು ಶಾಶ್ವತ ಸೋಂಕಾಗಿದ್ದು ಇದನ್ನು ಸರಿಪಡಿಸುವ ಕಾರ್ಯ ಸದ್ಯದ ಮಟ್ಟಿಗೆ ಸಮಯ, ಶ್ರಮದ ವ್ಯರ್ಥ. ‘ಪ್ರೊಕ್ಯಾರಿಯೋಟ್ಸ್’ ಅಥವಾ ಮೊನಿರಾ ಸಾಮ್ರಾಜ್ಯದ ಪ್ರೋಟೋಫೈ ವಿಭಾಗದಲ್ಲಿನ ಮೈಟೋಕ್ಯಾಟೋ ಬಯೋಟ್ಸ್ ವರ್ಗಕ್ಕೆ ಸೇರಿಸಲಾದ ವೈರಸ್‌ಗಳು ಸಾವಯವ ವಿಕಾಸ ಕ್ರಮದಲ್ಲಿ ಭೂಮಿಯ ಮೇಲೆ ಮೊದಲು ಉಗಮಗೊಂಡ ಜೀವ ವಸ್ತುಗಳು. ಇವು ಜೀವಿ ಮತ್ತು ನಿರ್ಜೀವಿಗಳೆರಡರ ಲಕ್ಷಣವನ್ನು ತೋರ್ಪಡಿಸುವುದರಿಂದ ವೈರಸ್‌ಗಳನ್ನು ನಿರ್ಜೀವ ಮತ್ತು ಸಜೀವ ವಸ್ತುಗಳ ನಡುವಿನ ಕೊಂಡಿ ಎಂದು ಪರಿಗಣಿಸಲಾಗಿದೆ. ವೈರಸ್ ಎಂದರೆ ಲ್ಯಾಟೀನ್ ಭಾಷೆಯಲ್ಲಿ ವಿಷ ಎಂದರ್ಥ. ವೈರಸ್‌ಗಳು ಸಾಮಾನ್ಯ ಸಂಯುಕ್ತ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಲಾಗದ, ಅತಿಥೇಯ ಜೀವಂತ ಕೋಶವೊಂದರೊಳಗೆ ಪ್ರಜನನ ಮತ್ತು ಚಯಾಪಚಯ ಕ್ರಿಯೆಯನ್ನು ನಡೆಸಲು ಸಾಮಾರ್ಥ್ಯವಿರುವ, ರೋಗಕಾರಕ ಜೀವ ಕಣಗಳು.
ಮಾನವ ಇತಿಹಾಸದ ಅನಾದಿಕಾಲದಿಂದಲೂ ಮನುಷ್ಯನಿಗೆ ವೈರಸ್‌ಗಳಿಂದ ಸಿಡುಬು, ರಾಬಿಸ್, ಹಳದಿ ಜ್ವರ (ಪ್ರಸ್ತುತ ಕೊರೋನಾ) ಮುಂತಾದ ಬೇರೆ ಬೇರೆ ರೋಗಗಳು ಬರುತ್ತಿತ್ತಾದರೂ ಇದಕ್ಕೆ ನಿಖರವಾದ ಕಾರಣ ತಿಳಿದಿರಲಿಲ್ಲ. ೧೮೮೬ ರಲ್ಲಿ ಡಚ್ ನ ಕೃಷಿ ತಜ್ಞ ಆಡಾಲ್ಫ್ ಮೇಯರ್ ಎಂಬಾತ ತಂಬಾಕಿನ ಎಲೆಗೆ ವೈರಾಣು ಸೋಂಕು ತಗಲುವುದು ಮತ್ತು ಆ ರೋಗ ಸೋಂಕಿತವಾದ ಎಲೆಗಳ ರಸವನ್ನು ಬೇರೆ ಎಲೆಗಳ ಅಂಗಂಶಕ್ಕೆ ತಗಲಿಸಿದಾಗ ಅದಕ್ಕೂ ರೋಗ ಹರಡುವ ಸಾಮಾರ್ಥ್ಯವಿರುವುದನ್ನು ತೋರಿಸಿಕೊಟ್ಟ. ನಂತರ ಇವಾನೋವ್‌ಸ್ಕಿ ಎಂಬ ರಷ್ಯನ್ ವಿಜ್ಞಾನಿ ೧೯೩೫ ರಲ್ಲಿ ತಂಬಾಕಿನ ಎಲೆಗಳಲ್ಲಿರುವ ವೈರಸ್ ಗಳನ್ನು ಪತ್ತೆ ಮಾಡಿದ. ಅಲ್ಲದೆ ವೈರಸ್‌ಗಳು ಅತೀ ಸೂಕ್ಷ್ಮ ಶೋಧಕಗಳೆನಿಸಿದ ಬ್ಯಾಕ್ಟೀರಿಯಾ ಶೋಧನ ಪತ್ರಗಳ ಮೂಲಕವೂ ನುಸುಳಿ ಹೋಗಬಲ್ಲಷ್ಟು ಅತೀ ಸೂಕ್ಷ್ಮ ಎಂದು ತೋರಿಸಿಕೊಟ್ಟ.
೧೯೩೫ ರಲ್ಲಿ ಸ್ಪಾನ್ಲೆ ಎಂಬ ವೈರಾಣು ತಜ್ಞ ತಂಬಾಕಿನ ಮೊಝಾಯಿಕ್ ವೈರಸನ್ನು ಪ್ರತ್ಯೇಕಿಸಿ ಹರಳಿನ ರೂಪದಲ್ಲಿ ಸಂಸ್ಕರಿಸಿದ. ರಾಸಾಯನಿಕ ವಿಶ್ಲೇಷಣೆಗಳಂತೆ ವೈರಸ್‌ಗಳು ನ್ಯೂಕ್ಲಿಯೋ ಪ್ರೋಟೀನುಗಳು. ವೈರಸ್ ಖಾಯಿಲೆ ಎಂದರೆ ಅದು ಸ್ವಲ್ಪ ತೀವ್ರ ತರಹದ ಖಾಯಿಲೆಯೇ ಸರಿ. ಜೀವ ಕೋಶಗಳ ಒಳಗೆ ಸೇರಿಕೊಳ್ಳುವ ಇವುಗಳನ್ನು ಗುರಿಯಾಗಿರಿಸಿ ನಾಶ ಮಾಡುವುದು ಮುಂತಾದ ಕೆಲಸಗಳು ಕಷ್ಟದವು. ಎಲ್ಲಾ ವೈರಸ್‌ಗಳೂ ಕಡ್ಡಾಯವಾಗಿ ಪರಾವಲಂಬಿ ಜೀವಿಗಳು. ಯಾವುದಾದರೂ (ಅತಿಥೇಯ) ಜೀವ ಕೋಶಗಳ ಒಳಗೆ ಅವು ತನ್ನ ಪ್ರಜನನ ನಡೆಸುವವುಗಳು. ಜೀವ ಕೋಶಗಳ ಹೊರಗೆ ಅವುಗಳ ಯಾವುದೇ ಚಟುವಟಿಕೆ ಇರುವುದಿಲ್ಲ. ತನ್ನ ಪ್ರಜನನ ಸಂದರ್ಭದಲ್ಲಿ ಇಡೀ ವೈರಸ್ ಕಣ ಅತಿಥೇಯ ಜೀವಿಯ ಜೀವ ಕೋಶವನ್ನು ಪ್ರವೇಶಿಸುತ್ತದೆ. ಅತಿಥೇಯ ಜೀವ ಕೋಶ ಉತ್ಪತ್ತಿ ಮಾಡುವ ಕಿಣ್ವಗಳ ಚಟುವಟಿಕೆಯಿಂದ ವೈರಸ್ ಕಣದ ಪ್ರೊಟೀನು ಕವಚ ಕರಗಿ ಹೋಗಿ ವೈರಾಣುವಿನ ನಡು ಭಾಗದಲ್ಲಿರುವ ನ್ಯೂಕ್ಲಿಯಿಕ್ ಆಮ್ಲ ಕೋಶ ದ್ರವ್ಯದೊಳಗೆ ಬಿಡುಗಡೆಯಾಗುತ್ತದೆ. ಈ ರೀತಿ ಬಿಡುಗಡೆಗೊಂಡ ನ್ಯೂಕ್ಲಿಯಿಕ್ ಆಮ್ಲದ ತಂತು ಅತಿಥೇಯಕೋಶದ ಘಟಕಗಳನ್ನು ಬಳಸಿಕೊಂಡು ತನ್ನನ್ನೇ ಹೋಲುವ ಅನೇಕ ಪ್ರತಿಗಳನ್ನು ಉತ್ಪಾದಿಸುತ್ತವೆ. ಇದಾದ ನಂತರ ವೈರಸ್ ಕಣಗಳಿಗೆ ಅಗತ್ಯವಾದ ಪ್ರೋಟೀನುಗಳು ಉತ್ಪತ್ತಿಯಾಗುತ್ತವೆ. ನ್ಯೂಕ್ಲಿಯಿಕ್ ಆಮ್ಲದ ಪ್ರತಿಗಳು ಮತ್ತು ಪ್ರೋಟೀನು ಘಟಕಗಳು ಸಂಯೋಜನೆಗೊಂಡು ಹೊಸ ವೈರಸ್ ಕಣಗಳು ರೂಪುಗೊಳ್ಳುತ್ತವೆ. ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರೋಟೀನು ಕವಚ ಸೇರಿಕೊಂಡು ಉಂಟಾದ ಹೊಸ ವೈರಸ್ ಕಣಗಳಿಗೆ ವೈರಾಣು ಎಂದು ಹೆಸರು.
ಈ ವೈರಾಣು ಸಸ್ಯ ಜೀವ ಕೋಶಗಳಲ್ಲಿ ಸೇರಿಕೊಂಡು ಆ ಸಸ್ಯದ ಜೀವ ಕೊಶವನ್ನು ಛಿದ್ರ ಮಾಡಿ ತನ್ನ ಬೆಳವಣಿಗೆಯನ್ನೇ ವೃದ್ದಿಸಿಕೊಳ್ಳುತ್ತವೆ. ಆದ ಕಾರಣ ಸಸ್ಯಗಳು ವೈರಸ್ ಸೋಂಕಿಗೆ ಒಳಗಾದಾಗ ತನ್ನ ಸ್ವಾಭಾವಿಕ ಬೆಳವಣಿಗೆಯನ್ನು ಬಿಟ್ಟು ಅಸ್ವಾಭಿವಿಕವಾಗುತ್ತವೆ ಅಥವಾ ವಿಕಾರವಾಗುತ್ತದೆ. ವೈರಸ್ ಗಳು ಮನುಷ್ಯ, ಪ್ರಾಣಿ ಮತ್ತು ಸಸ್ಯಗಳಿಗೆ ತೊಂದರೆಯನ್ನು ಮಾಡುತ್ತವೆ. ವೈರಸ್‌ಗಳು ಎಲ್ಲಾ ರೋಗಕಾರಕಗಳು. ಇವು ರೋಗ ಗ್ರಸ್ತ ಜೀವಿಯಿಂದ ಆರೋಗ್ಯವಂತ ಜೀವಿಗಳಿಗೆ ಬೇರೆ ಬೇರೆ ವಿಧಾನದಲ್ಲಿ ಹರಡುತ್ತದೆ. ಪ್ರಾಣಿ ಮತ್ತು ಮಾನವರಿಗೆ ಉಗುಳು, ರಕ್ತ, ಲೈಂಗಿಕ ಸಂಪರ್ಕದಿಂದ ಹಾಗೂ ಗಾಳಿ, ನೀರು, ಕೀಟ, ಸೊಳ್ಳೆ, ನೊಣ ಮುಂತಾದ ಮಧ್ಯವರ್ತಿಗಳ ಮೂಲಕ ಹರಡುತ್ತದೆ. ಸಸ್ಯಕ್ಕೆ ವೈರಸ್ ರೋಗಗಳು ಮಧ್ಯವರ್ತಿಗಳಾದ ರಸ ಹೀರುವ ಕೀಟಗಳ ಮೂಲಕ, ನೀರಿನ ಮೂಲಕ, ಕಸಿ ವಿಧಾನದ ಮೂಲಕ ರೋಗಗ್ರಸ್ತ ಬೀಜಗಳ ಮೂಲಕ ಹರಡುತ್ತದೆ.
ಹಲವಾರು ಬಗೆಯ ಸಸ್ಯಗಳಿಗೆ ಮೊಸಾಯಿಕ ರೋಗ ಬರುತ್ತದೆ. ಈ ರೋಗಕ್ಕೆ ತುತ್ತಾದ ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಎಲೆಗಳಲ್ಲಿ ಬಣ್ಣ ಬಣ್ಣದ ತೇಪೆ ಉಂಟಾಗುತ್ತದೆ. ಕಾಯಿಗಳು ಆರೋಗ್ಯವಾಗಿ ಬೆಳೆಯಲಾರವು. ಎಲೆ, ಕಾಯಿಗಳು ಗಾತ್ರದಲ್ಲಿ ಚಿಕ್ಕದಾಗುವುದು, ಕುಬ್ಜವಾಗುವುದು, ಗುಚ್ಚವಾಗುವುದು ಸಾಮಾನ್ಯ ಲಕ್ಷಣ. ಬೆಂಡೆ ಹಾಗೂ ಸಿಹಿ ಕುಂಬಳಕ್ಕೆ ವೈರಸ್ ಖಾಯಿಲೆ ಬರುವುದು ಬೀಜದಿಂದ ಮತ್ತು ರೋಗ ಭಾಧಿತ ಸಸ್ಯಗಳಲ್ಲಿ ರಸ ಹೀರುವ ಕೀಟ ಕುಳಿತು ರಸ ಹೀರಿ ಆರೋಗ್ಯವಂತ ಸಸ್ಯದಲ್ಲಿ ಕುಳಿತು ರಸ ಹೀರಿದಾಗ. ಸಾಮಾನ್ಯವಾಗಿ ಬೆಂಡೆ ಬೆಳೆಯುವ ರೈತರು ನಾನು ಬೀಜ ಆಯ್ಕೆ ಮಾಡಿದ್ದರಲ್ಲಿ ಈ ರೋಗ ಇರಲಿಲ್ಲ ಎಂದು ವಾದಿಸುತ್ತಾರೆ. ನಾನು ಬೀಜ ಆಯ್ಕೆ ಮಾಡಿದ ಬೆಂಡೆ ಸಸಿಗಳಲ್ಲಿ ಯಾವುದರಲ್ಲೂ ರೋಗ ಲಕ್ಷಣ ಇರಲಿಲ್ಲ ಎನ್ನುವವರೂ ಇದ್ದಾರೆ. ಇದು ಸರಿ ಇರಬಹುದು. ಆದರೆ ಆ ಸಸ್ಯಕ್ಕೆ ಯಾವಾಗಲೋ ಈ ವೈರಾಣು ಸೋಂಕು ತಗಲಿದ್ದು ಅದು ಆ ಬೆಳೆಯಲ್ಲಿ ಗೋಚರವಾಗದೆ ಮತ್ತೊಂದು ಬೆಳೆಯಲ್ಲಿ ಗೋಚರವಾಗಬಹುದಾದ ಸಾಧ್ಯತೆಯೂ ಇದೆ. ಗಿಡದ ಎಲೆಯಲ್ಲಿ ಕೀಟವೊಂದು ಕುಳಿತು ರಸ ಹೀರಿ ಅದರ ರಸ ಸಸ್ಯದ ಜೀವ ಕೋಶಕ್ಕೆ ಸೇರಿ ಅದು ಪ್ರಜನನ ಆಗುವ ಸಮಯಕ್ಕೆ ಗಿಡವು ಒಣಗಿ ಹೋಗಿ ಅದು ಸಸ್ಯದಲ್ಲಿ ರೋಗ ಚಿನ್ಹೆಯನ್ನು ತೋರ್ಪಡಿಸದೆಯೂ ಇರಬಹುದು. ಆದ ಕಾರಣ ತರ್ಕಕ್ಕೆ ಇಲ್ಲಿ ಅವಕಾಶ ಇಲ್ಲ. ರೋಗ ಬಂದಿದೆ ಎಂದಾದರೆ ಅದಕ್ಕೆ ವೈರಸ್ ಸೋಂಕು ತಗಲಿದೆ ಎಂದೇ ಅರ್ಥ. ಇನ್ನು ರೋಗವು ರೋಗ ಪೀಡಿತ ಸಸಿಯನ್ನು ಕತ್ತಿ ಇಲ್ಲವೇ ಇನ್ಯಾವುದೇ ಆಯುಧಗಳಿಂದ ಕಡಿದು ನಾಶ ಮಾಡಿ ಅದೇ ಕತ್ತಿಯನ್ನು ಯಾವುದೇ ರೀತಿಯಲ್ಲಿ ಸೋಂಕು ಮುಕ್ತ ಗೊಳಿಸದೆ ಅರೋಗ್ಯವಂತ ಸಸಿಯ ಯಾವುದಾದರೂ ಭಾಗವನ್ನು ಕಡಿದರೆ ಅದಕ್ಕೆ ರೋಗ ಪ್ರಸರಿಸುತ್ತದೆ.
ಸಾಮಾನ್ಯವಾಗಿ ಬೆಂಡೆಯನ್ನು ತೆರೆದ ವಾತಾವರಣದಲ್ಲಿ ಬೆಳೆಸುವುದು ಪದ್ದತಿ ತೆರೆದ ವಾತಾವರಣದಲ್ಲಿ ಬೆಳೆಸುವಾಗ ಹಾರುವ ಕೀಟಗಳು ಸಸ್ಯದ ಎಲೆಯ ಮೇಲೆ ಕುಳಿತು ರಸ ಹೀರುವುದು, ಮುಂತಾದವುಗಳು ಸಾಮಾನ್ಯ. ರಸ ಹೀರುವ ಕೀಟಗಳು, ಕಂಬಳಿ ಹುಳು ಬಸವನ ಹುಳುಗಳ ಮೂಲಕ ಯಾವುದಾದರೂ ಒಂದು ಗಿಡಕ್ಕೆ ಹಳದಿ ಎಲೆ ವೈರಸ್ ರೋಗ ಬಂದಿದ್ದರೆ ಅದು ಆರೋಗ್ಯವಂತ ಸಸಿಗೆ ಪ್ರಸಾರವಾಗುತ್ತದೆ.
ಹಳದಿ ಎಲೆ ರೋಗ ಬಂದ ಸಸಿಯನ್ನು ಗುರುತಿಸಿದ ತಕ್ಷಣ ತೆಗೆದು ದೂರ ಹಾಕಿ ಒಣಗಲು ಬಿಡುವುದರಿಂದ ಸ್ವಲ್ಪ ಮಟ್ಟಿಗೆ ರೋಗ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದೊಮ್ಮೆ ಒಂದೇ ಕೋಡಿನ ಬೀಜವನ್ನು ಆಯ್ಕೆ ಮಾಡಿದಾಗ ಬೀಜದ ಮೂಲಕ ರೋಗಾಣು ಸಸ್ಯಕ್ಕೆ ಪ್ರವೇಶವಾದದ್ದೇ ಆಗಿದ್ದರೆ ಒಂದೊಂದು ಗಿಡದಲ್ಲಿ ರೋಗ ಚಿನ್ಹೆ ಗೋಚರವಾಗುತ್ತಾ ಕ್ರಮೇಣ ಎಲ್ಲಾ ಸಸಿಗಳಿಗೂ ಬರಬಹುದು.
ಬೀಜಗಳ ಮೂಲಕ ಈ ರೋಗ ಪ್ರಸಾರವಾಗುವುದು ಹೆಚ್ಚು. ನಂತರ ಅದು ರಸ ಸ್ಪರ್ಶದ ಮೂಲಕ ಪ್ರಸಾರವಾಗುತ್ತದೆ. ಆದ ಕಾರಣ ಉತ್ತಮ ರೋಗ ಮುಕ್ತ ಬೆಂಡೆ ಬೀಜ ಪಡೆಯಲು ಬೀಜಕ್ಕೆ ಇಡುವ ಸಸ್ಯವನ್ನು ಸುರಕ್ಷಿತವಾಗಿ ಅಂದರೆ ಯಾವುದೇ ಕೀಟಗಳ ಸ್ಪರ್ಶ ಆಗದದಂತೆ ಬೆಳೆಸಬೇಕು. ಅಂದರೆ ಬೀಜಕ್ಕೆ ಬಿಡುವ ಸಸಿಗೆ ಸೊಳ್ಳೆ ಪರದೆಯನ್ನು ಕವರ್ ಮಾಡಿ ರೋಗ ಇರುವ ಗಿಡದ ಮೂಲಕ ರೋಗ ಹರಡುವುದನ್ನು ತಡೆಯಬಹುದು. ವಿವಿಧ ಕಡೆಗಳಲ್ಲಿ ಕಂಡ ಪ್ರಕಾರ ಬಿಳಿ ಬೆಂಡೆಗೆ ರೋಗ ಬಂದಷ್ಟು ತೀವ್ರವಾಗಿ ಹಸಿರು ಬೆಂಡೆ ತಳಿಗೆ ಬರುವುದಿಲ್ಲ. ಆದ ಕಾರಣ ವಾಣಿಜ್ಯಿಕವಾಗಿ ಬೆಳೆಸಲು ಹಸಿರು ಬೆಂಡೆಯೇ ಸೂಕ್ತ.
ಮಾಹಿತಿ-ಚಿತ್ರಗಳು : ರಾಧಾಕೃಷ್ಣ ಹೊಳ್ಳ