ಬೆಳ್ಳಿ ಪದಕ ಗೆದ್ದವರೇಕೆ ಖುಷಿಯಾಗಿಲ್ಲ..?!
ನೀವು ಪ್ರತೀ ಸಲ ಒಲಂಪಿಕ್ಸ್, ಕಾಮನ್ ವೆಲ್ತ್ ಅಥವಾ ಯಾವುದೇ ಕ್ರೀಡಾಕೂಟಗಳಲ್ಲಿ ಪದಕ ಪ್ರಧಾನ ಸಮಾರಂಭವನ್ನು ಗಮನಿಸಿ. ಅಲ್ಲಿ ಬಂಗಾರದ ಪದಕ ಗೆದ್ದವನು ಸಹಜವಾಗಿಯೇ ಖುಷಿಯಾಗಿರುತ್ತಾನೆ. ಕಂಚು ಗೆದ್ದವನೂ ಖುಷಿಯಾಗಿರುತ್ತಾನೆ. ಆದರೆ ಬಹಳಷ್ಟು ಸಲ ಬೆಳ್ಳಿ ಪದಕ ಪಡೆದವನ ಮೊಗದಲ್ಲಿ ಖುಷಿ ಬಿಡಿ, ಕಡೇ ಪಕ್ಷ ಮಂದಹಾಸವೂ ಇರುವುದಿಲ್ಲ. ಹೀಗೇಕೆ?
ಮನಶಾಸ್ತ್ರಜ್ಞರು ಮಾಡಿದ ಒಂದು ಸಮೀಕ್ಷೆಯ ಪ್ರಕಾರ ಇದು ಬಹುತೇಕ ನಿಜವಾದ ವಿಷಯವೇ ಆಗಿದೆ. ಇಲ್ಲಿ ಬಂಗಾರ ಗೆದ್ದವನು ಸಂತೋಷದಲ್ಲಿರುತ್ತಾನೆ ಏಕೆಂದರೆ ಯಾವುದೇ ಕ್ರೀಡಾಕೂಟದಲ್ಲಿ ಬಂಗಾರವೇ ಅತೀ ದೊಡ್ದ ಉನ್ನತ ಪದಕ. ಕಂಚು ಗೆದ್ದವನಿಗೆ ಕನಿಷ್ಟ ನನಗೆ ಅದಾದರೂ ಸಿಕ್ಕಿತಲ್ಲ ಎಂಬ ಖುಷಿ. ಅವನ ಗಮನ ಯಾವತ್ತೂ ನಾಲ್ಕನೆಯ ಸ್ಥಾನ ಪಡೆದು ಪದಕ ವಂಚಿತನಾಗಿದ್ದಾನಲ್ಲ ಅವನ ಕಡೆಗೇ ಇರುತ್ತದೆ. ಹೀಗಾಗಿ ಅವನೂ ಸಂತಸದಲ್ಲಿರುತ್ತಾನೆ. ಆದರೆ ರಜತ ಪದಕ ಪಡೆದವನ ಸ್ಥಿತಿ ಒಂದು ರೀತಿ ತ್ರಿಶಂಕು ಸ್ಥಿತಿ. ಆ ಕಡೆ ಕಂಚು ಗೆದ್ದವನನ್ನು ನೋಡಿ ಖುಷಿ ಪಡುವಂತೆಯೂ ಇಲ್ಲ, ಇತ್ತ ಕಡೆ ಬಂಗಾರ ಪಡೆದವನ್ನು ನೋಡಿ ದುಃಖಿಸುವಂತೆಯೂ ಇಲ್ಲ. ಅವನಿಗೆ ಯಾವಾಗಲೂ ತಾನು ಬಂಗಾರ ಗೆಲ್ಲಲಿಲ್ಲವಲ್ಲಾ ಎಂಬ ದುಗುಡವೇ ಜಾಸ್ತಿ ಇರುತ್ತದೆ.
ಜಗತ್ತಿನ ಎರಡನೇ ಉನ್ನತ ಸ್ಥಾನ ಪಡೆದ ವ್ಯಕ್ತಿಯಾದರೂ ಅವನ ಮನಸ್ಥಿತಿ ಸೋತ ಆಟಗಾರನಂತೆ ಇರುತ್ತದೆ ಎಂಬುವುದು ಮನಶಾಸ್ತ್ರಜ್ಞರ ಅಭಿಮತ. ಈ ವಿಷಯವನ್ನು ತಿಳಿಯಲು ಅವರು ಹಲವಾರು ಸಮೀಕ್ಷೆಗಳನ್ನು, ಹಿಂದಿನ ಪದಕ ವಿಜೇತರ ಮಾತುಗಳನ್ನು ಹಾಗೂ ಅವರು ಪದಕ ಪಡೆದ ಸಂದರ್ಭದ ಭಾವಚಿತ್ರಗಳನ್ನು ಪರೀಕ್ಷಿಸಿ ಈ ವಿಷಯವನ್ನು ಮನನ ಮಾಡಿಕೊಂಡರು. ಬೆಳ್ಳಿ ಪದಕ ಗೆದ್ದವರ ಭಾವ ಚಿತ್ರಗಳನ್ನು ನೀವು ಗಮನಿಸಿದರೆ ಬಹುತೇಕ ಬಾರಿ ಅವರ ಮುಖ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನ ಪಡೆದ ಕ್ರೀಡಾಳುವಂತೆ ಕಾಣಿಸುತ್ತದೆ. ಏಕೆಂದರೆ ಅವನಿಗೆ ಅಥವಾ ಅವಳಿಗೆ ಬೆಳ್ಳಿ ಸಿಕ್ಕಿದ ಖುಷಿಗಿಂತ ಬಂಗಾರ ತಪ್ಪಿ ಹೋದ ಬೇಸರವೇ ಹೆಚ್ಚಾಗಿರುತ್ತದೆ. ಇದೇ ಮನಸ್ಸಿನ ಮ್ಯಾಜಿಕ್.
ಮನಸ್ಸು ಯಾವಾಗಲೂ ತಮಗೆ ದೊರೆಯದ ಸಂಗತಿಗಳತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಕಂಚು ಪಡೆದವನನ್ನು ನೋಡಿಯಾದರೂ ಬೆಳ್ಳಿ ಗೆದ್ದವ ಖುಷಿ ಪಡಬಹುದಲ್ವಾ? ಎಂದರೆ ಅವನ ಮನಸ್ಸು ಆ ಕಡೆಗೆ ವಾಲುವುದೇ ಇಲ್ಲ. ೧೯೯೮ರಲ್ಲಿ ಮನಶಾಸ್ತ್ರಜ್ಞರು ನಡೆಸಿದ ಒಂದು ಸಮೀಕ್ಷೆಯಲ್ಲಿ ಹಲವಾರು ಒಲಂಪಿಕ್ಸ್ ಕ್ರೀಡಾಳುಗಳನ್ನು ಪರೀಕ್ಷಿಸಲಾಗಿತ್ತು. ಅದರ ಪ್ರಕಾರ ಬೆಳ್ಳಿ ಗೆದ್ದ ಪ್ರತೀ ಕ್ರೀಡಾಳು ತಾನು ಯಾಕೆ ಬಂಗಾರ ಗೆಲ್ಲಲು ಆಗಲಿಲ್ಲ ಎಂಬ ವಿಷಯದ ಕುರಿತೇ ಚಿಂತಿಸುತ್ತಿದ್ದ. ತಾನು ವಿಶ್ವದ ದ್ವಿತೀಯ ಶ್ರೇಷ್ಟ ಕ್ರೀಡಾಳು. ಬೆಳ್ಳಿ ಗೆದ್ದಿರುವೆ ಎಂಬ ವಿಚಾರವನ್ನು ಗಮನಿಸುತ್ತಲೇ ಇರಲಿಲ್ಲ. ತಾವು ಯಾವುದಕ್ಕೂ ಲಾಯಕ್ಕಿಲ್ಲದವರು ಎಂಬ ಭಾವ ಅವರ ಮನದೊಳಗೆ ಅಚ್ಚೊತ್ತಿ ಹೋಗಿರುತ್ತಿತ್ತು.
ಇದೇ ಸಂಗತಿಯನ್ನು ಕಂಚಿನ ಪದಕ ಪಡೆದವರನ್ನು ಗಮನಿಸಿದರೆ ಅವರು ಬಂಗಾರ ಗೆದ್ದ ಕ್ರೀಡಾಳುವಷ್ಟೇ ಸಂತೋಷದಲ್ಲಿರುತ್ತಾರೆ. ಅವರಿಗೆ ತಾನು ಪ್ರಪಂಚದ ಮೂರನೇಯ ಶ್ರೇಷ್ಟ ಕ್ರೀಡಾಳು ಎಂಬ ಖುಷಿ ಇರುತ್ತದೆ. ಈ ಸಮೀಕ್ಷೆ ಎಲ್ಲರಲ್ಲೂ ಒಂದೇ ರೀತಿಯಾಗಿರದಿದ್ದರೂ, ಬಹಳಷ್ಟು ಬೆಳ್ಳಿ ಪದಕ ಗೆದ್ದ ಜನ ಈ ಮನಸ್ಥಿತಿಯಲ್ಲಿಯೇ ಬೇಯುತ್ತಿದ್ದಾರೆ ಎನ್ನುತ್ತಾರೆ ಸಮೀಕ್ಷೆ ನಡೆಸಿದ ಪರಿಣಿತರ ತಂಡ. ಇದನ್ನು ಅವರು ‘ಮೂರನೇ ಸ್ಥಾನದ ಮನಸ್ಥಿತಿ' ಅಥವಾ Third Place Mentality’ ಎಂದು ಕರೆಯುತ್ತಾರೆ.
ನಮ್ಮ ಮನಸ್ಸನ್ನು ಖುಷಿಯಾಗಿಡಲು ಕಲಿತರೆ ಯಾವುದೇ ದುಃಖವನ್ನೂ ಮರೆಯಬಹುದು. ನಿಮಗೊಂದು ಕ್ರೀಡಾ ಪಟುವಿನ ಬಗ್ಗೆ ಹೇಳುವೆ. ಅವಳ ಹೆಸರು ಮಾರ್ಜಿಲಿನ್ ದಿಡಾಲ್ (Margielyn Didal). ಫಿಲಿಪೈನ್ಸ್ ದೇಶದ ಸ್ಕೇಟ್ ಬೋರ್ಡ್ ಕ್ರೀಡಾ ಪಟು. ೨೦೧೮ರ ಏಷ್ಯನ್ ಗೇಮ್ಸ್ ಹಾಗೂ ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಮಹಿಳೆಯರ ಬೋರ್ಡ್ ಸ್ಕೇಟಿಂಗ್ ಕ್ರೀಡೆಯಲ್ಲಿ ಬಂಗಾರದ ಪದಕ ಗೆದ್ದವಳು. ಆದರೆ ಮೊನ್ನೆ ನಡೆದ ಟೋಕಿಯೋ ಒಲಂಪಿಕ್ಸ್ ನ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾಗವಹಿಸುವಾಗ ಅವಳ ಸ್ಕೇಟ್ ಬೋರ್ಡ್ ಕಾಲಿನ ಹಿಡಿತದಿಂದ ಜಾರಿಹೋಗಿ, ಕೆಳಗೆ ಬಿದ್ದಳು. ಬಿದ್ದವಳು ಎದ್ದು ಅಲ್ಲಿಯೇ ಕುಳಿತು ಕೈಗಳನ್ನು ಮೇಲಕ್ಕೆತ್ತಿ ಗೆಲುವಿನ ನಗೆ ನಕ್ಕಳು. ಅವಳ ನಗು ಬಹಳಷ್ಟು ಜನರಿಗೆ ಅಚ್ಚರಿಯಲ್ಲಿ ಮುಳುಗಿಸಿತು. ಇಂದಿನ ಸೋಲು ಭವಿಷ್ಯದ ಗೆಲುವಾಗಲಿದೆ ಎಂದು ಅವಳಿಗೆ ಗೊತ್ತು. ಆ ಕೊನೆಯ ಪಂದ್ಯಾವಳಿಯಲ್ಲಿ ಪಾಲ್ಗೊಂಡ ೮ ಜನರ ಪೈಕಿ ಅವಳಿಗೆ ೭ನೇಯ ಸ್ಥಾನ ದೊರೆಯಿತು. ಆದರೆ ಅವಳ ಮುಖದಿಂದ ನಗು ಮಾಸಲಿಲ್ಲ. ಸೋತಾಗ ಕುಗ್ಗದೇ, ಯಾರನ್ನೂ ಬಯ್ಯದೇ ನಗುಮುಖ ಹೊತ್ತು ಕೊಂಡಿದ್ದ ದಿಡಾಲ್ ಬಹು ಜನರ ಮನಸ್ಸು ಗೆದ್ದದ್ದು ಮಾತ್ರ ನಿಜ. ಇದೇ ಅಲ್ಲವೇ ನಿಜವಾದ ಕ್ರೀಡಾ ಸ್ಪೂರ್ತಿ.
ಮಾರ್ಜಿಲಿನ್ ದಿಡಾಲ್ (ಚಿತ್ರ ೨) ಬಹಳ ಬಡ ಕುಟುಂಬದಿಂದ ಬಂದ ಹುಡುಗಿ. ಸಣ್ಣವಳಿದ್ದಾಗ ಅವಳಿಗೆ ಸ್ಕೇಟ್ ಬೋರ್ಡ್ ಖರೀದಿಸುವಷ್ಟು ಹಣವಿರಲಿಲ್ಲ. ಸತತ ಪರಿಶ್ರಮದಿಂದ ಸ್ಕೇಟ್ ಬೋರ್ಡ್ ಕ್ರೀಡೆಯಲ್ಲಿ ಪರಿಣತಿಯನ್ನು ಪಡೆದು ಹಾದಿ ಬೀದಿಗಳಲ್ಲಿ ಸ್ಕೇಟಿಂಗ್ ಮಾಡುತ್ತಿದ್ದಳು. ಅವಳು ‘ಸ್ಟ್ರೀಟ್ ಸ್ಕೇಟ್ ಬೋರ್ಡ್ ರ್' ಎಂದೇ ಖ್ಯಾತಿ ಪಡೆದಿದ್ದಳು. ಸೋತಾಗ ಬೇಸರಿಸದೇ ಅದನ್ನು ಮುಂದಿನ ದಿನಗಳಲ್ಲಿ ಗೆಲುವನ್ನಾಗಿಸುವೆ ಎಂಬ ಅವಳ ಮನಸ್ಥಿತಿ ಬಹಳಷ್ಟು ಜನ ಕ್ರೀಡಾಳುಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಪ್ರೇರಣಾದಾಯಕ. ದಿಡಾಲ್ ಅವಳನ್ನು ಈ ವಿಷಯದಲ್ಲಿ ವರದಿಗಾರನೊಬ್ಬ ಪ್ರಶ್ನೆ ಮಾಡಿದಾಗ ‘ನನಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅದೇ ದೊಡ್ದ ಸಂಗತಿ. ದೇಶದ ಲಕ್ಷಾಂತರ ಮಂದಿಗೆ ಈ ಅವಕಾಶವೂ ದೊರೆತಿಲ್ಲ, ನಾನು ನನ್ನಿಂದ ಸಾಧ್ಯವಾದಷ್ಟು ಸಾಧನೆ ಮಾಡಲು ಪ್ರಯತ್ನಿಸಿದೆ. ಈ ಸಲ ಗೆಲುವು ನನ್ನದಾಗಿರಲಿಲ್ಲ. ಆದರೆ ಮುಂದಿನ ದಿನಗಳು ಹೀಗೇ ಇರುವುದಿಲ್ಲ. ಖಂಡಿತಾ ನಾನು ಪದಕ ಪಡೆಯಲು ಪ್ರಯತ್ನ ಮಾಡುವೆ. ಸಿಗದ ಪದಕಕ್ಕಾಗಿ ನಾನು ಚಿಂತಿಸಿ ಕೂರದೇ ಮುಂದೆ ಸಿಗಬಹುದಾದ ಪದಕಕ್ಕೆ ನನ್ನ ಮನಸ್ಸನ್ನು ಸಜ್ಜುಗೊಳಿಸಿದ್ದೇನೆ. ನಾನು ಬೀದಿಗಳಲ್ಲಿ ಸ್ಕೇಟಿಂಗ್ ಮಾಡಿ ಮನೆಗೆ ಬರುವಾಗ ದೊಡ್ಡದಾದ ನಗುಮುಖವನ್ನು ಹೊತ್ತುಕೊಂಡೇ ಬರುತ್ತಿದ್ದೆ. ಏಕೆಂದರೆ ನನ್ನ ನಗುಮುಖ ನನ್ನ ಮನೆಯವರ ಮುಖದಲ್ಲೂ ಆನಂದ ತರಿಸುತ್ತದೆ ಎಂಬ ನಿಜಾಂಶದ ಅರಿವು ನನಗಿತ್ತು.’ ಎಂಬ ಮನಮುಟ್ಟುವ ಉತ್ತರವನ್ನು ನೀಡಿದ್ದಳು.
ನಾವು, ನೀವು ಬದುಕಿನಲ್ಲಿ ಸಂತೋಷವಾಗಿರಬೇಕಾದರೆ ‘ಮೂರನೇ ಸ್ಥಾನದ ಮನಸ್ಥಿತಿ’ಯನ್ನು ಅಳವಡಿಕೊಳ್ಳಬೇಕು. ಏನಾದರಾಗಲಿ ನಾವು ಗೆಲ್ಲಲು ಪ್ರಯತ್ನ ಪಡಬೇಕು. ಆ ಪ್ರಯತ್ನ ಪ್ರಾಮಾಣಿಕವಾಗಿರಬೇಕು. ಫಲಿತಾಂಶ ಸೋಲು ಆಗಿರಲೂ ಬಹುದು. ಆದರೆ ನಾವು ಕುಗ್ಗದೇ ಮತ್ತೆ ಪ್ರಯತ್ನ ಪಡಬೇಕು. ಬೆಳ್ಳಿ ಪದಕ ಗೆದ್ದವನ ಮನಸ್ಥಿತಿಯನ್ನು ಹೊಂದಿರಲೇ ಬಾರದು. ಬಂಗಾರ ಗೆದ್ದವನನ್ನು ನೋಡಿ ಕೊರಗದೇ, ಮುಂದಿನ ದಿನಗಳಲ್ಲಿ ತನಗೆ ಸಿಕ್ಕಿದ ಬೆಳ್ಳಿಯನ್ನು ಬಂಗಾರವನ್ನಾಗಿಸುವ ದಿಟ್ಟಿನಲ್ಲಿ ಪ್ರಯತ್ನ ಪಡಬೇಕು.
ಕೊನೇ ಮಾತು: ಈ ಲೇಖನ ಬೆಳ್ಳಿ ಗೆದ್ದವರನ್ನು ಹಿಯಾಳಿಸುವುದಕ್ಕೆ ಖಂಡಿತಾ ಅಲ್ಲ. ಅವರ ಸಾಧನೆಯೂ ಅತ್ಯುತ್ತಮ ಎಂಬುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅವರು ಪ್ರಪಂಚದ ಎರಡನೇ ಶ್ರೇಷ್ಟ ಕ್ರೀಡಾಳುವಾಗಿದ್ದಾರೆ. ಹಲವಾರು ಮಂದಿ ಈ ಪದಕ ದೊರೆತುದಕ್ಕೆ ಮನಬಿಚ್ಚಿ ಸಂಭ್ರಮ ಪಟ್ಟವರಿದ್ದಾರೆ. ಇಲ್ಲಿರುವ ವಿಷಯ ಮನಶಾಸ್ತ್ರಜ್ಞರ ಸಮೀಕ್ಷೆಯ ಬಗ್ಗೆ ಮಾತ್ರ. ಯಾವುದೇ ಕ್ರೀಡಾಳು ಪದಕ ಗೆಲ್ಲಲಿ ಅಥವಾ ಸೋಲಲಿ ಅವರ ಕ್ರೀಡಾ ಸ್ಪೂರ್ತಿಗೆ ನಾವು ‘ಜೈ’ ಹೇಳಲೇ ಬೇಕು.
(ಆಂಗ್ಲ ವಿಡಿಯೋ ಒಂದರ ಆಧಾರ)
ಸುಳಿವು: ರಾಜೇಶ್ ಐತಾಳ್, ಸುರತ್ಕಲ್
ಚಿತ್ರ ಕೃಪೆ: ಅಂತರ್ಜಾಲ ತಾಣ