ಬ್ರಹ್ಮಾಂಡ

ಬ್ರಹ್ಮಾಂಡ

ಕವನ

ಮೇಲೆ ನೋಡಲು ಬಾನು ಕೆಳಗೆ ನೋಡಲು ಭೂಮಿ

ಸುತ್ತ ಸಾಗರ ವೃತ್ತ ಅಷ್ಟ ದಿಕ್ಸೂತ್ರ

ರವಿ ಮಿತ್ರನಾಗಿಹನು ಜಗದ ಜೀವರಿಗೆ

ರಸಪುಷ್ಟಿಗನುಕೂಲ ಆನಂದ ಚಂದ್ರ

 

ಬಾನು ಬುವಿಗಳ ಮಧ್ಯೆ ಬ್ರಹ್ಮಾಂಡ ಈ ಭಾಂಡ

ಪುಟ್ಟಿ ಬರೆ ಜೀವರಿಗೆ ನೆಪ ಅಂಡಪಿಂಡ

ಕಾದಿಹುದು ಜೀವರನು ನೀರು ಗಾಳಿಯು ಬೆಂಕಿ

ಉಣಿಸಲಿಕೆ, ಕುಣಿಸಲಿಕೆ ಕ್ಷಯಿಸಲಿಕೆ ಸೋಕಿ

 

ಹೆಣ್ಣು ಹೊನ್ನು ಮಣ್ಣು ಆಸೆಯಾ ಸಿಹಿ ಹಣ್ಣು

ಅನಿವಾರ್ಯಗಂಟಿಹವು ದೇಹಕವು ಹುಣ್ಣು

ಸುಖಿಸುವುದೊ ನರಳುವುದೊ ಹಣ್ಣುಗಳ ದೆಸೆಯಿಂದ

ಕ್ಷಣಿಕ ಅನುಭವ ಏಕೋ ಈ ಕಾಲ ಕ್ರೀಡೆ ?

 

ಸ್ತಬ್ಧವಾಗಲು ಗಾಳಿ ನೀರು ಕಲ್ಲಾದೊಡೆ

ಶೂನ್ಯ ದೇಹಕೆ ಗೆಳೆಯ ಉರಿವ ಬೆಂಕಿ

ಹೆಣ್ಣಿಲ್ಲ ಹೊನ್ನಿಲ್ಲ ಹಣ್ಣು ಹುಣ್ಣುಗಳಿಲ್ಲ

ದೇಹ ಮೃಣ್ಮಯವಾಗೆ ಬೂದಿ ಬ್ರಹ್ಮಾಂಡ

-ದಿವಾಕರ ಡೋಂಗ್ರೆ ಎಂ.