ಭಾರತದ ಅತ್ಯಂತ ವೇಗದ ರೈಲುಗಳು
ಭಾರತೀಯ ರೈಲ್ವೇ 2023ರಲ್ಲಿಯೂ ಹಲವಾರು "ವಂದೇ ಭಾರತ್” ರೈಲುಗಳ ಓಡಾಟ ಶುರು ಮಾಡಿದೆ. ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವಂತೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಒಂದು ಕಾರಣ ವಂದೇ ಭಾರತ್ನಂತಹ ಹಲವು ಅತ್ಯಂತ ವೇಗದ ರೈಲುಗಳು ಈಗ ನಮ್ಮ ಪ್ರಯಾಣಕ್ಕೆ ಲಭ್ಯ.
ರೈಲು ಪ್ರಯಾಣವೆಂದರೆ ಅದೇನೋ ಖುಷಿ. ಅದೇನಿದ್ದರೂ ಒಂದು ದಿನಕ್ಕಿಂತ ಜಾಸ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ “ಈ ಪ್ರಯಾಣ ಯಾವಾಗ ಮುಗಿಯುತ್ತದೋ” ಅನಿಸಲು ಶುರುವಾಗುತ್ತದೆ. ಅದಕ್ಕಾಗಿ, ಭಾರತದ ಅತ್ಯಂತ ವೇಗದ ಕೆಲವು ರೈಲುಗಳ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಎಕ್ಸ್-ಪ್ರೆಸ್
ವಂದೇ ಭಾರತ್ ಅಥವಾ ಟ್ರೈನ್-18 ಹೆಸರಿನ ರೈಲನ್ನು 2019ರಲ್ಲಿ ಆರಂಭಿಸಲಾಯಿತು. ಆವಾಗಿನಿಂದ ಇದು ಸುದ್ದಿಯಲ್ಲಿದೆ - ಈ ಹೆಸರಿನ ರೈಲುಗಳಲ್ಲಿರುವ ಅತ್ಯಾಧುನಿಕ ಸವಲತ್ತುಗಳಿಗಾಗಿ ಮತ್ತು ಇವುಗಳ ಅತ್ಯಧಿಕ ವೇಗಕ್ಕಾಗಿ. ಇದೀಗ ಭಾರತದ ಅತ್ಯಧಿಕ ವೇಗದ ರೈಲೆಂಬ ಹೆಗ್ಗಳಿಕೆ. ವಾಣಿಜ್ಯ ಓಡಾಟ ಶುರು ಮಾಡುವ ಮುಂಚೆ ಜರಗಿಸಿದ ಪ್ರಾಯೋಗಿಕ ಓಡಾಟಗಳಲ್ಲಿ ಇದು ಗಂಟೆಗೆ 180 ಕಿಮೀ ವೇಗ ದಾಖಲಿಸಿತ್ತು. ಆದರೆ, ವಾಣಿಜ್ಯ ಓಡಾಟದಲ್ಲಿ (ಪ್ರಯಾಣಿಕರ ಸಹಿತ) ಇದರ ವೇಗವನ್ನು ಸುರಕ್ಷಿತತೆಯ ಉದ್ದೇಶದಿಂದ ಗರಿಷ್ಠ ಗಂಟೆಗೆ 160 ಕಿಮೀ.ಗೆ ಸೀಮಿತಗೊಳಿಸಲಾಗಿದೆ. ಫೆಬ್ರವರಿ 2023ರಲ್ಲಿ ಎಂಟು ವಂದೇ ಭಾರತ ಎಕ್ಸ್-ಪ್ರೆಸ್ ರೈಲುಗಳು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿವೆ: ನವದೆಹಲಿಯಿಂದ ವಾರಣಾಸಿ; ನವದೆಹಲಿಯಿಂದ ಕಾತ್ರಾ; ನವದೆಹಲಿಯಿಂದ ಅಂಬ್ ಅನ್-ದೌರಾ; ಮುಂಬೈ ಸೆಂಟ್ರಲ್ನಿಂದ ಗಾಂಧಿನಗರ; ಚೆನ್ನೈಯಿಂದ ಮೈಸೂರು; ಬಿಲಾಸ್ಪುರದಿಂದ ನಾಗ್ಪುರ; ಬಿಲಾಸ್ಪುರದಿಂದ ನಿವ್-ಜಲ್ಪೈಗುರಿ ಮತ್ತು ವಿಶಾಖಪಟ್ಟಣದಿಂದ ಸೆಕುಂದರಾಬಾದ್.
ಇನ್ನೂ ಹಲವು ವಂದೇ ಭಾರತ್ ಎಕ್ಸ್-ಪ್ರೆಸ್ ರೈಲುಗಳ ಓಡಾಟ ಶುರುವಾಗಲಿರುವ ಕಾರಣ, ಈ ರೈಲುಗಳು ಭಾರತೀಯ ರೈಲ್ವೇಯ ಉಜ್ವಲ ಭವಿಷ್ಯದ ಸೂಚಿಯಾಗಿವೆ. ಇವುಗಳ ಪ್ರಯಾಣಿಕರಿಗೆ ಕಡಿಮೆ ಅವಧಿಯ ಪ್ರಯಾಣ ದೊಡ್ಡ ಅನುಕೂಲ. ಜೊತೆಗೆ, ರೈಲಿನಲ್ಲಿ ಪ್ರಯಾಣಿಸುವಾಗ ವೈ-ಫೈ ಮತ್ತು ಜಿಪಿಎಸ್ ಆಧಾರಿತ ಸೇವೆಗಳೂ ಲಭ್ಯ. ಇದರ ಆಸನಗಳಂತೂ ಬಹಳ ಆರಾಮದಾಯಕ; ಎಕ್ಸಿಕ್ಯೂಟಿವ್ ವಿಭಾಗದ ಆಸನಗಳು 180 ಡಿಗ್ರಿ ತಿರುಗುತ್ತವೆ.
ಗತಿಮಾನ್ ಎಕ್ಸ್-ಪ್ರೆಸ್
ಇದು ಭಾರತದ ಮೊಟ್ಟಮೊದಲ ಸುಪರ್-ಫಾಸ್ಟ್ ರೈಲು. ಗತಿಮಾನ್ ಎಕ್ಸ್-ಪ್ರೆಸ್ (ಸಂಖ್ಯೆ 12049/ 12050) ನವದೆಹಲಿ ಮತ್ತು ಆಗ್ರಾದ ನಡುವಿನ ಅಂತರವನ್ನು ಕೇವಲ 100 ನಿಮಿಷಗಳಲ್ಲಿ ಕ್ರಮಿಸುತ್ತದೆ; ಯಾಕೆಂದರೆ ಇದರ ಗರಿಷ್ಠ ವೇಗ ಗಂಟೆಗೆ 160 ಕಿಮೀ. ಇದರ ವಿಶೇಷತೆಗಳು: ಪ್ರತಿಯೊಂದು ಕೋಚಿನಲ್ಲಿಯೂ ಸ್ಲೈಡಿಂಗ್ ಬಾಗಿಲುಗಳು ಮತ್ತು ಬಯೋ-ಟಾಯ್ಲೆಟ್ಗಳು. ಹಾಗೂ ಪ್ರತಿಯೊಂದು ಆಸನದ ಹಿಂಭಾಗದಲ್ಲಿ ಎಂಟು ಇಂಚಿನ ಎಲ್-ಸಿ-ಡಿ ಸ್ಕ್ರೀನ್. ಈ ರೈಲಿನಲ್ಲಿ ಟ್ರೈನ್-ಹಾಸ್ಟೆಸ್ ಸೇವೆ ಲಭ್ಯ. ಪ್ರಯಾಣಿಕರು ವಿವಿಧ ಭಾರತೀಯ ಮತ್ತು ಯುರೋಪಿಯನ್ ಶೈಲಿಯ ಊಟ ಖರೀದಿಸಬಹುದು.
ತೇಜಸ್ ಎಕ್ಸ್-ಪ್ರೆಸ್
ಅತ್ಯಧಿಕ ವೇಗದ ಈ ಏರ್-ಕಂಡಿಷನ್ ರೈಲಿಗೆ “ತೇಜಸ್” ಎಂಬುದು ಸೂಕ್ತ ಹೆಸರು. ಇದು ಗಂಟೆಗೆ 200 ಕಿಮೀ ವೇಗದಲ್ಲಿ ಧಾವಿಸಬಲ್ಲದು. ಆದರೆ, ರೈಲ್ವೇ ಹಳಿಯ ತಾಂತ್ರಿಕ ಮಿತಿಗಳಿಂದಾಗಿ ಅದಕ್ಕಿಂತ ಕಡಿಮೆ ವೇಗದಲ್ಲೇ ಚಲಿಸುತ್ತದೆ. ಸದ್ಯ ನಾಲ್ಕು ಪಥಗಳಲ್ಲಿ ಇದು ಓಡಾಡುತ್ತಿದೆ: ಮುಂಬೈ - ಮಡಗಾಂವ್; ಚೆನ್ನೈ - ಮಧುರೈ; ಲಕ್ನೋ - ನವದೆಹಲಿ ಮತ್ತು ಅಹ್ಮದಾಬಾದ್ - ಮುಂಬೈ ಸೆಂಟ್ರಲ್. ರೈಲಿನಲ್ಲಿ ಕಾಫಿ ಮತ್ತು ಟೀ ಒದಗಿಸುವ ಯಂತ್ರಗಳು ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟುಗಳು ಲಭ್ಯ
ಭೋಪಾಲ್ ಶತಾಬ್ದಿ ಎಕ್ಸ್-ಪ್ರೆಸ್
ಭಾರತದ ಮೊದಲ ಶತಾಬ್ದಿ ರೈಲು ಇದು; 1988ರಲ್ಲಿ ಓಡಾಟ ಶುರುವಿಟ್ಟಿತು. ಇದರ ಗರಿಷ್ಠ ವೇಗ ಗಂಟೆಗೆ 150 ಕಿಮೀ. ಈ ರೈಲು (ಸಂಖ್ಯೆ 12001/ 12002) ನವದೆಹಲಿಯಿಂದ ಹೊರಟು ಭೋಪಾಲದ ವರೆಗೆನ 709 ಕಿಮೀ ದೂರವನ್ನು ಎಂಟೂವರೆ ಗಂಟೆಗಳಲ್ಲಿ ಕ್ರಮಿಸುತ್ತದೆ. ಪ್ರತಿದಿನ ಸಂಚರಿಸುವ ಇದು ಹಾದಿಯಲ್ಲಿ ಮಥುರಾ, ಆಗ್ರಾ, ಮೊರೆನಾ, ಗ್ವಾಲಿಯರ್, ಝಾನ್ಸಿ ಇತ್ಯಾದಿ ನಗರಗಳನ್ನು ಹಾದು ಹೋಗುತ್ತದೆ. ಇದು ಹವಾನಿಯಂತ್ರಿತ ರೈಲು. ಅದರೆ ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇಲ್ಲ. ಆದ್ದರಿಂದ, ಹಗಲು ಹೊತ್ತಿನಲ್ಲಿ ಇದರಲ್ಲಿ ಪ್ರಯಾಣಿಸುವುದು ಉತ್ತಮ. ಇಲ್ಲವಾದರೆ, ರಾತ್ರಿಯಲ್ಲಿ ಕುಳಿತುಕೊಂಡೇ ಪ್ರಯಾಣಿಸಬೇಕು. ಇದರ ಟಿಕೆಟ್ ದರವು ಊಟ ಮತ್ತು ಉಪಾಹಾರದ ವೆಚ್ಚವನ್ನೂ ಒಳಗೊಂಡಿದೆ.
ಮುಂಬೈ ರಾಜಧಾನಿ ಎಕ್ಸ್-ಪ್ರೆಸ್
ಭಾರತದ ರಾಜಧಾನಿ ರೈಲುಗಳಲ್ಲಿ ಅತ್ಯಂತ ವೇಗದ ರೈಲು ಇದು (ಸಂಖ್ಯೆ 12951/ 12952). ಇದರ ಗರಿಷ್ಠ ವೇಗ ಗಂಟೆಗೆ 140 ಕಿಮೀ. ಇದರ ಬೋಗಿಗಳನ್ನು 2021ರಲ್ಲಿ ಬದಲಾಯಿಸಿ, ಹವಾನಿಯಂತ್ರಿತ ತೇಜಸ್ ಬೋಗಿಗಳನ್ನು ಜೋಡಿಸಲಾಯಿತು. ದಿನದಿನವೂ ಓಡುವ ಈ ರೈಲು, ಮುಂಬೈ ಸೆಂಟ್ರಲ್ ಮತ್ತು ನವದೆಹಲಿಯ ನಡುವಣ 1368 ಕಿಮೀ ಅಂತರವನ್ನು 15.5 ಗಂಟೆಯಲ್ಲಿ ಕ್ರಮಿಸುತ್ತದೆ. ಇದು ಹಾದು ಹೋಗುವ ನಗರಗಳು: ಸೂರತ್, ವಡೋದರ ಮತ್ತು ಕೋಟ.
ಬಾಂದ್ರಾ - ನಿಜಾಮುದ್ದೀನ್ ಗರೀಬ್ ರಥ್ ಎಕ್ಸ್-ಪ್ರೆಸ್
ಗರೀಬ್ ರಥ್ ರೈಲುಗಳಲ್ಲಿ ಇದು ಅತ್ಯಂತ ವೇಗದ ರೈಲು (ಸಂಖ್ಯೆ 12909/ 12910). ಮುಂಬೈ - ನವದೆಹಲಿ ಜೋಡಿಸುವ ಈ ರೈಲಿನ ಪ್ರಯಾಣ ಬಾಂದ್ರಾದಿಂದ ಆರಂಭವಾಗಿ ದಕ್ಶಿಣ ದೆಹಲಿಯ ಹಜರತ್ ನಿಜಾಮುದ್ದೀನ್ನಲ್ಲಿ ಮುಕ್ತಾಯ. ಇದರ ಗರಿಷ್ಠ ವೇಗ ಗಂಟೆಗೆ 130 ಕಿಮೀ. ರಾಜಧಾನಿ ಎಕ್ಸ್-ಪ್ರೆಸ್ಸಿನ ಪ್ರಯಾಣ ಅವಧಿಗೆ ಹೋಲಿಸಿದಾಗ ಇದರ ಪ್ರಯಾಣ ಒಂದು ಗಂಟೆ 15 ನಿಮಿಷ ಜಾಸ್ತಿ ಅವಧಿಯದು. ಇತರ ವೇಗದ ರೈಲುಗಳಿಗೆ ಹೋಲಿಸಿದಾಗ ಇದರಲ್ಲಿ ಅಧಿಕ ಸೀಟುಗಳಿವೆ.
ಸುಪರ್-ಫಾಸ್ಟ್ ರೈಲುಗಳ ಪ್ರಯಾಣ ಟಿಕೆಟ್ ದರ ಸುಪರ್-ಫಾಸ್ಟ್ ಸರ್-ಚಾರ್ಜ್ ಒಳಗೊಂಡಿರುತ್ತದೆ. ಪ್ರಯಾಣ ದರ ತುಸು ಜಾಸ್ತಿ ಆಗಿದ್ದರೂ ಈ ರೈಲುಗಳು ಅತಿ ವೇಗದಿಂದ ಚಲಿಸುವ ಕಾರಣ ಪ್ರಯಾಣಿಕರಿಗೆ ಸಮಯದ ಉಳಿತಾಯ.
ಕೊನೆಗೊಂದು ಮಾತು: ಇಂತಹ ಅತ್ಯಂತ ವೇಗದ ಮತ್ತು ಅತ್ಯಾಧುನಿಕ ಸವಲತ್ತುಗಳಿರುವ ರೈಲುಗಳ ಸೇವೆಯನ್ನು ನಮಗೆ ಒದಗಿಸಿರುವ ಭಾರತ ಸರಕಾರವನ್ನು ಅಭಿನಂದಿಸಲೇ ಬೇಕು. ಜೊತೆಗೆ, “ಇವು ನಮ್ಮ ದೇಶದ ಸೊತ್ತುಗಳು. ಇವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ಪ್ರಯಾಣಿಕನ ಕರ್ತವ್ಯ" ಎಂಬ ಪ್ರಜ್ನೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ಯಾಕೆಂದರೆ, ಈ ರೈಲುಗಳ ಬೋಗಿಗಳನ್ನೂ ಶೌಚಾಲಯಗಳನ್ನೂ ಗಲೀಜು ಮಾಡಿರುವ ಮತ್ತು ಅವಕ್ಕೆ ಹಾನಿ ಮಾಡಿರುವ ಪ್ರಸಂಗಗಳು ಹಲವು ಬಾರಿ ವರದಿಯಾಗಿವೆ. “ಸರಕಾರ ಪ್ರಜೆಗಳಿಗೆ ಅತ್ಯುತ್ತಮ ಸೇವೆ ಒದಗಿಸಲಿ” ಎಂದು ನಿರೀಕ್ಷಿಸುವ ನಮಗೆ ಆ ಸೇವೆ ಒದಗಿಸಿದಾಗ ಅದನ್ನು ಜತನದಿಂದ ಬಳಸುವ ಜವಾಬ್ದಾರಿಯೂ ಇದೆ, ಅಲ್ಲವೇ?
ಫೋಟೋ 1 ಮತ್ತು 2: ವಂದೇ ಭಾರತ್ ಎಕ್ಸ್-ಪ್ರೆಸ್ … ಕೃಪೆ: ಹಿಂದುಸ್ಥಾನ್ ಟೈಮ್ಸ್ ದಿನಪತ್ರಿಕೆ