ಭಾರತ - ಕೆನಡಾ ಸಂಬಂಧದಲ್ಲಿ ಬಿರುಕು
ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ ಜಿ ೨೦ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ನಿರಾಧಾರ ಆರೋಪವು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹಳಸಲು ಕಾರಣವಾಗಿದೆ. ಈ ಗುರುತರ ಹಾಗೂ ವಿವೇಚನಾರಹಿತ ಆಪಾದನೆಯನ್ನು ತಳ್ಳಿಹಾಕಿರುವ ಭಾರತವು ರಾಜತಾಂತ್ರಿಕ ಕ್ರಮಗಳ ಮೂಲಕ ಎದಿರೇಟು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಪಂಜಾಬ್ ನಲ್ಲಿ ತಲೆದೋರಿದ್ದ ಖಲಿಸ್ತಾನಿ ಭಯೋತ್ಪಾದನೆಯನ್ನು ೮೦ರ ದಶಕದಲ್ಲಿಯೇ ಮಟ್ಟ ಹಾಕಲಾಗಿದ್ದು, ಆ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಆದರೆ, ಖಲಿಸ್ತಾನ ಚಿಂತನೆಯ ಒಂದಿಷ್ಟು ಪಳೆಯುಳಿಕೆ ಹಾಗೂ ಕಳೆಯು ಕೆನಡಾದಂತಹ ರಾಷ್ಟ್ರಗಳಲ್ಲಿ ಈಗಲೂ ಉಳಿದುಕೊಂಡಿದೆ.
ಕಳೆದ ಜೂನ್ ೧೮ರಂದು ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹಾಗೂ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಹತ್ಯೆ ಕುರಿತು ತನಿಖೆ ನಡೆಸುವುದಾಗಿ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ. ಇದಿಷ್ಟೇ, ಆಗಿದ್ದರೆ ಭಾರತಕ್ಕೇನೂ ತಕರಾರಿರಲಿಲ್ಲ. ಆದರೆ, ಈ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟರ ನಂಟು ಇರುವ ಕುರಿತು ‘ವಿಶ್ವಾಸಾರ್ಹ ಆರೋಪಗಳು' ಇವೆ ಎಂದೂ ಅವರು ಹೇಳಿದ್ದು ಸಹಜವಾಗಿಯೇ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
ನಿಜ್ಜರ್ ಹತ್ಯೆಗೂ ಮೊದಲು ಕಳೆದ ಮೇ ತಿಂಗಳಲ್ಲಿ ಖಲಿಸ್ತಾನ್ ಕಮಾಂಡೊ ಫೋರ್ಸ್ ಮುಖ್ಯಸ್ಥ ಪರಮ್ ಜೀತ್ ಸಿಂಗ್ ಪಂಜ್ವಾರ್ ನನ್ನು ಪಾಕಿಸ್ತಾನದ ಲಾಹೋರ್ ನಲ್ಲಿ ಗುಂಡಿಕ್ಕಿ ಹತ್ಯೆಗಯ್ಯಲಾಗಿದೆ. ಖಲಿಸ್ತಾನ ಪರ ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಸಂಧುನನ್ನು ಬಂಧಿಸಿ ಅಸ್ಸಾಂ ಜೈಲಿಗೆ ಕಳುಹಿಸಿದ ನಂತರ ಈ ಹತ್ಯೆಗಳು ಸಂಭವಿಸಿವೆ ಎಂಬುದು ಗಮನಾರ್ಹ. ಈ ಎಲ್ಲ ಬೆಳವಣಿಗೆಗಳು ಜಸ್ಟಿನ್ ಟ್ರುಡೋ ಅವರು ಭಾರತದ ವಿರುದ್ಧ ಬೆಟ್ಟು ಮಾಡಿ ತೋರಲು ಅನುಕೂಲಕರವಾಗಿದೆ ಎನ್ನಬಹುದು.
ನಿಜ್ಜರ್ ಹಾಗೂ ಪಂಜ್ವಾರ್ ಈ ಇಬ್ಬರನ್ನೂ ಭಾರತವು ಈ ಮೊದಲೇ ಉಗ್ರರೆಂದು ಘೋಷಿಸಿದೆ. ಭಾರತ ಸರ್ಕಾರವು, ೧೯೮೭ರ ಹಸ್ತಾಂತರ ಒಪ್ಪಂದ ಅಥವಾ ಇಂಟರ್ ಪೋಲ್ ಮೂಲಕ ಮಾಹಿತಿ ಅಥವಾ ಕ್ರಮವನ್ನು ನಿಜ್ಜರ್ ವಿರುದ್ಧ ಕೋರಿತ್ತು. ಆದರೂ, ಈ ವರ್ಷ ಜೂನ್ ನಲ್ಲಿ ಆತನ ಮರಣಾನಂತರವೂ ಹಸ್ತಾಂತರದ ವಿನಂತಿಯನ್ನು ರದ್ದುಗೊಳಿಸುವ ಉದ್ಧಟತನವನ್ನು ಕೆನಡಾ ತೋರಿದೆ. ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸುತ್ತಿರುವ ಜಸ್ಟಿನ್ ಟ್ರುಡೋ ಅವರು ಸಿಖ್ ಸಮುದಾಯದ ಓಲೈಕೆ ರಾಜಕಾರಣದಲ್ಲಿ ತೊಡಗಿರುವುದು ಸರ್ವವೇದ್ಯವಾಗಿದೆ. ೧೯೮೫ರಲ್ಲಿ ಸಿಖ್ ಭಯೋತ್ಪಾದಕರು ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಪೋಟಿಸಿ ೩೦೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಘಟನೆಯು ಕೆನಡಾದ ಇತಿಹಾಸದಲ್ಲಿಯೇ ಭೀಕರ ಭಯೋತ್ಪಾದಕ ದಾಳಿಯಾಗಿದೆ. ಕೆನಡಾದಲ್ಲಿನ ಕೆಲ ಸಿಕ್ಖರು ಹಿಂದೂಗಳ ವಿರುದ್ಧ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಭಯೋತ್ಪಾದನೆ ಬೆಂಬಲಿಸಿದ ಪಾಕ್ ಅನುಭವಿಸುತ್ತಿರುವ ದುಸ್ಥಿತಿಯಿಂದ ಕೆನಡಾ ಪಾಠ ಕಲಿಯಬೇಕಾಗಿದೆ. ರಾಜಕೀಯ ಲಾಭಕ್ಕಾಗಿ ಉಗ್ರರನ್ನು ಸಮರ್ಥಿಸಿಕೊಳ್ಳುವ ತಂತ್ರವು ತಿರುಮಂತ್ರವಾಗಬಹುದಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೫-೦೯-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ