ಭಾಷೆಯ ಕಲಿಕೆ

ಭಾಷೆಯ ಕಲಿಕೆ

Comments

ಬರಹ

(ಇಸ್ಮಾಯಿಲ್ ಅವರು ಬರೆವ ಬದುಕಿನ ತಲ್ಲಣ ದಲ್ಲಿ ಇಂಗ್ಲಿಷ್ ಕಲಿಕೆ - ಪಠ್ಯ ಪುಸ್ತಕಗಳ ಬಗ್ಗೆ ಒಂದು ಬರಹವನ್ನು ಬರೆದಿದ್ದರು. ಅಲ್ಲೊಂದು ಟಿಪ್ಪಣಿ ಹಾಕಿದಮೇಲೆ ಅದನ್ನು ಇಲ್ಲೂ ಚರ್ಚಿಸಬಹುದೆನ್ನಿಸಿ ಬರೆಯುತ್ತಿದ್ದೇನೆ - ಹಂಸಾನಂದಿ)

ನಮ್ಮಲ್ಲಿ ನುಡಿಯ ಕಲಿಕೆ ಬಹಳ ಸುಧಾರಿಸಬೇಕಿದೆ. ನಾನು ಶಾಲೆಯಲ್ಲಿ ಕನ್ನಡವನ್ನು ಹತ್ತುವರ್ಷ, ಇಂಗ್ಲಿಷನ್ನು ಆರು ವರ್ಷ, ಹಿಂದಿಯನ್ನು ಐದುವರ್ಷ ಓದಿದೆ - ನಮ್ಮ ಪಠ್ಯಕ್ರಮವು ಎಂತಹದ್ದೆಂದರೆ ಹತ್ತು ವರ್ಷ ಕನ್ನಡವನ್ನು ಓದಿದವರಲ್ಲಿ ನೂರಕ್ಕೆ ಹತ್ತು ಜನವೂ ಬೇರೊಂದು ಕನ್ನಡ ಪುಸ್ತಕ ಹಿಡಿದು ಓದುವುದನ್ನು ಪ್ರೋತ್ಸಾಹಿಸುವಂತಿರಲಿಲ್ಲ. ಇಂಗ್ಲಿಷ್, ಹಿಂದಿಗಳದ್ದೂ ಇದೇ ಪಾಡೇ. ಐದು-ಆರು ವರ್ಷ ಕಲಿತ ಹಿಂದಿ ಕೂಡ ಒಂದು ಹಿಂದಿ ಪುಸ್ತಕವನ್ನ ಓದುವ ಆಸಕ್ತಿ ನನ್ನಲ್ಲಿ ತರಿಸಲಿಲ್ಲ (ಕನ್ನಡ, ಇಂಗ್ಲಿಷ್ ಮಟ್ಟಿಗೆ ಹಾಗಾಗಲಿಲ್ಲ - ಅನ್ನುವುದು ನನ್ನ ಮಟ್ಟಿಗೆ ಸಂತೋಷದ ವಿಚಾರ!).

ಇದಕ್ಕೆ ಕಲಿಸುವರೂ ಕೂಡ ಒತ್ತು ಕೊಡುತ್ತಿರಲಿಲ್ಲವೆನ್ನುವುದೂ ಅಷ್ಟೇ ಸತ್ಯ. ಪುಸ್ತಕದಲ್ಲಿರುವ ಭಾಗಗಳನ್ನು ಓದು ಉತ್ತರಿಸುವ ಪರಂಪರೆಯನ್ನಷ್ಟೇ ಬೆಳೆಸುವ ಈ ಪದ್ಧತಿ ನಿಜವಾಗಿಯೂ ಸೋತಿದೆ ಎಂದು ನನ್ನ ಎಣಿಕೆ. ಉದಾಹರಣೆಗೆ ಕುಮಾರವ್ಯಾಸನ ಗದುಗಿನ ಭಾರತದ ಒಂದು ಸಣ್ಣ ಭಾಗ, ಹರಿಶ್ಚಂದ್ರ ಕಾವ್ಯದ ಒಂದು ಸಣ್ಣ ಭಾಗ ನಮಗೆ ಐದಾರನೇ ತರಗತಿಯಲ್ಲಿದ್ದ ನೆನಪು. ನಮಗೆ ಪಾಠ ಮಾಡಿದವರು ಆ ಪುಸ್ತಕಗಳನ್ನು ತಂದು ತೋರಿಸಿ ಅದರ ಬಗ್ಗೆ ಒಂದಷ್ಟು ಹೇಳಿದ್ದರೆ, ಕೆಲವರಾದರೂ ಅಂತಹ ಪುಸ್ತಕಗಳನ್ನು ಓದುವ ಪ್ರಯತ್ನವನ್ನು ಮಾಡುತ್ತಿದ್ದರೋ ಏನೋ! ಅದೇ ರೀತಿ ಕುವೆಂಪು ಬೇಂದ್ರೆ ಅವರ ಒಂದು ಕವನವನ್ನು ಪಾಠ ಮಾಡಿದ ಮೇಲೆ, ಅವರ ಬೇರೆ ಕವನಗಳನ್ನೋ, ಅಥವಾ ಬೇರೆ ಕವಿಗಳ ಶೈಲಿಗೂ ಇವರ ಶೈಲಿಗೂ ಹೋಲಿಕೆ-ವ್ಯತ್ಯಾಸಗಳನ್ನು ತಿಳಿಸುವ, ವಿಶ್ಲೇಷಿಸುವ ಪ್ರಯತ್ನವನ್ನೂ ಯಾರೂ ಮಾಡಿದ್ದ ನೆನಪಿಲ್ಲ. ಇವೆಲ್ಲಾ ಸ್ಪದವಿ ತರಗತಿಗಳಲ್ಲೇ ಆಗಬೇಕಾದ್ದಲ್ಲ. ಚಿಕ್ಕಂದಿನಿಂದಲೇ ಇವುಗಳಿಗೆ ಒಳ್ಳೇ ಬುನಾದಿ ಹಾಕಬೇಕಾದ್ದು ಅತೀ ಅಗತ್ಯ.

ಈಗ ನನ್ನ ಮಕ್ಕಳ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ ನೋಡಿದಾಗ ಸಂತೋಷವಾಗುತ್ತೆ - ಪಠ್ಯಪುಸ್ತಕವೇ ಆಗಲಿ, ನಿಗದಿತ ಪಾಠಗಳೇ ಆಗಲಿ ಇರುವುದಿಲ್ಲ. ಅವರ ಮಟ್ಟಕ್ಕೆ ತಕ್ಕ (ಇತರೇ) ಪುಸ್ತಕಗಳ ಓದಿನಿಂದಲೇ, ಅದನ್ನು ಅರ್ಥಮಾಡಿಕೊಂಡು ಬರೆಯುವುದರಿಂದಲೇ, ಅಗತ್ಯವಾದ ವ್ಯಾಕರಣ ಅಂಶಗಳನ್ನು ತಿಳಿಯುವುದರಿಂದಲೇ ಕಲಿಕೆ ನಡೆಯುತ್ತೆ.ಓದಿದ ಪುಸ್ತಕಗಳ ಬಗ್ಗೆ ಬರೆಯುವ, ಅದನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆಂದು ವಿವರಿಸುವುದರ ಮೂಲಕವೇ ಮಕ್ಕಳು ಭಾಷೆಯನ್ನು ಕಲಿಯುತ್ತಾರೆ.

ನನಗೆ ಸಂಸ್ಕೃತವನ್ನು ಹೇಳಿಕೊಟ್ಟ ಉಪಾಧ್ಯಾಯರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು - ಶಾಲೆಯಲ್ಲಿ ಕನ್ನಡವನ್ನೇ ಓದಿದ ನಾನು ಬೇರೊಂದು ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತವನ್ನು ಕೆಲವು ವರ್ಷಗಳು ಕಲಿತೆ. ಸಂಸೃತ ಮೊದಲೇ ನಾನಿದ್ದ ವಾತಾವರಣದಲ್ಲಿ ಮಾತಾಡಲು ಕೇಳದಿರುವ ಭಾಷೆ. ವ್ಯಾಕರಣವೂ ತೊಡಕೇ. ಕನ್ನಡದ ಭಾಷಾಧಾಟಿಗೂ, ಸಂಸ್ಕೃತಕ್ಕೂ ಬಹಳ ವ್ಯತ್ಯಾಸಗಳಿವೆ. ಆದರೆ, ನನ್ನ ಮಟ್ಟಿಗೆ ಹೇಳುವುದಾದರೆ, ಪರೀಕ್ಷೆಗೆ ಅಂತ ಮಾತ್ರ ಪಾಠವನ್ನು ಹೇಳಿಕೊಡದೇ, ಅದರ ಹೊರಗೂ ನೋಡುವ ಅವಕಾಶವನ್ನು, ಆಸಕ್ತಿ ಹುಟ್ಟಿಸುವ ಕೆಲಸವನ್ನೂ ನನಗೆ ಸಂಸ್ಕೃತವನ್ನು ಕಲಿಸಿದ ಹಲವರು ಮಾಡಿದ್ದರು. ಅವರ ದಯದಿಂದಲೇ, ಮಹಾಕಾವ್ಯಗಳಲ್ಲದಿದ್ದರೂ, ಅವಕಾಶವಿದ್ದಾಗ ಮೊದಲೇ ಕೇಳಿಲ್ಲದ ಚಿಕ್ಕ ಪುಟ್ಟ ಪದ್ಯಗಳನ್ನು ಓದಿ ಅರ್ಥ ತಿಳಿದುಕೊಳ್ಳುವ ಆಸಕ್ತಿ ಬಂದಿರುವುದಕ್ಕೆ ಅವರು ಸಂಸ್ಕೃತವನ್ನು ಕಲಿಸಿದ ರೀತಿಯೇ ಕಾರಣ ಎಂದು ನನಗನಿಸುತ್ತೆ. 

ಅಂತಹ ಕೆಲಸವನ್ನೇ ಭಾಷೆಯನ್ನು ಕಲಿಸುವ ಎಲ್ಲ ಶಿಕ್ಷಕರೂ ಮಾಡಿದರೆ ಬಹಳ ಚೆನ್ನ- ಅಲ್ಲವೇ?

-ಹಂಸಾನಂದಿ   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet