ಭೂಮಾಫಿಯಾ ಕರಾಳ ಜಾಲ

ಭೂಮಾಫಿಯಾ ಕರಾಳ ಜಾಲ

ಸಮಾಜದಲ್ಲಿ ಅಪರಾಧದ ಸ್ವರೂಪಗಳು ಭಿನ್ನ ಆಯಾಮ ಪಡೆಯುತ್ತಿರುವುದು ಮತ್ತು ಅವುಗಳ ತೀವ್ರತೆ ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಭೂಮಾಫಿಯಾದ ಕರಾಳ ಜಾಲ ವ್ಯಾಪಿಸುತ್ತಿರುವುದು ಇಂಥ ಆತಂಕಗಳಲ್ಲಿ ಒಂದು. ನಗರ ಅಥವಾ ಗ್ರಾಮೀಣ ಪ್ರದೇಶ ಎಂಬ ಭೇಧವಿಲ್ಲದೆ ಎಲ್ಲ ಕಡೆಯೂ ಭೂಮಿಯ ಬೆಲೆ ಗಗನಕ್ಕೇರಿದೆ. ಹಾಗಾಗಿ, ತುಂಡು ಭೂಮಿಗೂ ವ್ಯಾಜ್ಯಗಳು, ಗಲಾಟೆಗಳು ನಡೆಯುವುದನ್ನು ನೋಡುತ್ತೇವೆ. ಆದರೆ, ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಸಂಪೂರ್ಣ ಕೆರೆಯೇ ಕಣ್ಮರೆಯಾಗಿದೆ. ಭೂಮಾಫಿಯಾ ಸರ್ಕಾರಿ ಕೊಳವನ್ನು ಕದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆರೆಯನ್ನು ನೀರಾವರಿ ಮತ್ತು ಮೀನು ಸಾಕಣೆ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ನೀರು ಸಂಗ್ರಹಾಗಾರದಲ್ಲಿ ಮರಳು ತುಂಬಿ ಗುಡಿಸಲು ನಿರ್ಮಿಸಲಾಗಿದೆ. ಧರ್ಭಾಂಗದಲ್ಲಿ ಹೆಚ್ಚಿರುವ ಭೂಮಿಯ ಬೆಲೆಯ ಕಾರಣ ಮಾಫಿಯಾ ಸಾರ್ವಜನಿಕ ಬಳಕೆಗೆ ಮೀಸಲಾದ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಆದರೆ, ಇದು ಯಾವುದೋ ಒಂದು ರಾಜ್ಯ ಅಥವಾ ಒಂದು ಜಿಲ್ಲೆಗೆ ಸೀಮಿತವಾದ ಸಮಸ್ಯೆಯಲ್ಲ.

ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಸಾವಿರಾರು ನಿದರ್ಶನಗಳು ಕರ್ನಾಟಕದಲ್ಲೂ ಇವೆ. ಕೆರೆಪ್ರದೇಶ, ಗೋಮಾಳ ಸೇರಿದಂತೆ ಸಾರ್ವಜನಿಕ ಭೂಮಿಯಲ್ಲಿ ಅಕ್ರಮವಾಗಿ ಲೇಔಟ್ ಗಳು ತಲೆ ಎತ್ತಿರುವುದರಿಂದ ಸಾರ್ವಜನಿಕ ಭೂಮಿಯಲ್ಲಿ ಅಕ್ರಮವಾಗಿ ಲೇಔಟ್ ಗಳು ತಲೆ ಎತ್ತಿರುವುದರಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಒಂದೆರಡಲ್ಲ. ಭೂಗಳ್ಳರ ಈ ಜಾಲಗಳು ಕಾನೂನಿನ ಭಯವಿಲ್ಲದೆ ಜಮೀನನ್ನು ನುಂಗಿ ಹಾಕುತ್ತಿರುವುದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಯಾವುದೇ ಪ್ರದೇಶದಲ್ಲಿ ಲೇ ಔಟ್ ಅಥವಾ ಇನ್ನಿತರ ನಿರ್ಮಾಣ ಕಾಮಗಾರಿಗಳು ನಡೆಯಬೇಕಾದರೆ ಸ್ಥಳೀಯಾಡಳಿತಗಳ, ಸ್ಥಳೀಯ ಅಧಿಕಾರಿಗಳ ಅನುಮತಿ ಅತ್ಯಗತ್ಯ. ಗ್ರಾಮೀಣ ಭಾಗದಲ್ಲೂ ಗ್ರಾಮ ಲೆಕ್ಕಿಗರ ಅನುಮತಿ ಪಡೆಯಬೇಕಾಗುತ್ತದೆ. ಆದರೆ ವಿಪರ್ಯಾಸದ ಸಂಗತಿ ಎಂದರೆ, ಎಷ್ಟೋ ಕಡೆಗಳಲ್ಲಿ ಈ ಭೂಮಾಫಿಯಾದ ಜತೆಗೆ ಅಧಿಕಾರಿಗಳು ಶಾಮೀಲಾಗಿರುತ್ತಾರೆ. ಲಂಚ ಪಡೆದು ಇಂಥ ಅನಧಿಕೃತ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುತ್ತಾರೆ.

ಅಕ್ರಮವಾಗಿ ಲೇ ಔಟ್ ನಿರ್ಮಿಸಿದವರೇನೋ, ಇತರರಿಗೆ ಮಾರಾಟ ಮಾಡಿ, ದುಡ್ಡನ್ನು ಮಾಡಿಕೊಂಡು ನಾಪತ್ತೆಯಾಗಿ ಬಿಡುತ್ತಾರೆ. ಮತ್ತೆ ಸಂಕಷ್ಟಕ್ಕೆ ಸಿಲುಕುವವರು ಸಾರ್ವಜನಿಕರೇ. ಸೂಕ್ತ ಮಾಹಿತಿ ಇಲ್ಲದೆ ಸಾರ್ವಜನಿಕರು ಅಕ್ರಮ ಲೇಔಟ್ ಗಳಲ್ಲಿ ಮನೆ ನಿರ್ಮಿಸಿಕೊಳ್ಳುತ್ತಾರೆ ಅಥವಾ ಖರೀದಿಸುತ್ತಾರೆ. ಆದರೆ, ಇಂಥ ಆಸ್ತಿಯಿಂದ ಅವರು ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಅಕ್ರಮದ ಮಾಹಿತಿ ಇದ್ದರೂ, ಅಧಿಕಾರಿಗಳು ಜಾಣಮೌನಕ್ಕೆ ಶರಣಾಗುವುದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕುವಂತಾಗುತ್ತದೆ.

ಆಸ್ತಿ ಖರೀದಿ, ನೋಂದಣಿ ಸೇರಿದಂತೆ ಸಂಬಂಧಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಗುರುತಿಸುತ್ತಿದೆ ಎಂಬುದೇನೋ ಸರಿ. ಆದರೆ, ಭೂಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಇಂಥ ಜಾಲಗಳು ಮತ್ತಷ್ಟು ವಿಸ್ತರಿಸುತ್ತವೆ. ಸರ್ಕಾರಿ ವ್ಯವಸ್ಥೆಯಲ್ಲೇ ಇದ್ದುಕೊಂಡು ಇಂಥ ಜಾಲಗಳಿಗೆ ನೆರವಾಗುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಭೌಗೋಳಿಕತೆ, ಅಕ್ರಮ ನಿರ್ಮಾಣ ಕಾಮಗಾರಿಗಳು, ಇವುಗಳ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸ್ಥಳಿಯಾಡಳಿತಗಳು ಮತ್ತು ಅಲ್ಲಿನ ಅಧಿಕಾರಿಗಳು ಮತ್ತಷ್ಟು ಪರಿಣಾಮಕಾರಿಯಾಗಿ ಅವರ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಂದಾಯ ಇಲಾಖೆ ಕೂಡ ತಂತ್ರಜ್ಞಾನವನ್ನು ಬಳಸಿಕೊಂಡು, ಸುಧಾರಿತ ಕ್ರಮಗಳನ್ನು ಅಳವಡಿಸಿಕೊಂಡು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೨-೦೧-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ