ಭೂಮಿಯನ್ನಾಳಿದ ಡೈನೋಸಾರ್ ಗಳು
ಡೈನೋಸಾರ್ ಗಳೆಂದರೆ ಮಕ್ಕಳಿಗೆ ಹಾಗೂ ಇಂದಿನ ಯುವ ಜನಾಂಗಕ್ಕೆ ಮೋಡಿ ಮಾಡಿದ ಪ್ರಾಣಿ. ಈ ಪ್ರಾಣಿ ಇವರ ಮನಸೂರೆಗೊಂಡದ್ದು ಕೇವಲ ಸಿನಿಮಾ ಹಾಗೂ ದೂರದರ್ಶನದ ಮಾಧ್ಯಮಗಳ ಮೂಲಕ. ನಿಜಕ್ಕೂ ಇದನ್ನು ಕಂಡವರಾರು? ಆದರೆ ಅವು ಪ್ರಪಂಚದ ಜೀವಸಂಕುಲದ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಮೂಡಿಸಿ ಹೋಗಿರುವುದಂತೂ ಸತ್ಯ! ಇಂದಿಗೂ ಅವುಗಳ ಉಗಮ ಹೇಗೆ? ಅವುಗಳು ಹೇಗೆ ಬದುಕಿದ್ದವು? ಅವು ಇಡೀ ಪ್ರಪಂಚವನ್ನು ಅಷ್ಟು ವರ್ಷಗಳ ಕಾಲ ಹೇಗೆ ಆಳಿದವು ಮತ್ತು ಹೇಗೆ ಅಳಿದವು ಎಂಬುದು ಅಷ್ಟೇ ನಿಗೂಢ!
ಇಂದಿಗೂ ಸಿನಿಮಾ, ದೂರದರ್ಶನ ಮತ್ತು ಇತರೆ ಸಮೂಹ ಮಾಧ್ಯಮಗಳಲ್ಲಿ ಕಂಡುಬರುವ ಡೈನೋಸಾರ್ ಗಳೇ ಹಿಂದಿನ ಡೈನೋಸಾರ್ ಗಳ ಪ್ರತಿರೂಪ ಎಂದು ನಂಬಿದ್ದೇವೆ! ನಿಮಗೆ ಖಂಡಿತ ಗೊತ್ತಿದೆ ಈ ನಕಲಿ ಡೈನೋಸಾರ್ ಗಳೆಲ್ಲಾ ಆನಿಮೇಶನ್ ತಂತ್ರಜ್ಞಾನದಿಂದ ರೂಪುಗೊಂಡಿದೆ ಎಂದು. ಮಕ್ಕಳಂತೂ ಡೈನೋಸಾರ್ ಗಳೆಂದರೆ ಅತ್ಯಂತ ಭಯಾನಕವಾದ ಬೆಂಕಿಯನ್ನು ಉಗುಳುವ ಪ್ರಾಣಿ ಎಂದೇ ನಂಬಿದ್ದಾರೆ.
ಆದರೆ ಅವು ಭೂಮಿಯ ಮೇಲಿನ ಜೈವಿಕ ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ದೀರ್ಘಕಾಲ ಬಾಳಿಬದುಕಿದ ಪರಂಪರೆ ಅಷ್ಟೇ ಭವ್ಯ ಹಾಗೂ ಅವರ್ಣನೀಯ. ಈ ಡೈನೋಸರ್ ಗಳ ಬಗ್ಗೆ ಒಂದಿಷ್ಟು ಮಾಹಿತಿ..
೧. ಡೈನೋಸಾರ್ ಗಳು ಭೂಮಿಯ ಮೇಲಿನ ಅತ್ಯಂತ ಸಮರ್ಥವಾಗಿ, ಸುಮಾರು ೧೬ ಕೋಟಿ ವರ್ಷಗಳವರೆಗೆ ಭವ್ಯವಾಗಿ ಬಾಳಿದ ಜೀವಿಗಳಾಗಿವೆ. ಅಂದರೆ ಇಂದಿಗೆ ೨೩ ಕೋಟಿ ವರ್ಷಗಳ ಹಿಂದೆ ಅವು ತಮ್ಮ ಜೀವನವನ್ನು ಪ್ರಾರಂಭಿಸಿ ಏಳು ಕೋಟಿ ವರ್ಷಗಳ ಹಿಂದೆ ನಾಶವಾಗಿವೆ ಎಂದು ತಿಳಿದುಬಂದಿದೆ.
೨. ಡೈನೋಸಾರ್ ಎಂಬುದು ಗ್ರೀಕ್ ಭಾಷೆಯ ಪದವಾಗಿದ್ದು, 'ಡೈನೋಸ್' ಎಂದರೆ ಭಯಾನಕ ಮತ್ತು 'ಸಾರಸ್' ಎಂದರೆ ಹಲ್ಲಿಗಳು ಎಂದು. ಇವು ನಿಜಕ್ಕೂ ಭಯಾನಕ ಹಲ್ಲಿಗಳೇ.
೩. ೧೯ ನೇ ಶತಮಾನದಲ್ಲಿ ಮೊದಲ ಡೈನೋಸಾರ್ ಗಳ ಪಳೆಯುಳಿಕೆಗಳನ್ನು ಪತ್ತೆಹಚ್ಚಲಾಯಿತು. ೨೦೦೮ನೇ ವರ್ಷದ ಕೊನೆಯವರೆಗೆ ೧೦೪೭ ಡೈನೋಸಾರ್ ಗಳ ವಿವಿಧ ಪ್ರಭೇದಗಳನ್ನು ಗುರುತಿಸಲಾಗಿದೆ.
೪. ಅತ್ಯಂತ ಉದ್ದವಾದ ಡೈನೋಸಾರ್ ನ ಪಳೆಯುಳಿಕೆ ೨೭ ಮೀಟರ್ (೮೯ ಅಡಿ) ಗಳಾಗಿದ್ದು, ಇದನ್ನು ೧೯೦೭ ನಲ್ಲಿ ಪತ್ತೆ ಹಚ್ಚಲಾಗಿದೆ. ಇದು ಈಗ ಇಂಗ್ಲೆಂಡ್ ನ ಪಿಟ್ಸ್ ಬರ್ಗ್ ಕಾರ್ನೇಜ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
೫. ನಮ್ಮ ಭೂಮಿಯ ಮೇಲೆ ಕಂಡುಬಂದ ಅತ್ಯಂತ ಭಾರದ ಡೈನೋಸರ್ ೧೨೦ ಟನ್ (೧,೨೦,೦೦೦ ಕಿಲೋ) ಎಂದು ಅಂದಾಜಿಸಲಾಗಿದೆ. ಅತ್ಯಂತ ಪುಟ್ಟ ಡೈನೋಸಾರ್ ಅಂದರೆ ನಮ್ಮ ಮನೆಯ ಪಾರಿವಾಳದಷ್ಟು!
೬. ಸುಮಾರು ೭ ಕೋಟಿ ವರ್ಷಗಳ ಹಿಂದೆ ಭೂಮಿಗೆ ಕ್ಷುದ್ರಗ್ರಹದಿಂದ ಆದ ಡಿಕ್ಕಿಯೇ ಡೈನೋಸಾರ್ ಸಂತತಿಗಳ ನಾಶಕ್ಕೆ ಕಾರಣ ಎಂದು ವಿಜ್ಞಾನಿಗಳ ಅಭಿಪ್ರಾಯ.
೭. ಎಲ್ಲಾ ಡೈನೋಸಾರ್ ಗಳು ಇತರೆ ಭೂಮಿಯ ಮೇಲಿನ ಪ್ರಾಣಿಗಳಂತೆಯೇ ಬದುಕಿ ಬಾಳಿವೆ. ಕೆಲವು ಡೈನೋಸಾರ್ ಗಳನ್ನು ಹಾರುವ ಟೆರೋಸಾರ್ಸ್ ಮತ್ತು ನೀರಿನಲ್ಲಿ ಈಜಬಲ್ಲ ಈಕ್ತಿಯೋ ಸಾರಸ್ ಎಂದು ತಪ್ಪಾಗಿ ಭಾವಿಸಲಾಗಿದೆ.
೮. ಡೈನೋಸಾರ್ ಗಳು ೧೬ ಕೋಟಿ ವರ್ಷಗಳ ಕಾಲ ಈ ಭೂಮಿಯ ಮೇಲೆ ತಮ್ಮ ಅಧಿಪತ್ಯವನ್ನು ಸಾಧಿಸಿದ್ದವು ! ನೆನಪಿಡಿ, ಈ ಭೂಮಿಯ ಮೇಲೆ ಮಾನವನ ಆಧಿಪತ್ಯ ಕೇವಲ ೧೦ ದಶಲಕ್ಷ ವರ್ಷಗಳು ಮಾತ್ರ.
೯. ಡೈನೋಸಾರ್ ಗಳಷ್ಟೇ ಪ್ರಸಿದ್ಧವಾದ ಡೈರನೋಸಾರಸ್ ಗಳು ೪೦ ಅಡಿ ಉದ್ದವಿದ್ದು (೧೨.೪ ಮೀ) ೫ ರಿಂದ ೭ ಟನ್ ಭಾರವಿದ್ದವು.
೧೦. ೧೯೦೨ರ ಸರ್ವೇಕ್ಷಣೆಯಲ್ಲಿ ಕಂಡು ಬಂದ ಡೈನೋಸಾರ್ ನ ಪಳೆಯುಳಿಕೆಯನ್ನು ಸ್ಟೆಗೊಸಾರಸ್ ಎಂದು ಗುರುತಿಸಲಾಗಿದ್ದು ಇದರ ಭಾರ ೩೧೦೦ ಕಿಲೋ ಗ್ರಾಮ್ ಗಳಾಗಿವೆ.
೧೧. ಟ್ರೆಸೆರಾಟ್ರಾಪ್ಸ್ ಎನ್ನುವ ವಿಶೇಷ ಡೈನೋಸಾರ್ ಗಳು ಮುಖದ ಮೇಲೆ ಮೂರು ಕೊಂಬುಗಳನ್ನು ಹೊಂದಿದ್ದು ಇದರಿಂದಲೇ ಶತ್ರುಗಳನ್ನು ಸಮರ್ಥವಾಗಿ ಎದುರಿಸಿ ಹೋರಾಟ ನಡೆಸುತ್ತಿದ್ದವು. ಇವೂ ಕೂಡ ಸಸ್ಯಾಹಾರಿಗಳಾಗಿ ಇರುವುದು ಒಂದು ವಿಶೇಷ.
೧೨. ನಮ್ಮ ಭೂಮಿಯ ಮೇಲೆ ಸುಮಾರು ೧೬ ಕೋಟಿ ವರ್ಷಗಳ ಕಾಲ ಸಾಮ್ರಾಜ್ಯವನ್ನು ಸ್ಥಾಪಿಸಿ ಆಳಿದ ಡೈನೋಸಾರ್ ಸಂತತಿಯಲ್ಲಿ ಬೇರೆಬೇರೆ ಪ್ರಭೇದಗಳು ಬೇರೆಬೇರೆ ಕಾಲದಲ್ಲಿ ಕಂಡುಬಂದಿದ್ದು ಒಂದು ವಿಶೇಷ. ಉದಾಹರಣೆಗೆ ಟೈರೆನೊಸಾರಸ್ ಗಳು ೮ ಕೋಟಿ ವರ್ಷಗಳ ಹಿಂದೆ ಸ್ಟೆಗೋಸಾರಸ್ ಗಳು ಆಳಿದ ನಂತರ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದವುಗಳು.
೧೩. ಡೈನೋಸಾರ್ ಗಳನ್ನು ಅವುಗಳ ಪಳೆಯುಳಿಕೆ ಮತ್ತು ಅಸ್ಥಿಪಂಜರಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಮುಖ್ಯವಾಗಿ ಇವುಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಹಕ್ಕಿಯಂತೆ ಹಾರುವ ಡೈನೋಸಾರ್ ಗಳು ಮತ್ತು ಹಕ್ಕಿಯಂತೆ ಹಾರಲಾಗದ ಡೈನೋಸಾರ್ ಎಂದು.
೧೪. ಡೈನೋಸಾರ್ ಗಳ ಬಗ್ಗೆ ಚಲನಚಿತ್ರಗಳಲ್ಲಿ ತೋರಿಸುವುದೆಲ್ಲಾ ಸತ್ಯವಲ್ಲ. ಉದಾಹರಣೆಗೆ ' ಜುರಾಸಿಕ್ ಪಾರ್ಕ್' ಚಲನಚಿತ್ರವನ್ನೇ ತೆಗೆದುಕೊಳ್ಳಿ. ಅದರಲ್ಲಿ ಡೈನೋಸಾರ್ ಗಳು ೫೦ ಕಿಲೋಮೀಟರ್ ಗಳಿಗಿಂತಲೂ ವೇಗವಾಗಿ ಓಡುತ್ತವೆ. ಆದರೆ ಅವುಗಳ ವೇಗ ಗಂಟೆಗೆ ಕೇವಲ ೨೭ ಕಿಲೋಮೀಟರ್ ಗಳು ಮಾತ್ರ! ಅವುಗಳು ಬೇಟೆಯಾಡುವ ರೀತಿ, ಚಾಣಾಕ್ಷತನ, ಕೋಪತಾಪಗಳು, ಜಾಣ್ಮೆ ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಿ ತೋರಿಸಲಾಗುತ್ತದೆ.
೧೫. ಅತ್ಯಂತ ಪ್ರಾಚೀನ ಡೈನೋಸಾರ್ ಎಂದರೆ ಈವೋರಾಪ್ಟರ್. ಇದು ಮಾಂಸಾಹಾರಿಯಾಗಿದ್ದು ೩೨.೮ ಕೋಟಿ ವರ್ಷಗಳ ಹಿಂದೆ ಕಂಡುಬಂದಿದೆ. ಎಷ್ಟೇ ಸಂಶೋಧನೆಗಳನ್ನು ನಡೆಸಿದರೂ ವಿಜ್ಞಾನಿಗಳಿಗೆ ಡೈನೋಸಾರ್ ಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಲಭ್ಯವಾಗಿಲ್ಲ. ಹಲವು ಹತ್ತು ಅನುಮಾನಗಳು ಇನ್ನೂ ಕಾಡುತ್ತಿವೆ. ಹೇಗೆ ವರ್ತಿಸುತ್ತಿದ್ದವು? ಅವು ಸಂಗಾತಿಯನ್ನು ಹೇಗೆ ಅರಸುತ್ತಿದ್ದವು? ಅವುಗಳ ಬಣ್ಣ ಯಾವುದು? ಈಗ ಸಿಕ್ಕ ಪಳೆಯುಳಿಕೆಗಳು ಹೆಣ್ಣೇ, ಗಂಡೇ? ಹೀಗೆ ಹಲವು ಪ್ರಶ್ನೆಗಳು ಅವರನ್ನು ಇನ್ನೂ ಕಾಡುತ್ತಿವೆ.
- ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ