ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ! (ಇ-ಲೋಕ-33) (31/7/2007)

ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ! (ಇ-ಲೋಕ-33) (31/7/2007)

ಬರಹ

 ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿಯೂ ಕಚೇರಿ ಸಮಯದಲ್ಲಿ ವಿದ್ಯುತ್ ಬೇಡಿಕೆ ಮಿತಿಮೀರಿ ಹೋಗುತ್ತದೆ. ಈ ಬೇಡಿಕೆಯನ್ನು ತಗ್ಗಿಸಿದರೆ,ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರೋತ್ಸಾಹ ಇದೆ. ಕಟ್ಟಡದ ಏ.ಸಿ.ಗಳನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿ, ವಿದ್ಯುತ್ ಬೇಡಿಕೆಯನ್ನು ತಗ್ಗಿಸುವ ಕ್ರಮಗಳನ್ನು ಕೆಲವು ಕಂಪೆನಿಗಳು ಕೈಗೊಳ್ಳುತ್ತಿವೆಯಂತೆ. ಖ್ಯಾತ ವಿತ್ತ ಸೇವೆ ಒದಗಿಸುವ ಕಂಪೆನಿ ಮೋರ್ಗನ್ ಸ್ಟೇನ್ಲಿ ತನ್ನ ಕಚೇರಿಯಲ್ಲಿ ಮಂಜುಗಡ್ಡೆಯ ಮೂಲಕ ಕಟ್ಟಡ ತಂಪುಗೊಳಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.ಏನಿದು ಹೊಸ ವ್ಯವಸ್ಥೆ ಎಂದಿರಾ? ಈ ವ್ಯವಸ್ಥೆ ಅಳವಡಿಸಲು ಸಾಕಷ್ಟು ಸ್ಥಳಾವಕಾಶ ಬೇಕು. ದೊಡ್ದ ನೀರಿನ ಟ್ಯಾಂಕುಗಳನ್ನು ಅಳವಡಿಸಿಕೊಂಡು, ಈ ನೀರನ್ನು ವಿದ್ಯುತ್ ಬಳಸಿ ಮಂಜುಗಡ್ಡೆ ಮಾಡುವ ಕೆಲಸ ರಾತ್ರಿಯ ವೇಳೆ ನಡೆಯುತ್ತದೆ. ರಾತ್ರೆ ವಿದ್ಯುತ್ ಬೇಡಿಕೆ ಕಡಿಮೆಯೆಂದು ನೆನಪಿಡಿ.ಹಗಲಿನ ವೇಳೆ, ಈ ಟ್ಯಾಂಕುಗಳಿಂದ ಕಟ್ಟಡಕ್ಕೆ ಪ್ರತ್ಯೇಕ ಕೊಳವೆಗಳ ಮೂಲಕ ತಂಪು ಗಾಳಿ,ಸಾಗಿ ಕಟ್ಟಡವನ್ನು ತಂಪು ಮಾಡುತ್ತದೆ. ಮಂಜು ಕರಗಿ, ಉಂಟಾದ ನೀರು ರಾತ್ರೆ ಮತ್ತೆ ಮಂಜುಗಡ್ಡೆಯಾಗಿ,ಮರುದಿನ ಕಟ್ಟಡ ತಂಪಾಗಿಸಲು ತಯಾರಾಗುತ್ತದೆ. ಈ ಹೊಸ ವ್ಯವಸ್ಥೆ ವಿದ್ಯುತ್ ಬಳಸುವುದು, ರಾತ್ರೆ.ನೀರು ಮರು ಬಳಕೆಯಗುತ್ತದೆ. ಹೆಚ್ಚಿನ ಜನರೇಟರ್ ಅಗತ್ಯವನ್ನು ತಪ್ಪಿಸುವ ಮೂಲಕ ಪರಿಸರಸ್ನೇಹಿ.ಸ್ಥಾಪನೆಗೆ ಸ್ಥಳಾವಕಾಶ ಹೆಚ್ಚು ಬೇಕು. ಅಲ್ಲದೆ ಹೊಸ ಟ್ಯಾಂಕ್, ಪ್ರತ್ಯೇಕ ಕೊಳವೆ ಇತ್ಯಾದಿ ಅಳವಡಿಸಲು ಹೆಚ್ಚು ಖರ್ಚು ಬರುತ್ತದೆ ಎನ್ನುವುದು ಈ ವ್ಯವಸ್ಥೆಯ ತೊಂದರೆ.ಆದರೆ ಪರಿಸರಸ್ನೇಹಿ ಕ್ರಮಕ್ಕೆ ಪ್ರೋತ್ಸಾಹ ನೀಡುವ ಸರಕಾರದ ನಿರ್ಧಾರದಿಂದ ವಿದ್ಯುಚ್ಛಕ್ತಿ ದರದಲ್ಲಿ ಕಡಿತದಂತಹ ಪ್ರೋತ್ಸಾಹ ದೊರೆಯುವುದರಿಂದ ಕೆಲವು ವರ್ಷಗಳಲ್ಲಿ ಈ ಖರ್ಚು ವಸೂಲಾಗುತ್ತದೆ.  

ಬಾಹ್ಯಾಕಾಶ ಯಾತ್ರಿಗಳಿಗೆ ಸ್ಟೈಲಿಶ್ ಉಡುಪು!space

 ಬಾಹ್ಯಾಕಾಶಯಾನಿಗಳು ಧರಿಸುವ ಉಡುಗೆತೊಡುಗೆಗಳನ್ನು ಗಮನಿಸಿದ್ದೀರಿ ತಾನೇ?ಕಳೆದ ನಲ್ವತ್ತು ವರ್ಷಗಳಿಂದ ಅದೇ ತಟ್ಟೀರಾಯನಂತಹ ಉಡುಗೆ ಧರಿಸುತ್ತಾ ಬಂದಿದ್ದಾರೆ.ಅದು ಭಾರೀ ಭಾರ. ಬಾಹ್ಯಾಕಾಶದಲ್ಲಿ ಯಾತ್ರಿಯ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಆದರೂ ಭೂಮಿಯ ಮೇಲಿನ ಒತ್ತಡ ಅಲ್ಲೂ ಲಭ್ಯವಾಗುವಂತೆ ಒತ್ತಡದಲ್ಲಿ ತುಂಬಿಸಿದ ಗಾಳಿಯನ್ನು ಹಿಡಿದಿಡುವಂತೆ ಅದನ್ನು ರೂಪಿಸಲಾಗಿದೆ. ಜತೆಗೆ ಆ ಒತ್ತಡವನ್ನು ಉಳಿಸಿಕೊಳ್ಳುವ ಯಂತ್ರಗಳೂ ಜತೆಯಲ್ಲಿರಬೇಕು. ಈ ಉಡುಗೆ ತೊಟ್ಟು ಆಚೀಚೆ ನಡೆದಾಡುವುದು ಪ್ರಯಾಸಕರ.ಯಾತ್ರಿಯ ಹೆಚ್ಚಿನ ಶಕ್ತಿ ಈ ಉಡುಗೆಯಿಂದಲೇ ಖರ್ಚಾಗುತ್ತದೆ. ಈಗ ಮಸಾಚ್ಯುಸೆಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಹೊಸ ನಮೂನೆಯ ಉಡುಗೆಯನ್ನು ರೂಪಿಸಿದ್ದಾರೆ.ಇದರಲ್ಲಿ ನೈಲಾನ್ ಮತ್ತು ಸ್ಪೇಂಡೆಕ್ಸ್ ಎನ್ನುವ ವಸ್ತ್ರಗಳನ್ನು ಒಂದರ ಮೇಲೆ ಇನ್ನೊಂದನ್ನು ಸುತ್ತಿ, ಬಾಹ್ಯಾಕಾಶಯಾನಿಯು ಬಯಸುವ ಒತ್ತಡವನ್ನು ಉಂಟು ಮಾಡಲಾಗಿದೆ.ಇದು ಬಹಳ ಕಡಿಮೆ ತೂಕದ್ದು,ಯಂತ್ರಗಳನ್ನಿದರಲ್ಲಿ ಅಳವಡಿಸಬೇಕಿಲ್ಲ.ತಟ್ಟೀರಾಯನ ತರದ ಉಡುಗೆಯಲ್ಲದೆ,ಇದು ಮೈಬಿಗಿಯುವ,ನೋಡಲು ಸಹ್ಯವೆನಿಸುವ ಹಾಗಿದೆ.ಇದನ್ನು ಪ್ರತಿ ಬಾಹ್ಯಾಕಾಶಯಾನಿಗೆ ಪ್ರತ್ಯೇಕವಾಗಿ ರೂಪಿಸಬೇಕಾಗುತ್ತದೆ. ಅಂದಹಾಗೆ ಇದು ಬಾಹ್ಯಾಕಾಶಯಾನಕ್ಕೆ ಮಾತ್ರಾ ಸೂಕ್ತ-ಅನ್ಯಗ್ರಹಗಳಿಗೆ ಇದು ಸೂಕ್ತವಲ್ಲ.

 ಬಾಹ್ಯಾಕಾಶಯಾನಿಗಳ ಆಹಾರ ಮಾಲ್‍ಗಳಲ್ಲಿ ಮಾರಾಟfood

 ಚೀನಾವು ಈಗಾಗಲೇ ಬಾಹ್ಯಾಕಾಶಕ್ಕೆ ಯಾನಿಯನ್ನು ಕಳಿಸಿದೆ.ಅವರು ಸೇವಿಸುವ ಆಹಾರವನ್ನು ಮಾರುಕಟ್ಟೆಯಲ್ಲಿ ಜನ ಸಾಮಾನ್ಯರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಅಲ್ಲಿನ ಬಾಹ್ಯಾಕಾಶಯಾನ ಸಂಸ್ಥೆ ಶಾಂಘೈಯ ಕಂಪೆನಿಯೊಂದಿಗೆ ಆಹಾರದ ವಾಣಿಜ್ಯ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.ಈ ಆಹಾರ ಪೋಷಕಾಂಶಗಳನ್ನು ಬಹಳ ಪ್ರಮಾಣದಲ್ಲಿ ಒಳಗೊಂಡಿರಬೇಕು ತಾನೆ?ಹಂದಿಮಾಂಸ,ಬಾತುಕೋಳಿಯ ಮಾಂಸ ಹೀಗೆ ಹಲವು ಮಾಂಸಾಹಾರಗಳನ್ನು ಬಾಹ್ಯಾಕಾಶ ಯಾನಿಗಳ ಆಹಾರ ಒಳಗೊಂಡಿದೆ. ಚಾಕಲೇಟ್ ಬಾರ್,ಡೆಸರ್ಟ್‍ಗಳನ್ನು ಇದುವರೆಗೆ ಬಾಹ್ಯಾಕಾಶಯಾನಿಗಳು ಬಳಸಿಲ್ಲವಾದರೂ, ಮುಂದಿನ ಯಾತ್ರೆಯ ವೇಳೆ ಇವನ್ನು ಒಯ್ಯಲಿರುವುದರಿಂದ,ಇವನ್ನೂ ಲಭ್ಯವಾಗಿಸುವ ಸೂಚನೆಯಿದೆ.

ಸಮುದ್ರದಡಿಯ ಪ್ರಯೋಗಾಲಯಗಳು

ಈ ಆಧುನಿಕ ಯುಗದಲ್ಲೂ ಸಮುದ್ರದ ಬಗ್ಗೆ ನಮಗೆ ತಿಳಿದಿರುವುದು ಕಡಿಮೆ. ಸಮುದ್ರ ತಳದ ಕೆಲವೆಡೆ ಸೀಮಿತ ಸಂಶೋಧನೆಗಳು ನಡೆದಿವೆಯಾದರೂ, ಅದರ ಅವಧಿ ಮತ್ತು ಆ ಸಂಶೋಧನೆ ನಡೆದ ಸ್ಥಳ ವಿಸ್ತೀರ್ಣ ಸಮುದ್ರದ ಅಗಾಧತೆಗೆ ಹೋಲಿಸಿದರೆ ಕಡಿಮೆಯೆ ಎನ್ನುವುದು ತಿಳಿದವರ ಅನಿಸಿಕೆ. ಸಮುದ್ರದ ಮೂಲಕ ಹಲವು ಕೇಬಲ್ ಜಾಲಗಳು ಭೂಮಿಯ ಒಂದು ಖಂಡದಿಂದ ಇನ್ನೊಂದಕ್ಕೆ ಹಾದು ಹೋಗಿವೆ. ಇವನ್ನು ಮಾಹಿತಿಯ ಸಾಗಾಟಕ್ಕೆ ಹೆದ್ದಾರಿಗಳಂತೆ ಬಳಸಲಾಗುತ್ತಿದೆ. ಇವನ್ನು ಸಮುದ್ರ ಸಂಶೋಧನೆ ಬಗ್ಗೆಯೂ ಬಳಸಬಾರದೇಕೆ ಎನ್ನುವ ಯೋಚನೆಯೂ ಇದೆ. ಹವಾಯಿ ದ್ವೀಪದ ಸಮೀಪ ಸಮುದ್ರ ಸಂಶೋಧನೆ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.ಈ ಪ್ರಯೋಗಾಲಯದಲ್ಲಿ ಆಧುನಿಕ ತಂತ್ರಜ್ಞಾನ ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲಾಗಿದೆ. ಸಮುದ್ರ ತಳದ ಉಷ್ಣತೆಯನ್ನು ಅಳೆಯಲು ಸಂವೇದಕಗಳನ್ನು ಬಳಸಲಾಗಿದೆ. ಅಲ್ಲಿನ ಒತ್ತಡ,ನೀರಿನ ಚಲನೆ ಇತ್ಯಾದಿ ಮಾಹಿತಿಗಳನ್ನು ವಿಜ್ಞಾನಿಗಳು ದೂರದ ಪ್ರಯೋಗಾಲಯದಲ್ಲಿ ಕುಳಿತು ತಮ್ಮ ಕಂಪ್ಯೂಟರುಗಳಲ್ಲೇ ಪಡೆಯುತ್ತಾರೆ. ಮೊದಲು ಹೇಳಿದ ಕೇಬಲ್ ಜಾಲಗಳು, ಈ ಮಾಹಿತಿಯನ್ನು ಸಾಧನಗಳಿಂದ ವಿಜ್ಞಾನಿಗಳಿಗೆ ಮುಟ್ಟಿಸುತ್ತವೆ.ಹಾಗಾಗಿ ವಿಜ್ಞಾನಿಗಳು ಸಮುದ್ರಕ್ಕೆ ಹೋಗದೆಯೇ ತಮಗೆ ಬೇಕಾದ ಮಾಹಿತಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಸಮುದ್ರಜೀವಿಗಳ ಬಗ್ಗೆ ಸಂಶೋಧಕರು ಹೇಗೆ ತಿಳಿದುಕೊಳ್ಳುತ್ತಾರೆ?ಈಗ ಲಭ್ಯವಿರುವ ಸ್ವಯಂಚಾಲೀ ರೊಬೋಗಳು ಆ ಕೆಲಸ ಮಾಡುತ್ತವೆ.ತಮ್ಮ ಕ್ಯಾಮರಾ ಕಣ್ಣಿನಿಂದ ನೋಡಿದ್ದನ್ನು ಅವು ಫೈಬರ್ ಜಾಲದ ಮೂಲಕ ಪ್ರಯೋಗಾಲಯದ ಕಂಪ್ಯೂಟರುಗಳಿಗೆ ಕಳುಹಿಸುತ್ತವೆ.ಸಮುದ್ರದಾಳದ ಸಂಶೋಧನೆಗೆ ಹೊಸ ಕೇಬಲ್‍ಗಳನ್ನು ಅಳವಡಿಸುವ ಕೆಲಸವೂ ಕೆಲವೆಡೆ ನಡೆಯುತ್ತಿದೆ. ಅಲಾಕ್ಟೆಲ್-ಲ್ಯೂಸೆಂಟ್ ಎನ್ನುವ ದೂರಸಂಪರ್ಕ ಕಂಪೆನಿಯಿಂತಹ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.ಭೂಮಿಯ ಮುಕ್ಕಾಲು ಪಾಲು ಆವರಿಸಿರುವ ಸಮುದ್ರವನ್ನು ತಿಳಿಯಲು ಹೆಚ್ಚು ಹೆಚ್ಚು ಪ್ರಯತ್ನ ನಡೆದಂತೆ ಸಮುದ್ರವನ್ನಿಡೀ ಕೇಬಲ್‍ಗಳು ಆವರಿಸುವುದು ಸಂಭವನೀಯ.ಈ ಕೇಬಲ್‍ಗಳೇ ಹೊಸ ಬಗೆಯ ತಲೆನೋವೂ ಒಡ್ಡಬಹುದು! *ಅಶೋಕ್‍ಕುಮಾರ್ ಎ