ಮತದಾನ ನಿರಾಶೆ! ಮತದಾರರ ಹತಾಶೆ!

ಮತದಾನ ನಿರಾಶೆ! ಮತದಾರರ ಹತಾಶೆ!

ಬರಹ

ನನ್ನ ಭಯ ನಿಜವಾಗಿದೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನದ ಪ್ರಮಾಣ ಅತ್ಯಂತ ಕಳಪೆಯಾಗಿದೆ. ಹೀಗಾಗುವುದೆಂಬ ಕಳವಳ ವ್ಯಕ್ತಪಡಿಸಿ ಮತ್ತು ಹೀಗಾಗಬಾರದೆಂಬ ಕಳಕಳಿ ಹೊಂದಿ ನಾನು ಈ ಜಾಲತಾಣವೂ ಸೇರಿದಂತೆ ಹಲವು ಜಾಲತಾಣಗಳಿಗೆ ಹಾಗೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆದೆ. ತಪ್ಪದೇ ಮತದಾನ ಮಾಡುವಂತೆ ಮತದಾರರಲ್ಲಿ ಸಕಾರಣ ವಿನಂತಿಸಿಕೊಂಡು ಹಲವೆಡೆ ಭಾಷಣಗಳನ್ನು ಮಾಡಿದೆ; ಮನೆಮನೆಗೂ ಹೋಗಿ ಪ್ರಾರ್ಥಿಸಿಕೊಂಡೆ. ರಾಜ್ಯಾದ್ಯಂತ ನನ್ನಂತೆ ಅನೇಕರು ಈ ನಿಟ್ಟಿನಲ್ಲಿ ಪ್ರಯತ್ನಗೈದರು. ಆದರೆ ಪರಿಣಾಮ ಮಾತ್ರ ನಿರಾಶಾದಾಯಕ!

ರಾಜ್ಯದಲ್ಲಿ ಮೊದಲ ಸುತ್ತಿನಲ್ಲಿ ಶೇಕಡಾ ೫೧ರಷ್ಟು ಮಾತ್ರ ಮತದಾನವಾಗಿದೆ. ವಿದ್ಯಾವಂತರು ಬಹುಸಂಖ್ಯೆಯಲ್ಲಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ ೫೦ರಷ್ಟು ಮಾತ್ರ ಮತದಾನವಾದರೆ ಬೆಂಗಳೂರು ಸೆಂಟ್ರಲ್ ಮತ್ತು ಉತ್ತರ ಕ್ಷೇತ್ರಗಳಲ್ಲಿ ಶೇಕಡಾ ೪೫ರಷ್ಟು ಕಳಪೆ ಪ್ರಮಾಣದ ಮತದಾನವಾಗಿದೆ!

ಹೀಗೇಕೆ ಎಂದು ಆಲೋಚಿಸಿದಾಗ ನನಗೆ ಅನ್ನಿಸುವ ಕಾರಣಗಳು ಎರಡು.

ಮೊದಲನೆಯ ಕಾರಣ, ಯಡಿಯೂರಪ್ಪನವರ ಸರ್ಕಾರದಮೇಲೆ ಜನರು, ಅದರಲ್ಲೂ ಮುಖ್ಯವಾಗಿ ಯುವಜನತೆ, ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾದುದರಿಂದ ಜನರಲ್ಲಿ ಉಂಟಾದ ಹತಾಶೆ. ಈ ಹತಾಶೆಗೆ ಯಡಿಯೂರಪ್ಪನವರೇ ನೇರ ಹೊಣೆ. ಬಳ್ಳಾರಿ ಗಣಿದಣಿಗಳನ್ನು ತಲೆಮೇಲೆ ಹೊತ್ತುಕೊಂಡದ್ದು, ಯಾವ ಸಿದ್ಧಾಂತವೂ ಇಲ್ಲದ ಸ್ವಾರ್ಥಿ ಪಕ್ಷಾಂತರಿಗಳಿಗೆ ಮಣೆಹಾಕಿ ನಿಷ್ಠಾವಂತರನ್ನು ಕಡೆಗಣಿಸಿದ್ದು, ಚರ್ಚ್ ದಾಳಿ, ಪಬ್ ದಾಳಿಗಳ ಸಂದರ್ಭಗಳಲ್ಲಿ ಅವಕಾಶವಾದಿ ಮನೋಭಾವ ತೋರಿದ್ದು, ರೈತರೊಡನೆ ಕಣ್ಣುಮುಚ್ಚಾಲೆಯಾಡಿದ್ದು, ಕೆಲಸಕ್ಕಿಂತ ಹೆಚ್ಚಾಗಿ ಆವೇಶಭರಿತ ಭಾಷಣ ಹಾಗೂ ಹೇಳಿಕೆಗಳಿಗೇ ಸಮಯವನ್ನು ಮೀಸಲಿಟ್ಟದ್ದು ಮತ್ತು ಆದ್ಯಂತ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸುತ್ತಿರುವುದು, ಯಡಿಯೂರಪ್ಪನವರ ಈ ನಡೆಗಳು ಮತದಾರರನ್ನು ಹತಾಶೆಯ ಮಡಿಲಿಗೆ ತಳ್ಳಿವೆ. ಕಾಂಗ್ರೆಸ್ ಅಥವಾ ಜೆಡಿಎಸ್ ಸರ್ಕಾರಕ್ಕಿಂತ ಯಡಿಯೂರಪ್ಪನವರ ಸರ್ಕಾರ ಭಿನ್ನವೇನಲ್ಲ ಎಂಬ ಭಾವನೆ ಹಲವರಲ್ಲಿ ಮೂಡಲು ಇದು ಕಾರಣವಾಗಿದೆ. ಜೊತೆಗೆ, ಎಲ್ಲ ರಾಜಕೀಯ ಪಕ್ಷಗಳೂ ಈ ಸಲ ಪರಸ್ಪರ ಕೆಸರೆರಚಾಟವನ್ನೇ ಪ್ರಮುಖ ಪ್ರಚಾರಾಸ್ತ್ರ ಮಾಡಿಕೊಂಡಿದ್ದರಿಂದಾಗಿ, ಆರ್ಥಿಕ ಹಿಂಜರಿತ ಮತ್ತು ಬೆಲೆಯೇರಿಕೆಯ ಇಂದಿನ ವಿಷಮ ಸನ್ನಿವೇಶದಲ್ಲಿ ಮುಂಚೂಣಿಯಲ್ಲಿ ಪ್ರಸ್ತಾಪವಾಗಬೇಕಿದ್ದ ಅಭಿವೃದ್ಧಿಯ ವಿಷಯಗಳು ಚುನಾವಣಾ ಪ್ರಚಾರದಲ್ಲಿ ಹಿನ್ನೆಲೆಗೆ ಸರಿದಿವೆ. ಇದರಿಂದಾಗಿಯೂ ಜನ ಬೇಸರಪಟ್ಟುಕೊಂಡಿದ್ದಾರೆ. ಪರಿಣಾಮ ನಿನ್ನೆಯ ಕಳಪೆ ಪ್ರಮಾಣದ ಮತದಾನ.

ಮತದಾನ ಕಳಪೆಯಾಗಲು ಎರಡನೆಯ ಕಾರಣ ಮತದಾರರ ಎಂದಿನ ಜಡತೆ ಮತ್ತು ಬೇಜವಾಬ್ದಾರಿ. ತಮ್ಮ ನಿರೀಕ್ಷೆಗಳು ಸುಳ್ಳಾದ ನಿರಾಶೆಯು ಸಹಜವಾಗಿಯೇ ಮತದಾರರ ಈ ಜಡತೆ ಮತ್ತು ಬೇಜವಾಬ್ದಾರಿಗಳನ್ನು ಹೆಚ್ಚಿಸಿವೆ. ಮೇಲಿಂದಮೇಲೆ ಚುನಾವಣೆಗಳು ಬಂದೆರಗುತ್ತಿರುವುದೂ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣಗಳಲ್ಲೊಂದು ಎನ್ನಬಹುದು.

ಎರಡನೇ ಹಂತದ ಮತದಾನವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಇನ್ನಾದರೂ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ವೈಖರಿಯನ್ನು ಬದಲಿಸುವುದೊಳ್ಳೆಯದು. ಕೆಸರೆರಚಾಟ ಬಿಟ್ಟು ಅಭಿವೃದ್ಧಿ ಯೋಜನೆಗಳ ಉಲ್ಲೇಖಕ್ಕೆ ಹೆಚ್ಚು ಒತ್ತು ಕೊಡುವುದೊಳ್ಳೆಯದು.

ಎರಡನೇ ಹಂತದಲ್ಲೂ ಇದೇ ರೀತಿ ಕಳಪೆ ಪ್ರಮಾಣದ ಮತದಾನವಾದರೆ ತೀರಾ ಅಯೋಗ್ಯರೇ ಆರಿಸಿಬರುವ ಸಾಧ್ಯತೆ ಉಲ್ಬಣಿಸುವುದರಿಂದ ಮತದಾರರೂ ಈಗ ಎಚ್ಚತ್ತುಕೊಳ್ಳಬೇಕು. ತಪ್ಪದೇ ಮತದಾನ ಮಾಡಬೇಕಾದುದು ಇಂದಿನ ಸಂದರ್ಭದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಅತ್ಯಂತ ಅಪೇಕ್ಷಣೀಯ ಎಂಬುದನ್ನರಿತು ಮತದಾರರು ಎರಡನೇ ಹಂತದ ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಇದ್ದುದರಲ್ಲಿಯೇ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕಾದ್ದು ಅತ್ಯಂತ ಅಪೇಕ್ಷಣೀಯ.

ಅವಶ್ಯ ಕಾರ್ಯಕ್ಕಾಗಿ ದೂರದೂರಿಗೆ ಹೋಗಿದ್ದ ನಾನು ಮತದಾನ ಮಾಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಹಿಂತಿರುಗಿ ಮತದಾನ ಮಾಡಿದ್ದೇನೆ. ಸಹಜವಾಗಿಯೇ ನಾನು ಸಕಲ ಮತದಾರ ಬಾಂಧವರಿಂದಲೂ ಇಂಥದೇ ಕರ್ತವ್ಯಪರತೆಯನ್ನು ನಿರೀಕ್ಷಿಸುತ್ತೇನೆ.