ಮದುವೆಯೆಂಬುದೊಂದು ಖಾಸಗಿ ಸಂಗತಿ (ಮೂಲ: ಚಿನುವಾ ಅಚಿಬೆ)

ಮದುವೆಯೆಂಬುದೊಂದು ಖಾಸಗಿ ಸಂಗತಿ (ಮೂಲ: ಚಿನುವಾ ಅಚಿಬೆ)

 

‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ ಹೋದಾಗ ಹೇಳುವುದು ಸರಿ ಎನಿಸುತ್ತಿದೆ’

‘ಯಾಕೆ? ನಿನ್ನ ರಜೆಗೆ ಇನ್ನೂ ಆರು ವಾರಗಳು ಬೇಕು. ಈ ಖುಷಿಯ ವಿಚಾರ ನಿಮ್ಮ ತಂದೆಗೆ ಬೇಗ ಗೊತ್ತಾಗಲಿ’

ಕೆಲ ಕ್ಷಣ ಮೌನವಾದ ನಾಮೇಕಾ ಪದಗಳಿಗೆ ತಡಕಾಡುವವನಂತೆ ಮಾಡಿ ಮಾತನಾಡಿದ – ‘ಈ ವಿಚಾರ ಆತನಿಗೆ ಖುಷಿ ತರಲಿ ಎಂದು ಬೇಡಿಕೊಳ್ಳುತ್ತೇನೆ’

‘ಖಂಡಿತವಾಗಿಯೂ, ಇದು ಖುಷಿಯ ವಿಚಾರ ಅಲ್ಲವೇ? ಯಾಕಾಗುವುದಿಲ್ಲ?’ – ಆಶ್ಚರ್ಯಳಾಗಿ ನೇನೆ ನುಡಿದಳು

‘ನಿನ್ನ ಜೀವನವನ್ನೆಲ್ಲಾ ನೀನು ಲಾಗೋಸ್ ಪಟ್ಟಣದಲ್ಲಿಯೇ ಕಳೆದಿರುವೆ, ದೂರದ ಹಳ್ಳಿಯ ಜನರ ಜೀವನದ ಬಗ್ಗೆ ನಿನಗೆ ಹೆಚ್ಚು ತಿಳಿದಿಲ್ಲ’

‘ನೀನು ಎಂದಿಗೂ ಇದನ್ನೇ ಹೇಳುವೆ, ತಮ್ಮ ಮಕ್ಕಳು ಮದುವೆ ಆಗಲು ತಯಾರಿ ನಡೆಸಿದ್ದಾರೆಂದರೆ ಅದು ದುಃಖದ ವಿಚಾರವಾಗುತ್ತದೆ ಎಂಬುದನ್ನು ನಾನು ನಂಬೋಲ್ಲ’

‘ಹೌದು. ಅವರಿಚ್ಚೆಯಂತೆ, ಅವರು ತೋರಿಸಿದವರೊಡನೆ ಮದುವೆ ನಡೆಯದಿದ್ದರೆ ಅವರಷ್ಟು ನೊಂದುಕೊಳ್ಳುವವರು ಯಾರೂ ಇಲ್ಲ. ನಮ್ಮ ಕಡೆಯಲ್ಲಿ ಈ ವಿಚಾರ ಕೆಟ್ಟಸ್ಥಿತಿಯಲ್ಲಿದೆ, ಮೊದಲಾಗಿ ನೀನು ಇಬೋದವಳೂ ಅಲ್ಲ’

ತುಂಬಾ ಗಂಭೀರವಾಗಿ ಮತ್ತು ಅಷ್ಟೇ ನಿಷ್ಠುರವಾಗಿ ಆಡಿದ ಈ ಮಾತುಗಳಿಗೆ ಪ್ರತಿ ಮಾತುಗಳು ನೇನೆ ಬಾಯಿಯಿಂದ ಹೊರ ಹೊಮ್ಮಲಿಲ್ಲ. ಪಟ್ಟಣದ ವಾತಾವರಣದಲ್ಲಿ ಬೆಳೆದಾಕೆಗೆ ಮದುವೆ ಎನ್ನುವುದು ಮತ್ತೊಬ್ಬರ ಇಚ್ಚೆಗನುಗುಣವಾಗಿ ನಡೆಯುತ್ತದೆ ಎಂಬುದೊಂದು ಹಾಸ್ಯವಾಗಿತ್ತು.

ಕೊನೆಗೂ ಮಾತನಾಡಿದಳು – ‘ಇದೊಂದೇ ಕಾರಣದಿಂದ ನಮ್ಮ ಮದುವೆಗೆ ನಿಮ್ಮ ತಂದೆ ಒಪ್ಪುವುದಿಲ್ಲವೆಂದು ನೀನು ಹೇಳುತ್ತಿಲ್ಲ ಅಲ್ಲವೇ? ಇಬೋ ಜನಗಳು ಇತರರ ವಿಚಾರದಲ್ಲಿ ತುಂಬಾ ಕರುಣೆ ಉಳ್ಳವರು ಎಂದು ಅಂದುಕೊಂಡಿದ್ದೇನೆ’

‘ಹೌದು. ಆದರೆ ಮದುವೆಯ ವಿಚಾರ ಬಂದಾಗ ಮಾತ್ರ ಅದು ಅಷ್ಟು ಸುಲಭವಲ್ಲ. ಇದು ನಮ್ಮವರಿಗೆ ವಿಚಿತ್ರವೂ ಅಲ್ಲ. ನಿಮ್ಮ ತಂದೆ ಬದುಕಿದ್ದು, ನಮ್ಮ ಹಳ್ಳಿಯಲ್ಲೇನಾದರೂ ಇದ್ದಿದ್ದರೆ, ಅವನೂ ಕೂಡ ನಮ್ಮ ತಂದೆಯಂತೆ ಆಗುತ್ತಿದ್ದ’

‘ಮ್.. ನನಗಷ್ಟು ತಿಳುವಳಿಕೆಯಿಲ್ಲ. ಇರಲಿ, ನಿಮ್ಮ ತಂದೆಗೆ ನೀನೆಂದರೆ ಹೆಚ್ಚು ಪ್ರೀತಿ, ನಿನ್ನನ್ನು ಕೂಡಲೇ ಕ್ಷಮಿಸಿಬಿಡುತ್ತಾರೆ ಎಂದುಕೊಂಡಿದ್ದೇನೆ. ಏಳು, ಕೂಡಲೇ ಒಂದು ಸುಂದರ ಪತ್ರ ಬರೆದು ಕಳುಹಿಸಿಬಿಡು’

‘ಪತ್ರದ ಮೂಲಕ ಅಪ್ಪನಿಗೆ ವಿಚಾರ ಮುಟ್ಟಿಸುವಷ್ಟು ಬುದ್ಧಿವಂತ ನಾನಲ್ಲ. ಖಂಡಿತವಾಗಿಯೂ ಆ ಪತ್ರ ಆತನನ್ನು ಗಾಬರಿಗೊಳಿಸುತ್ತದೆ, ಈ ವಿಚಾರದಲ್ಲಿ ನನಗೆ ಕೆಟ್ಟ ಭರವಸೆಯಿದೆ’

‘ಹಾಗಾದರೆ ಅವಸರ ಬೇಡ, ಯೋಚಿಸಿ ಹೆಜ್ಜೆ ಇಡು, ನಿಮ್ಮ ತಂದೆಯ ಬಗ್ಗೆ ನಿನಗೆ ಗೊತ್ತಿದೆ’

ಸಂಜೆಯಾಗುತ್ತಿದ್ದಂತೆ ನೇನೆಯ ಮನೆಯಿಂದ ಹೊರಟ ನಾಮೇಕಾನ ಮನಸ್ಸು ತನ್ನ ತಂದೆಯ ಕೋಪವನ್ನು ಹೇಗೆ ತಣಿಸಬಹುದೆಂಬುದನ್ನೇ ಯೋಚಿಸುತ್ತಿತ್ತು, ವಿಶೇಷವಾಗಿ ಆತ ನಾಮೇಕಾನಿಗೆ ಒಂದು ಹುಡುಗಿಯನ್ನು ಹುಡುಕಿ ಗೊತ್ತು ಮಾಡಿಟ್ಟುಕೊಂಡಿರುವ ಈ ಕೆಟ್ಟ ಘಳಿಗೆಯಲ್ಲಿ! ಆತ ಬರೆದಿದ್ದ ಪತ್ರವನ್ನು ನೇನೆಗೆ ತೋರಿಸುವ ಮನಸ್ಸಾದರೂ ತದ ನಂತರ ಆ ಕ್ಷಣದಲ್ಲಿ ಯಾಕೋ ಬೇಡವೆನಿಸಿತ್ತು. ಮನೆಗೆ ತೆರಳಿದ ನಂತರ ಆ ಪತ್ರವನ್ನು ಮತ್ತೆ ಓದಿ ನಗಲಾಗದೇ ಸೋತುಹೋದ. ಉಗೋಯ್ ಬಗ್ಗೆ ಆತನಿಗೆ ಸಂಪೂರ್ಣ ನೆನಪಿದೆ, ಎಲ್ಲಾ ಗಂಡುಮಕ್ಕಳನ್ನು ಬಡಿಯುತ್ತಿದ್ದ ಗಂಡಬೀರಿ ಆಕೆ, ಈತನನ್ನೂ! ಶಾಲೆಯಲ್ಲಿ ಆಕೆ ಮಹಾನ್ ಪೆದ್ದಿಯಾಗಿದ್ದವಳು.

‘ನಿನಗೆ ಗೌರವಪೂರ್ವಕವಾಗಿ ಸರಿಹೊಂದುವ ಒಂದು ಹುಡುಗಿಯನ್ನು ಗೊತ್ತು ಮಾಡಿದ್ದೇನೆ – ಉಗೋಯ್ ನ್ವೇಕೆ, ನಮ್ಮ ಪಕ್ಕದ ಮನೆಯವನಾದ ಜಾಕೋಬ್ ನ್ವೇಕೆಯ ದೊಡ್ಡ ಮಗಳು, ಕ್ರಿಶ್ಚಿಯನ್ ಸಂಸ್ಕೃತಿಯಲ್ಲಿ ಸುಸಂಬದ್ಧಳಾಗಿ ಬೆಳೆದವಳು. ಕೆಲವು ವರ್ಷಗಳ ಹಿಂದೆ ಆಕೆ ಶಾಲೆಯನ್ನು ತೊರೆದಾಗ, ಆಕೆಯ ತಂದೆ ಆಕೆಯನ್ನು ಪಾದ್ರಿಯ ಬಳಿ ಬಿಟ್ಟಿದ್ದ. ಒಬ್ಬಳು ಉತ್ತಮ ಹೆಂಡತಿಯಾಗಿರಲು ಬೇಕಾದ ಎಲ್ಲಾ ತರಬೇತಿಗಳನ್ನೂ ಅಲ್ಲಿಂದ ಪಡೆದುಕೊಂಡಿದ್ದಾಳೆ. ಆಕೆ ಸ್ವಚ್ಛಂದವಾಗಿ ಬೈಬಲ್ ಓದುತ್ತಾಳೆಂದು ಆಕೆಯ ಭಾನುವಾರದ ಶಿಕ್ಷಕಿ ಸಹ ಹೇಳಿದ್ದಾಳೆ. ನೀನು ಡಿಸೆಂಬರ್ ನಲ್ಲಿ ಮನೆಗೆ ಬಂದಾಗ ಈ ವಿಚಾರವಾಗಿ ಮಾತನಾಡಬಹುದು ಎಂದುಕೊಳ್ಳುತ್ತೇನೆ’

***

ಲಾಗೋಸ್‍ನಿಂದ ಹಳ್ಳಿಗೆ ಬಂದ ಎರಡನೆಯ ದಿನದ ಸಂಜೆಗೆ, ಕಕ್ಕೆಮರದ ಕೆಳಗಡೆ ನಾಮೇಕಾ ತನ್ನ ತಂದೆಯ ಜೊತೆ ಕುಳಿತುಕೊಳ್ಳುತ್ತಾನೆ. ಡಿಸೆಂಬರ್ ತಿಂಗಳಿನ ಸುಡುವ ಸೂರ್ಯ ಮುಳುಗುತ್ತಿದ್ದಾನೆ. ತಣ್ಣನೆಯ ಗಾಳಿ ಎಲೆಯನ್ನು ಅಲುಗಾಡಿಸುವ ಈ ಹೊತ್ತಿನಲ್ಲಿ, ಈ ವೃದ್ಧನಿಗೆ ಬೈಬಲ್ ಓದುತ್ತಾ ಕುಳಿತುಕೊಳ್ಳುವ ವಾಡಿಕೆಯಿದೆ.

‘ಅಪ್ಪಾ, ನಿನ್ನ ಬಳಿ ಕ್ಷಮೆ ಕೇಳಲು ಬಂದಿರುವೆ’ – ನಾಮೇಕಾ

‘ಕ್ಷಮೆಯೇ? ಯಾಕೆ ಮಗನೆ?’ – ಆಶ್ಚರ್ಯಗೊಂಡು.

‘ಇದೆಲ್ಲಾ ಈ ಮದುವೆಯ ವಿಚಾರವಾಗಿ’

‘ಯಾವ ಮದುವೆಯ ವಿಚಾರ?’

‘ನನ್ನಿಂದ ಸಾಧ್ಯವಿಲ್ಲ – ನಾವು – ನಾನು ಏನು ಹೇಳುತ್ತಿರುವೆ ಅಂದರೆ ನನಗೆ ನ್ವೇಕೆಯ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ’

‘ಸಾಧ್ಯವಿಲ್ಲ? ಯಾಕೆ?’

‘ನಾನು ಅವಳನ್ನು ಪ್ರೀತಿಸುವುದಿಲ್ಲ’

‘ನೀನು ಪ್ರೀತಿಸುತ್ತಿರುವೆಯೆಂದು ಇಲ್ಲಿ ಯಾರೂ ಹೇಳಿಲ್ಲ. ಯಾಕಾದರೂ ನೀನು ಅವಳನ್ನು ಪ್ರೀತಿಸಬೇಕು ಹೇಳು?’

‘ಇಂದಿನ ಮದುವೆಯ ಅರ್ಥವೇ ಬೇರೆ…’

‘ನೋಡು ಮಗನೆ’ – ನಾಮೇಕಾನ ಮಾತು ನಿಲ್ಲಿಸಿ ನಡುವೆ ಮಾತನಾಡಿದ ಆತನ ತಂದೆ ಹೇಳಿದ – ‘ಅರ್ಥ ಬೇರೆ ಆಗಿಲ್ಲ, ಒಬ್ಬಳು ಹೆಂಡತಿಯ ಬಳಿ ಪ್ರತಿಯೊಬ್ಬರೂ ಕಾಣುವುದು ಸದ್ಗುಣ ಮತ್ತು ಕ್ರೈಸ್ಥ ಧರ್ಮದ ಹಿನ್ನೆಲೆ ಅಷ್ಟೇ’

ಪ್ರಸ್ತುತ ಚರ್ಚೆಯಿಂದ ಏನೂ ಉಪಯೋಗವಿಲ್ಲವೆಂಬುದು ನಾಮೇಕಾನಿಗೆ ಅರ್ಥವಾಯಿತು. ಆದರೂ ಆತ ಮಾತು ಮುಂದುವರೆಸಿದ

‘ಹೆಚ್ಚಾಗಿ, ಉಗೋಯ್ ನಲ್ಲಿರುವ ಎಲ್ಲಾ ಗುಣಗಳೂ ಇರುವಂತ ಒಂದು ಹುಡುಗಿಯನ್ನು ನಾನು ಪ್ರೀತಿಸುತ್ತಿದ್ದೇನೆ ಮತ್ತು ಮದುವೆ ಆಗುತ್ತಿದ್ದೇನೆ ಮತ್ತು…’

ಆತನ ತಂದೆಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ. ಆತನ ಮಾತಿನೆಡೆಗೆ ಗಮನವಿಲ್ಲದವನಂತೆ ಸಾವಧಾನವಾಗಿ ಕೇಳಿದ ‘ಏನು?’

‘ಆಕೆ ಒಬ್ಬಳು ಒಳ್ಳೆಯ ಕ್ರಿಶ್ಚಿಯನ್, ಲಾಗೋಸ್‍ನಲ್ಲಿರುವ ಬಾಲಕಿಯರ ಶಾಲೆಯೊಂದರಲ್ಲಿ ಶಿಕ್ಷಕಿ’

‘ಶಿಕ್ಷಕಿ ಎಂದು ಹೇಳಿದೆಯಾ? ಒಬ್ಬಳು ಹೆಂಗಸು ಒಳ್ಳೆಯ ಹೆಂಡತಿಯಾಗುವುದಕ್ಕೆ ಇದನ್ನು ನೀನು ಅರ್ಹತೆ ಎಂದುಕೊಂಡರೆ ನಾನೊಂದು ಮಾತನ್ನು ಹೇಳುತ್ತೇನೆ ಕೇಳು – ಯಾವುದೇ ಕ್ರಿಶ್ಚಿಯನ್ ಮಹಿಳೆ ಶಿಕ್ಷಕಿಯಾಗಿ ಕೆಲಸ ಮಾಡಲೇಬಾರದು, ಕೊರಿಂತಿಯನ್‍ಗೆ ಸೆಂಟ್‍ಪಾಲ್ ಬರೆದಿದ್ದ ಪತ್ರದಲ್ಲಿ ಮಹಿಳೆ ಎನ್ನಿಸಿಕೊಂಡವಳು ಮೌನವಾಗಿರಬೇಕು ಎಂದಿದ್ದಾನೆ.

ನಿಧಾನವಾಗಿ ತನ್ನ ಚೇರಿನಿಂದ ಎದ್ದವನು ಹಿಂದೆ ಮುಂದೆ ಓಡಾಡಲು ಪ್ರಾರಂಭಿಸಿದ. ಈ ವಿಷಯ ಆತನಿಗೆ ಹೆಚ್ಚು ಪ್ರಿಯವಾದುದ್ದು. ಮಹಿಳೆಯರು ಶಿಕ್ಷಿತರಾಗಿ ಶಿಕ್ಷಣ ನೀಡುವ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತಿದ್ದ ಚರ್ಚ್ ನಾಯಕರನ್ನು ಆತ ನಿರ್ಧಾಕ್ಷಿಣ್ಯವಾಗಿ ಟೀಕಿಸುತ್ತಿದ್ದ.

***

ಆ ಮನೆಯಲ್ಲಿಯೇ ತನ್ನೆಲ್ಲಾ ಭಾವಾವೇಶವನ್ನು ಬಹುದಿನಗಳವರೆವಿಗೂ ಕಳೆದು ಕೊನೆಗೂ ಒಂದು ದಿನ ತನ್ನ ಮಗನ ಮದುವೆಯ ಒಪ್ಪಂದದ ಕಾರ್ಯಕ್ರಮಕ್ಕೆ ಬಂದಿದ್ದಾಗ ಸಣ್ಣ ಮೌನ ದ್ವನಿಯಲ್ಲಿ ಕೇಳಿದ

‘ಯಾರ ಮಗಳಿವಳು?’

‘ಇವಳು ನೇನೆ ಅಟಾಂಗ್’

‘ಏನು?’- ಮೌನವೆಲ್ಲಾ ಒಮ್ಮೆಲೇ ಉಡುಗಿಹೋಯಿತು. “ನೇನೆ ಅಟಾಂಗ್, ಅದರರ್ಥ ಏನು?”

‘ಈಕೆ ಕಲಬಾರ್ ನಲ್ಲಿರುವ ನೇನೆ ಅಟಾಂಗ್. ನಾನು ಮದುವೆ ಆಗುವ ಒಬ್ಬಳೇ ಹುಡುಗಿ’ – ಇದು ನಾಮೇಕಾನಿಂದ ಹೊರಟ ಕೋಪ ಮತ್ತು ನಿಷ್ಠುರ ತುಂಬಿದ ಪ್ರತಿಕ್ರಿಯೆಯಾಗಿತ್ತು. ಅಲ್ಲೀಗ ಬಿರುಗಾಳಿಯೇ ಭುಗಿಲೇಳಬಹುದೆಂದು ನಾಮೇಕ ಊಹಿಸಿದ್ದ. ಆದರೆ ಆ ರೀತಿಯಾಗದೆ ನಾಮೇಕಾನ ತಂದೆ ಮೌನವಾಗಿ ತನ್ನ ಕೊಠಡಿಗೆ ಹೊರಟುಹೋದ. ನಾಮೇಕಾಗೆ ಇದು ಊಹಿಸಲಾಸಾಧ್ಯವಾದ ಘಟನೆಯಾಗಿತ್ತು. ಕೊಂಕು ಮಾತಿನ ಪ್ರವಾಹವನ್ನೇ ಮೀರಿಸುವಷ್ಟು ವೇಗವಾಗಿ ಆತನ ಮೌನ ನಾಮೇಕಾನನ್ನು ಅಪರಿಮಿತವಾಗಿ ಚುಚ್ಚಿತು. ಆ ರಾತ್ರಿ ನಾಮೇಕಾನ ತಂದೆ ಊಟ ಮಾಡಲಿಲ್ಲ.

ಒಂದು ದಿನದ ತರುವಾಯ ನಾಮೇಕಾನ ಮನಸ್ಸನ್ನು ಬದಲಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಆದರೂ, ನವಯುವಕನಾದ ನಾಮೇಕಾನ ಮನಸ್ಸು ಈ ವಿಚಾರದಲ್ಲಿ ಗಟ್ಟಿಯಾಗಿತ್ತು, ಕೊನೆಗೆ ವಿಧಿಯಿಲ್ಲದೇ ಈ ವಿಚಾರವಾಗಿ ನಾಮೇಕಾನ ತಂದೆ ಸೋಲೊಪ್ಪಿಕೊಳ್ಳಲೇಬೇಕಾಯಿತು.

‘ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತೋರಿಸುವುದು ನನ್ನ ಕರ್ತವ್ಯವಾಗಿತ್ತು. ಆದುದರಿಂದ ನಾನು ನಿನ್ನನ್ನು ಸಹಿಸಿಕೊಂಡೆ ಮಗನೆ. ನಿನ್ನ ತಲೆಗೆ ಈ ವಿಚಾರವನ್ನು ತುಂಬಿದವರು ನಿನ್ನ ನಾಲಗೆಯನ್ನೂ ಕತ್ತರಿಸಿಬಿಟ್ಟಿದ್ದಾರೆ, ಇದು ಒಳ್ಳೆಯದಕ್ಕಂತೂ ಅಲ್ಲ’ ಎಂದು ಹೇಳಿದ ನಾಮೇಕಾನ ತಂದೆ ಆತನನ್ನು ಪಕ್ಕಕ್ಕೆ ತಳ್ಳಿದ.

‘ನೇನೆಯನ್ನು ನೀನು ತಿಳಿದುಕೊಂಡಾಕ್ಷಣ ನಿನ್ನ ಮನಸ್ಸನ್ನು ನೀನು ಬದಲಿಸಿಕೊಳ್ಳುವೆ ತಂದೆ’

‘ಆಕೆಯ ಮುಖವನ್ನು ನಾನು ಮತ್ತೆಂದೂ ನೋಡುವುದಿಲ್ಲ’.

ಆ ರಾತ್ರಿಯಿಂದ ತಂದೆ ತನ್ನ ಮಗನೊಡನೆ ತುಂಬಾ ವಿರಳವಾಗಿ ಮಾತನಾಡುತ್ತಿದ್ದ. ಕೆಲವು ದಿನಗಳ ನಂತರ ‘ತಾನು ತಲೆಕೊಟ್ಟಿರುವ ತೊಂದರೆ ಆತನಿಗೆ ಅರ್ಥವಾಗುತ್ತದೆ’ ಎಂಬ ನಂಬಿಕೆಯನ್ನಿಟ್ಟುಕೊಂಡು ಮಾತನಾಡುವುದನ್ನೇ ಬಿಟ್ಟುಬಿಟ್ಟ. ಹಗಲು ರಾತ್ರಿ ಕೇವಲ ಪ್ರಾರ್ಥನೆಗಳನ್ನೊದರುತ್ತಲೇ ಕಾಲ ಕಳೆಯಲು ನಿರ್ಧರಿಸಿಕೊಂಡ.

ನಾಮೇಕಾ ಮಾತ್ರ ತನ್ನ ತಂದೆಯ ನೋವಿನ ಪರಿಣಾಮವಾಗಿ ತೀವ್ರವಾಗಿ ನೊಂದುಕೊಂಡ. ಆದರೆ ಎಲ್ಲವೂ ಸರಿಯಾಗುವುದೆಂಬ ಭರವಸೆಯನ್ನು ಬಿಡಲಿಲ್ಲ. ಈ ಜಾಗದ ಇತಿಹಾಸದಲ್ಲೇನಾದರೂ ಎರಡು ಬೇರೆ ಬೇರೆ ಭಾಷೆಯವರು ಮದುವೆಯಾಗಿದ್ದು, ಅದು ಆತನ ಅವಗಾಹನೆಗೆ ಬಂದಿದ್ದರೆ ನಾಮೇಕಾ ಋಣಾತ್ಮಕವಾಗಿ ಯೋಚಿಸಬೇಕಾಗಿತ್ತು.

‘ಈ ರೀತಿ ಎಂದೂ ಕೇಳಿಲ್ಲ’ – ಈ ಮಾತುಗಳು ಆ ಹಳ್ಳಿಯ ಒಬ್ಬ ಮುದುಕನಿಂದ ಎರಡು ವಾರಗಳ ನಂತರ ಅಂತಿಮ ತೀರ್ಪಿನಂತೆ ಹೊರಟವು. ಈ ಒಂದು ಸಾಲಿನಲ್ಲಿ ಆತ ತನ್ನೆಲ್ಲಾ ಜನಾಂಗವನ್ನೇ ಉದ್ದೇಶಿಸಿ ಮಾತನಾಡಿದ್ದ. ಈ ವ್ಯಕ್ತಿ ತನ್ನ ಜನಗಳೊಂದಿಗೆ ಓಕೇಕೆ(ನಾಮೇಕಾನ ತಂದೆ)ಯನ್ನು ಸಂಧಿಸಿ ಆತನ ಮಗನ ನಡವಳಿಕೆಯ ಬಗ್ಗೆ ಸುತ್ತಲೂ ನಡೆಯುತ್ತಿರುವ ವದಂತಿಗಳನ್ನು ಮುಟ್ಟಿಸಲು ಬಂದಿದ್ದ.

ಆ ಮುದುಕ ದುಃಖ ತುಂಬಿಕೊಂಡು ತಲೆಯನ್ನು ಅಲುಗಾಡಿಸುತ್ತ ಮತ್ತೆ ಹೇಳಿದ – ‘ಈ ರೀತಿ ಎಂದೂ ಕೇಳಿಲ್ಲ’

‘ಈ ವಿಚಾರವಾಗಿ ನಮ್ಮ ದೇವರು ಏನು ಹೇಳುತ್ತಾನೆ?’ – ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿ ಕೇಳಿದ – ‘ಮಕ್ಕಳು ತಮ್ಮ ತಂದೆಯ ವಿರುದ್ಧ ತಿರುಗಿ ಬೀಳಬಹುದು; ಇದು ನಮ್ಮ ಪವಿತ್ರ ಗ್ರಂಥದಲ್ಲಿ ಬರೆದಿರುವ ಸಾಲು’

ಮತ್ತೊಬ್ಬ ಹೇಳಿದ: ‘ಇದು ಅಂತ್ಯಕಾಲದ ಪ್ರಾರಂಭ’

ಈ ಚರ್ಚೆ ತಳವಿಲ್ಲದ ಕೆಲವು ಗ್ರಂಥ ಪುರಾಣಕ್ಕೆ ತಿರುಗಿಕೊಳ್ಳುವುದರಲ್ಲಿತ್ತು. ಮಡುಬೋಗ್ವು, ಒಬ್ಬ ಕ್ರಿಯಾತ್ಮಕ ಮನುಷ್ಯ, ಈ ಚರ್ಚೆಯನ್ನು ಪ್ರಸ್ತುತ ಪ್ರಪಂಚಕ್ಕೆ ಹೊರಳಿಸಿ ಕೇಳಿದ: ‘ನಿಮ್ಮ ಮಗನ ವಿಚಾರವಾಗಿ ವೈದ್ಯರನ್ನು ಸಂಧಿಸಬೇಕು ಎನಿಸಲಿಲ್ಲವೇ?’

‘ಆತನೇನು ರೋಗಿಷ್ಠನಾಗಿರಲಿಲ್ಲ’ – ನಾಮೇಕಾನ ತಂದೆಯಿಂದ ಬಂದ ಪ್ರತಿಕ್ರಿಯೆ.

‘ಮತ್ತೇನಾಗಿದ್ದಾನೆ ಈಗ? ಹುಡುಗನ ಮನಸ್ಸಿಗೆ ರೋಗ ಬಂದಿದೆ, ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಇರುವ ವೈದ್ಯರು ಮಾತ್ರ ಆತನನ್ನು ಸರಿ ಮಾಡಬಲ್ಲರು, ಆತನಿಗೆ ನೀಡಬೇಕಾಗಿರುವ ಔಷಧಿಯ ಹೆಸರು ‘ಅಮಾಲಿಲೆ’, ಹೆಂಗಸರು ತಮ್ಮ ಗಂಡಂದಿರನ್ನು ಹಿಡಿತದಲ್ಲಿಟ್ಟುಕೊಳ್ಳಲು, ಪ್ರೀತಿ ಹೆಚ್ಚಿಸಿಕೊಳ್ಳಲು ಇದೇ ಔಷಧಿ ಉಪಯೋಗಿಸುತ್ತಾರೆ’

‘ಮಡುಬೋಗ್ವು ಹೇಳುತ್ತಿರುವುದು ಸರಿಯಾಗಿದೆ’- ಯಾರೋ ಹೇಳಿದರು – ‘ಈ ವಿಚಾರ ಇತ್ಯರ್ಥವಾಗಬೇಕಾದರೆ ಔಷಧಿ ಬೇಕೇ ಬೇಕು’

‘ನಾನು ಯಾವುದೇ ವೈದ್ಯರನ್ನೂ ಸಂಧಿಸುವುದಿಲ್ಲ’ – ನಾಮೇಕಾನ ತಂದೆ ಇಂತಹ ವಿಚಾರಗಳಲ್ಲಿ ಮೂಢನಂಬಿಕೆಗಳನ್ನು ನಂಬುವ ತನ್ನ ನೆರೆಹೊರೆಯವರಿಗಿಂತ ಮುಂದುವರೆದಿದ್ದವನು – ‘ನನ್ನ ಮಗ ಸಾಯಲೇಬೇಕಾದರೆ, ಅವನ ಕೈಗಳಿಂದಲೇ ಕೊಂದುಕೊಳ್ಳಲಿ, ನಾನವನಿಗೆ ಸಹಾಯ ಮಾಡಲಾರೆ’

‘ಆದರೆ ಇದು ಆಕೆಯ ತಪ್ಪು’ – ಮಡುಬೋಗ್ವು ಮಾತನಾಡಿದ – ‘ಆಕೆ ಯಾವುದೋ ಪ್ರಾಮಾಣಿಕ ವೈದ್ಯರ ಬಳಿ ಹೋಗಿ ನಿಮ್ಮ ಮಗನನ್ನು ವಶೀಕರಣ ಮಾಡಿಕೊಂಡಿದ್ದಾಳೆ, ಆಕೆ ನಿಜಕ್ಕೂ ಚತುರೆ’

***

ಆರು ತಿಂಗಳುಗಳ ನಂತರ ನಾಮೇಕಾ ತನ್ನ ಹೆಂಡತಿಗೆ ತನ್ನ ತಂದೆಯಿಂದ ಬಂದಿದ್ದ ಸಣ್ಣ ಪತ್ರವೊಂದನ್ನು ತೋರಿಸುತ್ತಾನೆ:

‘ನಿನ್ನ ಮದುವೆಯ ಚಿತ್ರಗಳನ್ನು ನನಗೆ ಕಳುಹಿಸುವಾಗ ನೀನು ಭಾವಶೂನ್ಯನಾಗಿರಬಹುದೆಂದು ನನಗೆ ಆಶ್ಚರ್ಯವಾಗುತ್ತಿದೆ. ನಾನು ಆ ಚಿತ್ರಗಳನ್ನು ನಿನಗೆ ಹಿಂದಿರುಗಿಸವವನಿದ್ದೆ. ಆದರೆ, ನಂತರ ನಿನ್ನ ಹೆಂಡತಿಯ ಚಿತ್ರವನ್ನಷ್ಟೇ ಕತ್ತರಿಸಿ ಅದನ್ನು ನಿನಗೆ ಹಿಂದಿರುಗಿಸಬೇಕೆಂದು ನಿರ್ಧರಿಸಿಕೊಂಡೆ, ಯಾಕೆಂದರೆ ಅವಳಿಗೂ ನನಗೂ ಸಂಬಂಧವಿಲ್ಲ. ನಿನ್ನೊಡನೆಯೂ ನನಗೆ ಯಾವುದೇ ತರಹವಾದ ಸಂಬಂಧವಿರದಿರಲೆಂದು ಆಶಿಸುತ್ತೇನೆ’

ಈ ಪತ್ರವನ್ನು ಓದಿದ ನೇನೆ, ಭಿನ್ನಗೊಂಡಿದ್ದ ಚಿತ್ರವನ್ನು ನೋಡಿದೊಡನೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಿಕ್ಕಳಿಸಲು ಪ್ರಾರಂಭಿಸಿದಳು.

‘ಅಳಬೇಡ ಚಿನ್ನ’ – ನಾಮೇಕಾ ಮಾತನಾಡಿದ – ‘ಆತ ನಿಜಕ್ಕೂ ತುಂಬಾ ಒಳ್ಳೆಯವನಾಗಿದ್ದಾನೆ, ಮುಂದೊಂದು ದಿನ ಕರುಣೆಯ ದೃಷ್ಟಿ ಬೀರಿ ನಮ್ಮ ಮದುವೆಯನ್ನು ನೋಡುತ್ತಾನೆ’

ಆದರೆ ವರ್ಷಗಳು ಒಂದರ ಹಿಂದೊಂದರಂತೆ ಸಾಗಿದವು. ಆ ದಿನ ಮಾತ್ರ ಬರಲೇ ಇಲ್ಲ!

ಎಂಟು ವರ್ಷಗಳವರೆವಿಗೂ, ತನ್ನ ಮಗ ನಾಮೇಕಾನೊಡನೆ ಯಾವುದೇ ಸಂಪರ್ಕವಿಲ್ಲದೇ, ಸಂಬಂಧವಿಲ್ಲದಂತೆ ಓಕೇಕೆ ಬದುಕಿದ. ಕೇವಲ ಮೂರು ಬಾರಿ(ಮನೆಗೆ ಬಂದು ತನ್ನ ರಜೆಯನ್ನು ಕಳೆಯಲು ನಾಮೇಕಾ ಅನುಮತಿ ಕೋರಿದಾಗ) ಆತನಿಗೆ ಪತ್ರ ಬರೆದಿದ್ದ ಅಷ್ಟೇ.

ಒಂದು ಸಂದರ್ಭದಲ್ಲಿ ಆತ ಹೇಳಿದ್ದ:

‘ನಿಮ್ಮನ್ನು ನನ್ನ ಮನೆಯಲ್ಲಿರಿಸಿಕೊಳ್ಳಲು ನನಗಿಷ್ಟವಿಲ್ಲ, ನಿಮ್ಮ ರಜೆಯನ್ನು ಅಥವಾ ನಿಮ್ಮ ಜೀವನವನ್ನು ಎಲ್ಲಿ, ಹೇಗೆ ಕಳೆಯುತ್ತಿರೆಂಬುದು ನನಗೆ ಸಂಬಂಧವಿಲ್ಲದ ಮತ್ತು ತಿಳಿದುಕೊಳ್ಳಲು ಇಷ್ಟವಿಲ್ಲದ ವಿಚಾರ’

ಈ ಮದುವೆ ಬಗೆಗಿನ ಪೂರ್ವಗ್ರಹ ವಿಚಾರಗಳು ಕೇವಲ ನಾಮೇಕಾನ ಹಳ್ಳಿಗೆ ಮಾತ್ರ ಸೀಮಿತವಾಗಲಿಲ್ಲ. ಲೋಗೋಸ್‍ನಲ್ಲಿ, ವಿಶೇಷವಾಗಿ ನಾಮೇಕಾನ ಜೊತೆ ಕೆಲಸ ಮಾಡುತ್ತಿದ್ದ ಪುರುಷರ ನಡುವೆಯೂ ಈ ವಿಚಾರ ಭಿನ್ನಹಾದಿ ಹಿಡಿಯಿತು. ಈ ಪುರುಷರ ಮನೆಗಳ ಹೆಂಗಸರೂ ಸಹ ಹಳ್ಳಿಯ ಸಭೆಗಳಲ್ಲಿ ನೇನೆಯನ್ನು ಉಪಚರಿಸುತ್ತಿರಲಿಲ್ಲ. ಬದಲಾಗಿ, ಆಕೆ ತಮ್ಮವಳಲ್ಲವೆಂಬ ಭಾವನೆ ಮೂಡಿಸುವ ಸಲುವಾಗಿ ಕೆಲವು ವ್ಯತ್ಯಾಸಗಳನ್ನು ಆಕೆಯ ನಡುವೆ ತರುತ್ತಿದ್ದರು. ಆದರೆ, ಕಾಲ ಚಲಿಸಿದಂತೆ, ನೇನೆ ಇವರ ಕೆಲವು ಪೂರ್ವಗ್ರಹ ಪೀಡಿತ ವಿಚಾರಗಳನ್ನು ಶಮನಗೊಳಿಸುವುದಲ್ಲದೇ ಅವರ ಗೆಳೆತನವನ್ನು ಬೆಳೆಸುವುದರಲ್ಲಿ ಸಫಲಳಾದಳು. ದಿನ ಕಳೆದಂತೆ ನೇನೆ ತನ್ನ ಮನೆಯನ್ನು ನಮ್ಮೆಲ್ಲರ ಮನೆಗಳಿಗಿಂತ ಶುದ್ಧವಾಗಿಟ್ಟುಕೊಳ್ಳುತ್ತಾಳೆಂಬ ಮಾತುಗಳು ತೇಲಿದವು.

ಕೊನೆಗೆ ‘ನಾಮೇಕಾ ಮತ್ತು ಆತನ ಹೆಂಡತಿ ಲಾಗೋಸ್ ಪಟ್ಟಣದಲ್ಲಿಯೇ ಅತಿ ಸಂತಸದಿಂದಿರುವ ಜೋಡಿಯಂತೆ’ ಎಂಬ ಮಾತು ಇಬೋ ಬುಡಕಟ್ಟು ಪ್ರಾಂತ್ಯದ ಹೃದಯಭಾಗದಲ್ಲಿರುವ ನಾಮೇಕಾನ ಹಳ್ಳಿಗೂ ತಲುಪಿತು. ಈ ವಿಚಾರವಾಗಿ ಎಳ್ಳಷ್ಟು ಮಾಹಿತಿ ತಿಳಿಯದ ಹಳ್ಳಿಯ ಕೇಲವೇ ಕೆಲವು ಜನರಲ್ಲಿ ನಾಮೇಕಾನ ತಂದೆಯೂ ಒಬ್ಬನಾಗಿದ್ದ. ಆತನ ಮಗನ ಹೆಸರನ್ನು ಯಾರಾದರೂ ಕರೆದರೆ ಸಾಕು ಕುಪಿತನಾಗುತ್ತಿದ್ದ ಕಾರಣ ನಾಮೇಕಾನ ವಿಚಾರವಾಗಿ ಪ್ರತಿಯೊಬ್ಬರೂ ಆತನನ್ನು ದೂರವಿಟ್ಟಿದ್ದರು. ನಿರಂತರ ಪ್ರಯತ್ನ ಮತ್ತು ದೃಢಚಿತ್ತದಿಂದ ತನ್ನ ಮಗನನ್ನು ಮನಸ್ಸಿನ ಹಿಂಬದಿಗೆ ತಳ್ಳುವಲ್ಲಿ ನಾಮೇಕಾನ ತಂದೆ ಯಶಸ್ಸು ಕಂಡಿದ್ದ. ಆತನನ್ನು ಮರೆಯುವುದು ಅಷ್ಟೇ ಪ್ರಯಾಸವಾಗಿತ್ತು, ಸಾವನ್ನೇ ಕಂಡಷ್ಟು ಸಂಕಟವಾದರೂ, ಸತತ ಪ್ರಯತ್ನದಿಂದ ಕೊನೆಗೂ ಆತ ಸಫಲನಾಗಿದ್ದ.

ಹೀಗಿರುವಾಗ, ಒಂದು ದಿನ ಆತನಿಗೆ ನೇನೆಯಿಂದ ಒಂದು ಪತ್ರ ಬಂದಿತ್ತು. ಯಾಂತ್ರಿಕವಾಗಿ ಓದುತ್ತಿದ್ದ ಆತನ ಮುಖಭಾವ ಹಠಾತ್ತನೇ ಬದಲಾಗಿ ಹೋಯಿತು. ಈಗ ತುಂಬಾ ಗಮನವಿಟ್ಟು ಓದಲು ಪ್ರಾರಂಭಿಸಿದ

‘… ನಮ್ಮ ಇಬ್ಬರು ಗಂಡು ಮಕ್ಕಳು, ತಮಗೂ ತಾತಾ ಎನ್ನುವವರೊಬ್ಬರಿದ್ದಾರೆ ಎಂದು ತಿಳಿದ ದಿನದಿಂದ, ಆತನ ಬಳಿ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಹಿಂಸಿಸುತ್ತಿದ್ದಾರೆ. ನೀವು ಅವರನ್ನು ನೋಡುವುದಿಲ್ಲ ಎಂದು ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ. ಮುಂದಿನ ತಿಂಗಳಿನ ರಜೆಯಲ್ಲಿ ನಿಮ್ಮ ಮನೆಗೆ ತನ್ನ ಮಕ್ಕಳನ್ನು ಕರೆದುಕೊಂಡು ಬರಲು ನಾಮೇಕಾಗೆ ಅನುಮತಿ ನೀಡಿ ಎಂದು ಬೇಡಿಕೊಳ್ಳುತ್ತೇನೆ. ನಾನು ಲೋಗೋಸ್‍ನಲ್ಲಿಯೇ ಇರುತ್ತೇನೆ…’

ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತನ್ನ ಪ್ರತಿಜ್ಞೆ ಒಮ್ಮೆಲೇ ಕೆಳಮುಖವಾಗಿ ಚಲಿಸುತ್ತಿದೆ ಎಂದಿನಿಸಿತು. ತಾನು ಯಾವುದೇ ಕಾರಣಕ್ಕೂ ಸೋಲಬಾರದೆಂದು ಆತ ಅನೇಕ ಬಾರಿ ತನಗೆ ತಾನೇ ಹೇಳಿಕೊಂಡಿದ್ದಾನೆ. ಈಗ ಮತ್ತೊಮ್ಮೆ ಹೇಳಿಕೊಂಡ. ಭಾವುಕ ವಿಚಾರಗಳು ಹೊಕ್ಕದಿರುವಂತೆ ಹೃದಯವನ್ನು ಕಲ್ಲು ಮಾಡಿಕೊಳ್ಳಲು ಪ್ರಯತ್ನಿಸಿದ. ಆದರೆ ಇದು ಎಲ್ಲಾ ನೋವುಗಳನ್ನೂ ನೆನಪಿಸುವ ವಿಚಾರವಾಗಿತ್ತು. ಕಿಟಕಿಗೆ ಒರಗಿಕೊಂಡು ಹೊರಗೆ ದಿಟ್ಟಿಸಿದ. ಆಕಾಶವು ಕಪ್ಪು ಮೋಡಗಳಿಂದ ತುಂಬಿಕೊಂಡು, ಬಿರುಗಾಳಿ ಬೀಸಿ, ಗಾಳಿಯೆಲ್ಲಾ ಧೂಳು ಮತ್ತು ಒಣಗಿದ ಎಲೆಗಳಿಂದ ಆವೃತ್ತವಾಗುತ್ತಿತ್ತು. ಮನುಷ್ಯನ ಒಳ ಸಂಘರ್ಷಕ್ಕೆ ಪ್ರಕೃತಿಯೂ ಜೊತೆಯಾದ ಒಂದು ಅಪರೂಪದ ಸಂದರ್ಭವದು. ಹಠಾತ್ತನೆ ಮಳೆ ಸುರಿಯಲು ಪ್ರಾರಂಭಿಸಿತು, ಆ ವರ್ಷದ ಮೊದಲ ಮಳೆ. ದಪ್ಪದಾದ ಹನಿಗಳ ಮೂಲಕ ನೆಲಕ್ಕೆ ಸುರಿದ ಮಳೆಯ ಜೊತೆಗೆ ಮಿಂಚು ಗುಡುಗು ಜೊತೆಯಾಗಿ ಋತು ಬದಲಾವಣೆಗೆ ಸಾಕ್ಷಿಯಾಗುತ್ತಿದ್ದವು. ಓಕೇಕೆ ತನ್ನ ಇಬ್ಬರು ಮೊಮ್ಮಕ್ಕಳ ಬಗ್ಗೆ ಯೋಚಿಸದಿರಲು ಕಠಿಣವಾಗಿ ಪ್ರಯತ್ನಿಸುತ್ತಿದ್ದ. ಆದರೆ ಆತನಿಗೆ ತಾನೀಗ ಸೋಲಲೇಬೇಕಾದ ಪರಿಸ್ಥಿತಿಯಲ್ಲಿ ರಣರಂಗದಲ್ಲಿದ್ದೇನೆಂದು ಗೊತ್ತಿತ್ತು. ತನ್ನ ಇಷ್ಟದ ಹಾಡೊಂದನ್ನು ಗುನುಗಲು ಪ್ರಯತ್ನಿಸಿದರೂ, ಮನೆಯ ಛಾವಣಿ ಮೇಲೆ ಬೀಳುತ್ತಿದ್ದ ಮಳೆಹನಿಗಳ ಜಿಟಿ ಜಿಟಿ ಶಬ್ದದ ಕಾರಣ ಆ ಹಾಡು ಕೇಳಿಸುತ್ತಿರಲಿಲ್ಲ. ಆತನ ಮನಸ್ಸು ಕೂಡಲೇ ತನ್ನ ಮೊಮ್ಮಕ್ಕಳ ಬಳಿ ತೆರಳಿಬಿಟ್ಟಿತು. ಆ ಕಂದಮ್ಮಗಳ ವಿರುದ್ಧವಾಗಿ ಆತ ಹೇಗೆ ತಾನೆ ತನ್ನ ಮನಸ್ಸಿನ ಬಾಗಿಲನ್ನು ಮುಚ್ಚಿಕೊಂಡಾನು? ಒಂದು ವಿಚಿತ್ರವಾದ ಕಲ್ಪನೆಯ ಮೂಲಕ ತನ್ನ ಮೊಮ್ಮಕ್ಕಳು ಅಳುತ್ತ, ನಡುಗುತ್ತ ಮನೆಯ ಹೊರಗಿನ ಈ ಕ್ರೂರ ವಾತಾವರಣದಲ್ಲಿ ನಿಂತಿರುವುದನ್ನು ಕಂಡು ಬೆಚ್ಚುತ್ತಾನೆ.

ನೋವು ಮತ್ತು ಪಶ್ಚಾತ್ತಾಪ ಹೆಚ್ಚಾದ ಕಾರಣ ಆತನಿಗೆ ಆ ರಾತ್ರಿ ಸರಿಯಾಗಿ ನಿದ್ದೆಯೇ ಬರಲಿಲ್ಲ. ತನ್ನ ಮೊಮ್ಮಕ್ಕಳ ಆಸೆಯನ್ನು ಈಡೇರಿಸಲಾಗದೆ ತಾನೇನಾದರೂ ತೀರಿಕೊಂಡರೆ ಎಂಬ ಒಂದು ಅಮೂರ್ತ ಭಯ ಆತನನ್ನು ಕಾಡಲು ಪ್ರಾರಂಭಿಸಿತು.

 

Comments

Submitted by lpitnal@gmail.com Thu, 05/16/2013 - 15:13

ಮೋಹನ ರವರೇ, ಕಥೆ ಚನ್ನಾಗಿದೆ, ಸ್ವತಂತ್ರ ಕಥೆಯಂತೆ ಅನುವಾದಿಸಿದ್ದೀರಿ, ಚೀನಾ ಸಂಸ್ಕೃತಿಯ ಪರಿಚಯ, ಅವರ ಜೀವನ ಪದ್ಧತಿ ಸೊಗಸಾಗಿ ಮೂಡಿದೆ. ಉತ್ತಮ ಕಥೆಗೆ ನೀಡಿದ ತಮಗೆ ಅಭಿನಂದನೆಗಳು.
Submitted by Mohan V Kollegal Sun, 05/19/2013 - 16:41

In reply to by lpitnal@gmail.com

ಓದಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು ಸರ್... ಆದರೆ ಚಿನುವಾ ಅಚಿಬೆ ಆಫ್ರಿಕಾ ಖಂಡದ ಲೇಖಕರು. ನೈಜೀರಿಯಾ ದೇಶದಲ್ಲಿ ಹುಟ್ಟಿ ಬೆಳೆದ ಚಿನುವಾ ಅಚಿಬೆ, ಆಫ್ರಿಕಾದ ಸ್ಥಿತಿಗತಿಗಳನ್ನು ತಮ್ಮ ಕೃತಿಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು. ಈ ಕಥೆಯಲ್ಲಿ ಬರುವ 'ಇಬೋ' ಎಂಬ ಸ್ಥಳ ಕೂಡ ಆಫ್ರಿಕಾ ಖಂಡದಲ್ಲಿ ಬರುವ ಒಂದು ಬುಡಕಟ್ಟು ಪ್ರಾಂತ್ಯ. :)
Submitted by kavinagaraj Thu, 05/16/2013 - 15:28

ಉತ್ತಮ ಅನುವಾದಕ್ಕೆ ಅಭಿನಂದನೆ. ಜನರ ಆಚಾರ-ವಿಚಾರಗಳು ವಿಭಿನ್ನ ದೇಶಗಳಲ್ಲಿಯೂ ಒಂದೇ ತರನಾಗಿರುತ್ತವೆ ಎಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ.
Submitted by Mohan V Kollegal Sun, 05/19/2013 - 16:40

ಓದಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು ಸರ್... ಚಿನುವಾ ಅಚಿಬೆ ಆಫ್ರಿಕಾ ಖಂಡದ ಲೇಖಕರು. ನೈಜೀರಿಯಾ ದೇಶದಲ್ಲಿ ಹುಟ್ಟಿ ಬೆಳೆದ ಚಿನುವಾ ಅಚಿಬೆ, ಆಫ್ರಿಕಾದ ಸ್ಥಿತಿಗತಿಗಳನ್ನು ತಮ್ಮ ಕೃತಿಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು. ಈ ಕಥೆಯಲ್ಲಿ ಬರುವ 'ಇಬೋ' ಎಂಬ ಸ್ಥಳ ಕೂಡ ಆಫ್ರಿಕಾ ಖಂಡದಲ್ಲಿ ಬರುವ ಒಂದು ಬುಡಕಟ್ಟು ಪ್ರಾಂತ್ಯ. :)