ಮನತುಂಬಿದ ಕವಿ

ಮನತುಂಬಿದ ಕವಿ

ಬರಹ

ಮನ ತುಂಬಿದ ಕವಿ
“ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು.
“I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು
“ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನಷ್ಟೇ ಹಣಿಸು ನನಗೆ”
ಹೀಗೆಂದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು.
ಸಾಹಿತ್ಯ ಲೋಕದಲ್ಲಿ ಅರಳಿದ ಕುಸುಮಗಳೆಂದರೆ ಈ ಸಾಹಿತಿಗಳು. ಸಂವೇದನಾಶೀಲ ವ್ಯಕ್ತಿಗಳು. ತಮ್ಮ ನೋವು ನಲಿವುಗಳನ್ನೆಲ್ಲಾ ಹಾಡಾಗಿ ಹೊರ ಹೊಮ್ಮಿಸಿ ಹಗುರಾಗುತ್ತಿದ್ದರೇನೋ ಮನದೊಳಗೆ. ಹಾಗೆಯೇ ದ.ರಾ.ಬೇಂದ್ರೆಯವರ ಅನೇಕ ಕವನಗಳು ಅಂತಃಕರಣ ಕುದ್ದು ಕುದ್ದು ಹೊರಬಿದ್ದ ಕವನಗಳಾಗಿರಬೇಕು. ಅವರು ತಮ್ಮ ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗಿ ಹೊರಬಂದು ಓದುಗರ ಮನ ಮುಟ್ಟಿದೆ. ಹೀಗೆ ಅವರ ನೋವಿನ ಹಾಡುಗಳನ್ನು ಓದಿದಾಗ ಕಣ್ಣೀರು ಮಿಡಿದು ಅವರ ಹಾಸ್ಯ ಮಾತುಗಳ ಬಗ್ಗೆ ಕೇಳಿದಾಗ ಉಲ್ಲಾಸಗೊಂಡು ನಾನು ನಕ್ಕು ಸಂತೋಷ ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಬೇಂದ್ರೆ ಬಡತನದಲ್ಲಿ ಬೆಂದವರು. ಸಾವು ನೋವುಗಳ ಬೆಂಕಿಯಲ್ಲಿ ಬೆಂದವರು. ಎದೆಯುದ್ದದ ಮಗನನ್ನು ಕಳೆದುಕೊಂಡಾಗ ,
“ಸತ್ತ ದಶರಥಗಾಗಿ ಅತ್ತನಾರಾಮನಾಕ್ಷಣ
ಇದ್ದ ದಶರಥ ಅತ್ತೆ ಅಳುವನು ಹೋದ ರಾಮನಿಗಾಗಿ ಕ್ಷಣಕ್ಷಣ.”
ಹುಟ್ಟಿದ ಗಂಡುಮಗುವು ಹುಟ್ಟುವಾಗಲೇ ಸಾವನ್ನಪ್ಪಿತು. ದ.ರಾ.ಬೇಂದ್ರೆಯವರನ್ನು ಅವರ ಹೆಂಡತಿ ಕರುಳು ಇರಿಯುವಂತೆ ನೋಡಿದಾಗ ಹೊರಬಿದ್ದ ಹಾಡು,
“ನೀ ಹೀಂಗೆ ನೋಡಬೇಡ ನನ್ನ!
ನೀ ಹೀಂಗೆ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗೆ ನೋಡಲೇ ನಿನ್ನ.
ಮಲಗಿರುವ ಕೂಸು ಮಲಗಿರಲಿ ಅತ್ತ
ಮುಂದಿನದು ದೇವರ ಚಿತ್ತ
ಹೀಗೆ ಭಾವನೆಗಳನ್ನು ಹೊರಹೊಮ್ಮಿಸುವ ಕವಿಯನ್ನು ದೇಶದ ಸ್ವಾತಂತ್ರ್ಯ ಹೋರಾಟದ ಬಿಸಿಯೂ ತಾಕಿತು. ಬರೆದರು ’ನರಬಲಿ’ ಎಂಬ ದೇಶಭಕ್ಥಿ ಗೀತೆ.
“ಯಾರು ನಮ್ಮ ಅರಿತರೇನು? ಯಾರು ನಮ್ಮ ಮರೆತರೇನು?
ತವರೂರು ತಮ್ ತಮಗೆ ತಾನೆ ಚಂದ
ಕಟ್ಟಿಕೊಡುವುದಲ್ಲ, ಬಿಚ್ಚಿ ಬಿಡುವುದಲ್ಲ
ಹೊಕ್ಕಳಿನ ಹುರಿಯಂಥ ಭಾವ ಬಂಧ.”
ಈ ದೇಶಭಕ್ತಿ ಗೀತೆ ಇವರನ್ನು ಸೆರೆವಾಸಕ್ಕೆ ನೂಕಿತಲ್ಲದೇ ಸೆರೆಯಿಂದ ಹೊರಬಂದ ನಂತರ ನಿರುದ್ಯೋಗದ ಸಮಸ್ಯೆಯನ್ನೂ ಎದುರಿಸುವಂತಾಯಿತು.
“ನರಬಲಿ ಕವನವು ಬಲಮಾಡಿತೆನ್ನನು,
ಹೆಳವನಿದ್ದಲ್ಲಿಗೆ ಹೊಳೆ ಬಂದಿತು,
ಮನೆಯನ್ನು ಮುರಿಯಿತು”
ಎಂದು ಹಾಡಿಕೊಂಡರು. ನೋವಿನನುಭವ ಸಾಕು. ಇನ್ನು ಕೆಲವು ನಲಿವಿನನುಭವಗಳ ಕಡೆ ಗಮನ ಹರಿಸೋಣ.
ದ.ರಾ.ಬೇಂದ್ರೆಯವರ ಬುದ್ಧಿ ಬಹಳ ಚುರುಕು. ಮಾತು ಬಹಳ ಪ್ರಿಯ. ಸ್ನೇಹ ಪ್ರೀತಿಗಳಿಗ ಬಹಳ ಬೆಲೆ ಕೊಡುತ್ತಿದ್ದರು. ಎನ್.ಕೆ. ಎಂದೇ ಪ್ರಸಿದ್ದರಾಗಿರುವ ಸಾಹಿತಿ ನಾರಾಯಣ್ ರವರು ಇವರ ಆಪ್ತ ಗೆಳೆಯರು. ಇಬ್ಬರೂ ಮಾತನಾಡುವಾಗ ಪದಗಳನ್ನು ಚಮತ್ಕಾರದಿಂದ ಬಳಸುತ್ತಿದ್ದರು. ಒಮ್ಮೆ ದ.ರಾ.ಬೇಂದ್ರೆಯವರು ಎನ್ಕೆಯವರ ಮನೆಗೆ ಹೋದಾಗ ಹೊಸಲು ತುಳಿಯುವಾಗಲೇನೇ, “ಎನ್ಕೇ ನಿನ್ನ ಅರೀಲಿಕ್ಕೆ ಬಂದೀನಿ ನಾನು” ಅಂದರು. ಅದಕ್ಕೆ ಎನ್ಕೇಯವರು ನಗುತ್ತಲೇ, “ಬರ್ರಿ ಮಾಸ್ತರೇ ನಾನೂ ನಿಮ್ಮನ್ನು ಅರೀಲಿಕ್ಕೆ ಕೂತೀನಿ” ಅಂದರು. ಇಲ್ಲಿ ಇಬ್ಬರೂ ಅರೀಲಿಕ್ಕೆ ಎಂಬ ಪದದ ಎರಡು ಅರ್ಥಗಳೂ ಹೊಂದುವಂತೆ pun ಮಾಡಿ ಬಳಸಿರುವುದು ಮನಸ್ಸಿಗೆ ಮುದ ಕೊಡುವ ವಿಚಾರ. ಹೀಗೇನೇ ಒಮ್ಮೆ ಕೆಲವು ಗೆಳೆಯರು ಬೇಂದ್ರೆಯವರನ್ನು ಎನ್ಕೇಯವರ ಮನೆಯಲ್ಲಿ ಬಿಟ್ಟು ಬೇರೆ ಎಲ್ಲೋ ಸ್ವಲ್ಪ ಕೆಲಸ ಮುಗಿಸಿ ಬರುತ್ತೇವೆ ಎಂದು ಹೇಳಿ ಹೋದರು. ಆಗ ಎನ್ಕೇಯವರ ಪತ್ನಿಯವರು ಇವರಿಗೆ ತಂಬಿಟ್ಟು ತಂದುಕೊಟ್ಟರಂತೆ. ಗೆಳೆಯರು ಬಂದಾಗ, “ನೀವು ನನ್ ಬಿಟ್ಟು ಹೋದ್ರಿ, ನಾನು ತಂಬಿಟ್ಟು ತಿಂದೆ” ಅಂತ ಹೇಳಿದರು. ಇಲ್ಲಿ ತಂಬಿಟ್ಟು ಎಂದರೆ ತಮ್ಮನ್ನು ಬಿಟ್ಟು ಎಂಬ ಇನ್ನೊಂದು ಅರ್ಥವೂ ಕಂಡು ಗೆಳೆಯರು, “ಈಗ ನಾವೂ ತಂಬಿಟ್ಟು ತಿಂತೇವೆ” ಎಂದು ನಕ್ಕರಂತೆ. ಹೀಗೆ ಪದಗಳನ್ನು ಚಮತ್ಕಾರದಿಂದ ಬಳಸಿ pun ಮಾಡಿ ಮಾತಾಡೋದ್ರಲ್ಲಿ ನಿಪುಣರು ಬೇಂದ್ರೆಯವರು. ಇವರಿಗೆ ಮೈಸೂರು ವಿಶ್ವ ವಿದ್ಯಾನಿಲಯ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಕೊಟ್ಟು ಗೌರವಿಸಿದವು. ಆಗ ಅಲ್ಲಲ್ಲಿ ಅಪಸ್ವರದ ಮಾತುಗಳು ಎದ್ದವಂತೆ. ಅದನ್ನು ಗಮನಿಸಿದ ಬೇಂದ್ರೆಯವರು, “ ಈ universityಯವರು ಕೊಡಕ್ಕೆ ಮುಂಚೆ ನಮ್ಮ ತಂದೆ ತಾಯಿನೇ ನಾನು ಹುಟ್ಟುವಾಗಲೇ ಡಾಕ್ಟರೇಟ್ ಕೊಟ್ಟಿದಾರೆ. ಹೇಗೇಂತೀರಾ? ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದ್ರೆ DR ಬೇಂದ್ರೆ. ನೀವು ಡಾಕ್ಟರ್ ಅನ್ನಲಿಕ್ಕೂ DR ಹಾಕ್ತೀರಿ ಹೌದಲ್ಲೋ?” ಅಂತ ಕೇಳಿದರಂತೆ. ಹೀಗೆ ಪದಗಳ ಶ್ಲೇಷೆ ಚಮತ್ಕಾರದ ಮಾತುಗಳ ಜೊತೆಗೆ spontaneous ಆಗಿ ಆಕ್ಷಣದಲ್ಲಿ ನಗೆಚಟಾಕಿ ಹಾರಿಸಿ ಮಾತನಾಡುವುದರಲ್ಲೂ ನಿಸ್ಸೀಮರು. ಅವರ ಕವಿತಗಳಲ್ಲಿ ಹಾಸ್ಯ, ವಿಡಂಬನೆಯೊಂದಿಗೆ ಗಹನವಾದ ವಿಚಾರಗಳ ಮಾಲೆಯೂ ಇರುತ್ತವೆ. ಬದುಕಿನ ಬವಣೆಗಳಿವೆ. ಪ್ರೀತಿ, ಪ್ರೇಮ ವಿರಹ ಗೀತೆಗಳೂ ಇವೆ. ಅವರ ಪ್ರಕ್ರುತಿಯ ವರ್ಣನೆಯ ಸೊಬಗಂತೂ ದಂಗು ಬಡಿಸುವಂತಹುದು.
’ಕುಣಿಯೋಣು ಬಾರಾ’ ಬೇಂದ್ರೆಯವರ ಜನಪ್ರಿಯ ಗೀತೆ. ಕುಣಿಯುವುದಕ್ಕೆ ಅಂದರೆ ಸಂತೋಷವಾಗಿರುವುದಕ್ಕೆ ಮನಸ್ಸು ಬೇಕು ಅಷ್ಟೆ. ಎಂತಹಾ ತಾಪತ್ರಯವಿದ್ದರೂ ಕುಣಿದು ಎಲ್ಲಾ ಮರೆಯೋಣ. “ತಾಳ್ಯಾಕಾ ತಂತ್ಯಾಕಾ ರಾಗಾದ ಚಿಂತ್ಯಾಕಾ ಹೆಜ್ಯಾಕಾ ಗೆಜ್ಯಾಕಾ ಕುಣಿಯೋಣು ಬಾ.” ಇದರರ್ಥ ಇಲ್ಲ ಸಲ್ಲದ Rules regulationsನ್ನು ಹಾಕಿ ನಮ್ಮ ಮನಸ್ಸಿಗೆ ಬೇಲಿ ಹಾಕಿಕೊಂಡು ಗಂಭೀರ ಮುದ್ರೆ ಹಾಕಿಕೊಂಡು ಸಂತೋಷವನ್ನು ಹಾಳು ಮಾಡಿಕೊಳ್ಳಬಾರದು ಅಂತಾನೇ ಅಲ್ವೇ? ಬಡತನದ ಬಗ್ಗೆ ಒಂದು ವ್ಯಂಗ್ಯ ನುಡಿ ಹೀಗಿದೆ ನೋಡಿ,
ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ
ಇದ್ರೆ ಒಂದು ಬ್ರೆಡ್ ತಾ
ಮ್ಯಾಲೆ ಅದಕೆ ಬೆಣ್ಣೆ ತಾ
ಇಲ್ಲಾ? ಹೋಗ್ಲಿ ಎಣ್ಣೆ ತಾ
ಹಾಕು ಮೇಲೆ ಖಾರದಪುಡಿ
ಹೊಟ್ಟೆ ತುಂಬಾ ಅದನ್ನು ಜಡಿ!
ಒಮ್ಮೆ ಒಂದು ನಾಟಕ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದರು. ಇಂಟರ್ವೆಲ್ ನಲ್ಲಿ ಹೊರಗೆ ಹೋಗಿದ್ದ ಅವರು ಮತ್ತೆ ಥಿಯೇಟರ್ ಒಳಗೆ ಹೋಗುವಾಗ ಅವರನ್ನು ಬಾಗಿಲು ಕಾಯುವವನು ಅಲ್ಲೇ ತಡೆದು ನಿಲ್ಲಿಸಿಬಿಟ್ಟನಂತೆ. ನಾನು ಬೇಂದ್ರೆ ಕಣಪ್ಪಾ ಅಂದ್ರೂ ಬಿಡಲಿಲ್ಲವಂತೆ. ಅವರು ಹಾಗೆಂದಾಗ ಆ ಬಾಗಿಲು ಕಾಯುವವ, “ನಿನ್ನ ಗಡ್ಡ ಏನು? ನಿನ್ನ ಮುಖಏನು? ಬೇಂದ್ರೆಯವರೆಲ್ಲಿ? ನೀನೆಲ್ಲಿ?” ಎಂದು ಹೇಳಿದಾಗ ಬೇಂದ್ರೆಯವರು ಅವಾಕ್ಕಾದರು. ಅವರು ಹೊರಗೆ ಹೋದಾಗ ಇದ್ದ ವ್ಯಕ್ತಿ ಹೋಗಿ ಅವರು ಒಳಗೆ ಬರುವ ಹೊತ್ತಿಗೆ ಬೇರೆ ವ್ಯಕ್ತಿ ಬಂದಿದ್ದ. ಅವನಿಗೆ ಬೇಂದ್ರೆಯವರ ಮುಖ ಪರಿಚಯ ಇರಲಿಲ್ಲ. ತಕ್ಷಣ ಬೇಂದ್ರೆಯವರು, “ಇಲ್ಲಪ್ಪಾ ನಾ ಬೇಂದ್ರೆಯವರ ಪೈಕಿ ಜನ..” ಅಂತ ರಾಗ ಎಳೆದರಂತೆ. ಇವರು ಬೇಂದ್ರೆ ಕಡೆಯವರು ಎಂದು ಇನ್ನೂ ಯಾರೋ ಹೇಳಿದರಂತೆ ಆಗ ಆವ್ಯಕ್ತಿ ಇವರನ್ನು ಗೌರವದಿಂದ ಒಳಗೆ ಬಿಟ್ಟನಂತೆ. “ನೀನ್ ಯಾಕೋ ನಿನ್ನ ಹಂಗ್ಯಾಕೋ? ನನ್ನ ನಾಮದ ಬಲವೊಂದಿದ್ದರೆ ಸಾಕೋ” ಪುರಂದರ ದಾಸರು ಹಾಡಿದಂತೆ ತನ್ನ ನಾಮ ಬಲದಿಂದ ಬೇಂದ್ರೆಯವರು ಒಳಗೆ ಹೋಗಲು ಸಾಧ್ಯವಾಯಿತು.
’ಬೆಂದ್ರೆ ಬೇಂದ್ರೆ ಆದಾನು’ ಎಂಬ ನುಡಿ ಇದೆ. ಆದ್ರೆ ಬೆಂದವರೆಲ್ಲಾ ಬೇಂದ್ರೆ ಆಗಲು ಸಾಧ್ಯವೇ? ನೊಂದು ಬೆಂದವರ ಪ್ರತಿನಿಧಿಯಾಗಿ ಬೇಂದ್ರೆಯವರು ನಿಂತು ಬದುಕಿನ ಬಗ್ಗೆ ಸಾರಿದ ನುಡಿಗಳು,
“ರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ”
ಎಂಬ ಸಾರ್ವ ಕಾಲಿಕ ಸಂದೇಶ ನಮ್ಮ ಮುಂದಿದೆ.
73ನೇ ಸಾಹಿತ್ಯ ಸಮ್ಮೇಳನ ಶಿವಮೊಗ್ಗೆಯಲ್ಲಿ ನಡೆದಾಗ ನಾನು ಬೇಂದ್ರೆಯವರ ಎಲ್ಲಾ ಕವನ ಸಂಕಲನಗಳ volumes ಔದುಂಬರ ಗಾಥೆ ಕೊಂಡುಕೊಂಡೆ. ಅದನ್ನು ಮನೆಗೆ ಹೊತ್ತು ತಂದ ನನ್ನವರು “ಬೇಂದ್ರೆಯವರ ಕವನಗಳು ಒಳ್ಳೆ ವಜನು ಇವೆ” ಎಂದು ಬೇಂದ್ರೆಯವರಂತೆ pun ಮಾಡಿ ಹೇಳಿ ಬೆವರು ಒರೆಸಿಕೊಂಡಾಗ ನನಗೆ ಬೇಂದ್ರೆಯವರೇ ಎದುರಿಗೆ ಬಂದು ನಿಂತಂತೆ ಭಾಸವಾಯಿತು.