ಮನುಷ್ಯನ ಪಾದ ನೆಕ್ಕಿದ್ದೇ ನೆಪ; ಪುನುಗು ಸೇರಿದ್ದು ಯಮನ ಪಾದಕ್ಕೆ!

ಮನುಷ್ಯನ ಪಾದ ನೆಕ್ಕಿದ್ದೇ ನೆಪ; ಪುನುಗು ಸೇರಿದ್ದು ಯಮನ ಪಾದಕ್ಕೆ!

ಬರಹ

ನಾನು ಈಗ ಇಷ್ಟು ಮಾತ್ರ ಹೇಳಬಲ್ಲೆ. ಕಾರಡಗಿಯ ಜನಗಳು ಮಾನವಂತರಲ್ಲ. ಈ ಘಟನೆಗೆ ಸಂಬಂಧಪಟ್ಟವರನ್ನೆಲ್ಲ ಪೊಲೀಸರು ಒದ್ದು ಒಳ ಹಾಕಬೇಕು; ಅರಣ್ಯ ಇಲಾಖೆ ತನ್ನ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿ ಇವರಿಗೆಲ್ಲ ಅತಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅವರು ಹೇಗೆ ಆ ಮೂಕ ಪ್ರಾಣಿಯ ಜೀವ ತೆಗೆಯುವಲ್ಲಿ ನಿರ್ದಯವಾಗಿ ನಡೆದುಕೊಂಡರೋ, ಅದಕ್ಕಿಂತಲೂ ಹೃದಯಹೀನವಾಗಿ ಉಭಯ ಇಲಾಖೆಗಳು ನಡೆದು ತೋರಿಸಬೇಕು. ಆ ರಾಕ್ಷಸರಿಗೆ ‘ಮನುಷ್ಯರು’ ಎಂಬ ಕಾರಣಕ್ಕೆ ಯಾವ ವಿನಾಯಿತಿಯನ್ನೂ ಇಲ್ಲಿ ತೋರಿಸಬಾರದು.

ನನ್ನ ಮನಸ್ಸು ತೀವ್ರ ವಿಚಲಿತಗೊಂಡು ಕ್ಷೋಭೆಗೆ ಒಳಗಾಗಿತ್ತು. ಕೋಪ ಹಾಗು ದು:ಖ ಎರಡೂ ಏಕಕಾಲಕ್ಕೆ ಉಮ್ಮಳಿಸಿ ಬರುತ್ತಿದ್ದವು. ಪೊಲೀಸರು, ಅರಣ್ಯ ಇಲಾಖೆ ಸಾಲದ್ದಕ್ಕೆ ಆ ಊರಿನ ಹಿರಿಯರು ಎಲ್ಲ ವಿಘ್ನಸಂತೋಷಿಗಳು ಎಂದು ಬುದ್ಧಿ ಹಳಿಯುತ್ತಿತ್ತು. ಅವರ ಈ ಪರಿಯ ನಿರ್ಲಿಪ್ತತೆ, ನಿಷ್ಕ್ರೀಯತೆ ಹಾಗು ಕರ್ತವ್ಯದ ಪರ ಉದಾಸೀನತೆ ಈ ಕ್ಷಣಕ್ಕೂ ನನ್ನ ರಕ್ತವನ್ನು ಕುದಿಸುತ್ತಿದೆ. ಮೂಕ ಪಶುವಿನ ಬದುಕನ್ನು ಇಷ್ಟು ಚಿಲ್ಲರೆ ಮಾಡಿದ್ದಕ್ಕೆ ನನಗೆ ಜುಗುಪ್ಸೆ ಮೂಡಿದೆ.

ನಡೆದಿದ್ದಿಷ್ಟು: ಅಪರೂಪದ ಪುನುಗು (ಇಲಿ)ಬೆಕ್ಕೊಂದು ಭಾನುವಾರ ಬೆಳಗಿನ ಜಾವ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಾರಡಗಿಯಲ್ಲಿ ಕಂಡುಬಂತು. ಇತ್ತೀಚೆಗೆ ವಿದ್ಯುತ್ ಕೈಕೊಡುವುದನ್ನು ಖಾಯಂ ಉದ್ಯೋಗವಾಗಿಸಿಕೊಂಡ ಬಳಿಕ, ಪಂಖಾಗಳೇ ತಿರುಗದೇ ಸೆಖೆಯೂ ಹೆಚ್ಚಿ ಮನೆಯ ಜಗುಲಿಯ ಮೇಲೆ, ಕಟ್ಟೆಯ ಮೇಲೆ ತಂಪನ್ನರಿಸಿಕೊಂಡು ಹೋಗಿ ಜನತಾ ಜನಾರ್ಧನರು ಮಲಗುವುದು ವಾಡಿಕೆಯಾಗಿದೆ. ಹಾಗೆ ನೈಸರ್ಗಿಕ ಗಾಳಿ, ತಂಪು ಹಾಗು ಆಹ್ಲಾದಕರ ನಿದ್ದೆ ಸವಿಯಲು ಮನೆಯ ಜಗುಲಿಯ ಮೇಲೆ ಮಲಗಿದ್ದ ವ್ಯಕ್ತಿಯೋರ್ವನ ಕಾಲು ಹೊದಿಕೆ ಬಿಟ್ಟು ಹೊರಚಾಚಿದೆ. ಒಂದರ್ಥದಲ್ಲಿ ಆತ ಹಾಸಿಗೆ ಇದ್ದದುಕ್ಕಿಂತ ಹೆಚ್ಚು ಕಾಲು ಚಾಚಿದ್ದ! ಎನ್ನಬಹುದು, ನಾನು ಇಲ್ಲಿ ಸಾಂಕೇತಿಕವಾಗಿ. ಮನುಷ್ಯ ಎಲ್ಲದರಲ್ಲೂ ಹಾಗೇ ತಾನೆ?

ತನ್ನ ಪಾಲು ಕೇಳಲು ಬಂದಂತೆ ಪುನುಗು ಬೆಕ್ಕು ಯಾವುದೋ ಹಣ್ಣು ಇರಬೇಕು ಎಂದುಕೊಂಡು ಆತನ ಬೆರಳ ತುದಿಯನ್ನು ನೆಕ್ಕಿ ನೋಡಿದೆ. (ಆದರೆ ಕಚ್ಚಿ ರುಚಿ ನೋಡಿಲ್ಲ!) ನಿದ್ದೆ ಗಣ್ಣಿನಲ್ಲಿ ಹೌಹಾರಿದ ಆ ಮನುಷ್ಯ ಎದ್ದು ನಿಂತು ಇಡೀ ಊರಿಗೆ ಕೇಳುವಹಾಗೆ ಬೊಬ್ಬೆ ಹೊಡೆದು, ತನ್ನ ಕಾಲನ್ನೇ ಕತ್ತರಿಸಿಕೊಂಡು ಪುನುಗು ಓಡಿಹೋದಂತೆ ಹಲುಬಿ ಹೊಯ್ಯ್ಕೊಂಡ. ಚುಮುಚುಮು ಬೆಳಕು ಹರಿಯುವ ಹೊತ್ತು. ಊರವರೆಲ್ಲ ಬಹಿರ್ದೆಸೆಗೆಂದು ಬಯಲಿಗೆ ಹೋಗುವ ಸಮಯ. ಈ ಸೂರ್ಯವಂಶಿಯ ಪುಕಾರಿಗೆ ಕಿವಿಗೊಟ್ಟು ಓಡಿಬಂದು ವಿಚಾರಿಸಿದ್ದಾರೆ. "ಇಲಿ ಹೋಗಿದೆ ಆದರೆ ಹುಲಿ ಹೋದ ಕಥೆ"ಯನ್ನು ಈ ಮಹನೀಯ ಹೇಳಿದ. ಎಲ್ಲರೂ ಬಡಿಗೆ, ದೊಣ್ಣೆಗಳನ್ನು ಹಿಡಿದು ಈ ಆಗಂತುಕ ಪುನಗು ಪ್ರಾಣಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪ್ರಾಣ ಭಯದಿಂದ ಅಲ್ಲಲ್ಲಿ ಅಡಗುತ್ತ, ತಪ್ಪಿಸಿಕೊಳ್ಳುತ್ತ ಓಡಾಡಿದೆ. ಎಂದೂ ಇಂತಹ ಪ್ರಾಣಿಯನ್ನು ಗ್ರಾಮದಲ್ಲಿ ನೋಡಿರದ ಜನಕ್ಕೆ ಒಂಥರ ಶೆರೆ ಕುಡಿಸಿ, ಚೋಳು ಕಡಿಸಿದ ಮಂಗನ ಹಾಗೆ ನಡಾವಳಿ ತೋರಿಸುವಂತೆ ಪ್ರೇರೇಪಿಸಿದೆ.

ಊರವರ ಈ ಪರಿಯ ಹಾರಾಟ ನೋಡಿದ ಬೆಕ್ಕು ಬದುಕಲು ಹವಣಿಸಿ ಮನೆ-ಮನೆಗಳಿಗೆ ನುಗ್ಗಿದೆ. ಸೀಳು ಧ್ವನಿ ಅಥವಾ ಕೀರಲು ಧ್ವನಿಯಲ್ಲಿ ಕೂಗುತ್ತ ಓಡಿದ್ದು ಅಕ್ಕ-ಪಕ್ಕದ ಮನೆಯವರು ನೋಡಿ, ಕಲ್ಲುಗಳಿಂದ ಸಹ ಪುನುಗಿನ ಮೇಲೆ ಪ್ರಹಾರ ಮಾಡಿದ್ದಾರೆ. ೨ ಗಂಟೆಗಳ ಕಾಲ ಈ ಪ್ರಾಣಿಯ ಜೀವ ಹಿಂಡಿ, ಆತಂಕದಿಂದ ಅದನ್ನು ಹೊಡೆದು ಕೆಡವಲು ಕೆಲ ಯುವಕರು ದೃಢ ನಿಶ್ಚಯ ಮಾಡಿದರು. ದೊಡ್ಡ ದೊಣ್ಣೆಗಳನ್ನು ಹತ್ತಾರು ಕಡೆಗಳಿಂದ ಬೀಸಿ ಒಗೆದು ಅದಕ್ಕೆ ತಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಕ್ಕೆ ಒರಗುತ್ತಿದ್ದಂತೆ ಅದರ ಮೇಲೆ ಮುಗಿಬಿದ್ದು ತಲಾ ನಾಲ್ಕಾರು ಏಟುಗಳನ್ನು ಹಾಕಿದ್ದಾರೆ. ಕೊನೆಗೆ ಹಗ್ಗ ಕಟ್ಟಿ ತಂದು ಊರಮುಂದಿನ ಖಂಬಕ್ಕೆ ಕಟ್ಟಿ ಹಾಕಿ ಮತ್ತೆ ಹೊಡೆದಿದ್ದಾರೆ.

ಮೈತುಂಬ ಗಾಯಗಳಾಗಿದ್ದರೂ ಬುಸುಗುಡುತ್ತಿದ್ದ ಪುನಗು ಬೆಕ್ಕು, ನೆಲಕಚ್ಚಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತಿತ್ತು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಯಾರೂ ಕೂಡ ಪೊಲೀಸರಿಗಾಗಲಿ, ಅರಣ್ಯ ಇಲಾಖೆಯವರಿಗಾಲಿ ಮಾಹಿತಿ ನೀಡುವ ಕೆಲಸ ಮಾಡಲಿಲ್ಲ. ಈ ಘನಾಂಧಾರಿ ಕೆಲಸಕ್ಕೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದ ಇವರಿಗೆ ಛೀಮಾರಿ ಹಾಕದೇ ವಿಧಿ ಇಲ್ಲ. ಕಿವಿಗಳು ಕತ್ತರಿಸಿ, ಕಣ್ಣು ಗುಡ್ಡೆಗಳು ಹೊರಬಂದು, ಬಾಯಿ ಹರಿದು ರಕ್ತ ಒಸರುತ್ತಿದ್ದರೂ ಇವರ ಕೋಪ ತಣಿದಿರಲಿಲ್ಲ. ಮತ್ತೆ ಮತ್ತೆ ಕಟ್ಟಿಗೆ, ದೊಣ್ಣೆ ಹಾಗು ಕಲ್ಲುಗಳಿಂದ ಅದಕ್ಕೆ ಚುಚ್ಚಿ ಚುಚ್ಚಿ ಜ(ದ)ನಗಳು ಆನಂದ ಪಡುತ್ತಿದ್ದರು. ಒಂದು ಗುಟುಕು ನೀರು ಸಹ ಸಿಗದೇ ಸಂಪೂರ್ಣ ನೆಲಕ್ಕೊರಗಿದ ಮೇಲೆ ಊರಿನ ಯುವ ಮುಂದಾಳುಗಳು ಅರಣ್ಯ ಇಲಾಖೆಯ ಸುಪರ್ದಿಗೆ ಈ ಆಗಂತುಕ ಅತಿಥಿಯನ್ನು ನೀಡುವುದಾಗಿ ಹೇಳಿದರಂತೆ. ಬಹುಶ: ಪುನಗಿನ ತಿಥಿಯ ವೇಳೆಗೆ ಈ ಮಹನೀಯರೆಲ್ಲ ಕಾರಡಗಿ ತಲುಪಿರಬೇಕು.

ಮೇಲ್ನೋಟಕ್ಕೆ ಮೊಲೆಗಳು ಊದಿಕೊಂಡಿದ್ದರಿಂದ ಹಾಲು ಕುಡಿಯುವ ಮರಿಗಳನ್ನುಳ್ಳ ಹೆಣ್ಣು ಪುನುಗು ಬೆಕ್ಕಿದು ಎಂದು ಗೋಚರಿಸುತ್ತದೆ. ಪಾಪ ಅದರ ಮರಿಗಳೆಲ್ಲೋ? ತಾಯಿಯ ಹಾದಿ ಕಾಯುತ್ತ ಕುಳಿತಿದ್ದಾವೆಯೋ? ಅಥವಾ ಈಗಾಗಲೇ ತಾಯಿಯ ಹಾಲು ಸಿಗದೇ ಅವು ಕೂಡ ಮರಣಿಸಿದವೋ? ಯಾರು ಬಲ್ಲರು. ಪಾಪ ತನ್ನ ಮರಿಗಳಿಗಾಗಿ ತನ್ನ ಜೀವ ಒತ್ತೆ ಇಟ್ಟು ನಮ್ಮ ಬಳಿ ಬಂದಿದ್ದ ಪುನಗು ಇನ್ನಿಲ್ಲವಾಯಿತು. ಈ ಬೆಕ್ಕಿನ ಕಡಿತದಿಂದ ಗಾಯಗೊಂಡ ಎನ್ನಲಾದ ‘ವೀರ ಕೇಸರಿ’ ಈರಯ್ಯ ಮಲ್ಲಯ್ಯ ಕಿಲ್ಲೇದಾರ ಅವರಿಗೆ ಗ್ರಾಮದ ವೈದ್ಯರು ಚಿಕಿತ್ಸೆ ನೀಡಿ ಗುಣ ಪಡಿಸಿದರಂತೆ. ಅದೆಷ್ಟು ದೊಡ್ಡ ಗಾಯವಾಗಿತ್ತು ನಮ್ಮ ‘ವೀರ ಕೇಸರಿಗೆ’ ನಿಮ್ಮ ಊಹೆಗೆ ಬಿಟ್ಟಿದ್ದು.

ಪುನುಗು ಬೆಕ್ಕನ್ನು ಕೊಂದವರಿಗೆ ಕಾನೂನು ರೀತ್ಯಾ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ, ಪೊಲೀಸರ ಸುಪರ್ದಿಗೆ ನೀಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿ ಶಿಕ್ಷೆ ಕೊಡಿಸುತ್ತದೆಯೇ? ಪಾಪ ಕಣ್ಣು ಬಿಟ್ಟಿದ್ದವೋ..ಬಿಟ್ಟಿರಲಿಲ್ಲವೋ ಅದರ ಮರಿಗಳಿಗೆ ನ್ಯಾಯ ದೊರಕುವುದೇ? ಬಹುಶ: ಈ ಪ್ರಕರಣದಲ್ಲೂ ಸಹ ಈಗಾಗಲೇ ತಿಪ್ಪೆ ಸಾರಿಸಲಾಗಿದೆ.

ಅಂತೂ ಮನುಷ್ಯನ ಪಾದ ನೆಕ್ಕಿದ್ದೇ ನೆಪವಾಗಿ ಪುನುಗು ಯಮನ ಪಾದ ಸೇರಿತು. The final nail was hammered to the coffin of cevet cat; when media also supported as usual those who have voice..and forgot its moral & ethical responsibility of becoming voice for the unheard.