ಮನೆಯಿಂದಲೇ ಕಚೇರಿ ಕೆಲಸ ಮಾಡ್ರೀ!

ಮನೆಯಿಂದಲೇ ಕಚೇರಿ ಕೆಲಸ ಮಾಡ್ರೀ!

ಹೊಸ ಐಫೋನ್ 5 ಬಂತು!




ಆಪಲ್ ಕಂಪೆನಿಯು ತನ್ನ ಹೊಸ ಐಫೋನ್ 5ಬಿಡುಗಡೆ ಮಾಡಿದೆ.ಐಫೋನ್4Sಗೆ ಹೋಲಿಸಿದರೆ,ಇದರ ತೆರೆ ನಾಲ್ಕಿಂಚು ಗಾತ್ರದ್ದು.ತೂಕ ಸುಮಾರು ಶೇಕಡಾ ಇಪ್ಪತ್ತು ಭಾಗ ಕಡಿಮೆಯಾಗಿದೆ. ಹೆಚ್ಚು ತೆಳುವೂ ಆಗಿದೆ.ಈ ಅಂಶ ಸುಮಾರು ಶೇಕಡಾ ಹದಿನೈದಾಗಿದೆ.ಆಪಲ್A6 ಎನ್ನುವ ಹೊಸ ಸಂಸ್ಕಾರಕ ಇದರಲ್ಲಿ ಬಳಕೆಯಾಅಗಿದೆ.4ಜಿ ಸಂಪರ್ಕ ಸಿಗುತ್ತದೆ.ಇನ್ನೂರು ಡಾಲರು ಬೆಲೆಯಲ್ಲಿ ಎರಡು ವರ್ಷದ ಪೋಸ್ಟ್‌ಪೈಡ್ ದರದಲ್ಲಿ ಸಂಪರ್ಕ ಸಿಗುತ್ತದೆ.ಆದರಿದು ಅಮೆರಿಕಾಕ್ಕೆ ಮಾತ್ರಾ ಅನ್ವಯವಾಗುತ್ತದೆ.ಐಫೋನ್ ಇದುವರೆಗೆ ಆರು ಮಾದರಿಗಳಲ್ಲಿ ಲಭ್ಯವಾಗಿದೆ.ಸುಮಾರು ಇಪ್ಪತ್ತನಾಲ್ಕು ಕೋಟಿ ಐಫೋನುಗಳು ಇದುವರೆಗೆ ಮಾರಾಟವಾಗಿರುವ ದಾಖಲೆಯಿದೆ.ಐಫೋನ್5 ಹೊಸ ವಿದ್ಯುತ್ ಚಾರ್ಜರ್‌ನೊಂದಿಗೆ ಬಂದಿದೆ.ಇದರ ಗಾತ್ರ ಸಣ್ಣದು.ಹಾಗಾಗಿ ಅನುಕೂಲಕರವಾಗಿದೆ.ತೆರೆ ದೊಡ್ಡದಿರುವುದು ಬಳಸಲು ಅನುಕೂಲವಾಗುತ್ತದೆ.ಆಪಲ್ ಐಫೋನು ಜನಪ್ರಿಯವಾಗಿ,ಜನರಿಗೆ ಹಿಡಿಸಿರುವ ಕಾರಣ,ಹೆಚ್ಚು ಬದಲಾವಣೆ ಮಾಡುವ ರಿಸ್ಕ್ ತೆಗೆದುಕೊಂಡಿಲ್ಲ ಎನ್ನುವುದು ಎದ್ದು ಕಾಣಿಸುತ್ತದೆ ಎಂದು ತಜ್ಞರ ಪ್ರತಿಕ್ರಿಯಿಸಿದ್ದಾರೆ.
--------------------------
ವಾಚಿನಲ್ಲಿ ಸ್ಪರ್ಶಸಂವೇದಿ ತೆರೆ
ಸಮಯ ಬದಲಿಸಲು,ಅಲಾರಂ ಸೆಟ್ ಮಾಡಲು,ಸ್ಟಾಪ್ ವಾಚ್ ಬಳಸಲು ಹೀಗೆ ವಾಚಿನ ಜತೆ ಸಂವಹನಕ್ಕೆ ಸ್ಪರ್ಶಸಂವೇದಿ ತೆರೆಯನ್ನು ಬಳಸಲು ಅನುವು ಮಾಡುವ ತೆರೆ ಮೊದಲ ಭಾರಿಗೆ ಕಡಿಮೆ ಬೆಲೆಯ ವಾಚಿನಲ್ಲೂ ಸಿಗುತ್ತದೆ.ಭಾರತದ ಅಗ್ರಗಣ್ಯ ವಾಚ್ ತಯಾರಕಾ ಕಂಪೆನಿಯಾದ ಟೈಟಾನ್ ತನ್ನ ಸೊನಾಟಾ ಬ್ರಾಂಡ್ ವಾಚಿನಲ್ಲಿ,ಇಂತಹ ಅನುಕೂಲವನ್ನು ಸಾವಿರದೈನೂರು ರೂಪಾಯಿ ಬೆಲೆಗೆ ನೀಡಲಾರಂಭಿಸಿದೆ.ನೀರಿಗೆ ಅಕಸ್ಮಾತ್ ಬಿದ್ದರೂ ಈ ವಾಚು ಕೆಡದು.ಕಲೆಯೂ ಸುಲಭವಾಗಿ ಆಗದ ಹಾಗಿದೆ.ಸೊನಾಟಾ ಇನ್ನೂರುರ ಗಡಿ ಬೆಲೆಯ ಅಗ್ಗದ  ನಮೂನೆಯ ವಾಚನ್ನೂ ಮಾರಾಟ ಮಾಡಿ ಹೆಸರಾಗಿದೆ.
--------------------------------------------
ಹೋಮಿಸೈಡ್ ವಾಚ್:ಕೊಲೆ ರಹಸ್ಯ ಬೇಧಿಸುವ ತಾಣ
ಅಮೆರಿಕಾದಲ್ಲಿ ಕರಿಯ ಜನಾಂಗದ ಹಲವರ ಮರಣ ಸಂಭವಿಸಿ,ಸದ್ದಿಲ್ಲದೆ ಮರೆಯಾಗುತ್ತವೆ.ಪತ್ರಿಕೆಗಳು ಬಡವರ ಕೊಲೆಗಳ ಬಗ್ಗೆ ಬರೆಯುವುದಿಲ್ಲ.ಈಗ ಹೋಮಿಸೈಡ್ ವಾಚ್  http://homicidewatch.org ಎನ್ನುವ ವೆಬ್‌ಸೈಟ್ ಇಂತಹ ಕೊಲೆಗಳ ಬಗ್ಗೆ ತನಿಖಾವರದಿಯನ್ನು ಪ್ರಕಟಿಸಿ,ಕರಿಯ ಜನಾಂಗದ ಗಮನ ಸೆಳೆದಿದೆ.ಸದ್ಯ ದಿನಾಲೂ ಮೂರುಲಕ್ಷ ಜನ ಈ ವೆಬ್‌ತಾಣವನ್ನು ಓದುತ್ತಿದಾರೆ.ಈ ತಾಣವನ್ನು ಲೌರಾ ಮತ್ತು ಕ್ರಿಸ್ ಅನಿಕೋ ದಂಪತಿಗಳು ಆರಂಭಿಸಿ,ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಇತ್ತೀಚಿನವರೆಗೂ,ತಾಣವನ್ನು ನಡೆಸಲು ಸ್ವಂತ ಹಣವನ್ನೇ ಹಾಕಿ ಆರ್ಥಿಕವಾಗಿ ನಿಶಕ್ತರಾಗಿದ್ದರು.ಈಗ ಕೆಲವು ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದಾರೆ.ಇನ್ನೀಗ ತಾಣವು ಕಿರಿಯ ಉತ್ಸಾಹಿ ಪತ್ರಕರ್ತರನ್ನು ವರದಿಗಾರಿಕೆಯ ತರಬೇತಿಯ ಜತೆಗೆ ತಾಣದ ಅಭಿವೃದ್ಧಿಗೆ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ."ಪ್ರತಿ ಮರಣವನ್ನು ದಾಖಲಿಸಿ.ಪ್ರತಿ ಮರಣದ ರಹಸ್ಯ ಬೇಧಿಸಿ.ಸತ್ತವರನ್ನು ಸ್ಮರಿಸಿಕೊಳ್ಳಿ" ಎನ್ನುವುದು ತಾಣದ ಧ್ಯೇಯವಾಕ್ಯವಾಗಿದೆ.
-------------------------------------
ಇಲೆಕ್ಟ್ರಾನಿಕ್ಸಿನಲ್ಲೂ ಸಿಲ್ಕ್‌ಸ್ಮಿತಾ
ಸಿಲ್ಕ್ ಜೈವಿಕ ಪದಾರ್ಥ.ಹಾಗಾಗಿ ಅದು ಸುಲಭವಾಗಿ ಮಣ್ಣಾಗಿಹೋಗುತ್ತದೆ  .ರೇಶ್ಮೆಯು ಅತ್ಯುತ್ತಮ ವಸ್ತ್ರ ತಯಾರಿಕಾ ವಸ್ತುವಾಗಿದೆ.ಆದರಿದನ್ನು ಇತರೆಡೆಯಲ್ಲೂ ಬಳಸಬಹುದು ಎನ್ನುವುದು ಸಂಶೋಧಕರಿಗೆ ಮನದಟ್ಟಾಗುತ್ತಿದೆ.ರೇಷ್ಮೆಯ ನೂಲು ಅದೇ ವ್ಯಾಸದ ಉಕ್ಕಿನ ಎಳೆಗಿಂತ ಶಕ್ತಿಶಾಲಿ.ಇದನ್ನು ನಾರು ಪದಾರ್ಥವಾಗಿ ಮತ್ತು ದೃಡವಾದ ಹಗ್ಗವಾಗಿ ಮಾಡಿ ಬಳಸಬಹುದು.ಸಿಲ್ಕನ್ನು ಲೇಸರ್ ಕಿರಣಗಳ ಉತ್ಪಾದನೆಯಲ್ಲೂ ಬಳಸಬಹುದು ಎನ್ನುವುದೀಗ ತಿಳಿದಿದೆ.ಸಿಲಿಕಾನ್ ತುಂಡಿನಲ್ಲಿ ಮೈಕ್ರೋಮೀಟರ್ ಗಾತ್ರದ ರಂಧ್ರಗಳನ್ನು ಕೊರೆದು,ರಂಧ್ರಗಳನ್ನು ಕನ್ನಡಿಯಂತೆ ಬಳಸಬಹುದು.ತುಂಡಿಗೆ ಸಿಲ್ಕ್ ಹಾಳೆಯನ್ನು ಸುತ್ತಿ,ಅತಿನೇರಳೆ ಕಿರಣಗಳನ್ನು ಹಾಯಿಸಿದಾಗ,ಲೇಸರ್ ಕಿರಣ,ಸಿಲ್ಕ್‌ನಲ್ಲಿ ಉಗಮವಾದುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.ಸಿಲಿಕಾನ್ ಮತ್ತು ಸಿಲ್ಕ್ ಮಣ್ಣಾಗುವ ವಸ್ತುವಾದ್ದರಿಂದ,ಇದನ್ನು ಲೇಸರ್ ತಯಾರಿಕೆಗೆ ಬಳಸಿದರೆ,ಅದನ್ನು ಬಿಸಾಕಿದರೂ,ಪರಿಸರಕ್ಕೆ ಹಾನಿಯಾಗದು.ಇನ್ನು ರೇಷ್ಮೆಯನ್ನು  ಚಿಪ್ ತಯಾರಿಕೆಯಲ್ಲಿ ಬಳಸಿ,ಇಲೆಕ್ಟ್ರಾನಿಕ್ ವಸ್ತುಗಳು ಇ-ವೇಸ್ಟ್‌ಗಳಾಗಿಸುವುದನ್ನು ತಪ್ಪಿಸಬಹುದು.ಈ ಬಗ್ಗೆ ಅಧ್ಯಯನ ನಡೆಯುತ್ತಿದ್ದು,ಬಹುತೇಕ ಯಶಸ್ವಿಯಾಗಿದೆ.
----------------------------------
ಯುಎಸ್‌ಎ ಟುಡೇಗೆ ಹೊಸ ವಿನ್ಯಾಸ
ಅಮೆರಿಕಾದಲ್ಲಿ ಜನಪ್ರಿಯತೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ಯುಎಸ್‌ಟುಡೇ ಪತ್ರಿಕೆ,ಇದೀಗ ಹೊಸ ವಿನ್ಯಾಸ ತನ್ನದಾಗಿಸಿಕೊಂಡಿದೆ.ಹೊಸತಾದ ವಿನ್ಯಾಸದಿಂದ ಗ್ರಾಹಕರ ಮನಗೆದ್ದು,ಇನ್ನಷ್ಟು ಹೆಚ್ಚು ಮಾರಾಟವಾಗಿ,ವಾಲ್‌ಸ್ಟ್ರೀಟ್ ಜರ್ನಲ್‌ಗೆ ಮೊದಲ ಸ್ಥಾನದಿಂದ ಪಲ್ಲಟಮಾಡಲು ಯುಸ್‌ಟುಡೇ ಬಯಸಿರಲೂಬಹುದು.ಹೊಸ ವಿನ್ಯಾಸ,ಆಕರ್ಷಕವಾಗಿ,ಗಮನಸೆಳೆಯಲು ಯಶಸ್ವಿಯಾಗಿದೆ.ಆದರೆ ಇದರ,ಹೊಸ ರೂಪ ಮಾರಾಟ ವೃದ್ಧಿಸುವುದೋ ಎನ್ನುವುದು ಕಾಲವೇ ಹೇಳಲಿದೆ.
---------------------------------------------
 ಗೂಗಲ್ ಫೋನಿಗೆ ಜರ್ಮನಿಯಲ್ಲಿ ನಿಷೇಧದ ಭೀತಿ
ಗೂಗಲ್ ಫೋನಿಗೆ ಜರ್ಮನಿಯಲ್ಲಿ ನಿಷೇಧದ ಭೀತಿ ಎದುರಾಗಿದೆ.ಗೂಗಲ್ ಫೋನುಗಳನ್ನು ಮೊಟೊರೊಲಾ ಕೂಡಾ ತಯಾರಿಸುತ್ತಿದೆ.ಜರ್ಮನಿಯಲ್ಲಿ ಮೊಟೊರೊಲಾದ ಗೂಗಲ್ ಫೋನ್ ಬಗ್ಗೆ ಆಪಲ್ ತಕಾರಾರು ಹೂಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತು.ಆಪಲ್ ಫೋನುಗಳಲ್ಲಿ ಬಳಕೆದಾರ ಫೋನು ಬಳಸುವಾಗ ತೆರೆಯಂಚನ್ನು ತಲುಪಿದಾಗ,ಅಲ್ಲಿಂದ ತೆರೆಯ ಆರಂಭಕ್ಕೆ ತನ್ನಷ್ಟಕ್ಕೆ ಹೋಗುವಂತೆ ವಿನ್ಯಾಸ ಮಾಡಲಾಗಿದೆ.ಇದನ್ನು ಗೂಗಲ್ ಫೋನಿನಲ್ಲೂ ನಕಲಿ ಮಾಡಲಾಗಿದೆ ಎನ್ನುವ,ಆಪಲ್‌ನ ತಕರಾರಿಗೆ ನ್ಯಾಯಾಲಯ  ಹೌದೆಂದಿದೆ.ಹಾಗಾಗಿ,ಈಗ ಆಪಲ್ ಕಂಪೆನಿ,ತನ್ನ ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ಗೂಗಲ್ ಫೋನುಗಳ ಮಾರಾಟವನ್ನು ಜರ್ಮನಿಯಲ್ಲಿ ನಡೆಸಬಾರದು ಎಂದು ಇನ್ನೊಂದು ಕೋರ್ಟಿಗೆ ಮೊರೆಯಿಟ್ಟಿದೆ.ಹಾಗಾಗಿ,ಗೂಗಲ್ ಮೊಟೊರೊಲಾ ಫೋನುಗಳು ಜರ್ಮನಿಯಲ್ಲಿ ನಿಷೇಧಿಸಲ್ಪಡುವ ಅಪಾಯವಿದೆ.ಯಥಾಪ್ರಕಾರ ಗೂಗಲ್ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ತಾನು ಮಾಡಿಲ್ಲ ಎಂದು ಅಪೀಲು ಹೋಗಿದೆ.
-----------------------------------------
ಮನೆಯಿಂದಲೇ ಕಚೇರಿ ಕೆಲಸ ಮಾಡ್ರೀ!
ಐಬಿಎಂ,ಸಿಟ್ರಿಕ್ಸ್,ಕಾಪೆಜ್ಮಿನಿ ಹೀಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಹಿಂದಿನಿಂದಲೂ ಸದಾ ಸುದ್ದಿಯಲ್ಲಿದ್ದ ಮನೆಯಿಂದಲೇ ಕೆಲಸ ಮಾಡುವ ಮಾದರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ.ಐಬಿಎಂ ಕಂಪೆನಿಯು ಭಾರತದ ತನ್ನ ಕಚೇರಿಗಳ ಉದ್ಯೋಗಿಗಳ ಪೈಕಿ,ಶೇಕಡಾ ಐವತ್ತರನ್ನು ಮನೆಯಿಂದಲೇ ಕೆಲಸ ಮಾಡುವ ನೌಕರರನ್ನು ಅವಲಂಬಿಸಿ,ಮಾಡಿಕೊಂಡಿದೆ! ನೌಕರ ಕಚೇರಿಗೆ ಬಂದರೆ,ಆತನಿಗೆ ಕೂರಲು ಸ್ಥಳಬೇಕು.ವಿದ್ಯುತ್,ಕಂಪ್ಯೂಟರ್,ಇಂಟರ್ನೆಟ್ ಸಂಪರ್ಕದ ವ್ಯವಸ್ಥೆಯಾಗಬೆಕು.ಆತನ ಊಟೋಪಚಾರಕ್ಕೆ ಖರ್ಚು ಮಾಡಬೇಕು.ಇದರಲೆಲ್ಲಾ ಕಂಪೆನಿ ಉಳಿತಾಯ ಮಾಡುತ್ತಿದೆ.ಜತೆಗೆ ಕಚೇರಿ ಸ್ಥಳಾವಕಾಶ ಎಷ್ಟು ಹೆಚ್ಚು ಬೇಕಾಗುತ್ತದೆ.ಹಾಗೆಂದು ಮನೆಯಿಂದ ಕೆಲಸ ಮಾಡಿದರೆ,ಕೆಲಸ ಏನೂ ಕಡಿಮೆಯಾಗುವುದಿಲ್ಲ.ತಂಡವಾಗಿ ಜನರು ಕೆಲಸ ಮಾಡಲು ಈಗ ಸಂವಹನ ತಂತ್ರಾಂಶಗಳು ಲಭ್ಯವಾಗಿವೆ.ಪರಸ್ಪರ ಮಾತನಾಡಲು ಫೋನ್,ಇಂಟರ್ನೆಟ್ ಬಳಸಬಹುದು.ಸಮಯದ ಅನುಕೂಲ,ಅಲೆದಾಟ ತಪ್ಪುವುದು,ಹೆಚ್ಚು ಗಮನಕೊಟ್ಟು ಕೆಲಸ ಮಾಡಲೂ ಸಾಧ್ಯವಾಗುತ್ತದೆ.ಆರೋಗ್ಯ ಕೈಕೊಟ್ಟಾಗಲೂ ಮನೆಯಿಂದ ತುರ್ತು ಕೆಲಸಗಳ ಕಡೆ ಗಮನ ಕೊಡಲು ಸಾಧ್ಯವಾಗುವಂತಹ ಅನುಕೂಲತೆಗಳೂ ಇವೆ.ಹಾಗೆಂದು,ಕಚೇರಿಗೆ ಹೋಗಲೇಬಾರದೆಂದೇನಿಲ್ಲ.ಮೊದಲಾಗಿ ಕಚೇರಿಯಲ್ಲಿ ಸ್ಥಳಾವಕಾಶಕ್ಕೆ ಬೇಡಿಕೆ ಸಲ್ಲಿಸಿ,ಕಚೇರಿಗೂ ಹೋಗಬಹುದು.ಕೆಲವೊಮ್ಮೆ ಮನೆಯಿಂದ,ಕೆಲವೊಮ್ಮೆ ಕಚೇರಿಗೆ ಹೋಗಿ ಅನುಕೂಲವಾದಂತೆ ಕೆಲಸ ಮಾಡಲು ಹೆಚ್ಚಿನೆಡೆ ಅನುಮತಿಸುತ್ತಾರೆ.
----------------------------------------------
UDATAVANI
ಈ ಅಂಕಣದ ಬರಹಗಳು http://ashok567.blogspot.com ಬ್ಲಾಗಿನಲ್ಲೂ ಲಭ್ಯವಿವೆ.
*ಅಶೋಕ್‌ಕುಮಾರ್ ಎ