ಮರಗಳ ಮಹತ್ವ

ಮರಗಳ ಮಹತ್ವ

ಬರಹ

ಅಶ್ವತ್ಥಮೇಕಂ ಪಿಚುಮಂದಮೇಕಮ್
ನ್ಯಗ್ರೋಧಮೇಕಂ ದಶ ತಿಂತ್ರಿಣೀಶ್ಚ
ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್
ಧರ್ಮಾರ್ಥಮಾರೋಪ್ಯ ಸ ಯಾತಿ ನಾಕಂ||

ಹೀಗೆಂದರು ಹಿರಿಯರು. ಇದಱರ್ಥ: ಒಂದು ಅರಳಿ ಮರ, ಒಂದು ಬೇವಿನ ಮರ, ಒಂದು ಆಲದ ಮರ, ಹತ್ತು ಹುಣಿಸೇಮರ ಹಾಗೂ ಸಾಕಷ್ಟು ಬೇಲ, ಬಿಲ್ವ, ನೆಲ್ಲಿ ಮತ್ತು ಮಾವಿನ ಮರಗಳನ್ನು ಧರ್ಮಾರ್ಥಕ್ಕಾಗಿ (ತನ್ನದಲ್ಲದ ಇತರರ ಒಳಿತಿಗಾಗಿ) ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ.

ಇಲ್ಲಿ ಉಲ್ಲೇಖಿಸಿದ ವೃಕ್ಷಗಳ ಬಗ್ಗೆ ವಿಚಾರಿಸಿ ನೋಡಿದಾಗ ನಮ್ಮ ಹಿರಿಯರಿಗೆ ಮರಗಳ ಮಹತ್ವದ ಅಱಿವಿರುವುದು ಗೊತ್ತಾಗುತ್ತದೆ. ಈ ಮೇಲಿನ ಎಲ್ಲಾ ವೃಕ್ಷಗಳು ಬಹುವರ್ಷೀಯ (Perrennial) ಸಸ್ಯಗಳು. ಅರಳಿ, ಆಲ, ಬೇವು ನೆರಳನ್ನು ಕೊಡುವ ಮರಗಳು. ಇವುಗಳು ಇಂಗಾಲದ ಡೈ ಆಕ್ಸೈಡ್‌ನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳವುಗಳು. ಹಾಗೆಯೇ ಈ ವೃಕ್ಷಗಳು ಓಜೋನ್ ಪದರವನ್ನು ಸಂರಕ್ಷಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಹಾಗೆಯೇ ನೆಲದಲ್ಲಿ ನೀರನ್ನು ಹಿಡಿದಿಡುತ್ತವೆ. ಬಿಲ್ವ ಮರವು ಪೂಜೆಗೆ ಶ್ರೇಷ್ಠವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ. ಬೇಲವು ಬೇಸಿಗೆಯಲ್ಲಿ ತಂಪಾದ ಪಾನೀಯ ತಯಾರಿಸಲು ಬೇಕಾದ ಹಣ್ಣುಗಳನ್ನು ಒದಗಿಸುತ್ತದೆ. ನೆಲ್ಲಿಯು ಔಷಧೀಯ ಗುಣ ಹೊಂದಿರುವ ಕಾಯಿಗಳನ್ನು ಬಿಡುತ್ತದೆ. ನೆಲ್ಲಿಕಾಯಿಗಳನ್ನು jam ಮತ್ತು ಉಪ್ಪಿನಕಾಯಿಗಳ ತಯಾರಿಕೆಯಲ್ಲಿ ಬೞಸುತ್ತಾರೆ. ಮಾವಿನ ಹಣ್ಣು ಹಣ್ಣುಗಳ ರಾಜನೇ ಆಗಿದ್ದು ರುಚಿಯಾದ ಹಣ್ಣುಗಳಿಗೆ ಪ್ರಸಿದ್ಧವಾಗಿದೆ. ಈ ಹಣ್ಣುಗಳಿಂದ ರುಚಿಯಾದ ಪಾನೀಯವನ್ನು ತಯಾರಿಸುತ್ತಾರೆ. ಹಾಗೆಯೇ ಮಾವಿನ ಹಣ್ಣುಗಳಿಂದಲೂ jam ತಯಾರಿಸುತ್ತಾರೆ. ಕೆಲವು ಜಾತಿಯ ಮಾವಿನ ಕಾಯಿಗಳನ್ನು ಉಪ್ಪಿನಕಾಯಿ ತಯಾರಿಸಲು ಬೞಸುತ್ತಾರೆ. ಹುಣಿಸೇಮರಗಳು ಬಯಲುಸೀಮೆಯಲ್ಲಿ ನೆರಳನ್ನು ಕೊಡುವುದರ ಜೊತೆಗೆ ಇದರ ಹಣ್ಣನ್ನು ಎಲ್ಲರಿಗೂ ಗೊತ್ತಿರುವಂತೆ ಅಡಿಗೆಯಲ್ಲಿ ರುಚಿಗಾಗಿ ಬೞಸುತ್ತಾರೆ. ಹೀಗಾಗಿ ನಮ್ಮ ಹಿರಿಯರಿಗೆ ಮರಗಳ ಮಹತ್ವ ಗೊತ್ತಿರುವುದು ಸ್ಪಷ್ಟವಾಗುತ್ತದೆ.

ಹಾಗಾಗಿ ನಾವು ನಮ್ಮ ಹಿರಿಯರು ಮರಗಳ ಬಗ್ಗೆ ತಿಳಿದಿದ್ದ ಮಹತ್ವವನ್ನು ಸರಿಯಾಗಿ ಅಱಿಯುವುದು ತೀರಾ ಅವಶ್ಯಕವಾಗಿದೆ ಹಾಗೂ ಈ ಒಂದು ಒಳ್ಳೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.