ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!

ಬರಹ

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
ದೃಶ್ಯ 1
[ ಬ್ಯಾಂಕ್ ಒಂದರಲ್ಲಿ ತುಂಬಾ ಜನ ಕಾಯುತ್ತಿದ್ದರು. ಅಲ್ಲಿನ ಅಕೌಂಟೆಂಟ್ ಇನ್ನೂ ಬಂದಿರಲಿಲ್ಲ ]
ವ್ಯಕ್ತಿ1:- ನನಗೆ officeಗೆ ಹೊತ್ತಾಗ್ತಾ ಇದೆ. ಏನು ಮಾಡಲಪ್ಪ?
ವ್ಯಕ್ತಿ2:- ಹೌದು ನನಗೂ ಹೊತ್ತಾಗ್ತಾ ಇದೆ.
ವ್ಯಕ್ತಿ3:- ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುವ ಅಕೌಂಟೆಂಟ್ ಇವತ್ತು ಯಾಕೆ ಲೇಟೋ!
ವ್ಯಕ್ತಿ4:- ಹೌದು ಆದರ್ಶ ವ್ಯಕ್ತಿ ಅವರು. ಶ್ರಮ ಜೀವಿ. ಸ್ವಪ್ರಯತ್ನದಿಂದ ಮುಂದೆ ಬಂದ ವ್ಯಕ್ತಿ.
ವ್ಯಕ್ತಿ1:- ಏನು ತೊಂದರೆಯಾಗಿದೆಯೋ ಪಾಪ
ಎಸ್.ಎಲ್.ಭೈರಪ್ಪನವರು:- ಅಬ್ಭಾ! ಅವರಿಂದ ತೊಂದರೆ ಆಗುತ್ತಿದ್ದರೂ ಈ ಜನಗಳು ಅವರಲ್ಲಿಟ್ಟಿರುವ ಪ್ರೀತಿ, ಗೌರವ ನಿಜಕ್ಕೂ ಅಪಾರ. ಅವರ ಸೇವಾ ಮನೋಭಾವ ನಿಜವಾಗಿಯೂ ಮೆಚ್ಚಬೇಕಾದ್ದೆ.
ವ್ಯಕ್ತಿ2:- ಅರೆ ತಾವಾ ಸರ್! ನೋಡಿ, ಎಸ್ಸೆಲ್ ಭೈರಪ್ಪನವರು. ಸರ್, ತಮ್ಮ ಎಲ್ಲಾ ಕಾದಂಬರಿಗಳನ್ನೂ ಓದಿದೀನಿ ಸರ್.
ವ್ಯಕ್ತಿ3:- ಓಹ್ ಎಸ್ಸೆಲ್ ಭೈರಪ್ಪನವರೆ! ನಿಮ್ಮನ್ನು ನೋಡಿ ತುಂಬಾ ಖುಶಿಯಾಯ್ತು ಸರ್. ತಾವೂ ಇಲ್ಲಿ ಅಕೌಂಟ್ ಇಟ್ಟಿದೀರಾ ಸರ್
ವ್ಯಕ್ತಿ4:- ನಾವೆಲ್ಲಾ ನಿಮ್ಮ fans ಸರ್.
ಎಸ್ಸೆಲ್ ಭೈರಪ್ಪ:- ನಿಮ್ಮೆಲ್ಲರಿಗೂ thanksರಪ್ಪ. ನಿಮ್ಮೆಲ್ಲರ ಪ್ರೀತಿಗೆ ನನ್ನ ಮನಸ್ಸು ತುಂಬಿ ಬಂದಿದೆ. ಹಾಗೆಯೇ ಇಲ್ಲಿನ ಅಕೌಂಟೆಂಟ್ ಮೇಲೆ ನೀವಿಟ್ಟಿರುವ ಪ್ರೀತಿ, ಗೌರವ, ವಿಶ್ವಾಸ ಕೂಡ ನನ್ನನ್ನು ಧಂಗುಬಡಿಸಿದೆ.
ವ್ಯಕ್ತಿ1:- ಹೌದು ಸ್ವಾಮಿ. ಅವರ ಸೇವೆ ನಿಜವಾಗಿಯೂ ಮೆಚ್ಚುವಂತಹುದೇ. ಅವರು ಮನೆ ಮನೆಗೆ ಹೋಗಿ ಖಾತೆ ತೆಗೆಯುವಂತೆ ಪ್ರಾರ್ಥಿಸಿ ಜನ ಮೆಚ್ಚುವತೆ ಸೇವೆ ಸಲ್ಲಿಸುವುದಾಗಿ ತಿಳಿಸುತ್ತಾರೆ.
ವ್ಯಕ್ತಿ 2:- ಅಷ್ಟೇ ಅಲ್ಲ ಬೀದಿ ಕೊನೆಯಲ್ಲಿ ತರಕಾರಿ ಮಾರುವವರು, ಗಾರೆ ಕೆಲಸದವರು, ಕೂಲಿಕಂಬಳಿಯವರು ಇಂಥವರನ್ನೆಲ್ಲಾ ಹಿಡಿದು ಖಾತೆ ತೆಗೆಸುತ್ತಾರೆ
ವ್ಯಕ್ತಿ3:- ಅವರಿಗೆಲ್ಲಾ ಚೆಕ್, ಚಲಾನ್ ಬರೆದುಕೊಡಲು ನಮ್ಮಂತಹಾ ಯಾರದ್ದಾದರೂ ಸಹಾಯ ಪಡೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರ ಉದ್ದೇಶ ಎಂದರೆ ಮಧ್ಯಮ ಹಾಗೂ ಕೆಳವರ್ಗದ ಜನರೂ ಸಹಾ ತಮ್ಮ ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಲಿ ಎಂಬುದೇ.
[ಅಷ್ಟರಲ್ಲೇ ಅಕೌಂಟೆಂಟ್ ಬಂದರು. ಬರುವಾಗಲೇ ಕೈಮುಗಿದು ಕ್ಷಮೆ ಕೇಳುತ್ತಲೇ ಬರುತ್ತಾರೆ]
ಅಕೌಂಟೆಂಟ್:- ದಯವಿಟ್ಟು ಕ್ಷಮಿಸಿ. ನಾನು ದಿನಾ ಬರುವ ಸಿಟಿ ಬಸ್ ಕೆಟ್ಟು ಹೋಯಿತು.ಹತ್ತು ನಿಮಿಷ ಕಾದೆ ಆದರೂ ಬೇರೆ ಬಸ್ ಬರಲಿಲ್ಲ. ಇನ್ನು ತಡವಾಗಬಹುದು ಎಂದು ಆಟೋ ಹಿಡಿದು ಬಂದೆ. ಆದರೂ ತಡವಾಯಿತು. ದಯವಿಟ್ಟು ಎಲ್ಲರೂ ಕ್ಷಮಿಸಬೇಕು. ಆದಷ್ಟು ಬೇಗ ಕೆಲಸ ಮುಗಿಸಿಕೊಡುತ್ತೇನೆ ಬನ್ನಿ.
ವ್ಯಕ್ತಿ4:- ನೋಡಿ ಎಂಥಾ ವಿನಯ ಪೂರ್ವಕ ನಡವಳಿಕೆ. ಎಷ್ಟಾದರೂ ದೊಡ್ಡವರ ಮಗ ದೊಡ್ಡವರಾಗಿಯೇ ಉಳಿಯುತ್ತಾರೆ.
ಎಸ್ಸೆಲ್ ಭೈರಪ್ಪ:- ಯಾರ ಮಗ ಈತ?
ವ್ಯಕ್ತಿ4:- ನಿಮಗೆ ಗೊತ್ತಿಲ್ಲವೇ? ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಗ.
ಎಸ್ಸೆಲ್ ಭೈರಪ್ಪ:- ಹೌದೇ! ಅವರು ನಮ್ಮ ಮನೆಗೆ ಬಂದು ಖಾತೆ ತೆಗೆಯುವಂತೆ ಹೇಳಿದಾಗ ಇವರನ್ನು ಎಲ್ಲೋ ನೋಡಿದಂತೆ ಇದೆಯಲ್ಲ ಎಂದು ಯೋಚಿಸಿದ್ದೆ. ನಾನು ನೋಡಿದ್ದು ಇವರನ್ನಲ್ಲ. ಇವರ ತಂದೆಯವರನ್ನ್ನು, ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು. ಅವರ ಫೋಟೋಗಳನ್ನು. ಇವರ ಮುಖ ತಂದೆಯ ಮುಖದಂತೆಯೇ ಇದೆ. ಬರೆ ಮುಖ ಮಾತ್ರವಲ್ಲ, ಗುಣವೂ ತಂದೆಯಂತೆಯೇ ಇರುವಂತಿದೆ.
[ಎಲ್ಲರ ಕೆಲಸವು ಮುಗಿದಿತ್ತು. ಯೋಚನೆಯಲ್ಲಿ ಮುಳುಗಿದ್ದ ಭೈರಪ್ಪನವರನ್ನು ಅಕೌಂಟೆಂಟ್ ಕೂಗಿ ಕರೆದರು. ಇವರು ಇನ್ನೂ ಚಿಂತೆಯಲ್ಲೇ ಇದ್ದ ಕಾರಣ ಗಮನ ಅವರ ಕಡೆ ಹೋಗಲಿಲ್ಲ. ಅವರೇ ಎದ್ದು ಬಂದರು.]
ಅಕೌಂಟೆಂಟ್:- ನಿಮಗೆ officeಗೆ ತಡವಾಗಲಿಲ್ಲವೇ? ಬನ್ನಿ ನಿಮ್ಮ ಕೆಲಸ ಮುಗಿಸಿಕೊಡುತ್ತೇನೆ.
ಎಸ್ಸೆಲ್ ಭೈರಪ್ಪ:- ಪರವಾಗಿಲ್ಲ. ನನಗೇನೂ ತಡವಾಗಿಲ್ಲ. ನೀವು ತಡವಾಗಿ ಬಂದು ಆತಂಕಗೊಂಡರಲ್ಲ. ನೀವೇಕೆ ಒಂದು ಸ್ಕೂಟರ್ ಕೊಂಡುಕೊಳ್ಳಬಾರದು?
ಅಕೌಂಟೆಂಟ್:- ಸ್ಕೂಟರ್ ಸಾಲಕ್ಕೆ ಅರ್ಜಿ ಹಾಕಿದ್ದೆ. ಬ್ಯಾಂಕ್ ಮಂಜೂರು ಮಾಡಿದೆ. ಸ್ಕೂಟರ್ ಕಂಪೆನಿಯಲ್ಲಿ ನನ್ನ ಸರದಿ ಬರಬೇಕಲ್ಲ. ಕಾಯುತ್ತಿದ್ದೇನೆ.
ಎಸ್ಸೆಲ್ ಭೈರಪ್ಪ:- ತಮ್ಮ ತಂದೆ ಇಷ್ಟು ದೊಡ್ಡ ವ್ಯಕ್ತಿ. ಅವರ influenceನಲ್ಲಿ ನೀವು ಬೇಗ ತೆಗೆದುಕೊಳ್ಳಬಹುದಾಗಿತ್ತಲ್ಲ.
ಅಕೌಂಟೆಂಟ್:- ನಮ್ಮ ತಂದೆ ಮಹಾ ಆದರ್ಶ ಪುರುಷರು. ನಾವು ಓದುತ್ತಿದ್ದಾಗಲೇ ನಮ್ಮ ತಂದೆಯವರು ಕೇಂದ್ರ ಮಂತ್ರಿಗಳಾಗಿದ್ದರು. ಆದರೆ ಒಂದೇ ಒಂದು ದಿನವೂ ನಮ್ಮನ್ನು ಅವರು ಸರ್ಕಾರಿ ಕಾರು ಹತ್ತಲು ಬಿಡಲಿಲ್ಲ. ಮನೆಯಲ್ಲಿ ಊಟ ಮಾಡಿಕೊಂಡು ಚಪಾತಿ ಡಬ್ಬಿಯನ್ನು ಚೀಲಕ್ಕೆ ಹಾಕಿಕೊಂಡು ನಾವೆಲ್ಲಾ ನಗರ ಸಾರಿಗೆಯ ಬಸ್ಸಿನಲ್ಲಿ ಕಾಲೇಜು ಸ್ಕೂಲ್ಗಳಿಗೆ ಹೋಗುತ್ತಿದ್ದೆವು. ನಮ್ಮ ವಿದ್ಯಾಭ್ಯಾಸ ಮುಗಿದಮೇಲೆ ನಾವೇ ಪತ್ರಿಕೆಗಳಲ್ಲಿ ಜಾಹೀರಾತು ನೋಡಿ ನೌಕರಿಗೆ ಅರ್ಜಿ ಹಾಕಿಕೊಂಡೆವು. ನಿಮಗೆ ಗೊತ್ತಾ?
ಎಸ್ಸೆಲ್ ಭೈರಪ್ಪ:- ಏನದು?
ಅಕೌಂಟೆಂಟ್:- ನಮ್ಮ ತಂದೆಯವರು ನಮಗೆ ಆಜ್ಞಾಪಿಸಿದ್ದರು. ಯಾವಾಗಲೂ ಎಂತಹಾ ಸಂದರ್ಭದಲ್ಲೂ ಅವರ ಹೆಸರನ್ನು ನಮ್ಮ ಸ್ವಾರ್ಥಕ್ಕಾಗಿ ನಾವು ಬಳಸಿಕೊಳ್ಳಬಾರದೆಂದು ತಿಳಿಸಿದ್ದರು. ನಾವು ನೌಕರಿಗಾಗಿ ಹುಡುಕಾಡುವ ಸಂದರ್ಭದಲ್ಲೂ ಉದ್ಯೋಗ ನೀಡುವಾತನಿಗೆ ನಾವು ಯಾರ ಮಕ್ಕಳೆಂಬುದು ತಿಳಿಯಬಾರದೆಂಬುದು ಅವರ ಆಜ್ಞೆಯಾಗಿತ್ತು. ನಾನು ಬಿ ಕಾಂ ಮುಗಿಸಿದ ಮೇಲೆ ಈ ಬ್ಯಾಂಕಿನಲ್ಲಿ ಗುಮಾಸ್ತ ಕೆಲಸವನ್ನು ನನ್ನ ಸ್ವಪ್ರಯತ್ನದಿಂದಲೇ ಸಂಪಾದಿಸಿಕೊಂಡೆ. ಬ್ಯಾಂಕಿನ ಪರೀಕ್ಷೆಗಳಲ್ಲಿ ಪಾಸು ಮಾಡಿ ಐದು ವರ್ಷ ಸೇವೆ ಸಲ್ಲಿಸಿದ ಮೇಲೆ ಇದೀಗ ಅಕೌಂಟೆಂಟಾಗಿ ಬಡ್ತಿ ದೊರಕಿದೆ.
ಎಸ್ಸೆಲ್ ಭೈರಪ್ಪ:- ಈ ಕಾರಣಗಳಿಂದಲೇ ನಿಮ್ಮ ತಂದೆಯವರು ಎಂದರೆ ನಮ್ಮ ದೇಶದಲ್ಲಿ ಎಲ್ಲರಿಗೂ ಗೌರವ. ನೀವು ಶಾಸ್ತ್ರಿಗಳ ಮಗ ಎಂದು ನನಗೆ ತಿಳಿದೇ ಇರಲಿಲ್ಲ. ನೀವು ನಿಮ್ಮ ಹೆಸರಿನೊಂದಿಗೆ ಶಾಸ್ತ್ರಿ ಎಂಬ ಹೆಸರನ್ನು ಯಾಕೆ ಇಟ್ಟುಕೊಂಡಿಲ್ಲ?
ಅಕೌಂಟೆಂಟ್:- ಮೊದಲನೆಯದಾಗಿ ಅದು ನಮ್ಮ family ಹೆಸರಾಗಲಿ ಸರ್ ನೇಮಾಗಲಿ ಅಲ್ಲ. ಅದು ನಮ್ಮ ತಂದೆಯವರಿಗೆ ಕಾಶಿ ವಿಶ್ವ ವಿದ್ಯಾನಿಲಯದಲ್ಲಿ ದೊರಕಿದ ಪದವಿ. ಎರಡನೆಯದಾಗಿ ಅದನ್ನು ನಾವು ಸೇರಿಸಿಕೊಂಡರೆ ನಾವು ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಕ್ಕಳು ಎಂಬುದು ಎಲ್ಲಿ ಎಲ್ಲರಿಗೂ ತಿಳಿದು ಬಿಡುತ್ತದೋ ಎಂಬ ಅನುಮಾನ.
ಎಸ್ಸೆಲ್ ಭೈರಪ್ಪ:- ಶಾಸ್ತ್ರಿಗಳಂತವರು ಬದುಕಿ ಪ್ರಧಾನಿಯಾಗಿ ಮುಂದುವರೆದಿದ್ದರೆ ನಮ್ಮ ರಾಷ್ಟ್ರದ ರಾಜಕೀಯ ಹಾಗೂ ಸಾಮಾಜಿಕ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಇಷ್ಟು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲವೇನೋ?
ಅಕೌಂಟೆಂಟ್:- ಏನು ಮಾಡುವುದು ಸರ್? ನಮ್ಮ ಅದೃಷ್ಟ ಅಷ್ಟೇ ದಿನಕ್ಕೆ ಇತ್ತೇನೋ. ನಮ್ಮ ತಂದೆಗೆ ಇದ್ದ ಮುಖ್ಯ ಗುಣಗಳೆಂದರೆ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆ. ಒಮ್ಮೆ ನಾನು ಚಿಕ್ಕವನಿದ್ದಾಗ ನಾನು ವಿಷಮ ಶೀತ ಜ್ವರದಿಂದ ನರಳುತ್ತಿದ್ದೆ……
[Flash Back] ದೃಶ್ಯ 2
ಜೈಲಿನ ಅಧಿಕಾರಿ:- ಶಾಸ್ತ್ರಿಗಳೇ, ತಮ್ಮ ಮಗ ತೀವ್ರ ಅಸ್ವಸ್ಥತೆಯಿಂದ ನರಳುತ್ತಿದ್ದಾನಂತೆ. ತಮ್ಮನ್ನು ತಾತ್ಕಾಲಿಕವಾಗಿ ಜೈಲಿನಿಂದ ಹೊರಕ್ಕೆ ಬಿಡುತ್ತಿದ್ದೇವೆ. ಆದರೆ ತಾವು ಜೈಲಿನಿಂದ ಹೊರಗಿರುವಂತಹಾ ಸಂದರ್ಭದಲ್ಲಿ ತಾವು ಯಾವ ರೀತಿಯ ಚಳುವಳಿಯಲ್ಲೂ ಭಾಗವಹಿಸುವುದಿಲ್ಲ ಎಂದು ಬರೆದುಕೊಡಬೇಕು.
ಶಾಸ್ತ್ರಿ:- ತಾತ್ಕಾಲಿಕವಾಗಿ ಜೈಲಿನ ಹೊರಗಿದ್ದಾಗ ಚಳುವಳಿಯಲ್ಲಿ ಭಾಗವಹಿಸುವುದು ನನ್ನ ಉದ್ದೇಶವಲ್ಲವಾದರೂ ನಾನು ಹಾಗೆಂದು ಬರೆದುಕೊಡಲಾರೆ. ಹಾಗೆ ಬರೆದುಕೊಡುವುದು ನನ್ನ ಆತ್ಮಗೌರವಕ್ಕೆ ಕುಂದು.
ಜೈಲ್ ಅಧಿಕಾರಿ:-ತಾವು ಸತ್ಯವಂತರು ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ.ಹೀಗಾಗಿ ನಾವು ನಮ್ಮ ಈ ಶರತ್ತಿನ ಬಗ್ಗೆ ಹೆಚ್ಚು ಒತ್ತಾಯ ಮಾಡುವುದಿಲ್ಲ. ನಿಮಗೆ 15 ದಿನಗಳ ಅವಧಿಗೆ ಹೊರಗೆ ಬಿಡುತ್ತೇವೆ.
ದೃಶ್ಯ 3
ಶಾಸ್ತ್ರಿ:- ಕಂದ ನಿನ್ನನ್ನು ನೋಡುವ ಸಲುವಾಗಿಯೇ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ಹೊಂದಿ ಬಂದಿದ್ದೇನೆ. ಇನ್ನೂ15 ದಿನ ನಿನ್ನೊಂದಿಗೆ ಇರುತ್ತೇನೆ.
ಮಗು:- ಸರಿ ಅಪ್ಪಾಜಿ ನನಗೆ ಸಂತೋಷವೇನೋ ಆಗುತ್ತಿದೆ. ಆದರೆ…. ಆದರೆ….. ನಾನು ಪೂರ್ಣ ಗುಣವಾಗುವ ವರೆಗೂ ಇರುವುದಿಲ್ಲವೇ ನೀವು?
ಶಾಸ್ತ್ರಿ:- ನನಗೆ ಇರಬೇಕೆಂಬ ಆಸೆಯೇನೋ ಇದೆ. ಆದರೆ ನನ್ನನ್ನು ನಂಬಿ ಬಿಡುಗಡೆ ಮಾಡಿರುವ ಜೈಲ್ ಅಧಿಕಾರಿಯನ್ನು ಇಕ್ಕಟ್ಟಿಗೆ ಸಿಕ್ಕಿಸಲಾರೆ. ಹೇಗೂ ನನಗೆ 15 ದಿನಗಳ ಅವಕಾಶ ನೀಡಿದ್ದಾರಲ್ಲ ಅಷ್ಟರೊಳಗೆ ನೀನು ಹುಷಾರಾಗಿ ಬಿಡುತ್ತೀಯ. ಚಿಂತಿಸಬೇಡ.
[ ಆದರೆ 15ನೇ ದಿನದ ಹೊತ್ತಿಗೂ ಮಗ ಹುಷಾರಾಗಿರಲಿಲ್ಲ.]
ಶಾಸ್ತ್ರಿ:- ನಾನು ಹೊರಡುವ ದಿನ ಬಂದರೂ ನಿನ್ನ ಜ್ವರ ಇಳಿಯಲಿಲ್ಲವಲ್ಲ ಏನು ಮಾಡುವುದು?
ಮಗು:- (ಅಳುತ್ತಾ) ಹೋಗಬೇಡಿ ಅಪ್ಪಾಜಿ ನೀವು ನನ್ನೊಂದಿಗಿರಬೇಕು.
ಶಾಸ್ತ್ರಿ:- ಇಲ್ಲ ಕಂದ ನಾನು ಉಳಿಯುವಂತಿಲ್ಲ. ನಾನು ಹೊರಡಲೇಬೇಕು.
ಮಗು:- ಅಪ್ಪಾಜಿ ಹೋದ ವರ್ಷ ಅಕ್ಕನಿಗೆ ಹುಷಾರಾಗಿಲ್ಲದಾಗಲೂ ನೀವು ಜೈಲಿನಲ್ಲಿ ಇದ್ದಿರಿ. ಆಗಲೂ ಅವಳು ಬದುಕಿರುವಾಗ ಬಂದು ನೋಡಲಾಗಲಿಲ್ಲ.
ಶಾಸ್ತ್ರಿ:- ಹೌದು ಕಂದ ನಾನು ಬರುವುದರೊಳಗೆ ಸಾವು ಅವಳನ್ನು ಬಲಿ ತಗೆದುಕೊಂಡಿತ್ತು.
ಮಗು:- ನನ್ನ ಕಥೆಯೂ ಹಾಗೇ ಆದರೆ……
ಶಾಸ್ತ್ರಿ:- ಹಾಗೆ ಹೇಳಬೇಡ ಕಂದ. ನಿನಗೆ ಏನೂ ಆಗುವುದಿಲ್ಲ. ನಮ್ಮ ಒಳ್ಳೆಯತನ ನಮ್ಮನ್ನು ಕಾಪಾಡಲಿ. ನಾನು ಹೋಗಿ ಬರುತ್ತೇನೆ.
ದೃಶ್ಯ 4
ಅಕೌಂಟೆಂಟ್:- ಎಂಥ ಸಮಯದಲ್ಲೂ ತಮ್ಮ ಗುರಿಯನ್ನು ಬಿಟ್ಟುಕೊಡದ ನಿಶ್ಚಲತೆ ನಮ್ಮ ತಂದೆಯವರಲ್ಲಿತ್ತು. ತಮ್ಮ ಸ್ವಂತ ಸುಖವನ್ನು ಕಡೆಗಣಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮನಃಪೂರ್ವಕವಾಗಿ ದುಮುಕಿದವರು. ಮಗಳ ಸಾವು, ಮಗನ ಖಾಯಿಲೆ, ಬಡತನ ಯಾವುದೂ ಅವರನ್ನು ಅಡ್ಡ ಹಾದಿ ಹಿಡಿಯುವಂತೆ ಮಾಡಲಿಲ್ಲ. ಅಷ್ಟು ಮನೋಬಲ ಅವರಲ್ಲಿತ್ತು.
ಎಸ್ಸೆಲ್ ಭೈರಪ್ಪ:- ಹೌದು . ಭಾರತದ ಪ್ರಧಾನಿಯಾದಾಗಲೂ ಸಹ ವೈಭವದ ಜೀವನಕ್ಕೆ ಎಂದೂ ಮನ ಸೋತವರಲ್ಲ.
ಅಕೌಂಟೆಂಟ್:- ನಮ್ಮ ತಂದೆಯವರು ರೈಲ್ವೇ ಮಂತ್ರಿಯಾಗಿದ್ದಾಗ ಮೂರನೇ ದರ್ಜೆಯ ಹಾಗೂ ಮೊದಲನೇ ದರ್ಜೆಯ ಪ್ರಯಾಣಿಕರಿಗೂ ಇರುವ ಸೌಲಭ್ಯಗಳ ಅಂತರ ಅಜಗಜಾಂತರ. ಮೂರನೇ ದರ್ಜೆಯನ್ನು ತೆಗೆದು ಹಾಕಿ ಎರಡೇ ದರ್ಜೆಗಳು ಇರುವಂತೆ ಮಾಡಿದರು. ಹಾಗೆಯೇ ಎರಡನೇ ದರ್ಜೆಯಲ್ಲಿ ಪ್ರಯಾಣ ಮಾಡುವವರಿಗೂ ಸಾಕಷ್ಟು ಸೌಲಭ್ಯಗಳನ್ನು ಹೆಚ್ಚಿಸಿದರು.
ಎಸ್ಸೆಲ್ ಭೈರಪ್ಪ:- ಹೌದು ರೈಲ್ ವೇ ಆಡಳಿತದ ಸುಧಾರಣೆ, ಕಳ್ಳತನ ನಿವಾರಣೆ ಇವಕ್ಕಾಗಿ ಶ್ರಮಿಸಿದರೆಂದು ನಾನೂ ಕೇಳಿದ್ದೆ.
ಅಕೌಂಟೆಂಟ್:- ತಮ್ಮ ಇಲಾಖೆಯಲ್ಲಿ ಏನೇ ತಪ್ಪಾದರೂ ಅದಕ್ಕೆ ತಾವೇ ಹೊಣೆ ಎಂಬ ಮಟ್ಟಿಗೆ ಇವರು ಅದರಲ್ಲಿ ಒಂದಾಗುತ್ತಿದ್ದರು. ಇವರು ರೈಲ್ವೇ ಮಂತ್ರಿಯಾಗಿದ್ದಾಗ ಒಮ್ಮೆ ತಮಿಳು ನಾಡಿನ ಅರಿಯಲೂರಿನ ಬಳಿ ಸಂಭವಿಸಿದ ಅಪಘಾತದಲ್ಲಿ 144 ಜನ ಮಡಿದರು. ಇದಕ್ಕೆ 3 ತಿಂಗಳ ಮುಂಚೆ ಮೆಹ್ಬೂಬ್ ನಗರದ ಬಳಿ ಸಂಭವಿಸಿದ ಅಪಘಾತವೊಂದು 112 ಜನರ ಆಹುತಿ ತೆಗೆದುಕೊಂಡಿತು. ಈ ಅಪಘಾತಗಳಿಗೆ ನಮ್ಮ ತಂದೆಯವರು ಎಳ್ಳಷ್ಟಾದರೂ ಕಾರಣವಲ್ಲ. ಆದರೂ……
ದೃಶ್ಯ 5
ಶಾಸ್ತ್ರಿ:- ಈ ನೋವನ್ನು ನಾನು ಸಹಿಸಲಾರೆ. ಮೆಹಬೂಬ್ ನಗರದ ಅಪಘಾತ ಸಂಭವಿಸಿದಾಗಲೇ ನಾನು ನನ್ನ ಮಂತ್ರಿ ಪದವಿಗೆ ರಾಜಿನಾಮೆ ಸಲ್ಲಿಸಿದೆ. ಆದರೆ ತಾವು ಅದನ್ನು ಒಪ್ಪಲಿಲ್ಲ. ಈಗ ಅರಿಯಲೂರು ದುರಂತ ಸಂಭವಿಸಿದೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ನಾನು ಅಧಿಕಾರದಿಂದ ಹೋಗಲೇಬೇಕು. ಬಿಟ್ಟುಕೊಡಿ.
ನೆಹರು:- ತಮ್ಮ ಪ್ರಾಮಾಣಿಕತೆ ಮೇಲ್ಮಟ್ಟದ್ದು. ಆದರೂ ತಮ್ಮ ತಪ್ಪಿಲ್ಲದೇ ತಾವು ರಾಜಿನಾಮೆ ಕೊಡುವುದು ಅದಾವ ನ್ಯಾಯ? ದಯವಿಟ್ಟು ತಮ್ಮ ರಾಜಿನಾಮೆಯನ್ನು ಹಿಂದಕ್ಕೆ ತಗೆದುಕೊಳ್ಳಿ.
ಶಾಸ್ತ್ರಿ:- ನಾನು ಮಂತ್ರಿಯಾಗಿರುವಾಗ ಈ ಅಸಂಭವ ನಡೆದಿದೆ. ಇದರ ಹೊಣೆಗಾರಿಕೆ ನನ್ನದೇನೇ. ಈ ಹೊಣೆಯಿಂದ ನಾನು ತಪ್ಪಿಸಿಕೊಳ್ಳಲಾರೆ. ದಯವಿಟ್ಟು ನನ್ನ ರಾಜಿನಾಮೆಯನ್ನು ಸ್ವೀಕರಿಸಿ.
ದೃಶ್ಯ 6
ನಿರೂಪಕ 1:- ಹೀಗೆ ಅವರು ಯಾವ ಇಲಾಖೆಯಲ್ಲೇ ಇರಲಿ ಅದರ ನೈತಿಕ ಹೊಣೆಯೂ ತಮ್ಮದೇ ಎಂದು ಭಾವಿಸಿದ್ದರು. ಚೈನಾ ಮತ್ತು ಪಾಕಿಸ್ತಾನ ಕಿರುಕುಳ ಕೊಡುತ್ತಿದ್ದಾಗ ಭಾರತದ ಜನರಲ್ಲಿ ಐಕ್ಯತೆಯನ್ನು ಸಾಧಿಸಲು ಶಾಸ್ತ್ರಿಗಳವರು ಗೃಹ ಮಂತ್ರಿಯಾಗಿ ಬಹಳ ಶ್ರಮಿಸಿದರು. ನಂತರ ಪ್ರಧಾನ ಮಂತ್ರಿಯಾಗಿ ಸಲ್ಲಿಸಿದ ಸೇವೆಯೂ ಕಡಿಮೆಯೇನಲ್ಲ. ಪಾಕಿಸ್ತಾನದ ಬೆದರಿಕೆಗಳಿಗೆ ಅವರ ಉತ್ತರ ನೋಡಿ.
ಶಾಸ್ತ್ರಿ:- ಬಲ ಪ್ರಯೋಗಕ್ಕೆ ಬಲ ಪ್ರಯೋಗದಿಂದಲೇ ಉತ್ತರಿಸುತ್ತೇವೆ. ನಾವು ನಾಶವಾದರೂ ಚಿಂತೆಯಿಲ್ಲ ಆದರೆ ನಮ್ಮ ದ್ವಜದ ಕೀರ್ತಿಗೆ ಕಳಂಕ ಹತ್ತಲು ಅವಕಾಶ ಕೊಡುವುದೇ ಇಲ್ಲ.
ನಿರೂಪಕ 2:- ಇದೇ ಸಮಯದಲ್ಲಿ ಚೈನಾದಿಂದ ಬಂದ ಪತ್ರ ನೋಡಿ. “ಚೈನಾಕ್ಕೆ ಸೇರಿದ ಪ್ರದೇಶದಲ್ಲಿ ಭಾರತದ ಸೈನ್ಯ ಸೈನಿಕ ಸಲಕರಣೆಗಳನ್ನು ಸ್ಥಾಪಿಸಿದೆ. ಭಾರತವು ಈ ಸೈನಿಕ ಸಲಕರಣೆಗಳನ್ನು ಕಿತ್ತುಹಾಕಬೇಕು. ಇಲ್ಲವಾದರೆ ಚೈನಾದ ಕೋಪವನ್ನು ಎದುರಿಸಬೇಕು.”
ನಿರೂಪಕ 1:- ಆದರೆ ಚೈನಾದ ಆಪಾದನೆಗಳೆಲ್ಲಾ ಸುಳ್ಳಿನ ಕಂತೆ. ಸೈನಿಕ ಸಲಕರಣೆಗಳನ್ನು ನಮ್ಮ ಸೈನಿಕರಿಂದ ತೆಗೆಸಿದರೆ ಚೈನಾದ ಸುಳ್ಳನ್ನು ಒಪ್ಪಿದಂತೆ. ಅಲ್ಲದೇ ಅದರ ಗರ್ಜನೆಗೆ ನಾವು ಬೆದರಿದಂತೆ.
ನಿರೂಪಕ 2:- ಭಾರತ ಏನು ಮಾಡುತ್ತದೆ? ಲಾಲ್ ಬಹದ್ದೂರರು ಏನು ಉತ್ತರ ಕೊಡುತ್ತಾರೆ? ಇದನ್ನು ತಿಳಿದುಕೊಳ್ಳಲು ಮಹಾ ಮಹಾ ರಾಷ್ಟ್ರಗಳೆಲ್ಲಾ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವು.
ಶಾಸ್ತ್ರಿ:- ಚೈನಾದ ಮಾತೆಲ್ಲಾ ಸುಳ್ಳು. ಚೈನಾ ನಮ್ಮನ್ನು ಆಕ್ರಮಣ ಮಾಡಿದರೆ ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬುದು ನಮ್ಮ ಅಚಲ ನಿರ್ಧಾರ. ಚೈನಾದ ಶಕ್ತಿ ನಮ್ಮ ಸಮಗ್ರತೆಯನ್ನು ಬಲಿಕೊಡುವಂತೆ ಮಾಡಲಾರದು.
ನಿರೂಪಕ 1:- ಈ ಉತ್ತರದಂತೆಯೇ ಭಾರತದ ಸೈನ್ಯ ತೋರಿಸಿದ ಶೌರ್ಯ ಅಭೂತಪೂರ್ವವಾದುದು. ಆಗ ಭಾರತದಮೇಲೆ ಆಕ್ರಮಣ ಮಾಡಿದ ಪಾಕ್ ಆಕ್ರಮಣಕಾರಿಗಳ ಪ್ರತಾಪ ನಡೆಯಲಿಲ್ಲ. ಭಾರತದ ಕೈ ಮೇಲೆಂಬುದನ್ನು ಮೊಟ್ಟ ಮೊದಲ ಬಾರಿಗೆ ಪ್ರಪಂಚಕ್ಕೆ ಗೊತ್ತಾದುದು ಆ ಸಮಯದಲ್ಲಿ .
ನಿರೂಪಕ 2:- ಈ ಯುದ್ದದಲ್ಲಿ ಭಾರತಕ್ಕೆ ಸಂಪೂರ್ಣ ಜಯ ಸಿಗುವ ಸಾಧ್ಯತೆ ಇತ್ತು. ಆದರೆ….
ನಿರೂಪಕ 1:- ಆದರೆ U.N. 1965 ಸೆಪ್ಟೆಬರ್ 23 ರಂದು ಯುದ್ಧ ವಿರಾಮ ಘೋಷಿಸಿ ಒಪ್ಪಂದಕ್ಕೆ ಆಗ್ರಹಿಸಿತು. ಆಗ ಶಾಸ್ತ್ರಿಯವರ ಮಾತು ಕೇಳಿ
ಶಾಸ್ತ್ರಿ:- ಎರಡು ದೇಶಗಳ ನಡುವೇ ತೀವ್ರವಾದ ಯುದ್ಧ ನಡೆಯುವಾಗ ಅದಕ್ಕೆ ಒಂದು ಅಂತ್ಯ ಕಾಣಿಸಬೇಕೆಂದು U.N. ಘೋಷಿಸಿದೆ. ಯುದ್ಧ ಮಾಡುವ ಆಸೆ ನಮ್ಮಲ್ಲಿ ಖಂಡಿತ ಇಲ್ಲ. ಆದರೆ ವಿರಾಮವನ್ನು ಇಬ್ಬರೂ ಒಪ್ಪಬೇಕು. ಇದಕ್ಕೆ ನಮ್ಮ ಭಾರತ ಕಂಡುಕೊಂಡಿರುವ ಒಂದು ವಿಧಾನ ಎಂದರೆ ಶಾಂತಿಯುತ ಸಹಬಾಳ್ವೆ. ಇದನ್ನು ಭಾರತ ಇಡೀ ಪ್ರಪಂಚಕ್ಕೇ ಸಾರಿದೆ. ಎರಡು ದೇಶಗಳ ನಡುವಿನ ಸಮಸ್ಯೆಗಳು ಎಷ್ಟೇ ದೊಡ್ಡದಿದ್ದರೂ ಶಾಂತಿಯುತ ಸಹಬಾಳ್ವೆಯಿಂದ ಎಲ್ಲವನ್ನೂ ಸರಿಪಡಿಸಬಹುದೆಂದು ಭಾರತ ನಂಬಿದೆ.
ನಿರೂಪಕ 2:- ಆದರೆ ಅವರ ಧ್ಯೇಯೋದ್ದೇಶಗಳು, ಚಿಂತನೆಗಳು ನಮಗೆ ಉಪಯೋಗವಾಗಲು ವಿಧಿ ಅವಕಾಶ ಕೊಡಲಿಲ್ಲವೇ. ಯುದ್ಧ ವಿರಾಮದ ನಂತರ ಶಾಸ್ತ್ರಿಯವರು ಪಾಕಿಸ್ತಾನದ ರಾಷ್ಟ್ರಪತಿ ಅಯೂಬ್ ಖಾನ್‍ರೊಂದಿಗೆ 1966ರ ಜನವರಿ 10ರಂದು ಸಹಿ ಹಾಕಿದ ಮರುದಿನ ಸಾವನ್ನಪ್ಪಿದರು. ಇದು ಸಹಜ ಸಾವೋ ಅಥವಾ….. ಆ ದೇವರೇ ಬಲ್ಲ. ನಾವಂತೂ ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡೆವು.
ನಿರೂಪಕ 1:- ಗಡಿಗಳನ್ನು ಕಾಯುವ ಯೋದರಿಗೂ, ನಮಗೆ ಅನ್ನ ನೀಡುವ ರೈತರಿಗೂ ನಾವು ಕೃತಜ್ಞತೆ ಸಲ್ಲಿಸ ಬೇಕೆಂದು ಅವರ ಮನ ತುಡಿಯುತ್ತಿತ್ತು. “ಜಯ್ ಜವಾನ್ ಜಯ್ ಕಿಸಾನ್” ಘೋಷಣೆಯನ್ನು ಮಂತ್ರ ಘೊಷಣೆಯಾಗಿ ನಮಗೆ ಹೇಳಿಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿಗಳವರು.
ನಿರೂಪಕರಿಬ್ಬರೂ:- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನಮ್ಮ ಶಾಸ್ತ್ರಿಯವರದ್ದು. ಕರ್ತವ್ಯ, ಮಾತು ಮನಸ್ಸು – ಮೂರನ್ನೂ ಶುದ್ಧವಾಗಿಟ್ಟುಕೊಂಡು ಬಾಳಿ ತೋರಿಸಿದ ಮಹಾನ್.
ಈ ಎರಡು ದಿನಗಳಿಂದ ಗಾಂಧಿ ಜಯಂತಿ ಆಚರಣೆಯ ವೈಭವವನ್ನು ನೋಡುತ್ತಾ ಇದೇ ದಿನದಲ್ಲಿ ಹುಟ್ಟಿದ ಮತ್ತೋರ್ವ ಮಹಾನ್ ವ್ಯಕ್ತಿಯ ನೆನಪಿಸಿಕೊಳ್ಳುವವರು ಯಾರೂ ಇಲ್ಲ ಎಂಬುದು ನನ್ನ ಗಮನಕ್ಕೆ ಬಂದು ಮನಸ್ಸು ನೋವುಗೊಂಡು ಮುದುಡಿತು. ಶಾಸ್ತ್ರಿಯವರು ಮಾಡಿದ ಒಂದೇ ತಪ್ಪು ಎಂದರೆ ಗಾಂಧಿಯವರು ಜನಿಸಿದ ದಿನವೇ ಜನಿಸಿದ್ದು ಇರಬಹುದೇನೋ. ನನಗೆ ಅವರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಬೇಕೆಂಬ ಮನಸ್ಸಾಯಿತು. ಅವರ ಬಗ್ಗೆ ಬರೆಯೋಣ ಎಂದು ಹೊರಟಾಗ ಈಗ್ಗೆ ಕೆಲವಾರು ವರ್ಷಗಳ ಹಿಂದೆ ಇದೇ ರೀತಿಯ ಭಾವನೆ ನನ್ನಲ್ಲಿ ಬಂದು ಗಾಂಧೀಜಿಯವರನ್ನು ಎಲ್ಲರೂ ಸ್ಮರಿಸುತ್ತಾರೆ . ನಾವೂ ಅವರ ಜೊತೆಜೊತೆಗೇ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಒಂದು ಕಿರುನಾಟಕದ ಮೂಲಕ ಸ್ಮರಿಸೋಣ ಎಂದು ನನ್ನ ಮಕ್ಕಳಿಗೆ ಹೇಳಿ ಹೀಗೆ ಕಿರುನಾಟಕ ತಯಾರಿಸಿದ್ದೆ. ಇದಕ್ಕೆ ಎಸ್ಸೆಲ್ ಭೈರಪ್ಪ ಅವರು ಬರೆದ ಅವರ ಆತ್ಮಚರಿತ್ರೆಯಾದ “ಬಿತ್ತಿ”ಯಲ್ಲಿ ಅವರು ತಿಳಿಸಿದ್ದ ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಅವರು ಮತ್ತು ಶಾಸ್ತ್ರಿಯವರ ಮಗ ಮಾತನಾಡುವಂತೆ ಮಾಡಿ ನಾಟಕವನ್ನು ರಚಿಸಿದ್ದೆ. ಇಲ್ಲಿ ಎಸ್ಸೆಲ್ ಭೈರಪ್ಪನವರ ಅನುಭವವನ್ನು ಉಪಯೋಗಿಸಿಕೊಂಡಿದ್ದೇನೆ. ಬಿತ್ತಿ ಓದಿದವರು ಈ ಸನ್ನಿವೇಶವನ್ನು ಅನುಭವಿಸಿ ಓದಿರುತ್ತಾರೆ. ಗಮನಿಸಿಲ್ಲದಿದ್ದರೆ ಮತ್ತೊಮೆ ’ಬಿತ್ತಿ’ ಓದಿ ನೋಡಿ. ಎಷ್ಟು ಆತ್ಮೀಯತೆಯಿಂದ ಈ ಭಾಗವನ್ನು ಬರೆದಿದ್ದಾರೆ ಎಸ್ಸೆಲ್ ಭೈರಪ್ಪನವರು! ಅವರ ಈ ಅನುಭವವನ್ನು ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ವರ್ಷ ಶಾಸ್ತ್ರಿಯವರನ್ನು ಮತ್ತೆ ಸಂಪದದ ಬಳಗದೊಂದಿಗೆ ಸ್ಮರಿಸಿಕೊಳ್ಳೋಣ ಎಂಬುದು ನನ್ನ ಆಶಯ.
ಇಲ್ಲಿ ಅವರ ಸಂಪೂರ್ಣ ವ್ಯಕ್ತಿತ್ವವನ್ನು ತಿಳಿಸಲಾಗಿದೆ ಎಂದು ಹೇಳಲಾಗದಿದ್ದರೂ ಅವರ ಉನ್ನತ ವ್ಯಕ್ತಿತ್ವದ ಕಡೆಗೆ ಸ್ವಲ್ಪಮಟ್ಟಿಗಾದರೂ ಬೆಳಕು ಚೆಲ್ಲಿದ್ದೇನೆ ಎಂದು ನಂಬಿದ್ದೇನೆ. ಅವರ ಪಾದಾರವಿಂದಗಳಿಗೆ ಈ ನಾಟಕವನ್ನು ಸಮರ್ಪಿಸುತ್ತಿದ್ದೇನೆ.