ಮಳೆ ನೀರು

ಮಳೆ ನೀರು

ಬರಹ

                                                 
ಶಾಂತ: ಏನೇ ಕಮಲಿ ಆಯ್ತೇನೆ ಅಡಿಗೆ
ಕಮಲಿ: ಆಯ್ತೆ ಅಡಿಗೆ ಮಾಡಿ ಮಕ್ಕಳನ್ನ ನಮ್ಮ ಮನೆಯವರನ್ನ ಆಪೀಸಿಗೆ ಕಳುಹಿಸೋ ಒಳಗೆ ಸುಸ್ತೋ ಸುಸ್ತು ......
ಶಾಂತ: ಇದೇನೇ ಇಷ್ಟೊಂದು ನೀರು ಚೆಲ್ತಾ ಇದ್ದೀಯಾ ? ಅಲ್ಲಿ ನೋಡು ಬಿಂದಿಗೆ ತುಂಬಿ ಎಷ್ಟೋದು ನೀರು ನಲ್ಲಿಯಲ್ಲಿ ಹೋಗ್ತಾ ಇದೆ....                                                   
ಕಮಲಿ: ಬಿಡೆ ಪರವಾಗಿಲ್ಲ... ಇಲ್ಲಿರೋ ಗಲೀಜು ಹೋದ್ರೆ ಸಾಕು                                                

ಶಾಂತ: ಅಂದ್ರೆ ನೀರು ಎಷ್ಟೇ ವೇಷ್ಟಾದ್ರು ಪರವಾಗಿಲ್ಲ ಕ್ಲೀನ್ ಆಗಬೇಕು ಅಷ್ಟೇನಾ?
ಕಮಲಿ: ಇನ್ನೇನೆ ಅಷ್ಟೆ.....                            
ಶಾಂತ: ನೀನು ತಾನೇ ಇಲ್ಲಿ ಇಷ್ಟೊಂದು ಗಲೀಜು ಮಾಡಿದ್ದು   
ಕಮಲಿ: ಹೌದು ಏನೀಗ ನನ್ನ ಮನೆ ಅಂಗಳದಲ್ಲಿ ನಾನು ಮಾಡಿದೆ ಅದರಲ್ಲಿ ಏನಿದೆ ತಪ್ಪು                                        
ಶಾಂತ : ನಿಮ್ಮ ಅಂಗಳಾನೇ ತಾಯಿ ನಾನೇನು ನಮ್ಮ ಅಂಗಳ ಅಂದ್ನಾ..... ನಾನು ಹೇಳಿದ್ದು ಗಲೀಜು ಮಾಡೊದಕ್ಕೆ ಮುಂಚೆ ಸ್ವಲ್ಪ ಯೋಚನೆ ಮಾಡಿದ್ರೆ ಈ ರೀತಿಯಾಗಿ ನೀರು ವ್ಪೋಲು ಮಾಡೊದನ್ನ ತಪ್ಪಿಸಬಹುದಿತ್ತು. ಅಲ್ಲಿ ನೋಡು ನಲ್ಲಿಯಲ್ಲಿ ಇನ್ನೂ ಸಹ ನೀರು ಹೋಗ್ತಾನೇ ಇದೆ.  
ಕಮಲಿ: ಹೋಗಲಿ ಬಿಡೆ ನಲ್ಲಿಯಲ್ಲಿ ನೀರು ಬರೋ ತನಕ ಹೋಗತ್ತೆ ನಿಂತ ನಂತರ ಇಲ್ಲೂ ಸಹ ನಿಲ್ಲತ್ತೆ ಅದಕ್ಕೆಲ್ಲ ಯೋಚನೆ ಮಾಡಿದ್ರೆ ಆಗತ್ತಾ ನೀನೆ ಹೇಳು?

ಶಾಂತ: ಯೋಚನೆ ಮಾಡಬೇಕು ಕಮಲಿ ನೀನು ಒಬ್ಬಳೇ ಇಷ್ಟೊಂದು ನೀರು ವಷ್ಟ್ ಮಾಡಿದ್ರೆ ಇನ್ನು ನಮ್ಮ ಬೀದಿಯಲ್ಲಿ, ನಮ್ಮ ಊರಲ್ಲಿ ಎಷ್ಟು ಜನ ಎಷ್ಟೊಂದು ನೀರನ್ನ ಪೋಲು ಮಾಡ್ತಾರೆ.....                                                                                                                   
ಕಮಲಿ: ಪೋಲ್ ಮಾಡ್ತಾರೆ ಅಂದ್ರೆ ಮಾಡ್ಲಿ ಬಿಡು ನಮಗೆ ನೀರು ಬೇಕಾದಾಗ ನೀರೆ ಬಿಡಲ್ಲು ಈ ಕಾರ್ಪೋರೇಷನ್ ರವರು ಬೇಡದೇ ಇದ್ದಾಗ ಬೇಕಾದಷ್ಟು ಬಿಡ್ತಾರೆ ಅದು ಅವರ ತಪ್ಪು ಅಲ್ವಾ...?  
ಶಾಂತ: ನೋಡು ಕಮಲಿ ಅವರಿಗೂ ಸಹ ಕಷ್ಟ ಇರತ್ತೆ ಪ್ರತಿ ಏರಿಯಾಗೂ ಸಹ ನೀರನ್ನ ಬಿಡಬೇಕು ಅದರಲ್ಲೂ ನಿನಗೆ ಗೊತ್ತೇ ಇದೆ ಕರೆಂಟ್ ಸಹ ಆಗಾಗ ಕಟ್ ಆಗ್ತಾ ಇರತ್ತೆ                                                                    
ಕಮಲಿ
: ಅಂಗಾದ್ರೆ ಅವರದು ಏನೂ ತಪ್ಪಿಲ್ಲ ಎಲ್ಲಾನೂ ಸಹ ನಮ್ಮದೇ ತಪ್ಪು ಅಂತೀಯಾ..?                                                         
ಶಾಂತ: ನಾನು ಅಂಗೆ ಹೇಳಿಲ್ಲ ಕಮಲಿ ನಾನು ಹೇಳೋದು ಏನಪ್ಪ ಅಂದ್ರೆ ಅವರುಗಳು ಸಹ ಎಲ್ಲಾ ಕಡೆಯನ್ನು ನೀರನ್ನ ಬಿಡಬೇಕಾಗತ್ತೆ ಆದ್ದರಿಂದ ನಮಗೆ ಬಿಡೋದಕ್ಕೆ ಸ್ವಲ್ಪ ತಡ ಆಗಬಹುದು ಅದನ್ನೆಲ್ಲ ಅನುಸರಿಸಿಕೊಂಡು ಹೋಗಬೇಕು.                                                                      
ಕಮಲಿ: ಸರಿ ಬಿಡು ಸುಮ್ನೆ ನಮ್ಮ ನಮ್ಮಲ್ಲಿ ಜಗಳ ಯಾಕೆ ?                                                                                          
ಶಾಂತ: ಜಗಳ ಅಲ್ಲ ಕಮಲಿ ನಮ್ಮಲ್ಲಿ ನಡಿತಾ ಇರೋ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದೀವಿ ಅಷ್ಟೆ. ನಾವು ಈ ರೀತಿಯಾಗಿ ಇಷ್ಟೊಂದು ನೀರನ್ನ ಪೋಲು ಮಾಡ್ತಾ ಇದ್ರೆ ಹೇಗೆ ಹೇಳು ಈಗಾಗಲೇ ಬೇಸಿಗೆ ಶುರು ಆಯ್ತು, ಪ್ರತಿ ತೊಟ್ಟು ನೀರು ಸಹ ಬಹಳ ಮುಖ್ಯವಾಗಿದೆ.                                          
ಕಮಲಿ: ಬಿಡು ಶಾಂತ ನಮಗೆ ಬೇಕಾದಷ್ಟು ನೀರು ಸಿಕ್ತಾ ಇದೆಯಲ್ವಾ ಅದಕ್ಕೆಲ್ಲ ಯಾಕೆ ಚಿಂತೆ ಮಾಡಬೇಕು.                                         
ಶಾಂತ: ಚಿಂತೆ ಮಾಡಬೇಕು ಕಮಲಿ ನಮಗೇನೋ ಬೇಕಾದಷ್ಟು ನೀರು ಸಿಕ್ತಾ ಇದೆ ಆದ್ರೆ ಹಲವಾರು ಕಡೆ ಕುಡಿಯೋದಕ್ಕೆ ನೀರೆ ಇಲ್ಲದೆ ಕಷ್ಟ ಪಡ್ತಾ ಇದ್ದಾರೆ.
ಕಮಲಿ: ಹೌದಾ ಶಾಂತ.?       

ಶಾಂತ : ಹೌದು ಕಮಲಿ ಇತ್ತೀಚೆಗೆ ಕುಡಿಯೋದಕ್ಕೆ ನೀರಿಲ್ಲದೆ ಮಳೆ ನೀರನ್ನ ಕುಡಿಯೋದಕ್ಕೆ ಶೇಖರಣೆ ಮಾಡ್ತಾ ಇದ್ದಾರೆ.                             
ಕಮಲಿ: ಮಳೆ ನೀರನ್ನ ಕುಡಿತಾರ ?                                                                                                             
ಶಾಂತ : ಹೌದು ಕಮಲಿ ಮೊನ್ನೆ ನಾನು ಯುಗಾದಿ ಹಬ್ಬಕ್ಕೆ ಅಂತ ನನ್ನ ತವರು ಮನೆಗೆ ಹೋಗಿದ್ದೆ ಅಲ್ವಾ..?                                        
ಕಮಲಿ: ಹೌದು ಅದಕ್ಕೇನೀಗಾ                                        

ಶಾಂತ: ಅಲ್ಲಿಗೆ ಹೋದಾಗ ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ ಮಳೆ ನೀರು ಸಂಗ್ರಹಣ ಮಾಡಿದೆ. ಎರಡು ಕಡೆ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಿದ್ದು ಕ್ರಮವಾಗಿ 60 ಸಾವಿರ ಮತ್ತು 1 ಲಕ್ಷ 60 ಸಾವಿರ ಲೀಟರ್ ನೀರು ಸಂಗ್ರಹಣೆ ನಡೆಯುತ್ತಿದೆ. ಲಕ್ಕಿಹಳ್ಳಿಯ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದಿರುವುದು, ಯೋಗ್ಯವಾದ ಕುಡಿಯುವ ನೀರಿನ ಅಲಭ್ಯತೆ ಹಾಗೂ ಲಭ್ಯವಿರುವ ಕುಡಿಯುವ ನೀರೂ ಸಹ ಫ್ಲೋರೈಡ್ ಯುಕ್ತವಾಗಿರುವುದನ್ನು ಪ್ರತ್ಯಕ್ಷ ಅನುಭವದಿಂದ ಅರಿತುಕೊಂಡು 1998 ರಲ್ಲಿ ಛಾವಣಿ ಮಳೆ ನೀರು ಸಂಗ್ರಹಣೆಗೆ ಪ್ರಾರಂಬಿಸಿತು.                         
ಕಮಲಿ
: ಮಳೆನೀರು ಸಂಗ್ರಹಿಸೋದಕ್ಕೆ ಅವರು ಹೇಗೆ ಮಾಡಿದ್ದಾರೆ.

ಶಾಂತ: ಅಲ್ಲಿನ ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಹಾಸ್ಟಲ್ ಕಟ್ಟಡ ಒಂದಿದೆ. ವಿಸ್ತೀರ್ಣ 400 ಚದರ ಮೀಟರ್. ಇದರ ಮೇಲ್ಛಾವಣಿಯು ಆರ್.ಸಿ.ಸಿ.ಯದಾಗಿದ್ದು ಇಂಗ್ಲಿಷ್ನ ‘ಯು’ಆಕಾರದಲ್ಲಿದೆ. ಛಾವಣಿಯಲ್ಲಿ ಬೀಳುವ ಮಳೆ ನೀರು ಪೈಪುಗಳ ಮೂಲಕ ಹಾದು ಸಂಗ್ರಹಣಾ ತೊಟ್ಟಿಗೆ ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೀರು ತೊಟ್ಟಿಗೆ ಬರುವ ಮುಂಚೆ ಶೋಧಕವನ್ನು ಹಾದು ಬರುವ ವ್ಯವಸ್ಥೆಯಿದ್ದು ಶೋಧಕ ತೊಟ್ಟಿಯ ನಿರ್ಮಾಣ ಈ ರೀತಿ ಮಾಡಿದ್ದಾರೆ. ತಳ ಭಾಗದಲ್ಲಿ ಅರ್ಧ ಅಡಿಯಷ್ಟು ದಪ್ಪ ಜಲ್ಲಿ, ನಂತರ ಅರ್ಧ ಅಡಿಯಷ್ಟು ಸಣ್ಣ ಜಲ್ಲಿ, ಅದರ ಮೇಲೆ ಅರ್ಧ ಅಡಿ ಇದ್ದಿಲು ಮತ್ತೆ ಮೇಲೆ ಪ್ಲಾಸ್ಟಿಕ್ ಲೇಯರ್ ಹಾಗೂ ಮೇಲ್ಭಾಗದಲ್ಲಿ ಅರ್ಧ ಅಡಿ ಮರಳು ಹರಡಿದ್ದು ಅದರ ಮೇಲೆ ಒಂದು ಜರಡೆಯನ್ನು ಕೂರಿಸಲಾಗಿದೆ. ಜರಡೆಯು ಕಸ-ಕಡ್ಡಿಗಳು ಹೋಗದಂತೆ ತಡೆಯುತ್ತದೆ. ಕಟ್ಟಡ ‘ಯು’ ಆಕಾರದಲ್ಲಿರುವುದರಿಂದ ಎರಡೂ ಕಡೆಯಿಂದ ನೀರು ಹಾದು ಬರುವಂತೆ ಪೈಪುಗಳನ್ನು ಜೋಡಿಸಿದ್ದು ಎರಡು ಶೋಧಕ ತೊಟ್ಟಿಗಳಿವೆ. ಇವುಗಳಿಂದ ನೀರು ಹಾದು ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ.
ಕಮಲಿ: ಹೌದಾ...? ಅದಕ್ಕೆ ತೊಟ್ಟಿ ಕಟ್ಟಿದ್ದಾರ ......?    

ಶಾಂತ: ಹೌದು ಕಮಲಿ ನೀರು ಸಂಗ್ರಹಣಾ ,ಮಾಡೊದಕ್ಕೆ ನೀರು ಸಂಗ್ರಹಣಾ ತೊಟ್ಟಿಯನ್ನ ಗೋಲಾಕಾರದಲ್ಲಿ ಭೂಮಿಯ ಮಟ್ಟಕ್ಕಿಂತ ಕೆಳಗಿದೆ. 10 ಅಡಿ ಆಳ ಮತ್ತು 18 ಅಡಿ ವ್ಯಾಸದ್ದಾಗಿದ್ದು 60 ಸಾವಿರ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಸೈಜು ಕಲ್ಲುಗಳಿಂದ ತೊಟ್ಟಿ ನಿರ್ಮಿಸಿದ್ದು ಒಳಭಾಗದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ಸುಣ್ಣ ಬಳಿಯಲಾಗಿದೆ. ಸಂಗ್ರಹಣಾ ತೊಟ್ಟಿಯಲ್ಲಿ ಹೆಚ್ಚಾದ ನೀರು ಹೊರಹೋಗಲು ತೊಟ್ಟಿಯ ಮೇಲ್ಭಾಗದಲ್ಲಿ ಒಂದು ಪೈಪ್ ಅಳವಡಿಸಲಾಗಿದೆ.
ಕಮಲಿ: ಆ ನೀರು ಕುಡಿಯೋದಕ್ಕೆ ಚೆನ್ನಾಗಿರತ್ತಾ ಶಾಂತ ಮತ್ತೆ ನೀರಿನ ಗುಣಮಟ್ಟವನ್ನ ಕಾಪಾಡೋದು ಹೇಗೆ?
ಶಾಂತ: ನೀರಿನ ಗುಣಮಟ್ಟ ಮತ್ತು ತೊಟ್ಟಿಯ ಬಾಳಿಕೆ ಉತ್ತಮವಾಗಿರವುದು ಅತ್ಯವಶ್ಯಕ . ಇದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಪ್ರತಿ ವರ್ಷ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಛಾವಣಿಯನ್ನು ಸ್ವಚ್ಚಗೊಳಿಸಲಾಗುತ್ತದೆ. ನೀರು ಸಂಗ್ರಹಣಾ ತೊಟ್ಟಿಯನ್ನು ಪ್ರತಿ ವರ್ಷದ ಏಪ್ರಿಲ್ ತಿಂಗಳು ಅಥವಾ ಮಳೆಗಾಲದ ಆರಂಭಕ್ಕಿಂತ ಮುಂಚೆ ಕಡ್ಡಾಯವಾಗಿ ಸ್ವಚ್ಚಗೊಳಿಸಲಾಗುತ್ತದೆ.ನೀರು ಸಂಗ್ರಹಣಾ ತೊಟ್ಟಿಯ ಮೇಲ್ಭಾಗದಲ್ಲಿ ಒಬ್ಬ ಮನುಷ್ಯ ಇಳಿಯುವಷ್ಟು ಅಗಲದ ಜಾಗವಿದ್ದು ಅದಕ್ಕೊಂದು ಮುಚ್ಚಳಿಕೆಯಿರುತ್ತದೆ. ತೊಟ್ಟಿ ಸ್ವಚ್ಚಗೊಳಿಸುವಾಗ, ನೀರಿನ ಮಟ್ಟ ತಿಳಿಯಲು ಮತ್ತು ಅಗತ್ಯವಿದ್ದಾಗ ಮಾತ್ರ ಇದನ್ನು ತೆರೆಯಲಾಗುತ್ತದೆ. ಪದೇ-ಪದೇ ಇದನ್ನು ತೆಗೆದರೆ ಸೂರ್ಯನ ಕಿರಣಗಳು ಮತ್ತು ಗಾಳಿ ತೊಟ್ಟಿಯಲ್ಲಿನ ನೀರಿಗೆ ತಾಕಿ ಹುಳ ಬೀಳುವ ಸಂಭವವಿರುತ್ತದೆ ಹಾಗೂ ತೊಟ್ಟಿಯ ಒಳಗೆ ಪಾಚಿ ಬೆಳೆಯಲು ಆಸ್ಪದವಾಗುತ್ತದೆ. ಒಂದು ವೇಳೆ ಹೀಗೇನಾದರೂ ಆದರೆ ನೀರು ಬಳಕೆಗೆ ಬರುವುದಿಲ್ಲ. ಆದ್ದರಿಂದ ಇದರ ಬಗ್ಗೆ ಹೆಚ್ಚು ಮುತುವರವಹಿಸಬೇಕು. ಮಳೆನೀರು ಸಂಗ್ರಹಣೆ ಮಾಡೊದಕ್ಕೆ ಮುಂಚೆ ಇಲ್ಲಿ ಇದ್ದಂತಹ ಪರಿಸ್ಥಿತಿ ಕೇಳಿದ್ರೆ ಭಯ ಆಗತ್ತೆ . ಮಳೆಯ ಅನಿಶ್ಚಿತತೆ ಇಲ್ಲಿ ಸರ್ವೇ ಸಾಮಾನ್ಯ. ಪರಿಣಾಮ ನೀರಿನ ಅಭಾವ. ಕುಡಿಯುವ ನೀರಿಗಂತೂ ವಿಪರೀತ ತೊಂದರೆ. ನೀರಿನ ಅವಶ್ಯಕತೆಗಳಿಗೆ ಕೊಳವೆ ಬಾವಿಗಳ ಮೇಲೆ ಅವಲಂಬನೆ ಹೆಚ್ಚದಂತೆಲ್ಲಾ ಅಂತರ್ಜಲ ಮಟ್ಟ ಸಹಜವಾಗಿಯೇ ಕುಸಿದು ಕೊಳವೆ ಬಾವಿಗಳ ಆಳ ಹೆಚ್ಚುತ್ತಾ ಹೋಯಿತು. ಇದರಿಂದ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ. ವಿಧಿ ಇಲ್ಲದೆ ಈ ನೀರನ್ನೇ ಕುಡಿದು ಅನೇಕ ಆರೋಗ್ಯ ಮಸ್ಯೆಗಳನ್ನು ಈ ಭಾಗದ ಜನರು ಎದುರಿಸುತ್ತಿದ್ದರು.“ಟ್ಯಾಂಕರ್ ಮೂಲಕ ನೀರು ತರಿಸುವುದು ದಿನ ನಿತ್ಯದ ಪರಿಪಾಠವೇ ಆಗಿಹೋಗಿತ್ತು” “ಈಗ ವರ್ಷದಲ್ಲಿ ಒಂದೆರಡು ತಿಂಗಳು ಬಿಟ್ಟರೆ ಉಳಿದ ಅವಧಿಗೆ ಮಳೆ ನೀರು ಸಾಕಷ್ಟಾಗುತ್ತದೆ, ಫ್ಲೋರೈಡ್ ಅಂಶವಿಲ್ಲದ ಶುದ್ಧ ನೀರು ಲಭ್ಯ. ಟ್ಯಾಂಕರ್ ನೀರು ತರಿಸುವ ಕಿರಿ-ಕಿರಿ ಇಲ್ಲ. ಹಣದ ಉಳಿತಾಯವೂ ಆದಂತಾಗಿದೆ”

ಕಮಲಿ: ಅಬ್ಬಾ ಏನೇ ಇದು ನೀನು ಹೇಳ್ತಾ ಇದ್ರೆ ನನಗೆ ಭಯ ಆಗ್ತಾ ಇದೆ ಇದಕ್ಕೆಲ್ಲ ಕರ್ಚು ಎಷ್ಟಾಗಬಹುದು                                          
ಶಾಂತ: ಕಟ್ಟಡದಲ್ಲಿರುವ ಮಳೆ ನೀರು ಸಂಗ್ರಹಾಗಾರ ನಿರ್ಮಾಣಕ್ಕೆ 1.20.000.00 ರೂ. ವೆಚ್ಚವಾಗಿದೆ. ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಲಕ್ಕಿಹಳ್ಳಿ ವ್ಯಾಪ್ತಿಯ ಸರಾಸರಿ ಮಳೆ ಪ್ರಮಾಣ 400 ರಿಂದ 600 ಮಿ.ಮೀ. 1 ಮಿ.ಮೀ ಮಳೆ ಬಿದ್ದರೆ 400 ಲೀಟರ್ ನೀರು ಸಂಗ್ರಹಣೆಯಗುತ್ತದೆ. 1 ಸೆಂಟಿ ಮೀಟರ್ ಮಳೆ ಬಿದ್ದರೆ 4000 ಲೀಟರ್ ನೀರು ಸಂಗ್ರಹಣೆಯಾಗುತ್ತದೆ. ಈ ಭಾಗದಲ್ಲಿ ಸಾಮಾನ್ಯವಾಗಿ ಜೂನ್ ಮತ್ತು ಅಕ್ಟೋಬರ್ ತಿಂಗಳು ಹೆಚ್ಚು ಮಳೆ ಬೀಳುತ್ತದೆ.ಸಂಗ್ರಹಿತವಾದ ಮಳೆ ನೀರನ್ನು ಸಂಸ್ಥೆಯು ವಿವಿಧ ಉಪಯೋಗಗಳಿಗೆ ಬಳಸುತ್ತದೆ. ಕುಡಿಯಲು ಉತ್ತಮ ಗುಣಮಟ್ಟದ ಮಳೆ ನೀರನ್ನು ನೀಡುತ್ತದೆ. ಆ ಮೂಲಕ ಮಳೆ ನೀರು ಬಳಕೆಯಿಂದ ಫ್ಲೊರೊಸಿಸ್ ನ್ನು ದೂರವಿಡುವ ಸುಲಭ ಉಪಾಯ. ಇದರ ಪರಿಣಾಮ ಹಲವಾರು ಹಳ್ಳಿಗಳಲ್ಲಿ ಸ್ವತಃ ಮಳೆ ನೀರು ಸಂಗ್ರಹಿಸಿ ಉಪಯೋಗಿಸುವ ಪರಿಪಾಠ ಪ್ರಾರಂಭವಾಗಿದೆ. ಕ್ಯಾಂಪಸ್ಸಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜು ಮಕ್ಕಳಿಗೂ ಸಹ ಮಳೆ ನೀರು ಸಂಗ್ರಹಣೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಇದು ಹಲವಾರು ಶಾಲೆಗಳಲ್ಲಿ ಛಾವಣಿ ನೀರು ಸಂಗ್ರಹಣೆ ಕಾರ್ಯಕ್ಕೆ ಪ್ರೇರೇಪಣೆ ನೀಡಿದೆ.                         

ಕಮಲ: ಅಯ್ಯೋ ಶಾಂತ ನೋಡು ನೀರು ಪೋಲು ಮಾಡೊದ್ರಿಂದ ಎಷ್ಟು ತೊಂದ್ರೆಗಳನ್ನ ಎದುರಿಸಬೇಕು ಕಡೆಗೆ ಮಳೆ ನೀರನ್ನ ಕುಡಿಯೋ ಪರಿಸ್ಥಿತಿ ಸಹ ಬರತ್ತೆ
ಶಾಂತ: ಮಳೆ ನೀರು ಅತ್ಯುಮವಾದ ನೀರು ಆದ್ದರಿಂದ ಅದನ್ನ ಬಳಸೋದ್ರಿಂದ ಯಾವುದೇ ವಿಧವಾದ ಪ್ಲೋರೈಡ್ ನಿಂದ ಬರಬಹುದಾದ ಕಾಯಿಲೆಗಳನ್ನ ತಡೆಗಟ್ಟಬಹುದು ಈ ಮಳೆ ನೀರು ಸಂಗ್ರಹಣೆ ಮಾಡೊದ್ರಿಂದ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನೀಗಿಸಬಹುದು.                            
ಕಮಲ
: ನೀನು ಹೇಳಿದ್ದು ನಿಜಾನೇ ಶಾಂತ ಇನ್ನು ಮೇಲೆ ನೀರು ಪೋಲು ಮಾಡೊದನ್ನ ಮಾಡೊದಿಲ್ಲ. ಜೊತೆಗೆ ಈಗಲೇ ಮಳೆ ನೀರು ಸಂಗ್ರಹಣೆಗಾಗಿ ನಾನು ಸಹ ಸಿದ್ದತೆ ಮಾಡ್ತೀವಿ.
ಶಾಂತ: ಸರಿ ಹಾಗೇ ಮಾಡು ಕಮಲ ನಾನು ಇನ್ನು ಬರ್ತೀನಿ ನಮ್ಮ ಮನೆಯವರು ಬರೋ ಸಮಯ ಆಯ್ತು ಬರ್ಲಾ.....             
ಕಮಲ: ಸರಿ ಹೋಗಿ ಬಾ ಶಾಂತ ನಾನು ಸ್ವಲ್ಪ ಕೆಲ್ಸ ಮುಗಿಸ್ತೀನಿ

 

 

ಚಿತ್ರ ಕೃಪೆ: ಅಂತರ್ಜಾಲದಿಂದ