ಮಹಾರಾಷ್ಟ್ರದ ನಡೆ ಅಕ್ಷಮ್ಯ
ಕರ್ನಾಟಕದ ಗಡಿ ಮತ್ತು ಭಾಷೆಯ ವಿಷಯದಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರ ತಗಾದೆ ತೆಗೆಯುವುದು, ಕಾಲು ಕೆದರಿ ಜಗಳಕ್ಕೆ ಬರುವುದು ಹೊಸ ವಿಷಯವೇನಲ್ಲ. ಪ್ರತಿ ಬಾರಿ ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ನಡೆಯುವ ಸಮಯದಲ್ಲೂ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಇಲ್ಲಿನ ಮರಾಠಿಗಳನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಾರೆ. ಕರಾಳ ದಿನ ಆಚರಿಸುತ್ತಾರೆ. ಗಡಿ ಭಾಗದ ಅಭಿವೃದ್ಧಿಯ ವಿಷಯ ಬಂದಾಗಲೂ ಮಹಾರಾಷ್ಟ್ರದ ಕೆಲವು ಸಚಿವರು ಅನಗತ್ಯ ವಿವಾದ ಎಬ್ಬಿಸಲು ಪ್ರಯತ್ನಿಸುತ್ತಾರೆ. ಆ ರಾಜ್ಯದ ಯಾವುದೇ ಗಡಿಭಾಗದ ಹಳ್ಳಿಯಲ್ಲಿಯೂ ಕರ್ನಾಟಕ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಕರ್ನಾಟಕದ ವ್ಯಾಪ್ತಿಯೊಳಗಿರುವ ಗ್ರಾಮಗಳಲ್ಲಿರುವ ಜನರನ್ನು ಓಲೈಸಿ, ಕರ್ನಾಟಕದ ವಿರುದ್ಧವೇ ಎತ್ತಿಕಟ್ಟುವ ಕೆಲಸ ಮಾಡುತ್ತಲೇ ಇರುತ್ತದೆ. ಇಷ್ಟೆಲ್ಲ ಮಾಡಿದ್ದು ಸಾಲದೆಂಬಂತೆ ಮಹಾರಾಷ್ಟ್ರ ಸರ್ಕಾರ ಇದೀಗ ನೀರಿನ ವಿಷಯದಲ್ಲೂ ತಕರಾರು ಶುರು ಮಾಡಿದೆ.
ಮಹಾರಾಷ್ಟ್ರದ ಶಿರೋಳ ತಾಲೂಕಿನ ಮತ್ತು ಕರ್ನಾಟಕದ ಕಾಗವಾಡ ತಾಲೂಕಿನ ಸೀಮೆಯಲ್ಲಿರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿ ನೀರು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಹರಿದುಬರುತ್ತದೆ. ಇದು ಸಾಮಾನ್ಯ ಮತ್ತು ಸಹಜ. ಈ ಬಾರಿಯೂ ಅದೇ ರೀತಿ ನೀರು ಹರಿದು ಬರುತ್ತಿರುವುದನ್ನು ಕಂಡು ಆ ಭಾಗದ ರೈತರು ಸಂತೋಷಗೊಂಡಿದ್ದರು. ಆದರೆ, ಈಗ ಮಹಾರಾಷ್ಟ್ರ ಸರ್ಕಾರ ರಾಜಾಪುರ ಬ್ಯಾರೇಜ್ ಬಳಿ ತನ್ನ ನಾಲ್ವರು ಸಿಬ್ಬಂದಿಗಳನ್ನು ನಿಯೋಜನೆ ಮಾಡಿ, ಕರ್ನಾಟಕಕ್ಕೆ ಆ ನೀರು ಹರಿಯದಂತೆ ನೋಡಿಕೊಳ್ಳುತ್ತಿದೆ. ರಾಜಾಪುರ ಬ್ಯಾರೇಜ್ ಮೇಲೆ ಇಬ್ಬರು ಪೋಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆ ನೌಕರರನ್ನು ನಿಯೋಜನೆ ಮಾಡಿ ನೀರು ತಡೆಯುವ ಮೂಲಕ ಮಹಾರಾಷ್ಟ್ರ ಹಗೆ ಸಾಧಿಸುತ್ತಿದೆ. ಅದಾಗ್ಯೂ ನದಿ ನೀರು ಬ್ಯಾರೇಜ್ ಗೆ ಹಾಕಿರುವ ತಡೆಗೋಡೆ ಮೇಲಿನಿಂದ ಹರಿದು ನದಿ ಸೇರುತ್ತಿದೆ. ಎಂಬುದು ಗಮನಾರ್ಹ.
ಆದರೂ ಕುಡಿಯಲು ಹಾಗೂ ಜಾನುವಾರುಗಳಿಗೆ ಆಧಾರವಾಗುವ ನೀರನ್ನೇ ತಡೆಯುವ ಮಹಾರಾಷ್ಟ್ರ ಸರ್ಕಾರದ ಹುನ್ನಾರ ಅಕ್ಷಮ್ಯ. ಇದಕ್ಕೆ ಈಗಾಗಲೇ ಗಡಿಭಾಗದ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಕ್ರಮವನ್ನು ಆ ಭಾಗದ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಹಾಗೆ ವಿರೋಧಿಸಿದವರ ಮೇಲೆಯೇ ಗೂಬೆ ಕೂರಿಸಲು ಮಹಾರಾಷ್ಟ್ರದ ನಾಯಕರು ಮುಂದಾಗಿದ್ದಾರೆ. ಬ್ಯಾರೇಜ್ ನ ಗೇಟುಗಳನ್ನು ಅನಧಿಕೃತವಾಗಿ ತೆಗೆದು ನೀರು ಕದಿಯಲು ಕರ್ನಾಟಕದ ಜನ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಆಧಾರ ರಹಿತ, ದುರುದ್ದೇಶ ಪೂರಿತ ಆರೊಪ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಹಾರಾಷ್ಟ್ರದ ಈ ನಡೆಯನ್ನು ಜನರು ಮತ್ತು ರಾಜಕಾರಣಿಗಳು ಪಕ್ಷಬೇಧ ಹಾಗೂ ಪ್ರಾದೇಶಿಕ ಬೇಧ ಮರೆತು ಖಂಡಿಸಬೇಕು. ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಮಹಾರಾಷ್ಟ್ರದ ಕಿವಿ ಹಿಂಡಿ ಬುದ್ಧಿ ಹೇಳಬೇಕು. ಕರ್ನಾಟಕ ಸರ್ಕಾರ ಕೂಡ ಮೌನ ವಹಿಸದೇ ಸೂಕ್ತ ಪ್ರಾಧಿಕಾರದ ಮುಂದೆ ವಿಷಯ ಪ್ರಸ್ತಾಪಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೮-೦೫-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ