ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ.
೧೨ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆ ನೆಲೆಗಟ್ಟಿನ ಆಧಾರದ ಮೇಲೆ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆಯ ಬೀಜವನ್ನು ಬಿತ್ತಿದ್ದಾರೆ. ಹೀಗೆ ಮಾಡುವ ಮೂಲಕ ಮಹಿಳಾ ವರ್ಗಕ್ಕೆ ಪುರುಷರ ಸರಿ ಸಮಾನತೆಯ ಸ್ಥಾನವನ್ನು ಅಂದಿನ ಶರಣರು ನೀಡಿರುತ್ತಾರೆ. ಜೊತೆಗೆ ಪುರುಷ ಸಮನಾದ ಸ್ಥಾನವನ್ನು ನೀಡುವ ಮೂಲಕ ಸಮಾನತೆಯ ಸನ್ಮಾರ್ಗದಲ್ಲಿ ಸಾಗಿದ್ದಾರೆ ಎನ್ನುವುದು ನಮ್ಮಗೆಲ್ಲರಿಗೂ ತಿಳಿದ ವಿಚಾರವಾಗಿದೆ.
ಇಂದು ವಿಶ್ವದಲ್ಲಿಯೇ ಸಂಭವಿಸುತ್ತಿರುವ ಅಶಾಂತಿಯ ಕಿಚ್ಚನು ತಡೆಯಲು ಶರಣರ ವಾಣಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ಮತ್ತು ನೆಮ್ಮದಿಯ ಬದುಕು ನಮ್ಮದಾಗುತ್ತದೆ ಅಲ್ಲವೇ ? ಈ ದಿಸೆಯಲ್ಲಿ ನಾವೆಲ್ಲರೂ ಯೋಚನೆ ಮಾಡುವುದು ಒಳ್ಳೆಯದು. ಹಾಗಾಗಿ ಅಂದಿನ ಮಹಿಳೆಯರಿಗೆ ಶಿವಶರಣರು ಉಜ್ವಲ ಭವಿಷ್ಯವಿದೆ ಎಂದು ಆತ್ಮ ಸ್ಥೈರ್ಯ ತುಂಬಿದವರು ಎಂಬುದು ನಾವ್ಯಾರೂ ಮರೆಯಬಾರದು. ಕೆಲವು ಮನಸ್ಥಿತಿಗಳು ಇಂದಿಗೂ ಹೆಣ್ಣನ್ನು ಒಂದಲ್ಲ ಒಂದು ರೀತಿಯಿಂದ ಶೋಷಿಸುತ್ತಿರುವುದು ಅವಮಾನ ಮಾಡುತೀರುವುದು ಹೇಯ ಕೆಲಸ ಹಾಗಾಗಿ ಮಹಿಳಾ ಕುಲಕ್ಕೆ ಅಗೌರವ ನೀಡುತ್ತೀರುವುದು, ಸಂವಿಧಾನಕ್ಕೆ ನಾವು ಮಾಡುವ ಘೋರ ಅಪರಾಧವಾಗಿದೆ ಎಂಬ ಸತ್ಯ ನಾವೆಲ್ಲರೂ ತಿಳಿದುಕೊಳ್ಳುವುದು ಸೊಕ್ತ.
ಸಮಾನತೆ ಮಹಿಳೆ : ಶರಣರ ವೈಚಾರಿಕ ಪ್ರಜ್ಞೆ ವಿಚಾರಕ್ಕೆ ಹಾಗೂ ಅವರ ಸಮಾನತೆಯ ಸಿದ್ಧಾಂತಕ್ಕೆ ಇಂದಿನ ಕೆಲವು ಮನುವಾದಿಗಳು ಮೂಲೆಗುಂಪು ಮಾಡುತ್ತಿರುವುದು ಶೋಚನೀಯ ಸಂಗತಿ. ಸಾಹಿತ್ಯ, ವಿಜ್ಞಾನ, ಶಿಕ್ಷಣ, ಧಾರ್ಮಿಕ, ಕ್ರೀಡೆ, ಆಧ್ಯಾತ್ಮಿಕವಾಗಿ ಎಷ್ಟೆಲ್ಲ ಮುಂದುವರೆದರೂ ಮಹಿಳೆಯರನ್ನು ಧಾರ್ಮಿಕ ಹಾಗೂ ಇತ್ಯಾದಿ ಹಲವು ಹಕ್ಕುಗಳಿಂದ ವಂಚಿಸುತ್ತಿರುವ ಈ ೨೧ ನೇಯ ಶತಮಾನದ ಸಮಾಜದಲ್ಲಿ, ಇನ್ನು ಸಾಮಾನ್ಯ ಮಹಿಳೆಯ ಗತಿ ಏನು? ಎಂಬ ಚಿಂತನೆ ಇಂದು ಹಲವಾರು ಮಹಿಳೆಯರಲ್ಲಿ ಕಾಡುತ್ತಿರುವ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಇಂದು ಮಹಿಳೆಯರ ಸಮಾನತೆ ಬಗೆ ಮಾತಾನಾಡುವುದು ಅನಿವಾರ್ಯವಾಗಿದೆ. ಹಾಗೂ ಮಹಿಳೆಯರ ಸ್ವಾತಂತ್ರ ಬಗ್ಗೆ ಮಾತನಾಡುವುದು ಎಂದರೆ ನಮ್ಮನ್ನ ನಾವು ಅವಲೋಕನ ಮಾಡಿಕೊಂಡಂತೆ ಎಂಬುದು ಸುಳ್ಳಲ್ಲ. ೧೨ ನೇ ಶತಮಾನದಲ್ಲಿ ೫೦೦ಕ್ಕೂ ಹೆಚ್ಚು ಮಹಿಳೆಯರನ್ನ ತನ್ನ ಬೆನ್ನಿಗೆ ಇಟ್ಟುಕೊಂಡು ಮಹಿಳಾ ಸಮಾನತೆಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಯಾವುದೆಂದರೆ ಅದು ಬಸವ ಸಾಹಿತ್ಯ ವಚನ ಚಳುವಳಿ ಇದು ಜಗತ್ತಿನಲ್ಲಿಯೇ ಪ್ರಥಮ ಮಹಿಳಾ ಸಮಾನತೆಯ ಹೋರಾಟವಾಗಿದೆ. ಹಾಗಾಗಿಯೇ ಮಹಿಳೆಯರನ್ನ ಶರಣ ಧರ್ಮ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಇಂದು ಮಹಿಳೆಯರು ಪುರುಷರ ಸಮಾನಾಂತರವಾಗಿ ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಶ್ರೇಷ್ಠ ಕೆಲಸ ಮಾಡುವುದು ನಾವೆಲ್ಲರೂ ಕಾಣುತ್ತಿದ್ದೇವೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿ ರೊವಾರಿಗಳಾಗಿ, ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಆಧುನಿಕ ಮಹಿಳೆ ಎಲ್ಲಾ ರೀತಿಯಲ್ಲೂ ಸಮಾಜ ಮುಖಿ ಕಾಯಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಸ್ವಾಭಿಮಾನದ ಬದುಕಿಗೆ ಹೊಸ ದಿಕ್ಕು ತೋರಿಸುವ ಮೂಲಕ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆಂದು ಹೇಳಲು ಹೆಮ್ಮೆ ಎನಿಸುತ್ತದೆ.
ಮಹಿಳೆಯರಿಗೆ ಸ್ವಾತಂತ್ರ್ಯ : ಸ್ವಾತಂತ್ರ್ಯ ಅಂದರೆ ರಾಜಕೀಯ ಸ್ವಾತಂತ್ರವೇ ಸ್ವಾತಂತ್ರ ಅಲ್ಲ, ಸ್ವಾತಂತ್ರ್ಯ ಎಂದರೆ ಸಾಮಾಜಿಕ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ. ದೇಶಕ್ಕೆ ಸ್ವಾತಂತ್ರ್ಯಬಂದು ೭೭ ವರ್ಷಗಳಾಯಿತು. ಆದರೆ ಮಹಿಳಾ ಸಮಾನತೆ ಹಕ್ಕನ್ನು( ಶೇಕಡಾ ೩೩ ) ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ಸಾವಿರ ಸಾವಿರ ವರ್ಷಗಳಿಂದ ನೂರು ಪ್ರತಿಶತಃ ಸ್ವಾತಂತ್ರ್ಯವನ್ನು ಅನುಭವಿಸಿದ ಪುರುಷ ಸಮುದಾಯ ಇಂದು ಮಹಿಳೆಯರಿಗೆ ೩೩ ಶೇಕಡಾ ಮೀಸಲಾತಿ ಕೊಡಲು ಮುಂದಾಗುತ್ತಿಲ್ಲ (ಇಂದಿನ ಕೇಂದ್ರ ಸರ್ಕಾರ... ಮುಂದುವರಿದ ಜನಾಂಗಕ್ಕೆ ೧೦ % ಮೀಸಲಾತಿ ೨ ದಿನಗಳಲ್ಲಿ ಪಾಸ್ ಮಾಡುವ ಮೂಲಕ ಬಡವರ ಪಾಲಿನ ಮೀಸಲಾತಿಯನ್ನು ಕಬಳಿಸಿ ದೊಡ್ಡ ಸಾಧನೆ ಮಾಡಿದ್ದೇವೆಂದು ಬೀಗುತ್ತಿದ್ದಾರೆ., ಬೀಗಲಿ ಬೀಡಿ, ಆದರೆ ಇಲ್ಲಿಯವರೆಗೆ ಮಹಿಳೆಯರ ೩೩% ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಯಾವುದೇ ರೀತಿಯ ಸ್ವಂದನೆ ಮಾಡದೇ ಇರುವುದು ದುರದೃಷ್ಟಕರ ಹಾಗೂ ನೋವಿನ ಸಂಗತಿಯಾಗಿದೆ)ಎಂಬುದು ಸೋಜಿಗದ ಸಂಗತಿ.
ಕರ್ನಾಟಕದಲ್ಲಿ ೧೨ನೇ ಶತಮಾನದ ಶರಣರು ಮಹಿಳೆಯರಿಗೆ ಸ್ವಾತಂತ್ರ್ಯದ ವಿಚಾರವನ್ನು ಘಟ್ಟಿಗೊಳಿಸಿದ್ದರು ಅದನ್ನ ಇವತ್ತಿಗೂ ಸಾಕಾರಗೊಳಿಸದೇ ಇರುವುದು ವಿಷಾದನೀಯ ಸಂಗತಿ.ಇಂದಿನ ಸಾಮಾಜಿಕ ಸಮಾಜದ ಸಂಕೋಲೆಗಳಲ್ಲಿ ಬಂಧಿತನಾಗಿರುವ ಪುರುಷರಿಗೆ ಅನೇಕ ಸಂಕೋಲೆಗಳಿರಬೇಕಾದರೆ ಇನ್ನು ಮಹಿಳೆಯರಿಗೆ ಇನ್ನೆಂತಹ ಸಂಕೋಲೆ ಇರಬೇಡ ಎಂಬುದನ್ನ ನಾವು ಪ್ರಶ್ನೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಗಾಂಧೀಜಿಯವರು ಒಂದು ಮಾತನ್ನ ಹೀಗೆ ಹೇಳಿದರು.ಅದು ಇಲ್ಲಿ ಉಲ್ಲೇಖನೀಯ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಯಾವಾಗ ಸಿಗುತ್ತೆಂದರೆ ಮಧ್ಯ ರಾತ್ರಿ ೧೨ಗಂಟೆಗೆ ಮಹಿಳಾ ತನ್ನ ಮನೆಗೆ ಅರಾಮಾಗಿ ತಲುಪಿದ್ದೇ ಆದರೆ ಅದು ನಿಜವಾದ ಮಹಿಳಾ ಸಮಾನತೆ ಹಾಗೂ ಸ್ವಾತಂತ್ರ್ಯದ ಕನಸು ಭಾರತ ಕಂಡಂತೆ ಎನ್ನುವ ಮಾತುಗಳು ಹೇಳಿದರು.ರಾಷ್ಟ್ರ ಧರ್ಮ ಹೇಳುತ್ತದೆ ನೀನು ಸಾವಿರ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದನ್ನ ನಿಲ್ಲಿಸು ಒಬ್ಬ ಮನುಷ್ಯನ ಮಾನಸಿಕ ನೆಮ್ಮದಿಗೆ ಪ್ರಯತ್ನಿಸು ಸಾವಿರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದಷ್ಟು ನಿನಗೆ ಆನಂದವ ಲಭಿಸುತ್ತದೆ. ಅದೇ ರೀತಿಯಾಗಿ ಸಾವಿರ ಸಾವಿರ ಮಹಿಳಾ ಮನಸ್ಸುಗಳನ್ನ ಕಟ್ಟುವುದರ ಮೂಲಕ ಭಾರತದ ಒಂದು ತುದಿಯಿಂದ ಮತ್ತೊಂದು ತುದಿಗೆ ವಿಶಾಲ ಜಗತ್ತಿನಲ್ಲಿ ಮತ್ತೊಮ್ಮೆ ಮಹಿಳೆಯರ ಸಮಾನತೆಯ ಅಂಗಳದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟು ಮತ್ತು ಕೊಡುವ ಮೂಲಕ ಚೈತನ್ಯವಾಗು ಎನ್ನುವ ಮೌಲ್ಯಯುತ ನುಡಿ ಕಾರ್ಯರೂಪಕ್ಕೆ ತರುವ ಕೆಲಸದ ಜೊತೆಗೆ ಪ್ರಯತ್ನ ಮಾಡಬೇಕಾಗಿದೆ. ಆದ್ದರಿಂದ
ಶರಣರು ಕೊಟ್ಟ ಸ್ವಾತಂತ್ರ್ಯ ಮಹಿಳೆಯರು ಸ್ವೇಚ್ಛಾಚ್ಚಾರಕ್ಕೆ ಬಳಸಿಕೊಳ್ಳದೆ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಬಳಸಿಕೊಳ್ಳಬೇಕು.ಆದರಿಂದ ಮಹೀಳೆಯರನ್ನು ವಿಶಾಲವಾದ ದೃಷ್ಟಿಯಿಂದ ನೋಡಿದರೆ ಸಾಕು ಬದಲಾವಣೆ ಪರ್ವ ಆರಂಭವಾಗಬಹುದು. ಮಹಿಳೆಯರ ಬಗೆ ಸಾಕಷ್ಟು ಸಾಹನುಬೂತಿ ವ್ಯಕ್ತ ಪಡಿಸುವ ರಾಜಕೀಯ ನಾಯಕರೂ, ಬುದ್ದಿ ಜೀವಿಗಳು, ಪಂಡಿತರು, ಅಧಿಕಾರಿಗಳು ಇತ್ಯಾದಿಯವರು ಒಮ್ಮೆ ಆತ್ಮ ವಿಮರ್ಶೆ ಮಾಡುವ ಸಮಯ ಬಂದಿದೆ.
ಸಾಮಾಜಿಕ ಸ್ವಾಸ್ತ್ಯವನ್ನ ಉಳಿಸಿಕೊಳ್ಳುವಂತಹ ಮೌಲ್ಯಗಳನ್ನ ಗಿಟ್ಟಿಸಿಕೊಳ್ಳುವುದು ಮಹಿಳಾ ಸಮಾನತೆಯ ಹಕ್ಕು. ಮಹಿಳಾ ತನ್ನ ಸುತ್ತಲೂ ತನಗೆ ಆಗುತ್ತಿರುವ ಅನ್ಯಾಯವನ್ನ ಪ್ರತಿಭಟಿಸಿ ನಿಂತು ಸಾಮಾಜಿಕ ನೆಲೆಯನ್ನು, ನೈತಿಕ ಮೌಲ್ಯವನ್ನ ಪಡೆದುಕೊಳ್ಳುವುದೇ ನಿಜವಾದ ಮಹಿಳಾ ಸ್ವಾತಂತ್ರ್ಯ. ನಮ್ಮನು ಹೆತ್ತು, ಹೊತ್ತು ದೊಡ್ಡವರನ್ನಾಗಿ ಮಾಡಿ, ನಾಡಿಗೆ ಧಾರೆ ಎರೆಯುವ ಕೈಗಳಿಗೆ ನಾವು ಬೇಡಿ ಹಾಕಿ, ನಿಯಂತ್ರಣ ಮಾಡುತ್ತಿರುವುದು ಹೇಡಿತನದ ಕೆಲಸ ಅಲ್ಲವೇ? ಇನ್ನಾದರೂ ಯೋಚಿಸಿ ಬಂಧುಗಳೇ, ಸಮಾನತೆಯ ಸ್ವಾತಂತ್ರ್ಯವನ್ನು ನೀಡಿ ನಾವೆಲ್ಲರೂ ವಿಶ್ವಕ್ಕೇ ಮಾದರಿಯಾಗೋಣ. ಏನಂತೀರಿ?
-ಸಂಗಮೇಶ ಎನ್ ಜವಾದಿ ಕೊಡಂಬಲ.