ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆನಂದ್ ನೀಲಕಂಠನ್, ಕನ್ನಡಕ್ಕೆ: ರತೀಶ ಬಿ ಆರ್
ಪ್ರಕಾಶಕರು
ಹರಿವು ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೪

ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...

“ಮಕ್ಕಳಿಗಾಗಿ ನಾನು ಬರೆಯುತ್ತಿರುವ ಮೊದಲ ಸರಣಿ ಪುಸ್ತಕ ಇದು. ಆದರೆ ಈ ಕತೆಯನ್ನು ದೊಡ್ಡವರೂ ಓದಿ ಮನರಂಜನೆ ಪಡೆಯಬಹುದಾಗಿದೆ. ಈಗ ಈ ಕತೆಯನ್ನು ಓದುವ ಮಕ್ಕಳು ಮುಂದೆ ಹಲವು ವರ್ಷಗಳಾಗಿ ದೊಡ್ಡವರಾದ ಮೇಲೆ ಮತ್ತೊಮ್ಮೆ ಇದೇ ಕತೆಯನ್ನು ಓದಿ ಕತೆಯಲ್ಲಿರುವ ಒಳ-ಪದರಗಳನ್ನು ಅರಿತುಕೊಳ್ಳುತ್ತಾರೆ ಎಂದು ನಂಬಿದ್ದೇನೆ.

ಡಿಸ್ನಿ ಹಾಗೂ ಪಿಕ್ಸರ್ ಕಂಪನಿಗಳು ಎಡಬಿಡದೇ ಹೊರತರುವ ಲಯನ್ ಕಿಂಗ್, ಮೋನ ಹಾಗೂ ಇನ್ನಿತರ ಅನಿಮೇಶನ್ ಸಿನೆಮಾಗಳಂತೆ ನಾವು ಏಕೆ ಸಿನೆಮಾಗಳನ್ನು ಮಾಡಬಾರದು, ಎಂದು ಒಬ್ಬ ಕತೆಗಾರನಾಗಿ ಹಾಗೂ ಚಿತ್ರಕತೆ ಬರಹಗಾರನಾಗಿ ನನಗೀ ಆಲೋಚನೆ ಯಾವಾಗಲೂ ಬರುತ್ತಿರುತ್ತದೆ. ನಮ್ಮಲ್ಲಿ ಅನಿಮೇಶನ್ ಮಾಡಲು ಸಾಧ್ಯವಾಗುವಂತಹ ಮಕ್ಕಳ ಕತೆಗಳು ಮೂಡಿ ಬರುತ್ತಿರುವುದು ಕಡಿಮೆ ಆಗಿರುವುದು ಕೂಡ ಇದಕ್ಕೆ ಕಾರಣವಿರಬಹುದು. ನಮ್ಮಲ್ಲಿರುವ ಹೆಚ್ಚಿನ ಪುಸ್ತಕಗಳು ಪುರಾಣಗಳನ್ನು ಇನ್ನೊಂದು ಬಗೆಯಲ್ಲಿ ಹೇಳುತ್ತವೆ. ಇಲ್ಲವೇ ನೀತಿಕತೆಗಳಾಗಿವೆ. ಹಾಗಾಗಿ ನಮ್ಮ ಮಕ್ಕಳು ಮನರಂಜನೆಗಾಗಿ ಪಶ್ಚಿಮ ದೇಶಗಳ ಕತೆಗಳತ್ತ ವಾಲಿವೆ. ಕಳೆದ ನೂರು ವರ್ಷಗಳಲ್ಲಿ ಜಂಗಲ್ ಬುಕ್ ಕತೆಯನ್ನು ಇಂಡಿಯನ್ ಬರಹಗಾರನೊಬ್ಬ ಏಕೆ ಬರೆಯಲಾಗಲಿಲ್ಲ? ಇಂಡಿಯಾದಲ್ಲಿ ಯಾವುದೇ ಪುಸ್ತಕದ ಅಂಗಡಿಗೆ ಹೋಗಿ ನೋಡಿ, ಅಲ್ಲಿನ ಮಕ್ಕಳ ಪುಸ್ತಕಗಳ ಕಪಾಟಿನಲ್ಲಿ ಪಶ್ಚಿಮ ದೇಶದ ಬರಹಗಾರರ ಪುಸ್ತಕಗಳೇ ತುಂಬಿ ತುಳುಕುತ್ತಿರುತ್ತವೆ. ಇಂಡಿಯಾದ ಬರಹಗಾರರಿಗೆ ತುಂಬಾ ಕಡಿಮೆ ಜಾಗ ಮಾಡಿಕೊಡಲಾಗಿರುತ್ತೆ.

ಈ ನಿಟ್ಟಿನಲ್ಲಿ, ‘ಮಹಿ: ನೀಲಿಬೆಟ್ಟಗಳ ಮೇಲೆ ಹಾರಿದ ಆನೆ’ ಕತೆಯು ಮಕ್ಕಳ ಪುಸ್ತಕದ ವಿಚಾರದಲ್ಲಿ ಒಂದು ಮೈಲಿಗಲ್ಲನ್ನು ಹುಟ್ಟುಹಾಕಲು ಮಾಡಿದ ಪ್ರಾಮಾಣಿಕ ಪ್ರಯತ್ನವಾಗಿದೆ. ಮುಂದೊಂದು ದಿನ, ಈ ಕತೆ ಅನಿಮೇಶನ್ ರೂಪದಲ್ಲಿ ನಾವೆಲ್ಲರೂ ನೋಡುವಂತೆ ಆಗಲಿದೆ ಎಂಬುದು ನನ್ನ ಬಯಕೆ. ಅಷ್ಟೇ ಅಲ್ಲದೇ ಈ ಪುಸ್ತಕವನ್ನು ಓದುವ ಯುವ ಓದುಗರು ಸೇರಿ ಹಲವಾರು ಬರಹಗಾರರು ಮಕ್ಕಳಿಗಾಗಿ ಈ ಬಗೆಯಲ್ಲಿ ಹೆಚ್ಚಿನ ಪುಸ್ತಕಗಳನ್ನು ಹೊರತರುತ್ತಾರೆ ಎಂಬ ಕನಸನ್ನೂ ಹೊತ್ತಿದ್ದೇನೆ. ಹಾಗಾದಾಗ, ಒಂದು ದಿನ ನಾವು ಜಗತ್ತಿನ ತುಂಬೆಲ್ಲಾ ಭಾರತೀಯ ಕತೆಗಳೇ ಕೇಳುವ ಹಾಗೂ ಕಾಣುವ ಗಳಿಗೆಗಳು ಬರಲಿವೆ. ರಾಮಾಯಣ, ಮಹಾಭಾರತ, ಪಂಚತಂತ್ರ, ವಿಕ್ರಮ ಬೇತಾಳ ಕತೆಗಳು ಸಾವಿರಾರು ವರ್ಷಗಳಿಂದ ಜಗತ್ತಿನ ಮೂಲೆ ಮೂಲೆಯನ್ನು ತಲುಪಿಲ್ಲವೇ ಹಾಗೆಯೇ ನಮ್ಮ ಹೊಸ ಹೊಸ ಮಕ್ಕಳ ಕತೆಗಳೂ ತಲುಪಲಿ.”

ಮನಸ್ಸಿಗೆ ಉಲ್ಲಾಸವನ್ನು ನೀಡುವ, ನಗೆಗಡಲಿನಲ್ಲಿ ತೇಲುವಂತೆ ಮಾಡುವ 'ಮಹಿ'ಯ ಕತೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಿಡಿಸಲಿದೆ. ನೀಲಿ ಬೆಟ್ಟಗಳ ಮೇಲೆ ಹಾರಲೇ ಬೇಕೆಂಬ ಅಸಾಧ್ಯವೆನಿಸುವ ಕನಸನ್ನು ಕಾಣುವ ಮಹಿ ಎಂಬ ಆನೆ ಮರಿಯ ಸಾಹಸದ ಕತೆಯಿದು. ಪ್ರತಿ ಪುಟದಲ್ಲಿ ಮುದ ನೀಡುವ ಸನ್ನಿವೇಶಗಳೊಂದಿಗೆ ಹೆಣೆದಿರುವ ಈ ಕತೆ ಯುವ ಓದುಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಕತೆಗೆ ಹೊಂದುವಂತೆ ಇರುವ ಚಿತ್ರಗಳು, ಕತೆಯೊಳಗೆ ಬರುವ ಪಾತ್ರಗಳು ಎಲ್ಲವೂ ಓದುಗರ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ೨೩೨ ಪುಟಗಳ ಈ ಮಕ್ಕಳ ಕಥಾ ಪುಸ್ತಕವನ್ನು ಒಮ್ಮೆ ಓದಿ ನೋಡಿ.