ಮಾತಾಗಬಯಸುವ ಭಾವವೊಂದು
ಮಾತಾಗಬಯಸುವ ಭಾವವೊಂದು
-------------------------
ಅಂತರಂಗದ ಭೂಮಿಯಲ್ಲಿ
ಮಾತಾಗಬಯಸುವ ಭಾವವೊಂದು,
ಅಲೆಯುತಿದೆ ದಿಕ್ಕುಗೆಟ್ಟು.
ವಿಹ್ವಲತೆಯೆ ಅದರ ಬಂಧು !
ಆದಿ ಅಂತ್ಯದರಿವೆ ಇಲ್ಲ
ತಾನರಿಯದು ಹಿಂದು ಮುಂದು.
ತುಮುಲದಿಂದ ನಡೆಯುತಲದು,
ಮೇಲ್ನೋಡಿದೆ ಅಲ್ಲೇ ನಿಂದು.
ಬಿತ್ತರ ಸ್ವರ ಗಗನದಲಿ
ಮಾತಿನ ಬಾನಾಡಿಗಳು.
ಭಾವ ತಾನು ಮೇಲೆ ಹಾರಿ
ಆಗಬಯಸಿದೆ ಮಾತುಗಳು.
ಆದರದಕೆ ಅರಿವೆಯಿಲ್ಲ
ಎಲ್ಲ ಭಾವಕೆ ರೆಕ್ಕೆಯಿಲ್ಲ.!
ಮಾತಾಗಿದೆ ಬರಿಯ ಕನಸು,
ನುಡಿಯಾಗುವ ಪುಣ್ಯವಿಲ್ಲ.
ಭಾರವಾದ ಹೆಜ್ಜೆಯೂರಿ
ಮುನ್ನೆಡೆಯುತಿದೆ ಭಾವವು.
ಮೌನದೂರಿನ ಕೆರೆಯ ತೀರದಿ
ಕಂಡಿತದರ ಪ್ರತಿಬಿಂಬವು.
ಬಿಂಬ ನುಡಿಯಿತು ಭಾವಕೆ
ಕೊರಗದಿರು ನೀ ಮರುಗದಿರು.
ನುಡಿಯಾಗದಿದ್ದರೇನು ಗೆಳೆಯ
ಮುಖಭಾವದಿ ಹೊರಹೋಗುವೆ.
ಸ್ವರ ಮೊಳಗುವ ಕಂಠದಿ
ಗದ್ಗದಿತದಿ ಕೂರುವೆ.
ಮಾತಿಗಿಂತ ಸ್ಫುಟವಾಗಿ
ಕಣ್ಣಂಚಿನಲಿ ತುಳುಕುವೆ.
ಹೃದಯ ಜನ್ಯ ಭಾವಕೆಲ್ಲ
ನುಡಿಯೊಂದೆ ಗಮ್ಯವಲ್ಲ.
ಕಣ್ಣಂಚಿದೆ, ನಿಟ್ಟುಸಿರಿದೆ.
ಮುಖಭಾವದ ಜಗವಿದೆ.
ಬಿಂಬ ಬೆಂಬಲ ಫಲಿಸಿತು
ಭಾವ ಮಿಸುನಗೆ ಬೀರಿತು.
ಭಾರದೆಜ್ಜೆಯ ಮರೆಯಿತು,
ಧೀರದೆಜ್ಜೆಯನಿಟ್ಟಿತು.
ಅಂತರಂಗದ ಭೂಮಿಯಲ್ಲೇ
ಭಾವವ ತಾನು ಉಳಿಯಿತು.
ಮಾತಿಗಿಂತ ತೀಕ್ಷ್ಣವಾಗಿ
ಅರ್ಥವನ್ನು ಹೊರಸೂಸಿತು.
- ಚಂದ್ರಹಾಸ ( ೨೩ - ೦೩ - ೨೦೧೩)
Comments
"ಬಿಂಬ ಬೆಂಬಲ ಫಲಿಸಿತು
"ಬಿಂಬ ಬೆಂಬಲ ಫಲಿಸಿತು
ಭಾವ ಮಿಸುನಗೆ ಬೀರಿತು.
ಭಾರದೆಜ್ಜೆಯ ಮರೆಯಿತು,
ಧೀರದೆಜ್ಜೆಯನಿಟ್ಟಿತು.
ಅಂತರಂಗದ ಭೂಮಿಯಲ್ಲೇ
ಭಾವವ ತಾನು ಉಳಿಯಿತು.
ಮಾತಿಗಿಂತ ತೀಕ್ಷ್ಣವಾಗಿ
ಅರ್ಥವನ್ನು ಹೊರಸೂಸಿತು."
ಸುಖಾಂತ್ಯ...!!
ಸುಂದರ ಬರಹ..
ಇಷ್ಟ ಆಯ್ತು..
ಶುಭವಾಗಲಿ..
\।
In reply to "ಬಿಂಬ ಬೆಂಬಲ ಫಲಿಸಿತು by venkatb83
ಧನ್ಯವಾದಗಳು ...
ಧನ್ಯವಾದಗಳು ...