ಮಿಥ್ಯದ ಅರಿವು

ಮಿಥ್ಯದ ಅರಿವು

ಕ್ರೌರ್ಯದಲಿ ಸತ್ತ ವ್ಯಕ್ತಿತ್ವದ ತುಂಡುಗಳನ್ನು
ಒಂದೊಂದಾಗಿ ಕಿತ್ತೆಳೆದು ಹೊರಹಾಕಿ 
ಶುದ್ದ ಮಾನವನಾಗುವ ಹಂಬಲದಲಿ
ಪೊರೆ ಕಳಚಿ, ಮೈ ಕೊಡವಿ ಮೇಲೆದ್ದೆ.

ಸುತ್ತಲಿದ್ದ ಜನ, ಹೊಸರೂಪ ನೋಡದಲೆ
ಸತ್ತ ಕ್ರೌರ್ಯವ ನೆನಪಿಸಿ ಕುಹಕಿಸಿದರು;
ಅವರ ನುಡಿಗಳ ನೆನೆಯದೆ ನಡೆದೆ
ಆದಷ್ಟು ದೂರ, ಎಲ್ಲ ಬಂದನಗಳಾಚೆಗೆ.

ನನ್ನದೇ ದಾರಿಯಲಿ ನಡೆಯುವಾಗ,
ನಕ್ಕರು ಇನ್ನೊಂದಿಷ್ಟು ಜನ, ಕೊಂಕಿಸುತ;
ಅವರ ನೋಡುತ, ನನ್ನತನವ ಮುಷ್ಟಿಹಿಡಿದೆ;
ಅವಡುಗಚ್ಚಿ ನಡೆದೆ, ಗಮ್ಯವ ನೆನೆಯುತ.

ಜಗದ ಸತ್ಯ, ಸಾರ್ವಕಾಲಿಕ ಸತ್ಯ, ಎಲ್ಲವೂ
ಕ್ಷಣಿಕ ಈ ನಿತ್ಯ ಜನಜಂಗುಳಿಯೊಳಗೆ,
ನಾನಾರನೂ ಮೆಚ್ಚಿಸಲಿಲ್ಲ, ಆ ಅವಶ್ಯವೂ ಇಲ್ಲ.
ನನ್ನದೇ ಮನದ ಹುಡುಕಾಟದಲ್ಲಿ ನಾನಿದ್ದೆ.

ಗತಿಸಿಹೋದ ನಿನ್ನೆಗಳ ನೆನೆಯಲಿಲ್ಲ
ನಾಳೆಗಳ ಹೊಳಹಿನೊಳಗೆ ಕ್ಷಣ ಕಳೆಯಲಿಲ್ಲ
ಈ ಕ್ಷಣವೇ ನನ್ನದೆನ್ನುತ, ಆಸ್ವಾದಿಸಿದೆ
ಜಲಪಾತದೆದುರಲ್ಲಿ ನಿಂತು, ನೀರ ಹನಿಗಳನು.

ಕೊಂಕು ಕುಹಕವಾಡಿದ ಜನ, ಅಲ್ಲೇ ಇದ್ದರು
ನಾನು ನನ್ನನೇ ಹುಡುಕುವುದರಲ್ಲಿ ಮುಳುಗಿದೆ;
ಜಗವೆಲ್ಲ ಮಿಥ್ಯ, ಮತ್ತಲ್ಯಾಕೆ ಹುಡುಕಲಿ ಸತ್ಯ?
ಸವೆಸಿದ ದಾರಿ ಹೇಳಿತು, ಬದುಕೆಂದರೇನೆಂದು!

ದೂರದಲಿ ನಿಂತು ಕಣ್ಣರಳಿಸಿ ನೋಡಿದಾಗ
ಮಾನವ ಜೀವಿಯಾಗಿ, ನೈಜ ಬದುಕು ಮರೆತು
ಬದುಕಿದಂತೆ ನಟಿಸುವುದೇ, ಬದುಕೆಂದುಕೊಂಡಂತ್ತಿತ್ತು
ಪ್ರಕೃತಿಯ ಮೌನ ಅರಿತರೆ, ತನ್ನತನದ ಅರಿವಾಯಿತು.

-ಜೀ ಕೇ ನ 
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ)

Comments

Submitted by kavinagaraj Mon, 01/05/2015 - 16:24

ಚೆನ್ನಾಗಿದೆ. ಸತ್ಯವನ್ನು ಹುಡುಕಬೇಕಾದದು ಹೊರಗಲ್ಲ, ಒಳಗೆ ಎಂದು ನಿರೂಪಿಸಿರುವುದು ಇಷ್ಟವಾಯಿತು.