ಮೀರಿದ್ದೇನು ?
ಸಂವಹನ ಮಾಧ್ಯಮದ ನೂರೆಂಟು ತರದ ವೈವಿಧ್ಯಮಯ ಆಯ್ಕೆಗಳು ತುಂಬಿ ತುಳುಕುವ ತಾಂತ್ರಿಕ ಯುಗದಲ್ಲು ಜನ್ಮದತ್ತ ಸ್ವಾಭಾವಿಕ ಸಂವಹನ ಮಾಧ್ಯಮಗಳು ಪ್ರಸ್ತುತ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಹೊಸತರೊಡನೆ ಹೊಂದಿಕೊಳ್ಳುತ್ತ ತಮ್ಮ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳುತ್ತ ನಡೆದಿವೆ ಈ ಪಂಚೇಂದ್ರಿಯಾದಿ ಪೋಷಿತ ಮಾರ್ಗಗಳು. ವಿಸ್ಮಯವೆಂದರೆ ಬಾಹ್ಯದಲ್ಲಿ ಎಷ್ಟೆ ಆಧುನಿಕ ಸಲಕರಣೆಗಳು ಕೈಗೂಡಿಸಿ ನಿಂತರು, ಅಂತರಂಗಿಕವಾಗಿ ಪ್ರೇರೇಪಣೆ ಯಾ ಪೋಷಣೆಯಿಲ್ಲದೆ ಅವುಗಳ ಸೂಕ್ತ ಬಳಕೆ, ಸದುಪಯೋಗವಾಗುವುದು ಅನುಮಾನ. ಆ ಒಳಗಿನ ಚಡಪಡಿಕೆ ಹೊರಗಿನ ಪ್ರತಿಕ್ರಿಯೆಯನ್ನು ನಿಭಾಯಿಸುವುದರಿಂದ ಏನೇ ಮಾಡಹೊರಟರು ಅವುಗಳ ಪ್ರಭಾವ ಒಂದಲ್ಲ ಒಂದು ರೀತಿ ಎದ್ದು ಕಾಣುತ್ತದೆ. ಓದಾಗಲಿ, ಬರಹವಾಗಲಿ, ಆಲಿಸುವಿಕೆಯಾಗಲಿ, ಮಾತಾಗಲಿ, ಮೌನವಾಗಲಿ, ದೈಹಿಕ ಸಂಜ್ಞೆಗಳಾಗಲಿ - ಎಲ್ಲವು ನಿಯಂತ್ರಿತ ಮತ್ತು ಅನಿಯಂತ್ರಿತ ಅನಿಸಿಕೆಗಳ ಸಮಷ್ಟಿ ಮೊತ್ತವಾಗಿ, ಪ್ರಕಟವಾದ ಹೊತ್ತಲ್ಲಿ ಸುತ್ತಲ ಪರಿಸರದ ಪರಿಸ್ಥಿತಿಯನುಸಾರ ತನ್ನದೆ ಆದ ರೂಪದಲ್ಲಿ ಅನಾವರಣಗೊಂಡುಬಿಡುತ್ತವೆ. ಹೀಗೆ ಪ್ರಕಟವಾಗಿದ್ದೆಲ್ಲವನ್ನು ಮೀರಿಸಿದ ಆ ಅಂತರಂಗಿಕ ಗದ್ದಲ, ಗೊಂದಲಗಳ ಚೇಷ್ಟೆಯ ಮೇಸ್ತ್ರಿ ಯಾವುದೆನ್ನುವ ಕುತೂಹಲದಲ್ಲಿ ಮೂಡಿದ ಕೆಲವು ಸಾಲುಗಳು ಈ ಕೆಳಗೆ...
ಮೀರಿದ್ದೇನು ?
______________________
ಬರಹವೆ ಸೋಮಾರಿ
ಮೂಡಿದ್ದೊಂದೆ ಗಳಿಗೆ
ತಾನಾಗದೆ ಬರವಣಿಗೆ ||
ಮಾತುಗಳೊ ಉದಾರಿ
ಮೂಡುವ ಮೊದಲೆ ಮೂರ್ತ
ಅನಾವರಣ ಚಡಪಡಿಸುತ್ತ ||
ಮೌನದ್ದೆ ಗದ್ದಲ ಗೊಂದಲ
ಆಡುತ್ತಲೆ ಅಗಣಿತ ಕೋಟಿ
ಆವರಣದಲವಿತೆ ಲೂಟಿ ||
ಸಂಜ್ಞೆ ಸನ್ನೆ ಸಂವಹನ
ಕಾನೂನು ನಿಯಮ ಬ್ರಹ್ಮ
ಅಸ್ಪಷ್ಟತೆ ಮರುಕಳಿಸಾಟ ||
ಓದಾಟವೇನೊ ಸೊಗಸು
ರಾಶಿ ಮರಳೊಂದೊಂದೆ ಕಣ
ಹೆಕ್ಕಬಿಡ ದೈನಂದಿನ ಗಾಣ ||
ಕೇಳಿದ್ದೇನೊ ಖಚಿತ
ಸಂಶಯ ಉಚಿತಾನುಚಿತ
ಕೇಳೊ ಸದ್ದುಗಳಲಡಗಿ ಧೂರ್ತ ||
ಮಾತು ಮೌನ ಓದು ಬರಹ
ಸಂಕೇತಕು ಮೀರಿದ ಸೂಕ್ತ
ಕಾಡೊ ಪರಿಯೆ ಚಂಚಲ ಚಿತ್ತ ? ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಮೀರಿದ್ದೇನು ?
ನಾಗೇಶರೆ,
ಆವರಣದಲವಿತೆ ಲೂಟಿ-ಮೌನದ್ದೇ ಗದ್ದಲ :) ಕವಿತೆ ಚೆನ್ನಾಗಿದೆ..
ಕೊನೆಯ ಪ್ಯಾರಾದಲ್ಲಿ ಎರಡೇ ಸಾಲು ಇದೆ...
In reply to ಉ: ಮೀರಿದ್ದೇನು ? by ಗಣೇಶ
ಉ: ಮೀರಿದ್ದೇನು ?
ಗಣೇಶ್ ಜಿ ನಮಸ್ಕಾರ... ಮೌನದ ಸಾಲುಗಳು ನಿಮ್ಮ ತಾತ್ಕಾಲಿಕ ಮೌನವನ್ನು ಭೇಧಿಸಲು ಸಾಧ್ಯವಾಗಿದ್ದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ಕಾಣಲು ಸಾಧ್ಯವಾಯ್ತು. ಅಂದ ಹಾಗೆ ಆ ಕೊನೆಯೆರಡು ಸಾಲನ್ನು ಸೇರಿಸಿದ್ದು ಯಾರೊ ? ಹೇಗು ಸೇರಿಸಿದ ಕರ್ಮಕ್ಕೆ ಮೂರು ಸಾಲಾಗಿಸಿಬಿಡುತ್ತೇನೆ - ಪರಿಪೂರ್ಣದಂತಾದರೂ ಕಾಣಲೆಂದು !
----------------------
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
- ಕೊನೆಗೆ ಸೇರಿಸಿದವರಾರು ?
------------------------------
ಧನ್ಯವಾದಗಳೊಂದಿಗೆ (!)
ನಾಗೇಶ ಮೈಸೂರು (!)
ಉ: ಮೀರಿದ್ದೇನು ?
ಎಲ್ಲವೂ ಅಲ್ಲಿಂದಲೇ ಪ್ರಾರಂಭವಾಗಿ ಎಲ್ಲೆಲ್ಲೋ ಸುತ್ತಿ ಅಲ್ಲಿಗೇ ಬರುವುದು! ಚಿತ್ತರೂಪಕ ಚೆನ್ನಾಗಿದೆ, ನಾಗೇಶರೇ.
In reply to ಉ: ಮೀರಿದ್ದೇನು ? by kavinagaraj
ಉ: ಮೀರಿದ್ದೇನು ?
ಧನ್ಯವಾದಗಳು ಕವಿಗಳೆ :-)
ಚಿತ್ತದ ಚಡಪಡಿಕೆ
ಹೊತ್ತು ಗೊತ್ತಿಲ್ಲದ ಬಡಬಡಿಕೆ
ಮಾಡುವುದೆಲ್ಲ ಮಾಡಿ
ಮುಸುಕ ಹಾಕಿ ಕೂರುವ ಅನಾಡಿ :-)