ಮುಂಗಾರು ಮಳೆಯೇ...
"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ಬಿದ್ದಾಗ ಹರಡುವ ಮಣ್ಣಿನ ಪರಿಮಳ....ಆಕಾಶದಲ್ಲಿ ಮೋಡ ಕವಿಯುತ್ತಿದ್ದಂತೆ ದುಂಬಿಗಳು ಹಾರಾಡುತ್ತವೆ..ದನಕರುಗಳು 'ಅಂಬಾ' ಎಂದು ಕೂಗುತ್ತಾ ಕೊಟ್ಟಿಗೆ ಸೇರುತ್ತವೆ..ಹೊರಗಿದ್ದ ಬಟ್ಟೆ ಬರೆ, ಕಟ್ಟಿಗೆ ಎಲ್ಲಾ ದಿಢೀರನೆ ಮನೆಯೊಳಗೆ ತಂದು ಹಾಕುವುದು, ಕೋಳಿ ಮರಿಗಳನ್ನು ಬೆಚ್ಚನೆಯ ಗೂಡಿನೊಳಗೆ ನೂಕುವುದು...ಇಂತದೆಲ್ಲಾ ನಮ್ಮ ಹಳ್ಳಿಯಲ್ಲಿ ಸರ್ವೇ ಸಾಮಾನ್ಯ. ಅಲ್ಲಿನ ಮುಂಗಾರು ಮಳೆಯ ಶೃಂಗಾರವೇ ಬೇರೆ. ದಿನವಿಡೀ ಹನಿ ಬಿಡದೆ ಸುರಿಯುವ ಮಳೆ, ಸುತ್ತಲೂ ಜಲಮಯ. ರಾತ್ರಿಯಾದರೇನೋ ಗುಡುಗು ಮಿಂಚುಗಳ ಆರ್ಭಟ. ಗಾಜಿನ ಕಿಟಕಿಗೆ ಮಿಂಚು ಬಡಿಯುವಾಗ, ಗುಡುಗಿಗೆ ಹೆದರಿ, ಕರೆಂಟು ಇಲ್ಲದ ರಾತ್ರಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮಲಗಿದ್ದು ಎಲ್ಲವೂ ನೆನಪಿನ ಪುಟದಲ್ಲಿ ಅಳಿಯಲಾರದ ಬರಹಗಳು.
ಪ್ರಸ್ತುತ ನನ್ನ ಪುಟ್ಟ ಹಳ್ಳಿಯ ಪ್ರತೀ ಮಳೆಯನ್ನು ಚೆನ್ನೈಯಲ್ಲಿ ಮಿಸ್ ಮಾಡುತ್ತಿದ್ದೇನೆ. ನಮ್ಮೂರಲ್ಲಿ ಇದೀಗ ಮಳೆ ಹನಿ ಲಾಸ್ಯವಾಡುತ್ತಿರುವ ಈ ವೇಳೆಯಲ್ಲಿ ಇಲ್ಲಿನ ಉರಿ ಬಿಸಿಲಿಗೆ ಬೆವರು ಹರಿಯುತ್ತದೆ. ಸೆಖೆ ಸೆಖೆ ಎಂದು ನಿದ್ದೆ ಮಾಡಲಾಗದ ಸ್ಥಿತಿ, ಕರೆಂಟು ಕೈ ಕೊಟ್ಟರಂತೂ ಹೇಳತೀರದು. ಅಂತೂ ರಾತ್ರಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ. ಉರಿ ಬಿಸಿಲಿನಲ್ಲಿ ನೀರಿನ ಅಭಾವ ಬೇರೆ, ಪ್ಯಾಕೇಜ್ಡ್ ವಾಟರ್ ಕುಡಿದು ಕುಡಿದು "ದೇವದಾಸನ ದಾರು ಬಾಟಲ್"ಗಳಂತೆ ನೀರಿನ ಬಾಟಲಿ ಹತ್ತಿರ ಇಟ್ಟು ಕೊಳ್ಳಲೇ ಬೇಕಾಗಿದೆ. (ಇಲ್ಲಿ ಕುಡಿ ನೀರಿಗೆ ಪ್ಯಾಕೇಜ್ಡ್ ವಾಟರ್ ಮಾತ್ರ ಗತಿ!). ಸ್ನಾನಕ್ಕೆ ಉಪ್ಪು ನೀರು. ಮೆಟ್ರೋ ನಗರದ ಜೀವನ ನರಕಮಯ ಎಂದೇ ಹೇಳಬಹುದು. ಆದ್ರೆ ಚೆನ್ನೈ ನಗರಕ್ಕೆ ಬಿಸಿಲೇ ಸೂಕ್ತ ಅಂತ ಅನಿಸುತ್ತದೆ. ಮಳೆ ಬಂದರಂತೂ ಈ ನಗರ ನರಕವಾಗುತ್ತದೆ. ಚರಂಡಿ ನೀರು ರೋಡಿನಲ್ಲಿ ಹರಿಯುತ್ತದೆ. ವಾಹನಗಳ ಟ್ರಾಫಿಕ್, ಕೆಸರೆರೆಚಾಟ ಇವುಗಳನ್ನೆಲ್ಲಾ ಸಹಿಸಿ ಆಫೀಸಿಗೆ ತಲುಪುವಾಗ ಹೈರಾಣಗಿ ಬಿಡುತ್ತೇವೆ.
ಇದನ್ನೆಲ್ಲಾ ಅನುಭವಿಸುವಾಗ ನಮ್ಮೂರಿನ ಮಳೆಯ ಮೇಲಿನ ಪ್ರೀತಿ ಮತ್ತೂ ಹೆಚ್ಚಾಗುತ್ತದೆ ಹಾಗೂ ಅಲ್ಲಿನ ನೆನಪು ಕಾಡುತ್ತದೆ. ಅಲ್ಲಿನ ಒಂದೊಂದು ಹನಿಯೂ ಪ್ರೇಮ ಕಾವ್ಯ ಬರೆಯುತ್ತದೆ ಎಂದೇ ಹೇಳಬಹುದು. ತೆರೆದ ಆಗಸದ ಹಾದರದ ಮೇಲೆ ಬೆಳ್ಮುಗಿಲನ್ನು ಕಾರ್ಮುಗಿಲು ತನ್ನ ತೆಕ್ಕೆಗೆಳೆದು ಕೊಂಡಾಗ ತಂಪಾದ ಗಾಳಿ ಪ್ರೀತಿಯ ಕಾವ್ಯಕ್ಕೆ ಮುನ್ನುಡಿ ಬರೆಯುತ್ತದೆ. ಗಿಡ ಮರಗಳು ಇದರೊಂದಿಗೆ ತಲೆದೂಗಿದಾಗ, ಪಕ್ಷಿಸಂಕುಲಗಳು ತನ್ನವರೊಂದಿಗೆ ಗೂಡು ಸೇರುವ ತವಕದಲ್ಲಿ ಚಿಲಿ ಪಿಲಿಗುಟ್ಟುತ್ತಾ ತಾಳ ಹಾಕುತ್ತವೆ. ಮಳೆಯನ್ನು ಆಹ್ವಾನಿಸುವ ಕಪ್ಪೆ ತನ್ನ ನಾದವನ್ನು ಹೊರಡಿಸುವಾಗ, ದುಂಬಿಗಳು ಚಿತ್ತಾರ ಬಿಡಿಸುತ್ತವೆ. ಇದಾದನಂತರ 'ಧೋ' ಎಂದು ಮಳೆಸುರಿದು ಇಳೆ ತಂಪಾಗಿಸುತ್ತದೆ. ಮನೆ ಮುಂದೆ ಉಕ್ಕಿ ಹರಿಯುವ ತೋಡು ಹಳ್ಳಗಳು..ನೀರಿನ ಜುಳು ಜುಳು ನಿನಾದದೊಂದಿಗೆ ತೋಡಿನಲ್ಲಿ ಏಳು ಬೀಳುತ್ತಾ ನೀರಿನೊಂದಿಗೆ ಸಾಗುವ ತೆಂಗಿನ ಕಾಯಿ, ಹಲಸು,ಅಡಿಕೆ, ಮಾವುಗಳು. ಹಳ್ಳದಲ್ಲಿ ಜಿಗಿಯುವ ತುಂಡು ಬಾಲದ ಕಪ್ಪೆಗಳು, ಅಂತಹಾ ಮಳೆಗೆ ಹೊರಗೆ ಕಾಲಿಡಲೂ ಕೂಡಾ ಅಸಾಧ್ಯ!!, ಚಳಿ ಎಂದೆನಿಸುವಾಗ ಜಗಿಯಲು ಸಾಂತಾಣಿ, ಹಪ್ಪಳ... ಇವುಗಳೆಲ್ಲದರ ಅನುಭವ ಅವರ್ಣನೀಯ.
ಮಳೆ ಸುರಿದಾದ ನಂತರ ಹಿತವಾದ ನೆಲ, ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಚಿಕ್ಕ ಧಾರೆಯಾಗಿ ತೋಡಿನಲ್ಲಿ ನೀರು ಹರಿಯುತ್ತಿರುತ್ತದೆ. ಮರದೆಲೆಯಿಂದ ಟಿಪ್ ಟಿಪ್ ಎಂದು ಬೀಳುವ ಹನಿಮುತ್ತುಗಳು. ಅದಾಗಲೇ ಸ್ನಾನ ಮಾಡಿ ಬಂದಂತೆ ಕಂಗೊಳಿಸುವ ಸ್ವಚ್ಛ ಸುಂದರವಾದ ಭೂಮಿ. ಆ ಸಂಜೆಗಳಲ್ಲಿ ಸೂರ್ಯ ಎಳೆ ಬಿಸಿಲು ಬೀರಿ ನಗುವಾಗ, ಬಯ್ಯ ಮಲ್ಲಿಗೆ ಬಿರಿದು ಕಂಪು ಸೂಸುವುದು ಇಲ್ಲಿನ ಸೌಂದರ್ಯಗಳಲ್ಲೊಂದು. ಮಳೆಗಾಲದ ಮಳೆಇಲ್ಲದ ರಾತ್ರಿಯಲ್ಲಂತೂ ಹುಳಕ್ಕೆ ರೆಕ್ಕೆ ಬಂದು ಹಾರುವ ಹಾತೆಗಳ ಉಪದ್ರವವೂ ಸಹಿಸಬೇಕು. ದೀಪದ ಬೆಳಕಿಗೆ ಹಾರುತ್ತಾ ಮನೆತುಂಬಿಕೊಳ್ಳುವ ಈ ಹಾತೆಗಳಿಂದ ಮುಕ್ತಿ ಪಡೆಯಲು ಮನೆಹೊರಗಿನ ಬಲ್ಬು ಮಾತ್ರ ಉರಿಸಿ, ಒಳಗೆ ಕತ್ತಲು ಮಾಡಿ, ಅಲ್ಪ ಹೊತ್ತಿಗೆ ಬಾಗಿಲು ಕಿಟಕಿ ಮುಚ್ಚಿ ಕುಳಿತು ಕೊಳ್ಳುವುದೂ ಒಂದು ಅನುಭವ. ಕರೆಂಟಿಲ್ಲದ ರಾತ್ರಿಯಲ್ಲಿ ಚಿಮಿಣಿ ದೀಪವನ್ನು ನೀರು ತುಂಬಿದ ಬಟ್ಟಲ ನಡುವೆ ಇಟ್ಟು ಓದಲು ಕುಳಿತಾಗಲೆಲ್ಲಾ ಬೆಳಕಿನ ಸುತ್ತ ಹಾರಿ ತನ್ನನ್ನೇ ಕಳೆದು ಕೊಳ್ಳುವ ಹಾತೆಯನ್ನೇ ಕಣ್ಬಿಟ್ಟು ನೋಡುವ ತವಕ. ಮಳೆಯ ಬಿರುಸಿನಿಂದಾಗಿ ಮೀನು ಹಿಡಿಯುವ ದೋಣಿಯನ್ನು ಮೀನುಗಾರರು ಕಡಲಿಗೆ ಇಳಿಸದೇ ಇದ್ದಾಗ, ಒಣ ಮೀನು ಸಾರಿನೊಂದಿಗೆ ಮಾಡಿದ ರಾತ್ರಿಯೂಟ. ಮಿಂಚು ಬರುತ್ತದೆಂದು ಟಿವಿ ಆಫ್ ಮಾಡಿದುದರ ಬೇಸರ. ಈ ಎಲ್ಲಾ ನೆನಪುಗಳು ಮನಸ್ಸನ್ನು ಕೆದಕುತ್ತಾ ಇವೆ. ಆದರೂ ಮುಂಗಾರು ಮಳೆಯ ಪ್ರೀತಿ ಎಲ್ಲಾ ನೆನಪುಗಳನ್ನು ಸಿಹಿಯಾಗಿರಿಸಿದೆ. ನೆನಪುಗಳ ಮಾತು ಮಧುರ ಅಲ್ಲವೇ?