ಮುಂಗಾರ ರಾಶಿ

ಮುಂಗಾರ ರಾಶಿ

ಕವನ

ಕಗ್ಗತ್ತಲ ಕಾರ್ಮೋಡ ನಡು ಹಗಲಿಗೆ ಹಾಸಿ 

ತಿಳಿಯಾದ ತಂಗಾಳಿ ಎದೆಯಂಚಿಗೆ ಬೀಸಿ 

ಒಡಲೊಡಲ ಬೆಮರಮಳೆ ಮೆದುವಾಗಿ ಮಾಸಿ 

ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...

 

ಮುನಿಯದ ನಭದಲ್ಲಿ ಕೋಲ್ಮಿಂಚ ಹಾಯಿಸಿ 

ನಡುನೆತ್ತಿಯ ಪೇಟವನು ಬಿಡುವಿಲ್ಲದೆ ತೋಯಿಸಿ 

ರೈತನೆದೆ ಬಾಂಧಳದಿ ಮುಗುಳುನಗೆ ಮೂಡಿಸಿ 

ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...

 

ವೈಶಾಖ ಧಗೆಯೊಳಗೆ ಬಸವಳಿದ ದಿನಗಳಿವೆ 

ಹನಿಹನಿಯು ಅಮೃತವೇ ಹೇಳುವ ಮನಗಳಿವೆ 

ಮೋಡವನು ಬಿತ್ತುವ ಕರ್ಮವು ಎದುರಿರಲು 

ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...

 

ಕೊಡಲಿಗಳ ಆರ್ಭಟವು ಬಲವಾಗಿ ಸಾಗುತಿದೆ 

ಉಸಿರಾಡೋ ಗಾಳಿಯೂ ಮೆತ್ತಗೆ ಮಾಗುತಿದೆ 

ಗುಟುಗುಟುಕು ನೀರಿಗೂ ಪರಿತಪಿಸೋ ಕಾಲದಲಿ 

ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...

-ಮೌನರಾಗ, ಸನಂ..(ಶಮೀರ್ ನಂದಿಬೆಟ್ಟ)

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್