ಮುಂದಿನ ಪಯಣ

ಮುಂದಿನ ಪಯಣ

ಕವನ

ಬಾಳಿನ ನೆಮ್ಮದಿ ದೂರದಿ ನಿಂತಿದೆ

ಕಾಣದೆ ಹೋಗಿದೆ ಹುರುಪೆ

ಜೀವನ ಪಯಣದಿ ಗೆಲುವದು ಇಲ್ಲದೆ

ಸೋಲುತ ಸಾಗಿದೆ ಬದುಕೆ

 

ಮಾತಿನ ಚಕಮಕಿ ಮನೆಯೊಳು ತುಂಬುತ

ಮನದಲಿ ಶಾಂತಿಯು ಸವೆಯೆ

ಕರುಣೆಯ ಹೊಸಿಲದು ಸಿಡುಕಲಿ ಹೊತ್ತುತ

ಹೃದಯದ ಒಲವದು ಕರಗೆ

 

ಕೈಯನು ಹಿಡಿದಿಹ ತಪ್ಪಿಗೆ ಮರುಗುತ

ನೆಮ್ಮದಿ ಹೋಗುತ ಮಲಗೆ

ಸ್ನೇಹದ ಪಲ್ಲವಿ ಮೌನಕೆ ಜಾರುತ

ಚಾಡಿಯು ಬೆನ್ನಿಗೆ ಬಡಿಯೆ

 

ಹೊಂದಿಕೆ ಮುರುಟುತ ಸಂಶಯ ಮೂಡಲು

ಹಿಂಬದಿ ಬಾಗಿಲು ತೆರೆಯೆ

ನವಿರಿನ ಭಾವನೆ ಸುಡುತಲಿ ಸಾಗಲು

ಮುಂದಿನ ಜನುಮಕೆ ನಡೆದೆ

***

ಗಝಲ್

ನಾದವಿರದ ಕೊಳಲಿಂದ ಏನು ಪ್ರಯೋಜನ

ಪ್ರೀತಿಯಿರದ ಸವಿಯಿಂದ ಏನು ಪ್ರಯೋಜನ

 

ಕಚ್ಛೆಯನ್ನು ಕಟ್ಟಿದರೂ ಹುಚ್ಚರಿಹರಿಲ್ಲಿ ಏಕಿಂದು

ಸ್ವಂತಿಕೆಯಿಲ್ಲದ ಮಡಿಯಿಂದ ಏನು ಪ್ರಯೋಜನ

 

ಮನವಿದ್ದರೂ ಹತ್ತುತಲೆ ರಾವಣರೇ ತುಂಬಿಹರು

ಚೈತ್ರವಿರದಿಹ ನೆಲೆಯಿಂದ ಏನು ಪ್ರಯೋಜನ

 

ಒಬ್ಬರನೊಬ್ಬರು ತುಳಿಯಲು ಹೊರಟಿದ್ದು ಏತಕೊ

ವಿಚಿತ್ರವೆನಿಪ ನುಡಿಯಿಂದ ಏನು ಪ್ರಯೋಜನ

 

ಸಾರವಿಲ್ಲದ ಬದುಕದುವೇ ಕಾಣುತಿದೆ ಈಶಾ

ತೃಪ್ತಿಯಿಲ್ಲದ ನಡೆಯಿಂದ ಏನು ಪ್ರಯೋಜನ

 

-ಹಾ ಮ ಸತೀಶ ಬೆಂಗಳೂರು

ಚಿತ್ರ್