ಮುಂಬಯಿ ವಾಸದ ಅಳಲುಗಳು....
(ಅನೇಕ ವರ್ಷಗಳ ಹಿಂದೆ ಮುಂಬಯಿಗ ಬಂದಾಗ ಇಲ್ಲಿ ಜನರಾಶಿಯಲ್ಲಿ ಕಳೆದುಹೋಗಿ ,ಮುಳುಗಿಹೋಗಿ ತಬ್ಬಿಬ್ಬಾದಾಗ ಗೀಚಿದ ಕವನ. ಸ್ವಲ್ಪ ಒಗ್ಗರಣೆ ಹಾಕಿ ನಿಮ್ಮ ಮುಂದಿಟ್ಟಿದ್ದೇನೆ)
ಎಲ್ಲೆಲ್ಲಿ ನೋಡಿದರು ಅಲ್ಲೆಲ್ಲ ಜನರಿರುವ
ಈ ಮಹಾನಗರದಲಿ ನಾನು ಯಾರು?
ಹೊಸ ಊರು ಹೊಸ ಭಾಷೆ ಮನವು ಬೆರಗಾಗಿರಲು
ಈಗೀಗ ತಿಳಿಯುತಿದೆ ಚೂರುಪಾರು
ನಾನೊಬ್ಬ ಕನ್ನಡಿಗ, ಜೊತೆಯವನು ಗುಜರಾತಿ
ಎದುರು ಕುಳಿತಿಹನಲ್ಲ ಅವನೊಬ್ಬ ಪಾರ್ಸಿ
ಮೂಲೆಯಲ್ಲಿ ಗೊರೆಯುತ್ತಲಿರುವವನು ಪಂಜಾಬಿ
ಮ್ಯಾನೇಜರನಂತು ಅಸಲು ಮದರಾಸಿ
ಟಕಟಕ್ಕ ಟಕಟಕ್ಕ ಟೈಪು ಬಡಿಯುವ ಲಿಲ್ಲಿ
ಅವಳೂರು ಕೇರಳದ ಪುಟ್ಟ ಹಳ್ಳಿ
ಬಾಗಿಲಲಿ ತಂಬಾಕು ಮೆಲ್ಲುತಿಹ ಚಪರಾಸಿ
ಅವನ ತಾಣಕೆ ಬಲು ಸನಿಹ ದಿಲ್ಲಿ
ಬೇರೆ ಬೇರೆಯೆ ಭಾಷೆ, ಬೇರೆಬೇರೆಯೆ ಊರು
ನಮ್ಮ ಇಷ್ಟಾನಿಷ್ಟ ಬೇರೆಬೇರೆ
ನಮ್ಮೆಲ್ಲರನು ಹೀಗೆ ಒಟ್ಟು ತಂದಿಟ್ಟಿರುವ
ಶಕ್ತಿಯದು ಎಂಥಹದೋ ತಿಳಿಯಲಾರೆ
ಇರುವ ತಾಣವೆ ಒಂದು , ದುಡಿವ ತಾಣವೆ ಒಂದು
ಮಧ್ಯದಲಿ ಅಂತರವು ಮೈಲಿ ಹದಿನೆಂಟು
ಅರ್ಧ ದಾರಿಯು ರೈಲು, ಮಿಕ್ಕ ಅರ್ಧವು ಬಸ್ಸು
ನಡೆಯುವುದು ಕೊನೆಯಲ್ಲಿ ನಿಮಿಷ ಎಂಟು
ಕಿಷ್ಕಿಂದೆಯಲಿ ವಾಸ ರೈಲಿನಲಿ ಪರದಾಟ
ಆಗಾಗ ಕಿಸೆಗಳ್ಳ ರಿಂದ ರಂಪಾಟ
ಆಗೊಮ್ಮೆ ಈಗೊಮ್ಮೆ ಸ್ನೇಹಿತರ ಒಡನಾಟ
ಸಿನೆಮಾಕ್ಕೆ ಹೋಗುವುದು ಎರಡನೆಯ ಆಟ
ಕಳೆಯುತಿದೆ ದಿವಸಗಳು ಕೂಡುತಿವೆ ವರ್ಷಗಳು
ಹೊಟ್ಟೆಪಾಡಿನ ಬಾಳು ಸಾಗುತಿಹುದು
ಏಳಿಲ್ಲ ಬೀಳಿಲ್ಲ ಮನವೆಲ್ಲ ಬೆಂಡಾಗಿ
ಏಕತಾನದ ಹಾಡು ಹಾಡುತಿಹುದು
ಮಲೆನಾಡ ಮಧ್ಯದಲಿ ಮಲಗಿಹುದು ನನ್ನೂರು
ಸೊಗಸ ಕಾಣಲು ಬನ್ನಿ ನೀವು ಇಂದೇ
ಎತ್ತ ನೋಡಿದರತ್ತ ಕಣ್ತುಂಬ ಕಡುಹಸಿರು
ಊಟಿ ನಂದಿಗಳೇಕೆ ಇದರ ಮುಂದೆ
ಅಲ್ಲಿಲ್ಲ ಕೊಳೆಗೇರಿ ಅಲ್ಲಿಲ್ಲ ಜನರಾಶಿ
ಅಲ್ಲಿಲ್ಲ ಕಗ್ಗಪ್ಪು ಹೊಗೆಯ ಮೋಡ
ಅಲ್ಲಿಲ್ಲ ಲಾರಿಗಳ , ರೈಲುಗಳ ಯಮಸದ್ದು
ಅಲ್ಲಿಲ್ಲ ಮಲಿನತೆಯ ಗಾಳಿ ಕೂಡಾ
ಅಂಥಾ ನಾಕವ ಬಿಟ್ಟು ಬಂದೆಯೇತಕೆ ಇಲ್ಲಿ?
ಮನವೆನ್ನ ಕೇಳುವುದು ಮತ್ತೆ ಮತ್ತೆ
ಯಾವ ಪುರುಷಾರ್ಥಕ್ಕೆ ಇಂಥ ಯಾತ್ರಿಕ ಬಾಳು
ಹೊಟ್ಟೆ ತುಂಬಲು ಅಲ್ಲಿ ಕಷ್ಟವಿತ್ತೆ?
ನಮ್ಮ ಊರೇ ವಾಸಿ, ನಮ್ಮ ನೀರೇ ಗಂಗೆ
ಎಂದು ಕೂತರೆ ಬಾಳು ಬರಿಯ ಸಪ್ಪೆ
ನಾಲ್ಕು ಊರಿನ ಉಪ್ಪು ರುಚಿ ಸವಿಯದಿದ್ದರೆ
ಆದೇನು ನಾನೊಬ್ಬ ಬಾವಿಗಪ್ಪೆ
ಇರುವ ನಾಡಿನ ಬಾಳು ಹಸನು ಮಾಡುವ ಕೆಲಸ
ಆದೀತು ಇಂದಲ್ಲ ನಾಳೆ ತನಕ
ಯಾಕಿಷ್ಟು ಒಳಗುದಿಯು , ಹೇಳಿಲ್ಲವೇ ಕವಿಯು
ನಿಂತ ನೆಲವೇ ಅದುವು ಕರ್ನಾಟಕ