ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ , ವೈಣಿಕ ಶ್ರೀ. ಸಿ. ಕೆ. ಶಂಕರನಾರಾಯಣರ ನೆನೆಕೆ !
೨೦೧೧ ರ, ಫೆಬ್ರವರಿ, ೨೬ರ ಶನಿವಾರ, ಸಂಜೆ ೭-೧೫ ಕ್ಕೆ ರಂದು ಮೈಸೂರ್ ಅಸೋಸಿಯೇಷನ್ ಹಾಗೂ ಸಿ.ಕೆ.ಎಸ್. ರವರ ಪರಿವಾರ ಜಂಟಿಯಾಗಿ ಆಯೋಜಿಸಿದ್ದ ವೈಣಿಕ ಶ್ರೀ. ಸಿ. ಕೆ. ಶಂಕರನಾರಾಯಣರ ನೆನೆಕೆ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ನ ಸದಸ್ಯರು ಮತ್ತು ಶಂಕರನಾರಾಯಣರ ಪರಿವಾರದ ಸದಸ್ಯರ ಜೊತೆಗೆ, ಮುಂಬೈನ ಸಂಗೀತಾಸಕ್ತರು, ಮತ್ತು ರಾಯರ ಕೆಲವು ಶಿಷ್ಯರು,ಉಪಸ್ಥಿತರಿದ್ದರು.
ಮೊದಲು, ಹಿರಿಯ ಸದಸ್ಯರಾದ, ಡಾ. ಬಿ. ಆರ್. ಮಂಜುನಾಥ್, ಮಾತನಾಡುತ್ತಾ ರಾಯರ ವೀಣೆಯ ಕೃಷಿಯ ಬಗ್ಗೆ,ಅವರ ಪ್ರಾಮಾಣಿಕತೆ ಮತ್ತು ಕರ್ನಾಟಕ ಸಂಗೀತದ ಬಗ್ಗೆ ಆಪ್ತತೆಯನ್ನು ಕೊಂಡಾಡಿದರು. ಹೇಗೆ ತಮ್ಮ ೮೯ ರ ಇಳಿವಯಸ್ಸಿನಲ್ಲೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ತಪ್ಪದೆ ಬರುತ್ತಿದ್ದ ವಿಷಯವನ್ನು ನೆನೆಸಿಕೊಂಡರು. ಅಸೋಸಿಯೇಷನ್ ನ ಇತಿಹಾಸ ಪುಟಗಳನ್ನು ಸ್ಮರಿಸುತ್ತಾ, ಮಾತಾಡಿದ ಬಿ. ಆರ್. ಮಂಜುನಾಥ್, ೮೫ ವರ್ಷಗಳ ಅಸೋಸಿಯೇಷನ್ ನ ಇತಿಹಾಸದಲ್ಲಿ ಅದನ್ನುಕಟ್ಟಿಬೆಳಸಿದ ಮಹನೀಯರ ಕೊಡುಗೆಗಳನ್ನು ನೆನೆಪಿಸಿಕೊಳ್ಳುತ್ತಾ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. ಧನಸಹಾಯಮಾಡಿದವರು ಕೆಲವರಾದರೆ, ಕೆಲವರು, ಕಲೆ, ಸಾಹಿತ್ಯ ಸಂಸ್ಕೃತಿಗಾಗಿ ತಮ್ಮ ಅನುಪಮ ಸೇವೆಯನ್ನು ಮಾಡಿದ್ದಾರೆ. ಈ ಪಂಕ್ತಿಯಲ್ಲಿ ರಾಯರು ಪ್ರಮುಖರು.
ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ರಾಮಭದ್ರರವರು ದಿ. ಶಂಕರನಾರಾಯಣ ರಾಯರ ಫೋಟೊಗೆ ಪುಷ್ಪಾಂಜಲಿಯನ್ನು ಅರ್ಪಿಸಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಮುಂಬೈನಲ್ಲಿ ಮೈಸೂರ್ ಅಸೋಸಿಯೇಷನ್ ನಲ್ಲಿ ತಂಗಿದ್ದ ಸಮಯದಲ್ಲಿ ನಾಟಕಕಾರ ಕೈಲಾಸಂ, ತಾವೇರಚಿಸಿದ ನಾಟಕಗಳನ್ನು ಆಡಿಸಿ ನಾಟಕ ಕಲೆಗೆ ಬಹಳ ಪ್ರೋತ್ಸಾಹಕೊಟ್ಟು, ನಾಟಕ ತಂಡವನ್ನು ಕಟ್ಟಿಬೆಳೆಸಿದರು. ನಂತರ ಬಂದ, ವಿ. ಕೆ. ಮೂರ್ತಿಯವರು ಆ ಪರಂಪರೆ ಮುಂದುವರೆಸಿ ಅಸೋಸಿಯೇಶನ್ ನ ಸದಸ್ಯರಿಂದ ಹಲವಾರು ನಾಟಕಗಳನ್ನಾಡಿ, ಪ್ರಯೋಗ ನಡೆಸಿದ ಶ್ರೇಯವನ್ನು ಹೊಂದಿದ್ದಾರೆ. ಆ ಸಮಯದಲ್ಲಿ ಅಸೋಸಿಯೇಷನ್ ನಲ್ಲಿ ಒಂದು ಬಗೆಯ ನಾಟಕದ ಗೀಳನ್ನು ಉಂಟುಮಾಡಿದರು. ಹೆಚ್ಚಿನ ಸಂಗತಿಯೆಂದರೆ, ಮೂರ್ತಿಯವರ, ಸ್ತ್ರೀಪಾತ್ರಗಳನ್ನು ಮೊಟ್ಟಮೊದಲು ಸ್ತ್ರೀಯರೇ ಮಾಡುವ ಪದ್ಧತಿಯನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲಬೇಕು. ನೆನಕೆ ಕಾರ್ಯಕ್ರಮದ ವಿವರಗಳು ಹೀಗಿದ್ದವು :
* ಗಣೇಶ ಸ್ತುತಿ- ಶಂಕರನಾರಾಯಣರಾಯರ ಕೃತಿಗಳು-ಮೈಸೂರು ಸಂಗೀತ ವಿದ್ಯಾಲಯ,ಮೈಸೂರು ಸಂಗೀತ ವಿದ್ಯಾಲಯದ ಕಿರಿಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ. ಪ್ರಾರಂಭವಾಯಿತು..
* ಸಂಗೀತಕ್ಕೆ ಶಂಕರನಾರಾಯಣರಾಯರ ಕೊಡುಗೆ- ಶ್ರೀ ನಾಗಭೂಷಣ್
* ಶಂಕರನಾರಾಯಣರಾಯರು. ಅಸೋಸಿಯೇಷನ್ ಕಂಡಹಾಗೆ, ಡಾ. ಬಿ. ಆರ್.ಮಂಜುನಾಥ್
* ವೀಣಾವಾದನ-ಜಾನಕಿ ಕೃಷ್ಣಮೂರ್ತಿ ಹಾಗೂ ಅನುರಾಧಾ ವತ್ಸನ್
* ಬೆಳ್ಳಿ ಚುಕ್ಕಿ ಊಟ-ಮಚ್ಚಿನಮೇಲೆ.
ಸಿ. ಕೆ. ಎಸ್. ಕೇವಲ ಸಂಗೀತಕಾರರಲ್ಲದೆ, ಉತ್ತಮ ಅಭಿನಯವಕ್ಕೂ ಹೆಸರಾಗಿದ್ದರು. ನಚಿಕೇತಯೆಂಬ ನಾಟಕವನ್ನೂ ಬರೆದರು. ಶ್ರೀ ಪುರುಂದರದಾಸರ ಮತ್ತು ಕನಕದಾಸರ ೩೦೦ ಕ್ಕೂ ಹೆಚ್ಚು ಕೃತಿಗಳಿಗೆ ಸ್ವರಸಂಯೋಜನೆ'ಮಾಡಿ, ಪುಸ್ತಕವನ್ನು ಪ್ರಕಟಿಸಿರುತ್ತಾರೆ. ಬೆಂಗಳೂರಿನ ’ಅಂಕಿತ ಪ್ರಕಾಶನ’ ಪ್ರಕಟಿಸಿದ ಅವರ ಪುಸ್ತಕಗಳು, ಅತ್ಯಂತ ಜನಪ್ರಿಯತೆಯನ್ನು ಸಾಧಿಸಿವೆ. ಈ ಅಪರೂಪದ ಕೃತಿ ’ಸ್ವರಸಂಯೋಜನೆ ಸಹಿತ ಶ್ರೀಕನಕದಾಸರ ಕೃತಿಗಳು’ ಎನ್ನುವ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ "ಸ್ವರ ಮಟ್ಟುಹಾಕಿ ಸಂಗೀತ ಪ್ರಪಂಚಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಿದ ಕಲಾವಿದರಲ್ಲಿ ಸಿ.ಕೆ.ಎಸ್ ರವರು ಅಗ್ರಪಂಕ್ತಿಗೆ ಸೇರಿದ್ದಾರೆ" ಎಂದು ಹೇಳಿರುವ ಸಂಗೀತ ವಿದುಷಿ,ರಾಜಮ್ಮ ಕೇಶವಮೂರ್ತಿ’ಯವರ ಮಾತುಗಳು ರಾಯರ ರಚನಾತ್ಮಕ ಪ್ರತಿಭೆಗೆ ಕನ್ನಡಿ ಹಿಡಿದಿವೆ, ಹಾಗೂ ಅತ್ಯಂತ ಅರ್ಥಗರ್ಭಿತವಾಗಿವೆ.
ಕಾರ್ಯಕ್ರಮ ಕೊನೆಯಲ್ಲಿ ಡಾ. ಮಂಜುನಾಥ್ ರವರು ಎರಡು ನಿಮಿಷಗಳ ಕಾಲ ಮೌನವಾಗಿದ್ದು ರಾಯರ ಆತ್ಮಕ್ಕೆ ಶಾಂತಿಕೋರಲು ಸಭಿಕರನ್ನು ಕೇಳಿಕೊಂಡರು. ಇದರೊಂದಿಗೆ ಸಂಜೆಯ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಮಚ್ಚಿನ ಮೇಲೆ ಊಟದ ವ್ಯವಸ್ಥೆಯಿತ್ತು.