ಮುಂಬೈಯಲ್ಲಿ ಕನ್ನಡದ ಪ್ರಚಾರ!

ಮುಂಬೈಯಲ್ಲಿ ಕನ್ನಡದ ಪ್ರಚಾರ!

ಬರಹ

ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ ಹೊರಬಂದು ಇಂದಿನ ಸ್ಥಿತಿ ತಲುಪಿತು . ಅದಕ್ಕೆ ಯಾರು ಯಾರು ಕೊಡುಗೆ ಸಲ್ಲಿಸಿದರು . ಎಂಬ ಬಗ್ಗೆ ಕುತೂಹಲಕರ ವಿವರಗಳಿವೆ. ಈ ಪುಸ್ತಕವನ್ನು ಶ್ರೀ ರಾ.ಯ.ಧಾರವಾಡಕರ ಅವರು ಬರೆದಿದ್ದು . ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿದೆ. ( ಈ ಪುಸ್ತಕ ಯಾರದೋ ಮನೆಯಲ್ಲಿ ಸುಮ್ಮನೆ ಬಿದ್ದಿತ್ತು. ಅವರು ನನ್ನ ಮೂಲಕ ಅನೇಕ ಪುಸ್ತಕಗಳನ್ನು ವಿಲೇವಾರಿ ಮಾಡುತ್ತಿದ್ದಾಗ ನಾನು ಎತ್ತಿಟ್ಟುಕೊಂಡಿದ್ದೇನೆ ಅಂದರೆ ಕದ್ದಿದ್ದೇನೆ. - ಬೆಗ್, ಬೈ , ಬಾರೋ ಆರ್ ಸ್ಟೀಲ್ ಎಂದು ನಾಣ್ಣುಡಿಯೇ ಇದೆಯಲ್ಲ?!) . ತುಂಬ ಅಮೂಲ್ಯ ಪುಸ್ತಕವೇ ಸರಿ.

ಪಕ್ಕದಲ್ಲಿ ಒಬ್ಬ ಹಿರಿಯರು . ಸುಮಾರು ೬೦ ವರ್ಷದವರು. ಪುಸ್ತಕದ ಕಡೆ ಅಗಾಗ ನೋಟ ಹರಿಸುತ್ತಿದ್ದರು. ( ಮುಂಬೈಯಲ್ಲಿ ಹೀಗೆ ಮಾಡುವದು ಅಪೇಕ್ಷಣೀಯವಲ್ಲ; ಕಣ್ಣಿಗೆ ಕಣ್ಣು ಸೇರಿಸುವ ಪದ್ಧತಿ ಸಹಿತ ಇಲ್ಲ. ಇನ್ನು ಅನಗತ್ಯ ಮಾತನಾಡುವದಂತೂ ಇಲ್ಲವೇ ಇಲ್ಲ . ಎಷ್ಟೋ ವ್ಯವಹಾರಗಳು ಸನ್ನೆಯಿಂದಲೇ ಅಥವಾ 'ಶ್ಶ್ ಶ್ಶ್' ಎಂಬ ಭಾಷಾತೀತ ನೆಲೆಯಿಂದಲೇ ನಡೆಯುತ್ತವೆ!.) ಅಲ್ಲಲ್ಲಿ ಇಂಗ್ಲೀಷ್ ಉದ್ಧೃತ ವಾಕ್ಯಗಳಿದ್ದವು. ( ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ ಏನನ್ನುತ್ತಾರೆ? ಉದ್ಧರಣೆ?! ಉದ್ಧಾರ?! ) ಕೊನೆಗೆ ಕೇಳಿದರು ಇಂಗ್ಲೀಷಿನಲ್ಲಿ . ಅದು ಕನ್ನಡವೇ ? ಇತಿಹಾಸದ ಪುಸ್ತಕವೇ ? ಅಂತ. ನಾನೂ ಉತ್ತರಿಸಿದೆ ( ಇದೆಲ್ಲ ಮಾತುಕತೆ ಇಂಗ್ಲೀಷಿನಲ್ಲಿ ಆಯಿತು) 'ಹೌದು , ಕಳೆದ ಎರಡು ಶತಮಾನಗಳ ಭಾಷೆಯ ಬದಲಾವಣೆಗಳ ಬಗ್ಗೆ ಇದೆ' ಅಂದೆ. ' ಹೌದಾ ? ೧೩ ನೇ ಶತಮಾನದ ಭಾಷೆ ಅಲ್ಲವೇ?' ಅಂದರು. ಮನಸ್ಸಿನಲ್ಲಿ -ಅಹಾ, ಒಬ್ಬರ ತಪ್ಪು ಕಲ್ಪನೆಯನ್ನಾದರೂ ದೂರ ಮಾಡಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿವ ಅವಕಾಶ ನನಗೆ ಸಿಕ್ಕಿತು- ಎಂದುಕೊಂಡೆ. ' ಅಲ್ಲ, ೨೦೦೦ ವರ್ಷ ಹಳೆಯದು. ೫ ನೇ ಶತಮಾನದ ಶಾಸನಗಳಿವೆ' ಎಂದೆ. ಸ್ವಲ್ಪ ತಡೆದು ' ನಿಜ ಹೇಳಬೇಕೆಂದರೆ ಇಲ್ಲಿಯ ಭಾಷೆ ಕನ್ನಡವೇ ಆಗಿತ್ತು . ಮರಾಠಿ ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬರುವ ಮೊದಲು, ಸಂತ ಜ್ಞಾನೇಶ್ವರರ ಕಾಲಕ್ಕೆ ಜನ ವೈದಿಕ ಸಂಸ್ಕೃತಿಯ ಪುನರುಜ್ಜೀವನಕಾಲಕ್ಕೆ ಕನ್ನಡವನ್ನು ಜೈನರ ಭಾಷೆಯೆಂದು ಕೈಬಿಟ್ಟರು. ಇಷ್ಟಕ್ಕೂ ಜನರಿಗೆ ಭಾಷೆಗಿಂತ ಧರ್ಮ ಮುಖ್ಯ ' ಎಂದು ಹೇಳಿದೆ . ' ಇಲ್ಲಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಾವನೂರರು ತಮಗೆ ಪರಿಚಯ ಎಂದು ಹೇಳಿದರು. ಹಾಗೆಯೇ ' ಪೋರ್ತುಗೀಸರ ಕಲಕ್ಕೆ ಮುಂಬೈಯಲ್ಲಿ ಕೊಂಕಣಿ, ಇಂಗ್ಲೀಷ , ಪೋರ್ಚುಗೀಸ್ , ಕನ್ನಡ ಭಾಷೆಗಳು ಅಧಿಕೃತ ಭಾಷೆಗಳಾಗಿದ್ದವು . ಜನರು ತಮ್ಮ ಮನವಿಗಳನ್ನು ಈ ಭಾಷೆಗಳಲ್ಲಿ ಸಲ್ಲಿಸಬೇಕಾಗಿತ್ತು. ' ಎಂದೂ ಹೇಳಿದೆ. ಎಲ್ಲ ಕಾಲಕಾಲಕ್ಕೆ ಬದಲಾಗುತ್ತ ಇರುತ್ತದೆ ಎಂದೂ ಟಿಪ್ಪಣಿ ಸೇರಿಸಿದೆ. ಅಷ್ಟರಲ್ಲಿ ಅವರು ಇಳಿಯಬೇಕಾದ ಸ್ಥಳ ಬಂದಿತು . ಇಳಿದು ಹೋದರು.

ಆಮೇಲೆ ನೆನಪಾಯಿತು. ಮರಾಠಿ ಭಾಷೆಯ ತಳಹದಿ ದ್ರಾವಿಡ ಅಂದರೆ ಕನ್ನಡವೇ ಆಗಿದೆ. ಕ್ರಿ.ಶ. ೫೦೦-೧೫೦೦ ಅವಧಿಯಲ್ಲಿ ಇಂದಿನ ಮಹಾರಾಷ್ಟ್ರವನ್ನು ಕನ್ನಡ ಅರಸರು ಆಳುತ್ತಿದ್ದರು. ಕನ್ನಡದ ಹೆಚ್ಚು ಶಾಸನಗಳು ಸಿಕ್ಕಿರುವದು ಮಹಾರಾಷ್ಟ್ರದಲ್ಲಿಯೇ .ಮಹಾರಾಷ್ಟ್ರದಲ್ಲಿ ಸಿಕ್ಕಿರುವ ೨೦೦೦ ಶಾಸನಗಳಲ್ಲಿ , ೧೭೫ ಮಾತ್ರ ಮರಾಠಿಯವು . ಇವಷ್ಟು ಹೇಳದೆ ಉಳಿದ ಮುಖ್ಯ ವಿಷಯಗಳು.

ಇಲ್ಲಿ ಇದನ್ನೆಲ್ಲ ಏಕೆ ಬರೆದಿದ್ದೇನೆಂದರೆ ಸಂಪದ ಓದುಗರಿಗೂ ಈ ವಿಷಯಗಳು ಗೊತ್ತಿರಲಿಕ್ಕಿಲ್ಲ , ಅವರಿಗೂ ಕನ್ನಡದ ಭವ್ಯ ಇತಿಹಾಸದ ಅರಿವಾಗಲಿ. ಇಂತಹ ಅರಿವಿನಿಂದ ಹೆಮ್ಮೆ ಮೂಡಲಿ . ಕನ್ನಡದ ಪ್ರಚಾರ ಹೆಚ್ಚು ಹೆಚ್ಚು ಆಗಲಿ ಎಂಬ ಆಶಯವೇ ಆಗಿದೆ.