ಮುಗಿಯದ ಮೀಸಲು ಗೊಂದಲ

ಮುಗಿಯದ ಮೀಸಲು ಗೊಂದಲ

ಜಿಲ್ಲೆ ಹಾಗೂ ತಾಲೂಕು ಪಂಚಾಯ್ತಿ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗವು ಹೈಕೋರ್ಟ್ ಗೆ ಮಂಗಳವಾರ ಮೆಮೋ ದಾಖಲಿಸಿದೆ.

ತನ್ನ ಬಳಿಯಿದ್ದ ಅಧಿಕಾರಗಳನ್ನು ರಾಜ್ಯ ಕಸಿದುಕೊಂಡಿರುವುದರಿಂದ ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿತ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿರ್ವಹಿಸುವುದು ಸಾಧ್ಯವಿಲ್ಲ ಎಂದು ನ್ಯಾಯಪೀಠದ ಮುಂದೆ ಸ್ಪಷ್ಟಪಡಿಸಿದೆ. ನಿಸ್ಪಕ್ಷಪಾತವಾದ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳಿಗೆ ಮೀಸಲು ನಿಗದಿಯಾಗಬೇಕಾದರೆ, ಈ ಅಧಿಕಾರವನ್ನು ರಾಜಕೀಯೇತರ ಹಾಗೂ ಸ್ವಾಯತ್ತೆ ಸಂಸ್ಥೆಯಾದ ಚುನಾವಣಾ ಆಯೋಗ ಹೊಂದಿರಬೇಕು. ಆದರೆ ಈ ಅಧಿಕಾರ ತಮ್ಮ ಬಳಿಯೇ ಇರಬೇಕೆಂಬ ಶಾಸಕರ ಹಠ ಇಂದು ನಿನ್ನೆಯದಲ್ಲ.

ಸರ್ಕಾರ ಎಂದರೆ ಅದು ಶಾಸನ ಸಭೆಯಲ್ಲಿ ಬಹುಮತವುಳ್ಳ ಆಡಳಿತ ಪಕ್ಷ ಅಧಿಕಾರದಲ್ಲಿ ಯಾವುದೇ ಪಕ್ಷವಿರಲಿ. ತಮ್ಮ ಮೂಗಿನ ನೇರಕ್ಕೆ ಮೀಸಲು ನಿಗದಿಯಾಗಬೇಕೆಂಬ ಅಪೇಕ್ಷೆಗೆ ಮೂಗುದಾರ ಬಿಗಿಯುವವರು ಯಾರೂ ಇಲ್ಲ ! ಈ ಮೀಸಲು ನಿಗದಿ ಹಿಂದೆ ಅಡಗಿರುವುದೇ ರಾಜಕೀಯ ಹಿತಾಸಕ್ತಿ, ಪಕ್ಷದ ಹಿತರಕ್ಷಣೆಯೇ ವಿನಹ, ಸಾಮಾಜಿಕ ನ್ಯಾಯ ಮತ್ತು ಮೀಸಲು ನೀತಿ ಪಾಲನೆಯ ಚೌಕಟ್ಟು-ಸಿದ್ಧಾಂತವಲ್ಲ. ಅಧಿಕಾರ ವಿಕೇಂದ್ರಿಕರಣ ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರ ಮತ್ತು ಶಾಸಕರ ಹಸ್ತಕ್ಷೇಪವೇ ಸಲ್ಲದೆಂಬ ಮೂಲ ಕಾಯಿದೆಯ ನಿಯಮಾವಳಿಯಾದರೂ ಇದು ಎಲ್ಲ ಶಾಸಕ, ಮಂತ್ರಿವರ್ಯರಿಗೆ ತೀರಾ ಅಪಥ್ಯ ಮತ್ತು ಜೀಣಿಸಿಕೊಳ್ಳಲಾಗದ ಕಟು ಸತ್ಯ. ಹೀಗಾಗಿ ವಾರ್ಡುವಾರು ಮೀಸಲು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮೂಲ ಕಾಯಿದೆಯಲ್ಲಿ ಉಲ್ಲೇಖವಾದ ಎಲ್ಲ ಅಂಶಗಳೂ ಕಳೆದ ಎರಡುವರೆ ದಶಕಗಳಿಂದ ಕಾಗದದ ಮೇಲೆ ಕುಣಿದಾಡಿದೆಯಷ್ಟೆ! ಮೀಸಲು ಕಾಯಿದೆಯಿಂದ ವಂಚಿತರಾದವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸುತ್ತಲೂ ವರ್ಷಾನುಗಟ್ಟಳೆ ಗಿರಕಿ ಹಾಕುವಂತಾಗಿದೆ ! ಪ್ರತಿ ಐದು ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಭವಿಸುತ್ತೆ. ಈ ಸಮಯದಲ್ಲಿ ಮೀಸಲಾತಿ ತಾರತಮ್ಯ ಎಂಬ ಸದ್ದು ಬಹಳ ಜೋರಾಗಿ ಕೇಳುತ್ತೆ. ಆದರೆ ಈ ಮೀಸಲಾತಿಯನ್ನು ನಿಗದಿಪಡಿಸುವ ಅಧಿಕಾರ ಸರಕಾರದ್ದೋ ಅಥವಾ ಆಯೋಗದ್ದೋ ಎಂಬ ಪಬ್ಲಿಕ್ ಡಿಬೇಟ್ ಕೆಲ ದಿನಗಳ ಕಾಲ ನಡೆಯುತ್ತೆ. ತದನಂತರ ಇದು ಟುಸ್ ಆಗುತ್ತೆ.

ಪಂಚಾಯ್ತಿಯಾಗಲಿ, ಪುರಸಭೆ, ನಗರಸಭೆ ಮಹಾನಗರ ಪಾಲಿಕೆಯಾಗಲಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಕಾಯಿದೆಗನುಸಾರ ಮೀಸಲು ನಿಗದಿಪಡಿಸುವಂತಹ ಸಂಪೂರ್ಣ ಅಧಿಕಾರ ಚುನಾವಣೆ ಆಯೋಗ ಹೊಂದಿದ್ದರೆ ಮಾತ್ರ ನಿಗದಿತ ಸಮಯದಲ್ಲಿ ಚುನಾವಣೆಗಳನ್ನು ನಿರ್ವಹಿಸಲು ಸಾಧ್ಯ. ಈ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗವು ಹಲ್ಲಿಲ್ಲದ ಹಾವೆಂದರೆ ಅತಿಶಯವಲ್ಲ. ಚುನಾವಣೆಗಳನ್ನು ನಡೆಸಬೇಕಾಗಿರುವ ಆಯೋಗಕ್ಕೆ ಮೇಲೆ ಹೇಳಿದ ಎಲ್ಲ ಹೊಣೆಗಾರಿಕೆಗಳೂ ಇದ್ದಾಗ ಮಾತ್ರ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ತಾನು ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಆಯೋಗ ಹೈಕೋರ್ಟ್ ಗೆ ಮೊರೆಯಿಟ್ಟಿರುವುದರಿಂದ ಇದಕ್ಕೀಗ ರಾಜ್ಯ ಸರ್ಕಾರವೇ ನ್ಯಾಯಪೀಠಕ್ಕೆ ಉತ್ತರವನ್ನು ನೀಡಬೇಕಿದೆ. 

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೮-೦೫-೨೦೨೨