ಮುಗ್ಧತೆಯಲ್ಲಿ ಪ್ರೌಢತೆ
ತರಗತಿಯಲ್ಲಿ ಬರೆಸುವಾಗ, "ಮಕ್ಕಳೇ, ಹೇಳಿಕೊಂಡು ಬರೆಯಿರಿ, ತಪ್ಪಿಲ್ಲದೇ ಬರೆಯಿರಿ, ದುಂಡಾಗಿ ಬರೆಯಿರಿ," ಎಂದು ಸಾರಿ ಸಾರಿ ಹೇಳುವುದು, ಶಿಕ್ಷಕರಿಗೆ ಬಾಯಿಪಾಠವೇ ಸರಿ. ಅಂತೆಯೇ ನಾನೂ ಕೂಡ ಹೀಗೆ ಹೇಳಿ ಬರೆಸಿ, ನಂತರ ಪುಸ್ತಕ ತಿದ್ದುವಾಗ, ಒಂದು ಮಗುವನ್ನು ಕರೆದು, ಅವಳ ಪುಸ್ತಕ ಅವಳ ಮುಂದೆ ಇಟ್ಟು ಪ್ರಶ್ನಿಸಿದೆ, "ಇದೇನಿದು? ಅಕ್ಷರ ಏಕೆ ಹೀಗೆ? ದುಂಡಾಗಿ ಬರೆಯಲು ಪ್ರತಿ ಬಾರಿ ಹೇಳಿದರೂ ನೀನೇಕೆ ನನ್ನ ಮಾತು ಕೇಳುವುದಿಲ್ಲ? ನಿನಗೆ ನನ್ನ ಮಾತಿನ ಮೇಲೆ ಅಲಕ್ಷ್ಯ ಅಲ್ಲವೇ? ನಾನಿನ್ನು ನಿನಗೆ ಹೇಳುವುದಿಲ್ಲ." ಎಂದು ಬೇಜಾರಿನ ಮುಖ ಮಾಡಿ ನಟಿಸಿದೆ. ನಾವೇನಾದರೂ ತಮಾಷೆಯಾಗಿ ಹೇಳಿದಾಗ ಮಕ್ಕಳ ಪಾಲಿಗೆ ನಾವು ಹಾಸ್ಯಗಾರರೇ ಸರಿ, ಹಾಗೆಯೇ ಎಂದಿನಂತೆ ನನ್ನ ಮಾತು ಕೇಳಿ ಅವಳು ಅಲ್ಲಿಯೇ ಒಂದು ತಾತ್ಸಾರದ ನಗೆ ಕೊಟ್ಟು ಹೋಗಿ ಕುಳಿತಳು. ಅವಳ ಮನಸ್ಸಿಗೆ, ಅವರು ದಿನಾ ಇದೆ ಹೇಳುತ್ತಾರೆ, ಮತ್ತೆ ಸುಮ್ಮನಾಗುತ್ತಾರೆ ಎನ್ನುವ ಭಾವ. ಆದರೆ ಈ ದಿನ ಸ್ವಲ್ಪ ಭಿನ್ನವಾಗಿ ಅವಳನ್ನು ನಡವಳಿಸಿಕೊಂಡೆ. ಅವಳ ಬಳಿ ಹೆಚ್ಚು ಮಾತನಾಡದೆ, ನೋಡಿಯೂ ನೋಡದೆ, ನಕ್ಕರೂ ನಗದೇ, ಹೀಗೆ. ಅದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಅವಳು, ಎಲ್ಲರೂ ಊಟಕ್ಕೆ ಹೋದಾಗ, ತಾನು ಮಾತ್ರ ಬೇಗ ಮುಗಿಸಿ ಬಂದು, ನನ್ನ ಬಳಿ ನಿಂತು, ನನ್ನನ್ನೇ ನೋಡುತ್ತಾ, ಅಣಕದ ಮಾತನಾಡತೊಡಗಿದಳು. ಮೇಲೆ ಬಿದ್ದು ಮಾತನಾಡಿಸಿ, ಏನೇನೋ ಹಾಸ್ಯಗಳನ್ನು ಮಾಡಿ ನಗಿಸಲು ಯತ್ನಿಸಿದಳು.
ನಾನು ಗಂಟು ಮುಖದಲ್ಲೇ ಇದ್ದೆ.. ಆಗ ಅವಳು ಹತ್ತಿರ ಬಂದು. "ಮಾತಾಜಿ ನಾನು ನಿಮ್ಮ ಬಳಿ ಒಂದು ಪ್ರಶ್ನೆ ಕೇಳಲೇ? ಎಂದಳು. "ಹಾ ಕೇಳು" ಎಂದೆ. "1ನೆ ತರಗತಿಗೆ ಹೋಗುವಾಗ ವಯಸ್ಸು ಎಸ್ಟಿರಬೇಕು?" ಎಂದಳು. "6 ತುಂಬಿರಬೇಕು. ಈಗ ನಿನಗೆ ಈ ಪ್ರಶ್ನೆ ಏಕೆ?" ಎಂದೆ. ಆಗ ಅವಳು ಅದನ್ನು ವಿಸ್ತರಿಸಿದ ರೀತಿ ತುಂಬಾ ಅಮೋಘವಾಗಿತ್ತು. "ನೋಡಿ ಮಾತಾಜಿ ನನಗೆ ಈಗ ಇನ್ನು ವಯಸ್ಸು ಆಗಿಲ್ಲ, ನಾನು ಮುಂದಿನ ವರ್ಷವೂ ಇಲ್ಲೇ ಇರುತ್ತೇನೆ (UKG). ನಾನು ಇನ್ನು ಚಿಕ್ಕವಳು. ನನಗೆ ದುಂಡಾಗಿ ಬರೆಯಲು ಇನ್ನು ಒಂದು ವರ್ಷದ ಸಮಯವಿದೆ, ಆಗ ನಾನು ಅಭ್ಯಾಸ ಮಾಡಿ ಕಲಿತು, ನಿಮಗೆ ಖುಷಿ ಪಡಿಸುತ್ತೇನೆ. ಆಯಿತಾ? Please ಈಗ ನೀವು ನನ್ನ ಮೇಲೆ ಬೇಜಾರಾಗಬೇಡಿ, ಸ್ವಲ್ಪ ನಕ್ಕು ಮಾತಾಡಿ, ನನ್ನನ್ನು avoid ಮಾಡಬೇಡಿ.." ಎಂದು ಹಾಸ್ಯದ ನಗೆ ನಗುತ್ತಾ ನನ್ನನ್ನು ಅಣಕಿಸಿದಳು. ಆ ತಕ್ಷಣಕ್ಕೆ ನಕ್ಕು ಮಾತನಾಡಿಸಿ. ನಂತರ ಹೇಳಿದೆ "ಶುರುವಿನಲ್ಲೇ ನೀನು ಒಳ್ಳೆಯ ರೀತಿಯಲ್ಲಿ ಬರೆಯುವ ಅಭ್ಯಾಸ ಮಾಡಬೇಕು" ಎಂದು ಹೇಳಿದೆ. ಮತ್ತೆ ಅವಳದ್ದು ಅದೇ ನಗು. ವಿಷಯ ಕೇಳಲು ತುಂಬಾ ಸರಳ ಆದರೆ ಮಕ್ಕಳು ನಾವು ಎಣಿಸಿದಷ್ಟು ಮುಗ್ಧರಲ್ಲ. ಕೆಲವೊಂದು ವಿಚಾರದಲ್ಲಿ ಅವರಲ್ಲೂ ಪ್ರೌಢತೆಯ ಆಲೋಚನೆಗಳು ಇರುತ್ತವೆ. ನಾವು ದೊಡ್ಡವರು, ನಮಗೆ ಎಲ್ಲ ತಿಳಿದಿದೆ. ಸಣ್ಣವರಿಗೆ ಏನೂ ತಿಳಿಯುವುದಿಲ್ಲ ಎನ್ನುವ ನಮ್ಮ ಮೂಢನಂಬಿಕೆ ದೂರಾಗಬೇಕಷ್ಟೆ..!
-ರಮ್ಯಾ ಆರ್ ಭಟ್, ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ