ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

ಬರಹ

೬ ಸಾಗಿಸಿದ್ದು ಏನು?

ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ನಿಜ ಹೇಳುತ್ತಿದ್ದ. ಅವರು ಮೂಟೆಯ ಹುಲ್ಲನ್ನೆಲ್ಲ ಪರೀಕ್ಷಿಸುತ್ತಿದ್ದರು. ಅವನನ್ನೂ ತಪಾಸಣೆ ಮಾಡುತ್ತಿದ್ದರು. ಏನೂ ಇರುತ್ತಿರಲಿಲ್ಲ. ಮುಲ್ಲಾ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನೂ ಬಿಡಲಿಲ್ಲ. ಕೆಲವೊಮ್ಮೆ ಹುಲ್ಲನ್ನು ನೀರಲ್ಲಿ ಮುಳುಗಿಸಿ, ಹಲವೊಮ್ಮೆ ಹುಲ್ಲನ್ನು ಸುಟ್ಟು ಕೂಡ ನೋಡಿದರು. ಏನೂ ಸಿಗಲಿಲ್ಲ. ಮುಲ್ಲಾ ಮಾತ್ರ ಶ್ರೀಮಂತನಾಗುತ್ತ ನಡೆದ. ಕೆಲವು ವರ್ಷಗಳ ನಂತರ ಮುಲ್ಲಾ ಬೇರೆ ರಾಜ್ಯಕ್ಕೆ ಹೋದ. ಅಲ್ಲಿ ಹಿಂದೆ ಗಡಿಯ ಕಾವಲು ಕಾಯುತ್ತಿದ್ದ ಅಧಿಕಾರಿ ಭೇಟಿಯಾದ. “ಮುಲ್ಲಾ, ನೀನು ಆ ದೇಶದಲ್ಲಿದ್ದಾಗ ಅದೇನು ಕಳ್ಳ ಸಾಗಾಣಿಕೆ ಮಾಡುತ್ತಿದ್ದೆ? ನಾವು ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲವಲ್ಲ, ದಯವಿಟ್ಟು ಹೇಳು” ಎಂದು ಕೇಳಿದ. ಮುಲ್ಲಾ “ನಾನು ದಿನವೂ ಕತ್ತೆಗಳನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರುತ್ತಿದ್ದೆ” ಎಂದ.

೭ ಅದ್ಭುತವಾದ ಬೇಟೆ

ರಾಜನಿಗೆ ಮುಲ್ಲಾನನ್ನು ಕಂಡರೆ ಬಲು ಪ್ರೀತಿ. ಒಮ್ಮೆ “ಮುಲ್ಲಾ, ನೀನಿವತ್ತು ನನ್ನೊಡನೆ ಕರಡಿ ಬೇಟೆಗೆ ಬರಲೇ ಬೇಕು” ಎಂದು ಆಜ್ಞೆ ಮಾಡಿದ. ಮುಲ್ಲಾನಿಗೋ ಪ್ರಾಣ ಹೋಗುವಷ್ಟು ಭಯ. ಬೇಟೆ ಮುಗಿಸಿಕೊಂಡು ಮುಲ್ಲಾ ತನ್ನ ಹಳ್ಳಿಗೆ ಹಿಂದಿರುಗಿದ. ಅವನ ಗೆಳೆಯರು ಕೇಳಿದರು” “ಮುಲ್ಲಾ, ಕರಡಿ ಬೇಟೆ ಹೇಗಿತ್ತು?” “ಬಹಳ ಅದ್ಭುತವಾಗಿತ್ತು” ಎಂದ ಮುಲ್ಲಾ. “ಎಷ್ಟು ಕರಡಿ ನೋಡಿದೆ?” ಎಂದರು. “ಒಂದೂ ಕಾಣಲಿಲ್ಲ” ಎಂದ ಮುಲ್ಲಾ. “ಮತ್ತೆ ಅದ್ಭುತವಾದ ಬೇಟೆ ಅಂದೆಯಲ್ಲ?” “ಮತ್ತಿನ್ನೇನು! ನೀವು ಕರಡಿ ಬೇಟೆಗೆ ಹೋದಿರಿ ಅಂತ ಇಟ್ಟುಕೊಳ್ಳಿ. ನೀವು ನನ್ನಂಥ ಪುಕ್ಕಲ ಅಂತ ಇಟ್ಟುಕೊಳ್ಳಿ. ಒಂದು ಕರಡಿಯನ್ನೂ ನೋಡದಿರುವುದು ನಿಜವಾಗಿ ಅದ್ಭುತವಲ್ಲವೇ?” ಎಂದ ಮುಲ್ಲಾ.

೮ ಮುಖವನ್ನು ಕದ್ದಾರು, ಜೋಕೆ

ದಾನವನ್ನು ಕೇಳಲೆಂದು ಮುಲ್ಲಾ ಶ್ರೀಮಂತನೊಬ್ಬನ ಮನೆಗೆ ಹೋಗಿದ್ದ. ಮನೆಯ ಸೇವಕಿ ಹೊರಗೆ ಬಂದು “ಯಜಮಾನರು ಮನೆಯಲ್ಲಿಲ್ಲ” ಎಂದಳು. “ಸರಿ ಬಿಡು. ನಿಮ್ಮ ಮನೆಯ ಒಡೆಯರು ದಾನ ಕೊಡದಿದ್ದರೂ ಪರವಾಗಿಲ್ಲ. ಅವರಿಗೆ ಒಂದು ಉಪದೇಶ ಹೇಳುವುದಿದೆ, ಅವರು ಬಂದಾಗ ಹೇಳು. ‘ಮುಂದಿನ ಬಾರಿ ಹೊರಗೆ ಹೋಗುವಾಗ ನಿಮ್ಮ ಮುಖವನ್ನು ಕಿಟಕಿಯಲ್ಲಿ ಬಿಟ್ಟು ಹೋಗಬೇಡಿ, ಯಾರಾದರೂ ಕದ್ದು ಬಿಡುತ್ತಾರೆ’ ಎಂದು ಹೇಳಿದೆ ಅಂತ ತಿಳಿಸಿಬಿಡು” ಅಂದ ಮುಲ್ಲಾ.