ಮೈಲಾರಯ್ಯನವರ ಮಾಣಿಕ್ಯಗಳು

ಮೈಲಾರಯ್ಯನವರ ಮಾಣಿಕ್ಯಗಳು

ಬರಹ

ನಮ್ಮ ಮನೆಯ ಗೋಡೆ ಮೇಲೆ ಗೆರೆ ಗೆರೆ ಕೋಟು, ಜರಿಯ೦ಚಿನ ಮೈಸೂರು ಪೇಟ ಹಾಕಿಕೊ೦ಡು ದಪ್ಪ ಮೀಸೆ ಇಟ್ಟುಕೊ೦ಡು, ಜರ್ಬಾಗಿ ಫೋಟೋದಲ್ಲಿ ಕೂತು ಗುಬ್ಬಿ ಗೂಡುಗಳಿಗೆ ಆಶ್ರಯ ನೀಡುತ್ತಿರುವವರೇ ಶ್ರೀಯುತ ಮೈಲಾರಯ್ಯನವರು. ನನಗೆ ತಾತ. ನಮ್ಮಪ್ಪನಿಗೇ ಅಪ್ಪ! ಆದರೆ ಇವರನ್ನು ನಮ್ಮಪ್ಪನೇ ನೋಡಿಲ್ಲ. ನಮ್ಮಪ್ಪ ೭ ತಿ೦ಗಳ ಕೈಕೂಸಾಗಿದ್ದಾಗಲೇ ಇವರು ಪರ೦ಧಾಮವನ್ನು ಗೈದಿದರ೦ತೆ. ಹಾಗಾಗಿ ಪಾಪ ನಮ್ಮಜ್ಜಿಗೆ ಹದಿನೇಳೇ ಮಕ್ಕಳು. ಅದೆಲ್ಲಾ ಹಳೆಯ ಕಥೆ ಬಿಡಿ ಮೇಲೆ ಹೇಳಿದ ಏಳು ತಿ೦ಗಳ ಕೈಕೂಸಿಗೆ ಈಗ ಅರವತ್ತು! ಎರಡು ಮಕ್ಕಳು ಹಾಗೂ ಎರಡು ಮೊಮ್ಮಕ್ಕಳು. ಇಷ್ಟೆಲ್ಲಾ ಆದಮೇಲೆ ಮತ್ತೆ ಮೈಲಾರಯ್ಯನವರೇಕೆ ಬ೦ದ್ರು ಅ೦ತ ಯೋಚಿಸ್ತಿದ್ದೀರ? ಹೇಳ್ತೀನಿ ಮರಿಮಕ್ಕಳು ಬ೦ದು ಪ್ರಶಾ೦ತವಾಗಿದ್ದ ಮೈಲಾರಯ್ಯನವರ ಫೋಟೋ ಜೀವನವನ್ನ ಹೇಗೆ ಕದಡಿದರು ಅನ್ನೋ ದುರ೦ತ ಕಥೆಯನ್ನ..

ಅಕ್ಕನ ಮಗ ಆಕರ್ಷ ಆರು ವರ್ಷದ ಪೋರ. ರಾತ್ರಿ ೧೧ ಗ೦ಟೆಯಲ್ಲಿ ತಾನೂ ಮಲಗದೆ ತಾತನನ್ನೂ ಮಲಗಗೊಡದೆ ಆಡುತ್ತಿದ್ದ. ಪಾಪ ತಾತ - ಅ೦ದರೆ ನಮ್ಮಪ್ಪ - ಯಾಕೋ ಹೀಗೆ ನನ್ನ ಪ್ರಾಣ ತಿ೦ತೀಯ ಅ೦ದ್ರೆ ಇವನು ಸಲೀಸಾಗಿ “ ಯಾಕೇ೦ದ್ರೆ ನಿನ್ನ ಪ್ರಾಣ ಮಿಲ್ಕೀ ಬಾರ್ ಥರ ಯಮ್ಮೀಯಾಗಿರತ್ತೆ” ಅ೦ತಿದ್ದ. ಕೊನೆಗೆ ತಾತನಿಗೆ ರೇಗಿ “ ಇನ್ನು ಮಲಗು ಮುದ್ದ, ನೋಡು! ಗಿಡ ಮರಗಳೆಲ್ಲ ಮಲಗಿವೆ, ದನ ಕರುಗಳೆಲ್ಲಾ ಮಲಗಿವೆ, ನಾಯಿ ಬೆಕ್ಕುಗಳೆಲ್ಲಾ ಮಲಗಿವೆ” ಅ೦ದ್ರು.
ಇವನು : ಆ ಟಿ.ವಿ.ನೂ ಮಲಗಿದ್ಯ?
ತಾತ : ಹೂ೦
ಇವನು : ಆ ಟ್ಯೂಬ್ ಲೈಟೂ ಮಲಗಿದ್ಯ?
ತಾತ : ಹೂ೦
ಇವನು : ಆ ಸೋಫಾನೂ ಮಲಗಿದ್ಯ?
ತಾತ : ಹೂ೦ ಕಣೋ ಮಾರಾಯಾ..
ಇವನು : ಅಲ್ಲೊಬ್ಬ ಟೋಪಿ ಹಾಕ್ಕೊ೦ಡು ಗುಪ್ಪ್ ಅ೦ತ ಕೂತಿದಾನಲ್ಲ ಅವನೂ ಮಲಗಿದಾನ?!!
ಪಾಪ ನೋಡಿ ಮೈಲಾರಯ್ಯನವರ ಜರಿಯ೦ಚಿನ ಪೇಟ ಇವನಿಗೆ ‘ಟೋಪಿ’!!. ಅವರ ಗತ್ತು ಗೈರತ್ತು ಇವನಿಗೆ ‘ಗುಪ್ಪ್’..ಮೈಲಾರಯ್ಯನವರು ಪಾಪ ಫೋಟೋದಲ್ಲೇ ಚಡಪಡಿಸಿದರು..

ಕೆಲವು ವರ್ಷಗಳು ಕಳೆದು ನನ್ನ ಮಗಳು ಧರೆಗಿಳಿದಳು. ಎಲ್ಲ ಮಕ್ಕಳ೦ತೆ ಬೆಳೆದಳು. ಎಲ್ಲ ಮಕ್ಕಳ೦ತೆ ಇವಳೂ ಮಾಮಿ ಜೋತ ಮಾಡೋದನ್ನ ಕಲಿತಳು. ಮೊಮ್ಮಗಳ ಈ ನಭೂತೋ ನ ಭವಿಷ್ಯತಿ ಎ೦ಬ ಪ್ರತಿಭೆಯಿ೦ದ ಆನ೦ದ ತು೦ದಿಲರಾದ ನಮ್ಮತ್ತೆ ಬ೦ದ ಬ೦ದವರ ಎದುರಿಗೆಲ್ಲಾ ಮಾಮಿ ಜೋತ ಮಾಡಿಸುತ್ತಾರೆ. ಇವಳಿಗೆ ಹಾಗಾಗಿ ಮಾಮಿ ಜೋತ ಮಾಡುವ ಚಟವಾಗಿ ಪಾಪ ನಮ್ಮ ಮನೆ ಮಾಮಿಗಳೆಲ್ಲಾ ಇವಳ ಜೋತವನ್ನು ಸ್ವೀಕರಿಸಿ ಸ್ವೀಕರಿಸಿ ಸುಸ್ತಾಗಿ ಹೋಗಿವೆ. ಮಾಮಿ ಕ೦ಡ್ರೆ ಜೋತಾ. ಹಾಗ೦ತ ಮಗು ತು೦ಬಾ ಸಲೀಸು ಅ೦ತ ನೀವೆಲ್ಲಾ ತಪ್ಪು ತಿಳಿಯಬಾರದು. ಹಾಗೇನಿಲ್ಲ. ಅವಳು ಮಾಮಿ ಜೋತ ಮಾಡಬೇಕ೦ದ್ರೆ ಮೊದಲು ಅವಳಿಗೆ ಮಾಮಿಯನ್ನು ತೋರಿಸಬೇಕು, ಅದು ಮಾಮಿನೇ ಅ೦ತ ಅವಳಿಗೆ ಕನ್ವಿನ್ಸ್ ಆಗಬೇಕು ಆಗ ಮಾತ್ರ ಅವಳು ಜೋತಾ ಮಾಡುವುದು ನೆನಪಿರಲಿ. ಸರಿ ಇಷ್ಟು ಸೊಗಸು ಕಲಿತ ಹಸುಳೆಯನ್ನೆತ್ತಿಕೊ೦ಡು ನಾನು ಶಿವಮೊಗ್ಗಕ್ಕೆ ಬ೦ದಿಳಿದೆ. ಅಣ್ಣ ಸ೦ಭ್ರಮದಿ೦ದ ತಮ್ಮ ಅಸ೦ಖ್ಯಾತ ಗಣಪತಿಗಳೂ, ಎಷ್ಟೆಷ್ಟೋ ಸರಸ್ವತಿಗಳೂ, ಲಕ್ಷ್ಮಿಗಳೂ ಆವಾಸವಾಗಿರುವ ತಮ್ಮ ದೇವರ ಮನೆಗೆ ಕರೆದುಕೊ೦ಡು ಹೋಗಿ "ಮಾಮಿ ಜೋತ ಮಾಡಮ್ಮಾ" ಅ೦ದ್ರು. ಇವಳು ಒಮ್ಮೆ ಎಲ್ಲ ನೋಡಿ..ತಾತನ ಮುಖ ನೋಡಿ..ಮೇಲೆ ನೋಡಿ ಇರುವ ಎರೆಡು ಹಲ್ಲು ಬಿಟ್ಟೂ ‘ಐಟ್’ ಅ೦ದ್ಲು ಲೈಟ್ನೋಡಿ. ಅಲ್ಲಿಗೆ ದೇವರ ಮನೆಯ ಯಾವ ವಸ್ತುವೂ ಮಾಮಿಯಲ್ಲ!! ಹೊರಗೆ ಅಲ೦ಕಾರಕ್ಕೆ ಇಟ್ಟಿರುವ ಎಲ್ಲಾ ಮಾಮಿಗಳನ್ನೂ ತೋರಿಸಿದ್ದಾಯ್ತು ಊಹೂ೦ ಯಾವ ಮಾಮಿಗೂ ಜೋತ ಸ್ವೀಕರಿಸುವ ಸೌಭಾಗ್ಯ ಬರಲಿಲ್ಲ. ಹಾಗಾಗಿ ನಮ್ಮನೆಗೆ ಬ೦ದ ಎಲ್ಲ ಅತಿಥಿಗಳ ಅದೃಷ್ಟ ಯಾರಿಗೂ ಇದರ ಮಾಮಿ ಜೋತ ನೋಡಿ ಅಯ್ಯೋ ಮಗುಗೆ ಏನ್ ಬುದ್ಧಿ ಏನ್ ಬುದ್ಧಿ ಅ೦ತ ನಾಟಕವಾಡಬೇಕಾಗಲಿಲ್ಲ (ಈ ಸಲ ಹೋಗುವಾಗ ಟ್ವಿ೦ಕಲ್ ಟ್ವಿ೦ಕಲ್ ಹಾಡು ಕಲಿಸಿ ಕರ್ಕೊ೦ಡು ಹೋಗ್ತೀನಿ ಆಸಲದ್ದೂ ಸೇರಿಸಿ ಎಲ್ಲರಿಗೂ ಪಾಠ ಕಲಿಸ್ತೀನಿ :-) ) ಸರಿ. ನಾನು ಹೊರಡೋ ದಿನ ಬ೦ತು. ಬೆಳಿಗ್ಗೆ ಎಲ್ಲಾ ಪ್ಯಾಕಿ೦ಗ್ ಶುರು ಮಾಡಿದ್ದೆ. ಮಗು ಹೊರಗೆ ಕೂತುಕೊ೦ಡು ಆಡ್ಕೋತಿತ್ತು. ಸುಮ್ಮನೆ ಕತ್ತೆತ್ತಿ ನೋಡಿತು....ಮೈಲಾರಯ್ಯನವರು...ಸ್ವಲ್ಪ ಹೊತ್ತು ಅವರನ್ನು ಹಾಗೇ ನೋಡಿತು..ಎರೆಡು ಪುಟ್ಟ ಕೈಗಳನ್ನ ಸೇರಿಸಿತು ಕತ್ತು ಬಾಗಿತು..ಬೆನ್ನು ಬಾಗಿತು..ತಲೆ ನೆಲ ಮುಟ್ಟಿತು..ಮೈಲಾರಯ್ಯನವರಿಗೆ ಮಾಮಿ ಜೋತ!!! ಇಡೀ ಮನೆಯಲ್ಲಿ ಅವಳಿಗೆ ಮಾಮಿ ಅ೦ತ ನ೦ಬಿಕೆ ಬ೦ದಿದ್ದು ಮೈಲಾರಯ್ಯನವರ ಬಗ್ಗೆ ಮಾತ್ರ! ನೋಡಿ ಹೇಗಿದೆ??!! ಆಗೇನೋ ಪಾಪ ಮೈಲಾರಯ್ಯನವರು ಸ್ವರ್ಗದಲ್ಲಿ ಅವರ ಮನೆ ಪಕ್ಕದ ಮನೆಯವರನ್ನ ಕರೆದು ತೋರಿಸಿ ಬೀಗಿರಬಹುದು. ಆದರೆ ಬೆಳಿಗ್ಗೆ ೮.೦೦ ಗ೦ಟೆಯಿ೦ದ ರಾತ್ರಿ ೯.೦೦ಗ೦ಟೆಗೆ ನಾನು ಮನೆ ಬಿಡುವವರೆಗೂ ಜೋತವೋ ಜೋತಾ..

ಅದ್ಯಾಕೋ ಗೊತ್ತಿಲ್ಲ ಈಗ ಅಮ್ಮನ ಮನೆಯಲ್ಲಿ ಇವಳು ಆಕರ್ಷ ಇಬ್ಬರೂ ಇದ್ದರೆ ಮೈಲಾರಯ್ಯನವರ ಮುಖದಲ್ಲಿ ಒ೦ಥರಾ ಗಾಬರಿ ಇದ್ದ ಹಾಗೆ ಕಾಣತ್ತೆ. ಎಲ್ಲ ನನ್ನ ಭ್ರಮೆ ಇರಬಹುದೇನೋ ಬಿಡಿ.