ಮೊಬೈಲೇ ಕ್ರೆಡಿಟ್‌ಕಾರ್ಡ್!!

ಮೊಬೈಲೇ ಕ್ರೆಡಿಟ್‌ಕಾರ್ಡ್!!

ಬರಹ

(ಇ-ಲೋಕ-79)(17/6/2008)


 ಮೊಬೈಲ್ ಸೇವೆ ಒದಗಿಸುವ ಜಾಲದವರ ಮೂಲಕ ಬ್ಯಾಂಕ್ ಸೇವೆಗೆ ಅನುಮತಿಸುವುದರೊಂದಿಗೆ ರಿಸರ್ವ್ ಬ್ಯಾಂಕ್ ಮೊಬೈಲ್ ಬ್ಯಾಂಕಿಗೆ ರಂಗವನ್ನು ಅಣಿಗೊಳಿಸಿದೆ.ಬ್ಯಾಂಕ್ ಖಾತೆಯಿಂದ ಹಣವನ್ನು ಮೊಬೈಲ್ ಸೇವೆ ಒದಗಿಸುವ ಸೇವಾದಾತೃಗಳ ಮೂಲಕ ಚಂದಾದಾರರ ಖಾತೆಯಲ್ಲಿ ಟಾಲ್ಕ್ ಟೈಮ್ ಅಂತೆ ಜಮಾ ಮಾಡುವುದು,ಜಮಾ ಮಾಡಿದ ಹಣದಿಂದ ಇತರರ ಖಾತೆಗೆ ವರ್ಗಾಯಿಸುವುದು ಮಾಡಲು ರಿಸರ್ವ್ ಬ್ಯಾಂಕ್ ಅನುಮತಿಸಿದೆ.ಹೀಗಾಗಿ ಅಂಗಡಿಯಿಂದ ಸಾಮಾನು ಖರೀದಿಸಿ,ಪಾವತಿಸಲು ಮೊಬೈಲನ್ನೇ ಬಳಸಬಹುದು. ಪಿನ್ ಸಂಖ್ಯೆ ಬಳಸಿ,ಈ ಪಾವತಿಯನ್ನು ನೈಜ ಗ್ರಾಹಕ ಮಾತ್ರ ಬಳಸುವಂತೆ ಖಾತರಿ ಮಾಡಬಹುದು.ಪಿನ್ ಸಂಖ್ಯೆ ರವಾನಿಸಿದಾಗ,ಮೊಬೈಲ್ ಸಂಕೇತಗಳು ಇತರರಿಂದ ಟ್ಯಾಪ್ ಆಗಿ,ಸಂಖ್ಯೆ ಬಯಲಾಗದಂತೆ ಗೂಢ ಲಿಪಿಯನ್ನು ಬಳಸಲಾಗುತ್ತದೆ.
 ಮೊಬೈಲ್ ಅನ್ನು ಕ್ರೆಡಿಟ್ ಕಾರ್ಡ್ ರೀತಿ ಬಳಸಲೂ ಬಹುದು.ಮೊಬೈಲ್ ಬಳಸಿ ವ್ಯವಹಾರ ಮಾಡುವಾಗ,ಮೊಬೈಲ್ ಕಳೆದು ಹೋದರೆ,ಅದರ ದುರುಪಯೋಗ ಆಗಬಹುದು ಎನ್ನುವ ಭಯ ಇದ್ದೇ ಇದೆ.ಪಿನ್ ಸಂಖ್ಯೆಯನ್ನು ಇತರರೂ ತಿಳಿದುಕೊಂಡರೆ,ಮೊಬೈಲ್ ನಮ್ಮ ಕೈಯಲ್ಲಿಲ್ಲದ ಹೊತ್ತು ಇತರರಿಂದ ದುರುಪಯೋಗ ಆಗಬಹುದು.ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ವಿದ್ಯಾಲಯದ ಮಹಾವಿದ್ಯಾರ್ಥಿಗಳಾದ ವಿಭಾ ಮತ್ತು ವಿಶ್ವೇಶ ಪ್ರಭು ಅವರ ಅಂತಿಮ ವರ್ಷದ ಪ್ರೊಜೆಕ್ಟ್ ಈ ನಿಟ್ಟಿನಲ್ಲಿ ಪರಿಹಾರ ನೀಡುವ ತಂತ್ರಜ್ಞಾನ ಹೊಂದಿದೆ.ಸದ್ಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಪಡೆದವರು ಅದನ್ನು ಅಂಗಡಿಯಲ್ಲಿ ಕ್ರೆಡಿಟ್ ಕಾರ್ಡ್ ಯಂತ್ರದಲ್ಲಿ ಸ್ವೈಪ್ ಮಾಡುವ ಮೂಲಕ ಹಣವನ್ನು ಪಾವತಿಸುವ ವ್ಯವಸ್ಥೆಯಿದೆ.ಅಂಗಡಿಯವರು ಕ್ರೆಡಿಟ್ ಕಾರ್ಡ್ ಸ್ಲಿಪ್‍ನಲ್ಲಿ ಸಹಿ ಪಡೆದುಕೊಂಡು,ತಾಳೆ ನೋಡಿ ಖಚಿತ ಪಡಿಸಿಕೊಳ್ಳಬಹುದು. ಹಾಗೆ ಮಾಡುವವರ ಸಂಖ್ಯೆ ಕಡಿಮೆ. ಹಲವು ಕ್ರೆಡಿಟ್ ಕಾರ್ಡ್‍ಗಳನ್ನು ಹೊಂದಿದ್ದರೆ,ಅವನ್ನು ಜೋಪಾನವಾಗಿರಿಸಿಕೊಳ್ಳುವ ಸಮಸ್ಯೆಯೂ ಇದೆ. ಇದನ್ನು ಮೊಬೈಲ್ ಕ್ರೆಡಿಟ್ ಕಾರ್ಡ್ ಮೂಲಕ ಹೋಗಲಾಡಿಸಬಹುದು.ಬ್ಯಾಂಕುಗಳವರು ಕ್ರೆಡಿಟ್ ಕಾರ್ಡನ್ನು ಕಾರ್ಡ್ ರೂಪದಲ್ಲಿ ನೀಡದೆ,ಮೊಬೈಲಿನ ಸಿಮ್‍ನಲ್ಲಿ ತಂತ್ರಾಂಶದಂತೆ ಅನುಸ್ಥಾಪಿಸಬೇಕು.ಬ್ಯಾಂಕು ಗ್ರಾಹಕನ ಬೆರಳ ಗುರುತನ್ನೂ ತೆಗೆದು ತನ್ನ ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳುತ್ತದೆ.ಅಂಗಡಿಯಲ್ಲಿ ಹಣ ಪಾವತಿಸಲು ಈ ಮೊಬೈಲ್ ಕ್ರೆಡಿಟ್ ಕಾರ್ಡ್ ಬಳಸಲು, ಗ್ರಾಹಕ ತನ್ನ ಹ್ಯಾಂಡ್‌ಸೆಟ್‍ನ ಬ್ಲೂಟೂತ್ ವ್ಯವಸ್ಥೆಯ ಮೂಲಕ ಅಂಗಡಿಯ ಕ್ರೆಡಿಟ್‌ಕಾರ್ಡ್ ಯಂತ್ರದ ಸಂಪರ್ಕ ಸ್ಥಾಪಿಸಿ,ಪಾವತಿಯ ವಿವರಗಳನ್ನು ನೀಡಬೇಕಾಗುತ್ತದೆ.ಯಂತ್ರವು ಬ್ಯಾಂಕಿನ ಸರ್ವರ್ ಜತೆ ಸಂಪರ್ಕ ಸಾಧಿಸಿ,ಕ್ರೆಡಿಟ್‍ಕಾರ್ಡ್ ಸಂಖ್ಯೆ ಮತ್ತು ಪಾವತಿಸಬೇಕಾದ ಮೊತ್ತ ಖಾತೆಯಲ್ಲಿ ಇರುವ ಬಗ್ಗೆ ದೃಡೀಕರಿಸಿಕೊಳ್ಳುತ್ತದೆ.ನಂತರದ ಮುಖ್ಯ ಹೆಜ್ಜೆಯೆಂದರೆ,ಗ್ರಾಹಕ ನೈಜ ಗ್ರಾಹಕನೇ ಅನ್ನುವುದನ್ನು ದೃಢೀಕರಿಸಿಕೊಳ್ಳುವ ಹೆಜ್ಜೆ. ಈಗ ಗ್ರಾಹಕ ತನ್ನ ಬೆರಳ ಗುರುತನ್ನು ಕ್ರೆಡಿಟ್‍ಕಾರ್ಡ್ ಯಂತ್ರಕ್ಕೆ ಸಂಪರ್ಕಿಸಿದ,ಬೆರಳಚ್ಚು ಸೆರೆ ಹಿಡಿವ ಸಾಧನಕ್ಕೆ ತನ್ನ ಬೆರಳಚ್ಚನ್ನು ನೀಡಿದರೆ,ಅದು ಬ್ಯಾಂಕಿಗೆ ರವಾನೆಯಾಗಿ,ಅಲ್ಲಿರುವ ನೈಜ ಗ್ರಾಹಕನ ಬೆರಳಚ್ಚಿಗೆ ಹೋಲಿಸಿ ನೋಡಿ,ಅದು ಸರಿಯಾಗಿ ಹೊಂದಿಕೆಯಾದರೆ ಮಾತ್ರಾ ಹಣ ಪಾವತಿಯಾಗುತ್ತದೆ.ಈ ವ್ಯವಸ್ಥೆಯನ್ನು ಮೊಬೈಲ್ ಸೆಟ್ ಬಳಸಿ,ಪರೀಕ್ಷಿಸಲು ಸಾಧ್ಯವಾಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಭದ್ರತೆ ಖಚಿತ ಪಡಿಸಿಕೊಳ್ಳಲು ಈ ವ್ಯವಸ್ಥೆ ತುಂಬಾ ಸಹಾಯಕವಾಗಲಿದೆ.ಮೊಬೈಲ್ ಕ್ರೆಡಿಟ್ ವ್ಯವಸ್ಥೆಯ ಹಕ್ಕುಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ.ಕಾಲೇಜಿನ ಕಂಪ್ಯೂಟರ್ ವಿಭಾಗದ ಸಹಪ್ರಾಧ್ಯಾಪಕ ಸ್ಟಿಫಾನ್ ವಡಕ್ಕನ್ ಪ್ರಾಜೆಕ್ಟಿಗೆ ಮಾರ್ಗದರ್ಶನ ಮಾಡಿದ್ದಾರೆ.
ಮಣಗಾತ್ರದ ಬಟ್ಟೆ ತೊಳೆಯಲು ಬೇಕಿಲ್ಲ ಬಕೆಟ್‍ಗಟ್ಟಲೆ ನೀರು!
ಬಟ್ಟೆ ಒಗೆಯುವ ಯಂತ್ರ ಪ್ರತಿ ಕೇಜಿ ಬಟ್ಟೆ ಒಗೆಯಲು ಮೂವತ್ತೈದು ಲೀಟರ್ ನೀರು ಬಳಸುವುದು ಸಾಮಾನ್ಯ. ಆದರೆ ಲೀಡ್ಸ್ ವಿಶ್ವವಿದ್ಯಾಲಯ ಸಂಶೋಧಿಸಿದ ತಂತ್ರಜ್ಞಾನ ಬಳಸಿದರೆ ಅದರ ಶೇಕಡಾ ಎರಡು ಭಾಗ ನೀರು ಮತ್ತು ಶಕ್ತಿ ಬಳಸಿ,ಬಟ್ಟೆ ಒಗೆಯಬಹುದು.ಈ ತಂತ್ರಜ್ಞಾನವನ್ನು ಬಳಸಿ ಕ್ಸೆರೋಸ್ ಎನ್ನುವ ಕಂಪೆನಿ ವಾಣಿಜ್ಯ ಉತ್ಪಾದನೆ ಆರಂಭಿಸಲಿದೆ.ಇಲ್ಲಿ ಬಟ್ಟೆಗಳ ಕಲೆ ತೆಗೆಯಲು ಮತ್ತು ಮಲಿನತೆ ನಿವಾರಿಸಲು ಪ್ಲಾಸ್ಟಿಕ್ ಚಿಪ್‍ಗಳ ಬಳಕೆಯಾಗಲಿದೆ.ಹೀಗಾಗಿ ಬಟ್ಟೆ ಒಣದಾಗಿಯೇ ಇರುವಂತೆ ಸ್ವಚ್ಛವಾಗುತ್ತದೆ.ತೊಳೆಯುವ ನೀರನ್ನು ಬಿಸಿ ಮಾಡಲು ಮತ್ತು  ಬಟ್ಟೆ ಒಣಗಿಸಲು ಖರ್ಚು ಬರುವುದಿಲ್ಲ.ಇಂಗ್ಲೆಂಡಿನಲ್ಲಿ ಯಂತ್ರಗಳು ಮಾರಾಟಕ್ಕೆ ಲಭ್ಯವಾಗಲಿವೆ. ಅಲ್ಲಿ ಪ್ರತಿ ಮನೆಯಲ್ಲಿ ಬಳಕೆಯಾಗುವ ಆರನೇ ಒಂದಂಶ ನೀರು ಬಟ್ಟೆ ಒಗೆಯಲೇ ಖರ್ಚಾಗುತ್ತಿದೆ.ಹಾಗೆಯೇ ಯಂತ್ರಗಳ ಬಳಕೆಯೂ ಹೆಚ್ಚುತ್ತಿದೆ.
ಹಿಂದಿ ಚಲನಚಿತ್ರದ ನಿರ್ಮಾಣಕ್ಕೆ ಸನ್ ಮೈಕ್ರೋಸಿಸ್ಟಮ್ಸ್ ತಂತ್ರಜ್ಞಾನ ಬಳಕೆ
 ಚಲನಚಿತ್ರಗಳ ನಿರ್ಮಾಣದಲ್ಲಿ ವಿಶೇಷ ಪರಿಣಾಮಗಳನ್ನು ಮೂಡಿಸಲು ಮತ್ತು ಅನಿಮೇಶನ್ ಮೂಡಿಸಲು ಕಂಪ್ಯೂಟರ್ ಬಳಕೆ ಇತ್ತೀಚೆಗೆ ಧಾರಾಳವಾಗಿ ಆಗುತ್ತಿದೆ.ಪ್ರಥಮ ಬಾರಿಗೆ ಹಿಂದಿ ಚಿತ್ರದಲ್ಲಿ ಇಂತಹ ಕೆಲಸಕ್ಕೆ ಕಂಪೆನಿಯೊಂದು ತನ್ನ ಸಂಪೂರ್ಣ ತಂತ್ರಾಂಶ ಸಹಾಯ ಒದಗಿಸಲಿದೆ.ಹ್ಯಾರಿ ಬವೇಜಾ ನಿರ್ಮಿಸಲಿರುವ ಚಿತ್ರ "ಲವ್ ಸ್ಟೋರಿ 2050",ಜುಲೈ ಐದಕ್ಕೆ ತೆರೆ ಕಾಣಲಿದೆ.ಹರ್ಮನ್ ಬವೇಜಾ ಮತ್ತು ಪ್ರಿಯಾಂಕಾ ಚೋಪ್ರಾ ನಾಯಕ-ನಾಯಕಿ.ವೈಜ್ಞಾನಿಕ ಕತೆ ಹೊಂದಿರುವ ಚಿತ್ರವಾದ್ದರಿಂದ ವಿಶೇಷ ಪರಿಣಾಮಗಳನ್ನು ಪ್ರಭಾವೀ ರೀತಿಯಿಂದ ತೆಗೆಯುವುದು ಮುಖ್ಯ.ಸನ್ ಮೈಕ್ರೋಸಿಸ್ಟಮ್ಸ್ ಕಂಪೆನಿಗೆ ಇಂತಹ ತಂತ್ರಜ್ಞಾನವನ್ನು ಹಾಲಿವುಡ್ ಸಿನೇಮಾಗಳಿಗೆ ನೀಡಿದ ಅನುಭವವಿರುವುದೆ.
ಹಸ್ತದಲ್ಲೇ ಹಿಡಿಸುವ ಪ್ರೊಜೆಕ್ಟರ್
 ಮೊಬೈಲ್ ಫೋನಿನಲ್ಲೇ ಪ್ರೊಜೆಕ್ಟರ್,ಅಥವಾ ಅಂತದ್ದೇ ಕಿರುಗಾತ್ರದ ಸಾಧನದ ಮೂಲಕ ವಿಡಿಯೋ ತುಣುಕುಗಳನ್ನು ಅಥವಾ ಪವರ್‌ಪಾಯಿಂಟ್ ಸ್ಲೈಡುಗಳನ್ನು ಪ್ರದರ್ಶಿಸುವಂತಿದ್ದರೆ ಎಷ್ಟು ಚೆನ್ನ ಎನ್ನುವುದು,ಕಂಪೆನಿಯ ಮಾರಾಟ ವಿಭಾಗದಲ್ಲಿರುವ ನೌಕರರ ಕನಸಾಗಿರಬಹುದು.ಅದು ನನಸಾಗಲಿನ್ನು ಹೆಚ್ಚು ಸಮಯ ಬೇಡ.ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಕಂಪೆನಿಯು ಅಭಿವೃದ್ಧಿ ಪಡಿಸಿದ ಡಿಜಿಟಲ್ ಬೆಳಕು ಸಂಸ್ಕಾರಕ ಚಿಪ್ ಮತ್ತು ವಿಡಿಯೋ ಸಂಸ್ಕಾರಕ ತಂತ್ರಾಂಶ ಬಳಸಿ ಇಂತಹ ಸಾಧನ ಪ್ರಾಯೋಗಿಕವಾಗಿ ಸಿದ್ಧವಾಗಿದೆ.ಪೀಕೋ ಪ್ರಾಜೆಕ್ಟರ್ ಇದ್ದರೆ,ಪ್ರವಾಸದ ವೇಳೆ ಚಿತ್ರ ವೀಕ್ಷಣೆಯನ್ನೂ ಕೋಣೆಯೊಳಗೇ ಮಾಡಬಹುದು.ತಂಬ್ ಡ್ರೈವಿನಲ್ಲಿ ಚಿತ್ರದ ಡಿಜಿಟಲ್ ಪ್ರತಿಯನ್ನು ಕೊಂಡೊಯ್ದರಾಯಿತು!ಮಾರುಕಟ್ಟೆಗೆ ಬರುವ ವರ್ಷವಷ್ಟೇ ಈ ಸಾಧನ ಬಿಡುಗಡೆಯಾಗಲಿದೆ.
ashokworld

udayavani

 *ಅಶೋಕ್‌ಕುಮಾರ್ ಎ