ಮೋಹಕ ಬಲೆಯೊಳು... ಮತ್ತೊಂದು ಗಝಲ್
ಮೋಹಕ ಬಲೆಯೊಳು ಸಿಲುಕುತ ಸಾಗಿದೆ
ಒಲವಿನ ರೀತಿಗೆ ಮರುಳಾಗಿ
ಮಾತಿನ ಬಾಣಕೆ ಸೋಲುತ ಬಾಗಿದೆ
ಕೈಯನು ಹಿಡಿಯುತ ಖುಷಿಯಾಗಿ
ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ
ಬಾಳಿನ ಜ್ಯೋತಿಯ ಸೆಲೆಯಾಗಿ
ಚೆಂದದ ಚೆಲುವನು ಬೀರುತ ಸಾಗಲು
ಹುಣ್ಣಿಮೆ ನಕ್ಕಿತು ಗೆಲುವಾಗಿ
ತಾರೆಯ ಸುಂದರ ಮುಖವನು ಕಂಡೆನು
ನಿನ್ನಯ ರೂಪದ ರಾಶಿಯಲಿ
ಬೆಸುಗೆಯ ಬಂಧದ ಸಪ್ನವು ಕರಗಲು
ಮರದಡಿ ಮಲಗಿದೆ ಹಾಯಾಗಿ
***
ಗಝಲ್
ಜೋಲಿ ಹೊಡಿತಾ ಹೊಂಟೆವ್ನಿ ಅಂದ್ರ *ಕುಡುಕ* ಅಂತ ತಿಳಿಬ್ಯಾಡ
ಜಾಲಿ ಮಾಡ್ತಾ ತಿರಿಗಿವ್ನಿ ಊರೊಳ್ಗಾ *ಕೆಡುಕ* ಅಂತ ತಿಳಿಬ್ಯಾಡ
ಹೇಳೋದು ಮಸ್ತ್ ಐತೆ ಸಾಮೀ ಕೇಳೋರ್ ಯಾರ್ ಇದ್ದಾರ
ಮಾತು ಮಾತಿಗ್ ಸಿಡ್ಕ್ತಾನ ಮನುಸಾ *ಸಿಡುಕ* ಅಂತ ತಿಳಿಬ್ಯಾಡ
ಹೊಟ್ಟೆ ಮ್ಯಾಲೆ ಹೊಡೆಯೋನು ಯಾರಿದ್ದಾರ್ರೀ ಊರೊಳಗ
ಕಟ್ಟೆಮ್ಯಾಲಿದ್ದು ಬೊಗಳೆ ಬಿಡೋನ್ನಾ *ಹಿಡುಕ* ಅಂತ ತಿಳಿಬ್ಯಾಡ
ದರಿದ್ರ ಸಂಪತ್ತು ಹೋದ್ರೆ ಹೋಗ್ಲಿ ಯಾರಿಗೆ ಬೇಕ್ರಿ ಹೇಳ್ರಪ್ಪಾ
ಅಪ್ಪಂಗೇ ಮಗ ವಂಚನೆ ಮಾಡ್ದಾ *ಕಟುಕ* ಅಂತ ತಿಳಿಬ್ಯಾಡ
ಸಮಾಜ್ದಾಗ ಮಳ್ಳಾ ಹೊಂಟಾನ ಅನ್ ಬ್ಯಾಡ ಈಶಾ
ಹೆತ್ತವ್ವಂಗೆ ಹೆಗ್ಗಣ ಮುದ್ದು *ಕುಟುಕ* ಅಂತ ತಿಳಿಬ್ಯಾಡ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ