ಯಕ್ಷಲೋಕದ ಅನರ್ಘ್ಯ ರತ್ನ
ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!
`ಗದಾಯುದ್ಧ'ದ ಪ್ರಸಂಗದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ವೈಶಂಪಾಯನ ಸರೋವರಕ್ಕೆ ಧಾವಿಸುವ ಮುನ್ನ ಧುರ್ಯೋಧನನಾಗಿ ಶೇಣಿಯವರು ಆಡುವ ಮಾತು:
`ಪಾಂಡವರೇ ಗೆದ್ದುಕೊಳ್ಳಲಿ ರಾಜ್ಯವನ್ನು. ಆದರೆ ರಾಜ ಸಭೆಗೆ ಭೀಷ್ಮರಂಥ ಹಿರಿಯರನ್ನು ಎಲ್ಲಿಂದ ತಂದಾರು? ದ್ರೋಣನಂಥ ಆಚಾರ್ಯರನ್ನು ಎಲ್ಲಿಂದ ತಂದಾರು?... ಎಲ್ಲಾ ಅನರ್ಘ್ಯ ರತ್ನಗಳು. ನನ್ನ ಕಾಲದಲ್ಲಿ ಮಾತ್ರ ಇದ್ದವುಗಳು.'
ಒಂದೆಡೆ ಸಂತಾಪ. ಇನ್ನೊಂದೆಡೆ ರಾಜ್ಯ ಪಾಂಡವರ ಪಾಲಾದರೂ ಅವರ ರಾಜಸಭೆಗೆ ಹಿಂದಿನ ವೈಭವ ಇರುವುದಿಲ್ಲ ಎಂಬ ಖಳನಾಯಕನ ಸಂತೃಪ್ತಿ.
ಶೇಣಿಯವರನ್ನು ಕಳೆದುಕೊಂಡ ಯಕ್ಷಗಾನವೂ ಹಾಗೆಯೇ. ಯಕ್ಷರಂಗ ಮುಂದಿನ ಜನಾಂಗಕ್ಕೂ ಉಳಿದೀತು. ಅದು ಎಲ್ಲಾ ಸವಾಲುಗಳನ್ನೂ ಎದುರಿಸಿ ಉಳಿದಿದೆ. ಆದರೆ ಅಲ್ಲಿ ಶೇಣಿಯವರಂಥ ಭೀಷ್ಮರು ಇರುವುದಿಲ್ಲ. ಅವರು ನಮ್ಮ ಕಾಲಕ್ಕೆ ಮಾತ್ರ ಇದ್ದ ಅನರ್ಘ್ಯ ರತ್ನ.
ನಾವೆಲ್ಲ ಯಕ್ಷಗಾನವನ್ನು ನೋಡಿ ಅರ್ಥೈಸುವ ವೇಳೆಗಾಗಲೇ ಶೇಣಿಯವರು ಮೇಳದಿಂದ ನಿವೃತ್ತಿ ಪಡೆದಿದ್ದರು. ಯಕ್ಷಗಾನದಂಥ ಸಾಂಪ್ರದಾಯಿಕ ಮನರಂಜನಾ ಮಾಧ್ಯಮಗಳಿಂದ ವಿಮುಖರಾಗುತ್ತಿ ರುವ ತಲೆಮಾರೊಂದರಲ್ಲೂ ಆ ಕಲೆಯಲ್ಲಿ ಆಸಕ್ತಿ ಉಳಿಸಿಕೊಂಡಿರುವ ನಾವು ಶೇಣಿಯವರ ಮಾತುಗಾರಿಕೆಯನ್ನು ಕೇಳಿದ್ದು ಬಹುತೇಕ ಯಕ್ಷಗಾನ ಕ್ಯಾಸೆಟ್ಗಳ ಮೂಲಕ. ಶೇಣಿಯವರನ್ನು ಹಾಗೆಯೇ ಪೌರಾಣಿಕ ಪಾತ್ರಗಳನ್ನು ಅವರ ಮಾತುಗಾರಿಕೆಯ ಮೂಲಕವೇ ಕಂಡೆವು ಮತ್ತು ಅಭಿಮಾನಿಗಳಾದೆವು.
***
ಶೇಣಿಯವರ ಮಾತುಗಾರಿಕೆ ನೀಡುವ `ಕಿಕ್' ಅದನ್ನು ಅನುಭವಿಸಿ ದವರಿಗೆ ಮಾತ್ರ ತಿಳಿದೀತು. ಬಹುಶಃ ಅದನ್ನು ಯಕ್ಷಗಾನಾಸಕ್ತರಿಗೆ ಮಾತ್ರ ಅನುಭವಿಸಲು ಸಾಧ್ಯವಾಗುವುದು. ಕೇಳುವವರ ಆಸಕ್ತಿಗೆ ಅನುಗುಣವಾಗಿ ಶೇಣಿಯವರ ಅರ್ಥಗಾರಿಕೆಯಿಂದ ಅರ್ಥಶಾಸ್ತ್ರ, ತತ್ವ ಶಾಸ್ತ್ರ, ಮಾನವತಾವಾದ, ಕಾವ್ಯ ಮೀಮಾಂಸೆಗಳನ್ನೆಲ್ಲ ಬಗೆದು ತೆಗೆಯಬಹುದು. ಒಟ್ಟಾಗಿ ಅರ್ಥ ಕೇಳುತ್ತಿದ್ದರೆ ಒಬ್ಬೊಬ್ಬ ಸ್ನೇಹಿತರು ಒಂದೊಂದು ವಿಚಾರ ಗುರುತಿಸುತ್ತಿದ್ದುದುಂಟು.
ಬಪ್ಪ ಬ್ಯಾರಿಯಾಗಿ ಶೇಣಿಯವರಾಡುವ ಮಾತು: `ಏಲೆನ್ಮ ಮಂಜಿ ಉಂಡಪ್ಪ ಎನ್ನಡ. ಆಂಡಲಾ ನನೊಂಜಿ ಕಟ್ಟಾದೆ. ದಾಯೆ? ನಾಲ್ ಪಾಪದಪ್ಪೆ ಜೋಕ್ಲೆಗ್ ಬೇಲೆ ಆಪುಂಡತ್ತ ಅಯ್ಕೆ' (ನನ್ನ ಬಳಿ ಏಳೆಂಟು ಹಡಗುಗಳು ಇವೆ. ಆದರೂ ಇನ್ನೊಂದು ಕಟ್ಟಿಸಿದ್ದೇನೆ. ಯಾಕೆ? ಒಂದಷ್ಟು ಬಡತಾಯಿ ಮಕ್ಕಳಿಗೆ ಉದ್ಯೋಗ ಸಿಗುತ್ತದಲ್ಲ, ಅದಕ್ಕೆ).
ಹಾಗೆಯೇ `ಕರ್ಣಾವಸಾನ' ಪ್ರಸಂಗದ ಕರ್ಣನಾಗಿ ಅವರ ಸ್ವಗತದ ಮಾತು: `ಬಂಗಾರ ಸಮೇತ ನನ್ನಮ್ಮ ನನ್ನನ್ನು ನೀರಿಗೆಸೆದಿದ್ದು ಯಾಕೆ? ಚಿನ್ನದಾಸೆಗಾಗಿಯಾದರೂ ಯಾರಾದರೂ ನನ್ನನ್ನು ಬದುಕಿಸಲಿ ಅಂತಲೇ.'
`ಸೀತಾಪಹರಣ'ದ ಮಾಯಾ ರಾವಣನಾಗಿ ಹೇಳುತ್ತಾರೆ: `ಜೇಡನ ಬಲೆಯಾಗ ಬೇಕಮ್ಮ. ಜೇಡನ ಬಲೆಯಾಗಬೇಕು. ಒಳಗಿದ್ದವರಿಗೆ ಸ್ವಾತಂತ್ರ್ಯ ಇರಬೇಕು. ರೇಷ್ಮೆಯ ಗೂಡಾಗಬಾರದು.'
ಹೀಗೆ ಸರಳವಾದ ವಾಕ್ಯಗಳಲ್ಲಿ ಅರ್ಥಶಾಸ್ತ್ರೀಯ ಮಾತು, ತಾತ್ವಿಕ ಹೊಳಹುಗಳನ್ನು ನೀಡುವುದರಲ್ಲಿ ಅವರು ನಿಸ್ಸೀಮರು.
ದಿವಂಗತ ವೆಂಕಪ್ಪ ಶೆಟ್ಟರು `ಕರ್ಣಾವಸಾನ'ದ ಕರ್ಣನ ಪಾತ್ರದಲ್ಲಿ ಅರ್ಥ ಹೇಳುತ್ತಿದ್ದರೆ ಸಭೆಗೆ ಸಭೆಯೇ ಕಣ್ಣೀರಿಟ್ಟಿತು ಎಂದು ಕಯ್ಯಾರ ಕಿಂಞಣ್ಣ ರೈ ತಮ್ಮ `ದುಡಿತವೇ ನನ್ನ ದೇವರು' ಪುಸ್ತಕದಲ್ಲಿ ದಾಖಲಿಸಿದ್ದಾರೆ. ವೆಂಕಪ್ಪ ಶೆಟ್ಟರ ಕರ್ಣನ ಅರ್ಥಗಾರಿಕೆ ನಮ್ಮ ತಲೆಮಾರಿಗೆ ಲಭ್ಯವಿರಲಿಲ್ಲ. ನಮಗೆ ಲಭಿಸುವ ಶ್ರೇಷ್ಠವಾದ ಕರ್ಣನ ಪಾತ್ರದ ಅರ್ಥಗಾರಿಕೆ ಶೇಣಿಯವರದ್ದು. ಭಾವನಾತ್ಮಕ ಮತ್ತು ವೈಚಾರಿಕವಾಗಿ ತಟ್ಟುವ ಅರ್ಥಗಾರಿಕೆಯನ್ನು `ಕರ್ಣಾವಸಾನ' ಪ್ರಸಂಗದಲ್ಲಿ ಶೇಣಿ ನೀಡುತ್ತಾರೆ: `ಶಿವ ಶಿವಾ, ಸಮರದಲ್ಲೂ ಕೈ ಸೋತೆನಲ್ಲಾ...',
`ಹೀನನಾದನು ಕೌರವೇಶ್ವರ...' ಮುಂತಾದ ಪದ್ಯಗಳಿಗೆ ಅವರು ನೀಡುವ ಸುದೀರ್ಘ ಅರ್ಥದ ಕೆಲವು ತುಣುಕುಗಳು:
`ಇನ್ನೊಂದು ಹುಟ್ಟು ನನಗೆ ಬೇಡ ಕೃಷ್ಣ. ಹುಟ್ಟಿದರೂ ಭವ್ಯವೂ ದಿವ್ಯವೂ ಆದ ಬದುಕು ನನಗೆ ಬೇಡ. ಅದಕ್ಕೆ ಅನುಗುಣವಾಗಿ ಮರಣಾನಂತರ ಧರ್ಮರಾಯನ ಕೈಯಿಂದ ಎಳ್ಳು-ನೀರು ಬಿಡಿಸು ಕೃಷ್ಣ.'
`ಕೌರವನಿಗಿಂತ ಒಂದು ನಿಮಿಷವಾದರೂ ಮೊದಲು ಈ ದೇಹವನ್ನು ಗಂಧದ ಕೊರಡಿನಂತೆ ತೇದು ತೇದು ಮುಗಿಸಿಬಿಡುತ್ತೇನೆ.'
`ಕೌರವೇಶ್ವರ ನನಗೆ ಸ್ಥಾನವಾಗಲೀ ಮಾನವಾಗಲೀ ನೀಡಿದ್ದು ಕೇವಲ ಆಪತ್ತಿಗಾದಾನು ಕರ್ಣ ಎಂದು.'
ಕೆಲವೊಮ್ಮೆ ಒಂದೇ ಒಂದು ವಾಕ್ಯದ ಅರ್ಥ ಮತ್ತೆ ಮತ್ತೆ ಕೇಳುಗರನ್ನು ತಟ್ಟಿರುತ್ತದೆ: `ವೃದ್ಧನಾದೆ ವೃದ್ಧನಾದೆ. ವ್ಯರ್ಥನಾದೆ ವ್ಯರ್ಥನಾದೆ' (`ವಜ್ರದುಂಬಿ' ಪ್ರಸಂಗದಲ್ಲಿ ಪರಶುರಾಮನಾಗಿ).
`ಹಾವು ಕಚ್ಚಿದರೆ ಔಷಧಿ ಉಂಟು. ಮಣ್ಣು ಕಚ್ಚಿದರೆ?' (`ಕರ್ಣಾವಸಾನ'ದಲ್ಲಿ ರಥ ಹೂತು ಹೋದಾಗ ಆಡುವ ಮಾತು).
`ಧೀರ ಶೂರ ಲಾಲಿತ ಗಾತ್ರ ರಾಮಾ... ಏನು? ಹೆಂಡತಿಯನ್ನು ಕಳೆದು ಕೊಂಡಾಗ ಎಲ್ಲವನ್ನೂ ಕಳೆದುಕೊಂಡೆಯೇನೂ?' (`ವಾಲಿ ವಧೆ'ಯಲ್ಲಿ ವಾಲಿ).
`ನಿಮ್ಮನ್ನು ಕಾಯಬೇಕು. ಅಂದರೆ ನಿಮಗೆ ಈ ಕಾಯ ಬೇಕು' (ಪಾಂಡವರ ಗುಟ್ಟಿನ ಒಪ್ಪಂದಕ್ಕೆ ಬಂದ ಭೀಷ್ಮ ಹೇಳುವ ಮಾತು).
ಶೇಣಿಯವರ ಪೌರಾಣಿಕ ಪಾತ್ರಗಳ ನಿರೂಪಣೆಯಲ್ಲಿ ಸಿಗುವ ಒಳನೋಟಗಳು ಯಾವುದೇ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಸಿಗುವ ಒಳನೋಟಗಳಿಗಿಂತ ಕಡಿಮೆ ಯೇನಲ್ಲ. ಆ ಒಳನೋಟಗಳ ಮೂಲಕ ಕೇಳುಗರ ಚಿಂತನೆಯನ್ನು ಅವರು ರೂಪಿಸಿ ದ್ದಾರೆ. ಯಕ್ಷಗಾನದ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವ ಪ್ರಯತ್ನಗಳು ಆಗಾಗ ನಡೆದಿವೆ. ಅದಕ್ಕಾಗಿ ಪ್ರತ್ಯೇಕ ಪ್ರಸಂಗಗಳನ್ನೂ ರಚಿಸಲಾಗಿದೆ. ಅವುಗಳ ಯಶಸ್ಸು ಮತ್ತು ಔಚಿತ್ಯ ಮಾತ್ರ ಇನ್ನೂ ಪ್ರಶ್ನಾರ್ಹ. ಆದರೆ ಬಪ್ಪ ಬ್ಯಾರಿ ಪಾತ್ರದ ಮೂಲಕ ಶೇಣಿಯವರು ನೀಡಿದ ಮತೀಯ ಸಾಮರಸ್ಯದ ಸಂದೇಶ ಬಹುಶಃ ಯಕ್ಷಗಾನದ ಮೂಲಕ ಪ್ರಸಾರವಾದ ಸಾಮಾಜಿಕ ಸಂದೇಶಕ್ಕೊಂದು ಅತ್ಯುತ್ತಮ ಉದಾಹರಣೆ. ಅದು ಅರ್ಥವಾಗಬೇಕಾದರೆ ಆ ಪ್ರಸಂಗದ ಸಂಪೂರ್ಣ ಮಾತುಗಾರಿಕೆಯನ್ನು ಕೇಳಬೇಕು. ಒಟ್ಟು ಸಂದೇಶ ಅಲ್ಲಿ ಶೇಣಿಯವರು ಮಲಯಾಳಂ ಭಾಷೆಯಲ್ಲಿ ಆಡುವ ಒಂದು ವಾಕ್ಯದಲ್ಲಿ ಅಡಗಿದೆ: `ಮತಮೇದಾಯಾಲುಂ ಮನುಷ್ಯರೊನ್ನಾಗಣಂ' (ಧರ್ಮ ಯಾವುದೇ ಇರಲಿ, ಮನುಷ್ಯರೆಲ್ಲಾ ಒಂದೇ).
ನಿರ್ಧಾರ ತೆಗೆದು ಕೊಳ್ಳುವಲ್ಲಿ ನೈತಿಕ ಅಥವಾ ವ್ಯಾವಹಾರಿಕ ದ್ವಂದ್ವಗಳನ್ನು ಎದುರಿಸುತ್ತಿದ್ದರೆ ಶೇಣಿಯ ವರ ಭೀಷ್ಮನ ಮಾತುಗಳನ್ನು ಕೇಳಬೇಕು. ವಿಧಿ ಇಲ್ಲದೆ ಸಂದರ್ಭವನ್ನು ಒಪ್ಪಬೇಕಾದ ಪರಿಸ್ಥಿತಿಯಲ್ಲಿ ಮನಸ್ಸು ವಿಚಲಿತವಾಗಿದ್ದರೆ ಶೇಣಿಯವರ ಕರ್ಣನ ಮಾತುಗಳನ್ನು ಕೇಳಬೇಕು. ತಮ್ಮ ಮನೋಭಾವಗಳಿಗೆ ಅನುಗುಣವಾಗಿ ಸಂಗೀತ ಪ್ರೇಮಿಗಳು ವಿವಿಧ ರಾಗಗಳನ್ನು ಆಲಿಸುತ್ತಾರಂತೆ. ಶೇಣಿಯವರ ಅರ್ಥ ಧಾರಾಮೃತವೂ ಹಾಗೆ. ನಮ್ಮ ಭಾವನೆಗಳ ಕಗ್ಗಂಟನ್ನು ಸಡಿಲಿಸಬಲ್ಲ ರಸ ತೈಲ.
***
ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬ ರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!
ಮುಂಬೈ ಮೂಲದ `ಟೈಂಸ್ ಆಫ್ ಇಂಡಿಯಾ' ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಶೇಣಿಯವರ ನಿಧನ ಮುಖಪುಟದ ಸುದ್ದಿ. ಚೆನ್ನೈ ಮೂಲದ `ಹಿಂದೂ' ಪತ್ರಿಕೆಗೆ ಅದು ಎಲ್ಲ ದಕ್ಷಿಣ ರಾಜ್ಯಗಳ ಪ್ರಮುಖ ಸುದ್ದಿ. ಆದರೆ ಕರ್ನಾಟಕ ಮೂಲದ ಇಂಗ್ಲಿಷ್ ದೈನಿಕ `ಡೆಕ್ಕನ್ ಹೆರಾಲ್ಡ್' ಗೆ ಅದು ಒಳಪುಟ ಗಳಲ್ಲೆಲ್ಲೋ ಸಾಮಾನ್ಯ ನಿಧನ ವಾರ್ತೆಗಳ ಪೈಕಿ ಎರಡು ಪ್ಯಾರಾಗಳ ಸುದ್ದಿ.
ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಶೇಣಿಯವರಂತಹ ಕಲಾವಿದರ ಸಾಧನೆಗೆ ಸರ್ಕಾರ ಯಾಂತ್ರಿಕವಾಗಿ ನೀಡುವ ಸಂತಾಪ ಸೂಚನೆ ಅಥವಾ ಪತ್ರಿಕೆಯೊಂದು ನೀಡುವ ಪ್ರಾಮುಖ್ಯ ಸರ್ಟಿಫಿಕೇಟ್ ಅಲ್ಲ, ನಿಜ. ಆದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಂದು ಕಲೆ ಮತ್ತು ಅದರ ಅಭಿಜಾತ ಕಲಾವಿದನೊಬ್ಬನ ಬಗ್ಗೆ ಕರಾವಳಿಯೇತರ ಕರ್ನಾಟಕಕ್ಕೆ ಇದ್ದ ಕಳಕಳಿ ಮತ್ತು ಪರಿಜ್ಞಾನ ಎಷ್ಟು ಎಂಬುದು ಶೇಣಿಯವರ ಮರಣದಲ್ಲಿ ಇನ್ನೊಮ್ಮೆ ಬೆಳಕಿಗೆ ಬಂತು-ಅವರ ಅರ್ಥಗಾರಿಕೆ ಯಾವತ್ತೂ ಸಮಕಾಲೀನ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಿದ್ದಂತೆ.
-ನಾರಾಯಣ ಎ.