ಯಶಸ್ಸಿಗೆ ‘ಟೀಂ ವರ್ಕ್' ಎಂಬ ಅದ್ಭುತ ಮಂತ್ರ !

ಯಶಸ್ಸಿಗೆ ‘ಟೀಂ ವರ್ಕ್' ಎಂಬ ಅದ್ಭುತ ಮಂತ್ರ !

‘ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವುದು ಬಹಳ ಹಿಂದಿನ ಗಾದೆ ಮಾತು. ಬದುಕಿನ ಪ್ರತೀ ಹಂತದಲ್ಲಿ ಒಗ್ಗಟ್ಟಿನ ಮಂತ್ರವನ್ನು ನಾವು ಜಪಿಸುತ್ತಾ ಇರಬೇಕು. ಏಕೆಂದರೆ ಯಾವುದೇ ಕೆಲಸ ಮಾಡಲು ಹೊರಟಾಗ ನಮಗೆ ಕಷ್ಟಗಳು ಬಂದಾಗ ಅದನ್ನು ನಿವಾರಿಸಲು ನಮಗೆ ಇನ್ನಷ್ಟು ಮಂದಿಯ ಸಹಯೋಗ ಬೇಕಾಗುತ್ತದೆ. ನಮ್ಮ ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ ಇರುವ ಸದಸ್ಯರ ಅಥವಾ ಸಹೋದ್ಯೋಗಿಗಳ ಸಹಕಾರ ಅತೀ ಅಗತ್ಯ. ಅವರೆಲ್ಲರ ಸಹಕಾರವಿಲ್ಲದೇ ಹೋದರೆ ನಾವು ತಲುಪಬೇಕಾದ ಎತ್ತರಕ್ಕೆ ತಲುಪುವ ಸಾಧ್ಯತೆ ಕಡಿಮೆ. ಅದೇ ರೀತಿ ಯಾರ ಸಹಾಯವೂ ಇಲ್ಲದೇ ಬದುಕಿನಲ್ಲಿ ಸಾರ್ಥಕತೆ ಕಂಡವರೂ ತಮ್ಮ ಬಾಳಿನ ಕೆಲವೊಂದು ಹಂತದಲ್ಲಿ ಯಾರಾದರೊಬ್ಬರ ಸಹಕಾರ ಪಡೆದೇ ಇರುತ್ತಾರೆ. 

ಒಗ್ಗಟ್ಟು ಎಂಬ ಪದ ಈಗ ‘ಟೀಂ ವರ್ಕ್' ಎಂದು ಬದಲಾಗಿದೆ. ಈ ಪದವನ್ನು ಕೇಳುವಾಗಲೇ ಮನಸ್ಸಲ್ಲಿ ಒಂದು ರೀತಿಯ ರೋಮಾಂಚನವಾಗುತ್ತದೆ. ಮಾನವ ಓರ್ವ ಸಂಘ ಜೀವಿಯಾದುದರಿಂದ ಆತನಿಗೆ ಪ್ರತಿಯೊಂದು ಹಂತದಲ್ಲಿ ಒಂದು ಟೀಂ ಅಂದರೆ ಬಳಗದ ಅಗತ್ಯ ಇದ್ದೇ ಇರುತ್ತದೆ. ಉತ್ತಮ ಟೀಂ ಇದ್ದವನು ಯಾವ ಕಠಿಣ ಕಾರ್ಯವನ್ನಾದರೂ ಬಹಳ ಸುಲಭದಲ್ಲಿ ಮಾಡಿ ಮುಗಿಸುತ್ತಾನೆ. ಈಗ ಬಹುತೇಕರು ದುಡಿಯುವ ಐಟಿ/ಬಿಟಿ ಉದ್ಯೋಗದಲ್ಲಿ ‘ಟೀಂ ವರ್ಕ್’ ಅತ್ಯಂತ ಅಗತ್ಯ. ಒಂದು ತಂಡಕ್ಕೆ ಸಿಕ್ಕಿದ ಸಮಸ್ಯೆಯನ್ನು ಆ ತಂಡದ ಸದಸ್ಯರೆಲ್ಲಾ ಸೇರಿ ಬಹು ಸುಲಭವಾಗಿ ಪರಿಹಾರ ಮಾಡಬಹುದು. ಈ ರೀತಿಯ ಗೆಲುವಿನ ರೋಮಾಂಚನದ ಅನುಭವವು ನಮ್ಮ ಮನದಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯುತ್ತದೆ.

ಉದಾಹರಣೆಗಾಗಿ ನಾವು ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಕ್ರಿಕೆಟ್ ಟಿ ೨೦ ವಿಶ್ವಕಪ್ ಸರಣಿಯನ್ನೇ ಗಮನಿಸಬಹುದು. ಕ್ರಿಕೆಟ್ ಆಟ ಟೀಂ ವರ್ಕ್ ಗೆ ಒಂದು ಉತ್ತಮ ಉದಾಹರಣೆ. ಏಕೆಂದರೆ ಒಬ್ಬ ಆಟಗಾರ ತಂಡವನ್ನು ಗೆಲ್ಲಿಸಲು ಆಗುವುದಿಲ್ಲ. ಆತ ಉತ್ತಮ ಪ್ರದರ್ಶನ ನೀಡಿರಬಹುದು. ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್' ಸಹಾ ಆಗಿರಬಹುದು. ಆದರೆ ಆತನ ಯಶಸ್ಸಿಗೆ ಕಾರಣ ಅಂದು ಆಡಿದ ತಂಡವೇ ಆಗಿರುತ್ತದೆ. ಆತ ದಾಂಡಿಗನಾದರೆ ಬೌಲರ್ ಸಹಕಾರ ಬೇಕೇ ಬೇಕು. ಉತ್ತಮ ಫೀಲ್ಡರ್ ಉಳಿಸಿದ ರನ್ ಗಳೂ ತಂಡದ ಜಯಕ್ಕೆ ಕಾರಣವಾಗುತ್ತದೆ. ಮೊನ್ನೆ ಭಾರತ ವಿಶ್ವಕಪ್ ಗೆದ್ದಾಗ ಅದಕ್ಕೆ ಕೇವಲ ನಾಯಕ ರೋಹಿತ್ ಶರ್ಮ ಅಥವಾ ಪಂದ್ಯ ಪುರುಷೋತ್ತಮನಾದ ವಿರಾಟ್ ಕೊಹ್ಲಿ ಕಾರಣವಲ್ಲ, ತಂಡದ ಪ್ರತಿಯೊಬ್ಬ ಸದಸ್ಯ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲರೂ ಕಾರಣೀಕರ್ತರೇ. ಇದನ್ನೇ ಟೀಂ ವರ್ಕ್ ಎನ್ನುವುದು.

ಉತ್ತಮ ಟೀಂ ಕಟ್ಟುವುದು ಸುಲಭದ ಕಾರ್ಯವಲ್ಲ. ಆ ತಂಡದಲ್ಲಿರುವ ಒಬ್ಬೊಬ್ಬರ ಯೋಚನೆಗಳು ಒಂದೊಂದು ಬಗೆಯದ್ದಾಗಿರುವುದರಿಂದ ಅವರನ್ನೆಲ್ಲಾ ಒಂದೇ ತಕ್ಕಡಿಯಲ್ಲಿ ಕೂರಿಸುವುದು ಬಹಳ ಕಷ್ಟ ಸಾಧ್ಯದ ಸಂಗತಿ. ಆ ಟೀಂ ನ ನಾಯಕನಾದವನು ಈ ಕಾರ್ಯ ಮಾಡಬೇಕಾಗುತ್ತದೆ. ಇದು ಆತನ ಟೀಂ ಕಟ್ಟುವುದಕ್ಕೆ ರಹದಾರಿಯಾಗಿರುತ್ತದೆ. ಟೀಂ ಲೀಡರ್ ಅಸಮರ್ಥನಾದರೆ ಆತನ ತಂಡ ಉದ್ಡೇಶಿತ ಕೆಲಸವನ್ನು ಪೂರ್ಣಗೊಳಿಸಲು ಅಸಮರ್ಥವಾಗುತ್ತದೆ ಅಥವಾ ನಿಗದಿತ ಸಮಯಕ್ಕಿಂತ ತಡವಾಗಿ ಕೆಲಸವನ್ನು ಮಾಡಿ ಮುಗಿಸುತ್ತದೆ. ತಂಡದ ಸದಸ್ಯರ ಮನಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅವರ ನಡುವಿನ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ ತಂಡ ಕಟ್ಟಬೇಕಾಗುತ್ತದೆ. ಇದಕ್ಕೆ ಉತ್ತಮ ನಾಯಕನ ಅಗತ್ಯವಿರುತ್ತದೆ.

ಹಲವು ಬಾರಿ ಒಂದು ಟೀಂ ಕಟ್ಟಲು ಹೊರಟಾಗ ಇದ್ದ ಹುಮ್ಮಸ್ಸು ನಂತರದ ದಿನಗಳಲ್ಲಿ ಇರುವುದಿಲ್ಲ. ತಂಡದ ಸದಸ್ಯರ ನಡುವಿನ ಭಿನ್ನಮತ ಆ ತಂಡವನ್ನು ದುರ್ಬಲವನ್ನಾಗಿಸುತ್ತದೆ. ಉದ್ದೇಶಿತ ಕಾರ್ಯವನ್ನು ಮುಗಿಸುವುದಕ್ಕಿಂತ ತಂಡದಲ್ಲಿ ಅಸಮಾಧಾನದ ಹೊಗೆಯೇ ಜೋರಾಗಿ ಏಳಲು ಶುರುವಾಗುತ್ತದೆ. ಆ ಟೀಂ ಗೆಲ್ಲಲು ಬೇಕಾದ ಕಾರ್ಯತಂತ್ರಕ್ಕಿಂತ ಸೋಲಲು ಬೇಕಾದ ಒಳ ಜಗಳಗಳೇ ಜಾಸ್ತಿಯಾಗುತ್ತವೆ. ಈ ಕಾರಣದಿಂದ ಮೇಲ್ನೋಟಕ್ಕೆ ಉತ್ತಮವೆಂದು ಕಂಡು ಬಂದ ಟೀಂ ಸೋತು ಸುಣ್ಣವಾಗುತ್ತದೆ. ಟೀಂ ನ ಕೆಲವು ಸದಸ್ಯರಿಗಂತೂ ತಂಡದ ಗೆಲುವಿಗಿಂತ ಲೀಡರ್ ನ ಸೋಲು ಪ್ರಮುಖವಾಗಿರುತ್ತದೆ. ಇದರಿಂದ ಅವರ ತಂಡದ ಪ್ರತಿಷ್ಟೆಯೇ ಮಣ್ಣುಪಾಲಾಗುವುದು ಎಂದು ತಿಳಿದಿದ್ದರೂ ಅವರು ಯಾವ ಕಾರ್ಯವನ್ನೂ ಮಾಡಲು ಹೋಗದೆ, ತಂಡ ಸೋಲುವಂತೆ ನೋಡಿಕೊಳ್ಳುತ್ತಾರೆ.

ಪ್ರತೀ ಟೀಂ ನಲ್ಲಿ ಗೆಲ್ಲುವ ಛಲ ಇರುವುದು ಅತೀ ಅವಶ್ಯ. ಆ ತಂಡದ ಪ್ರತೀ ಸದಸ್ಯನನ್ನು ಟೀಂ ಲೀಡರ್ ವಿಶ್ವಾಸಕ್ಕೆ ತೆಗೆದುಕೊಂಡು ತಂಡದ ಸದಸ್ಯರ ನಡುವಿನ ಸಂತುಲನವನ್ನು ಉತ್ತಮಗೊಳಿಸಬೇಕು. ಇದರಿಂದ ಎಲ್ಲಾ ಸದಸ್ಯರು ತಂಡ ಗೆಲ್ಲುವ ಬಗ್ಗೆ ಮಾತ್ರ ಯೋಚನೆ ಮಾಡಲು ಪ್ರಾರಂಭ ಮಾಡುತ್ತಾರೆ. ಗೆಲ್ಲುವ ಛಲವನ್ನು ಮೈಗೂಡಿಸಿಕೊಂಡರೆ ಆ ತಂಡಕ್ಕೆ ಸಿಕ್ಕ ಯಾವುದೇ ಕಾರ್ಯ (Task) ವನ್ನು ಯಶಸ್ಸಿನೊಂದಿಗೆ ಮುಗಿಸಲು ಸಾಧ್ಯ. ಎರಡನೇ ಮಹಾಯುದ್ದದ ಸಮಯದಲ್ಲಿ ಜಪಾನ್ ದೇಶದ ಎರಡು ನಗರಗಳ ಮೇಲೆ ಬಿದ್ದ ಎರಡು ಬಾಂಬ್ ಗಳು ಅಲ್ಲಿನ ಜನ ಜೀವನವನ್ನೇ ಅಸ್ತವ್ಯಸ್ಥ ಮಾಡಿಬಿಟ್ಟಿದ್ದವು. ಆದರೆ ಜಪಾನ್ ದೇಶದ ನಾಗರಿಕರ ಟೀಂ ವರ್ಕ್ ಬಹಳ ಉತ್ತಮವಾಗಿದ್ದ ಕಾರಣದಿಂದ ಅವರು ಈ ದುರಂತವನ್ನು ಮೆಟ್ಟಿ ನಿಂತರು. ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ವರ್ಷಗಳಲ್ಲಿ ಜಪಾನ್ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಇದು ದೇಶದ ಮೇಲೆ ಅಭಿಮಾನ ಇರಿಸಿಕೊಂಡಿರುವ ದೇಶಭಕ್ತ ಟೀಂ ವರ್ಕ್ ನ ಸಾಧನೆ.

ನಿಮಗೆ ನೆನಪಿರಲಿ, ಎಷ್ಟೇ ಗಟ್ಟಿಯಾದ ಕಬ್ಬಿಣವೂ ಅದಕ್ಕೆ ತಗಲುವ ತುಕ್ಕಿನಿಂದ ದುರ್ಬಲವಾಗಿ ಹೋಗುತ್ತದೆ. ಇದೇ ರೀತಿ ಎಷ್ಟೇ ಉತ್ತಮವಾದ ಟೀಂ ಕೂಡಾ ಆ ತಂಡದ ಸದಸ್ಯರ ಒಳಜಗಳದಿಂದಾಗಿ ನಾಶವಾಗಬಹುದು. ನಮ್ಮ ಮನಸ್ಸಿನ ದುರ್ಬಲತೆ, ಸ್ವಾರ್ಥ ಸಾಧನೆ ಇವನ್ನೆಲ್ಲಾ ಟೀಂ ನ ಗೆಲುವಿಗಾಗಿ ನಾವು ಮರೆಯಬೇಕು. ಇದನ್ನು ಮಾಡಿದರೆ ಮಾತ್ರ ನಾವು ಶಕ್ತಿವಂತರಾಗಬಹುದು. ನಾಯಕನ ಸ್ಥಾನವನ್ನು ಗಳಿಸುವುದಷ್ಟೇ ಮುಖವಲ್ಲ, ಆ ತಂಡವನ್ನು ಜಯದೆಡೆಗೆ ಮುನ್ನಡೆಸುವುದರೊಂದಿಗೆ ಗೆಲ್ಲಿಸುವುದು ಅತೀ ಮುಖ್ಯ. ಸಂಘಟಿತ ಪ್ರಯತ್ನವೇ ‘ಟೀಂ ವರ್ಕ್' ಬಲಶಾಲಿಯಾಗಲು ಸಹಕಾರಿ. ನೀವೇನಂತೀರಿ...?

ಚಿತ್ರ ಕೃಪೆ: ಅಂತರ್ಜಾಲ ತಾಣ