ಯಾರಿಗೂ ಅರ್ಥವಾಗದ ಬಾಪೂ….? ನಿಜವಾದ ಕಥೆ ಏನು?

ಯಾರಿಗೂ ಅರ್ಥವಾಗದ ಬಾಪೂ….? ನಿಜವಾದ ಕಥೆ ಏನು?

ಬರಹ

- ನವರತ್ನ ಸುಧೀರ್

ಸಂಪದದಲ್ಲಿ ಬೇರೆಡೆ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಭಾವಿ ಪ್ರಧಾನಿಯ ಆಯ್ಕೆಯಲ್ಲಿ ಗಾಂಧೀಜಿಯವರು ವಹಿಸಿದ ಪಾತ್ರದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಆಧಾರಿತ ಲೇಖನ ಪ್ರಕಟಿಸಲಾಗಿದೆ. ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಸ್ವತಂತ್ರ ಭಾರತದಲ್ಲಿ ನೆಹರೂರವರ ಭೂಮಿಕೆಯ ಬಗ್ಗೆ ಅನೇಕ ಚರ್ಚೆಗಳಾಗಿದ್ದರೂ, ಎಲ್ಲಿಯೂ ನೆಹರೂರವರ 'ದೇಶವನ್ನು ಸುಟ್ಟು ಹಾಕುವ ಮನೋಸ್ಥಿತಿಯ' ಬಗ್ಗೆ ಓದಿದ್ದಂತಿರಲಿಲ್ಲ.

೨೦೦೬ ರಲ್ಲಿ ಗಾಂಧೀಜಿಯವರ ಜೀವನ ಕುರಿತಾಗಿ ಅವರ ಮೊಮ್ಮಗ ಶ್ರೀ ರಾಜ್‍ಮೋಹನ್ ಗಾಂಧಿ ಬರೆದ Mohan Das – A True Story of a Man, his People and an Empire – Penguin Viking – (೭೪೩ ಪುಟಗಳು ) ಪ್ರಕಟವಾಯಿತು. ಈ ಪುಸ್ತಕದಲ್ಲಿ ಭಾರತದ ಭಾವಿ ನಾಯಕನ ಚುನಾವಣೆಯ ಬಗ್ಗೆ ಉಲ್ಲೇಖಿಸಲಾದ ಎರಡು ಪುಟಗಳ (೫೪೪ - ೫೪೫) ಯಥಾವತ್ ಕನ್ನಡ ಭಾವಾನುವಾದ ಈ ಕೆಳಕಂಡಂತಿದೆ. ಮೂಲ ಅರ್ಥಕ್ಕೆ ಕುಂದು ಬಾರದಂತೆ ಸಾಧ್ಯವಾದಷ್ಟು ಶ್ರಮಿಸಿದ್ದೇನೆ.

**************************************************************
ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ. ವರ್ಷ ೧೯೪೬.

ಲಾರ್ಡ್ ವೇವೆಲ್ ಕಾಂಗ್ರೆಸ್ ಧುರೀಣರನ್ನು ಮಾತುಕತೆಗಾಗಿ ದೆಹಲಿಗೆ ಬರಲು ನೀಡಿದ ಆಮಂತ್ರಣ ಕುರಿತು ವ್ಯಾಖ್ಯಾನಿಸುತ್ತ ಗಾಂಧೀಜಿಯವರು ಪಟೇಲ್‌ರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ’ಮಾತುಕತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲು ವರ್ಕಿಂಗ್ ಕಮಿಟಿಯ ಸದಸ್ಯರು ಅಥವಾ ಅವರ ನಾಮಾಂಕಿತ ಪ್ರತಿನಿಧಿಗಳು ಇದ್ದು ನಾನು ನೇರವಾಗಿ ಭಾಗವಹಿಸದೆ ಇದ್ದರೂ, ಬೇಕಾದ ಸಲಹೆ / ಸೂಚನೆ ನೀಡಲು ಆ ಸಮಯದಲ್ಲಿ ದೆಹಲಿಯಲ್ಲೇ ಇರಬೇಕಾದ ಅವಶ್ಯಕತೆ ಇದೆ. ಎಷ್ಟೇ ಅಂದರೂ ಸಾಮ್ರಾಜ್ಯಶಾಹಿಗಳನ್ನು ನಾನು ಅರಿತಿರುವಷ್ಟು ಚೆನ್ನಾಗಿ ವರ್ಕಿಂಗ್ ಕಮಿಟಿಯ ಸದಸ್ಯರು ಯಾರೂ ಅರಿತಿಲ್ಲ. ಎಲ್ಲಕ್ಕೂ ಮೇಲಾಗಿ ಈ ಮಾತುಕತೆಗಳಲ್ಲಿ ಮುಖ್ಯ ಭೂಮಿಕೆ ಧರಿಸುವ ಜಿನ್ನಾರವರ ಯೋಚನಾಲಹರಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನಾನು ಅಲ್ಲಿ ಸುತ್ತುಮುತ್ತಲಲ್ಲಿ ಇದ್ದರೆ ಎಲ್ಲರಿಗೂ ಅನುಕೂಲ…..

ಅದೂ ಅಲ್ಲದೆ ಗಾಂಧೀಜಿಯವರಿಗೆ ಕಾಂಗ್ರೆಸ್‍ನ ಭಾವಿ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ತುರ್ತಾಗಿ ಹಲವು ಕ್ರಮ ಕೈಗೊಳ್ಳುವದಿತ್ತು. ೧೯೪೦ ರಿಂದ ಸತತ ಆರು ವರ್ಷಗಳ ಕಾಲ ಮೌಲಾನಾ ಆಜಾದ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆದಿದ್ದರು. ಸತ್ಯಾಗ್ರಹಗಳು, ಸರ್ಕಾರದ ದಿಗ್ಬಂಧನಗಳು, ತಡೆಯಾಜ್ಞೆಗಳು, ಮುಖಂಡರ ಕಾರಾವಾಸ ಹೀಗೆ ಏನಾದರೊಂದು ಕಾರಣಕ್ಕಾಗಿ ಹೊಸ ಅಧ್ಯಕ್ಷರ ಚುನಾವಣೆ ಆಗಿರಲಿಲ್ಲ. ಆದರೆ ಇದೀಗ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಬಿಟ್ಟುಕೊಡುವ ಸಂಭವ ಹೆಚ್ಚಾಗಿದ್ದು, ಮುಂದೆ ಸ್ವತಂತ್ರ ಭಾರತದ ಪ್ರಧಾನಿಯೂ ಆಗಬಲ್ಲಂತಹ ಮುಖಂಡನನ್ನು ಕಾಂಗ್ರೆಸ್‍ನ ಹೊಸ ಅಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಸದವಕಾಶ ಒದಗಿಬಂದಿತ್ತು.

ಆಜಾದ್ ಆರು ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ, ಅವರ ಬಹಳಷ್ಟು ಅವಧಿ ಕಾರಾವಾಸದಲ್ಲಿಯೇ ಕಳೆಯಿತು. ಈ ಕಾರಣದಿಂದ ಆಜಾದ್ ಮತ್ತೆ ಚುನಾಯಿತರಾಗಲು ಆಶಿಸಿದ್ದರು. ಉಮೇದುವಾರರ ಪಟ್ಟಿ ಸಿದ್ಧವಾಗುತ್ತಿರುವಾಗ, ಪಟೇಲ್‍ರವರ ’ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಪಟ್ಟ ಪರಿಶ್ರಮ ಮತ್ತು ಇತರ ಸಾಧನೆಗಳಿಂದ ಆಕರ್ಷಿತರಾದ ಹಲವಾರು ಪ್ರದೇಶ ಕಾಂಗ್ರೆಸ್ ಸಮಿತಿಗಳು, ಅವರನ್ನು ತಮ್ಮ ಉಮೇದುವಾರರಾಗಿ ನಮೂದಿಸಿದರು. ಕೃಪಲಾನಿಯವರು ಕೂಡ ಸ್ಪರ್ಧೆಯಲ್ಲಿ ಸೇರಿದರು. ಆದರೆ ಗಾಂಧೀಜಿಯವರ ಪ್ರಕಾರ ಈ ಸ್ಥಾನ ಜವಹರಲಾಲ್‍ರವರಿಗೇ ಸೇರಬೇಕು ಎಂಬ ಮತವಾಗಿತ್ತು.

ಉರ್ದು ದಿನಪತ್ರಿಕೆಯೊಂದು ಆಜಾದ್ ಕಾಂಗ್ರೆಸ್ ಅಧ್ಯಕ್ಷರಾಗಿ ಮರುಚುನಾಯಿತರಾಗುವ ಸಂಭಾವನೆಯನ್ನು ವ್ಯಕ್ತ ಪಡಿಸಿದಾಗ, ಗಾಂಧೀಜಿಯವರು ಆ ಪತ್ರಿಕೆಯ ಕಟ್ಟಿಂಗ್ ಜೊತೆಗೆ ಅಜಾದ್‍ರಿಗೆ ಉರ್ದು ಭಾಷೆಯಲ್ಲಿ ಒಂದು ಬಗೆಯ ’ನಿಸ್ಸಂಕೋಚ ಹಿತವಾದ’ ರವಾನಿಸಿದರು.

“೨೦ ನೇ ಏಪ್ರಿಲ್ ೧೯೪೬ - ಜೊತೆಯಲ್ಲಿ ಕಳಿಸಿರುವ ಕಟ್ಟಿಂಗ್ ಓದಿಕೊಳ್ಳಿ... ನಾನು ನನ್ನ ಅಭಿಪ್ರಾಯವನ್ನು ಯಾರ ಮೇಲೂ ಹೇರಿಲ್ಲ. ಹಲವು ವರ್ಕಿಂಗ್ ಕಮಿಟಿಯ ಸದಸ್ಯರು ಈ ವಿಷಯದ ಬಗ್ಗೆ ನನ್ನನ್ನು ಕೇಳಿದಾಗ, ನನ್ನ ಅಭಿಪ್ರಾಯ ಕೇಳಿದರೆ. ಪ್ರಸಕ್ತ ಅಧ್ಯಕ್ಷರು ಇನ್ನೂ ಮುಂದುವರೆಯುವುದು ಸೂಕ್ತವಲ್ಲ ಎಂದು ಪ್ರತಿಕ್ರಯಿಸಿದ್ದುಂಟು….
ನಿಮಗೂ ಹಾಗೆಯೇ ಅನಿಸಿದ್ದಲ್ಲಿ, ’ನನಗೆ ಮತ್ತೆ ಅಧ್ಯಕ್ಷನಾಗಿ ಮುಂದುವರೆಯುವ ಯಾವ ಆಸಕ್ತಿಯೂ ಇಲ್ಲ’ ಎಂಬುದಾಗಿ ಒಂದು ಪತ್ರಿಕಾಘೋಷಣೆ ನೀಡುವುದು ಉಚಿತ.

’ಈಗಿನ ಸಂದರ್ಭದಲ್ಲಿ ನನ್ನ ಒಲವು ಜವಹರಲಾಲ್‍ರತ್ತ ಇದೆ. ಇದಕ್ಕೆ ಅನೇಕ ಕಾರಣಗಳಿವೆ. ಅವೆಲ್ಲ ಈಗೇಕೆ’
ಕಾಂಗ್ರೆಸ್ ಸಮಿತಿಯೂ ನೆಹರೂರವರ ಹೆಸರನ್ನು ನಮೂದಿಸಿರಲಿಲ್ಲವಾದ್ದರಿಂದ, ಗಾಂಧೀಜಿಯವರ ಸಲಹೆಯಮೇರೆಗೆ ಕೃಪಲಾನಿಯವರು ಜವಹರಲಾಲ್‍ರನ್ನು ಅಧ್ಯಕ್ಷರ ಚುನಾವಣೆಗೆ ನಿಲ್ಲಲು ಸಾಧ್ಯವಾಗುವಂತೆ ಒಂದು ’ನಾಮಿನೇಷನ್ ಪ್ರಪೋಸಲ್’ ತಯಾರಿಸಿ ಎಲ್ಲರಿಗೂ ವಿತರಿಸಿದರು. { Kripalani, Gandhi: His Life and Thought (New Delhi: Publications Division, 1970), pp248-250} ಇದಾದದ್ದು ೨೫ನೇ ಏಪ್ರಿಲ್ ೧೯೪೬ - ಆಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಗಡುವು ಮೀರುವ ಕೇವಲ ನಾಲ್ಕು ದಿನಗಳ ಮುನ್ನ. ಆಜಾದ್ ಮತ್ತು ಪಟೇಲ್ ಒಡಗೂಡಿ , ಹಲವು ದೆಹಲಿ ಕಾಂಗ್ರೆಸ್ಸಿಗರೂ ಸೇರಿದಂತೆ ಎಲ್ಲ ವರ್ಕಿಂಗ್ ಕಮಿಟಿಯ ಸದಸ್ಯರೂ ನೆಹರೂ ಪ್ರಪೋಸಲ್‍ಗೆ ಸಹಿ ಹಾಕಿದರು.

ಪಟೇಲ್ ಮತ್ತು ಕೃಪಲಾನಿಯವರಂತೆಯೇ ನೆಹರೂ ಕೂಡ ಈಗ ಒಬ್ಬ ಅಧಿಕೃತ ಆಭ್ಯರ್ಥಿಯಾಗಿ ಉಳಿದರು. ಗಾಂಧೀಜಿಯವರ ಇಛ್ಛಾನುಸಾರ ಪಟೇಲ್ ಮತ್ತು ಕೃಪಲಾನಿ ತಮ್ಮ ನಾಮಾಂಕಣ ಪತ್ರ ಹಿಂತೆಗೆದುಕೊಂಡರು. ಮರುದಿನ ಆಜಾದ್‍ರವರು ಬಹಿರಂಗವಾಗಿ ನೆಹರೂರವರನ್ನು ನೂತನ ಕಾಂಗ್ರೆಸ್ ಅಧ್ಯಕ್ಷ ಪದಕ್ಕೆ ಆಯ್ಕೆಮಾಡುವ ಪ್ರಸ್ತಾಪ ಮಂಡಿಸಿದರು. ಈ ಪ್ರಸ್ತಾಪ ಸರ್ವಾನುಮತದಿಂದ ಅಂಗೀಕೃತವಾಯಿತು. ಆದರೆ ಆಜಾದ್‍ರವರಿಗೆ ಡಿಸೆಂಬರ್ ವರೆಗೂ ಅಧಿಕಾರದಲ್ಲಿ ಮುಂದುವರೆಯುವ ಆಸೆಯಿತ್ತು. ಆದರೆ ಮತ್ತೊಮ್ಮೆ ಗಾಂಧೀಜಿಯವರ ಮಧ್ಯಪ್ರವೇಶದಿಂದಾಗಿ, ನೆಹರೂ ಜುಲೈ ತಿಂಗಳಿನಲ್ಲಿಯೇ ಅಧಿಕಾರ ವಹಿಸುವುದು ಎಂದು ತೀರ್ಮಾನವಾಯಿತು.

ಇದಾದ ಸುಮಾರು ಒಂದುವರ್ಷದ ನಂತರ ಗಾಂಧೀಜಿಯವರು ತಾವು ನೆಹರೂರವರನ್ನು ಬೆಂಬಲಿಸಿದ್ದಕ್ಕಾಗಿ ಕಾರಣಗಳನ್ನು ಬಹಿರಂಗಗೊಳಿಸಿದರು. He, a Harrow boy, a Cambridge graduate and a barrister is wanted to carry on the negotiations with Englishmen” { Statement of 1st June 1947 in Tendulkar, Mahatma, 8: 3,}

ಮಾತುಕತೆ ಯಶಸ್ವಿಯಾಗಿ, ಸ್ವತಂತ್ರ ಭಾರತದ ರಾಷ್ಟ್ರೀಯ ಸರ್ಕಾರ ಸ್ಥಾಪನೆಯಾದಲ್ಲಿ , ಕಾಂಗ್ರೆಸ್ ಅಧ್ಯಕ್ಷ ನೆಹರೂ ಅದರ ಮುಂದಾಳತ್ವ ವಹಿಸುವುದು ಎಂಬುದು ಖಚಿತವಾಯಿತು. ನೆಹರೂ ತನ್ನ ವಾರಸುದಾರ ಮತ್ತು ಸ್ವತಂತ್ರ ಭಾರತದ ಚುಕ್ಕಾಣಿ ಹಿಡಿಯಲು ಅತಿ ಯೋಗ್ಯ ಎಂದು ಎಲ್ಲೆಡೆ ಸಾರುತ್ತಿದ್ದ ಗಾಂಧೀಜಿಯವರಿಗೆ ಈ ಪರಿಸ್ಥಿತಿ ಅಸಮಂಜಸ ಎಂದು ಒಂದು ಬಾರಿಯೂ ಅನಿಸಲಿಲ್ಲ. ಅದೂ ಅಲ್ಲದೆ, ಗಾಂಧೀಜಿಯವರಿಗೆ ಆಗಿನ ಕೋಮುಗಳ ನಡುವಣ ಇದ್ದ ಸೂಕ್ಷ್ಮ ಪರಿಸ್ಥಿತಿಯಲ್ಲಿ ನೆಹರೂಗೆ ಮುಸ್ಲಿಮರೊಡನೆ ಇದ್ದ ಸೌಹಾರ್ದ ಬಾಂಧವ್ಯ, ಮತ್ತು ಪಟೇಲ್‍ರವರ ಮುಸ್ಲಿಮರೊಂದಿಗಿನ ಹೇಳಿಕೊಳ್ಳಲಾಗದ ಸಂಬಂಧಗಳ ಪರಿಣಾಮದ ಬಗ್ಗೆ ಅರಿವು ಇದ್ದಂತಿತ್ತು. ಜೊತೆಗೇ ಅಂತರ್ರಾಷ್ಟ್ರೀಯ ಕ್ಷೇತ್ರದಲ್ಲಿ ಭಾರತಕ್ಕೆ ನೇತೃತ್ವ ನೀಡುವಲ್ಲಿ ನೆಹರೂ ವಹಿಸಬಹುದಾದ ಭೂಮಿಕೆ ಮತ್ತು ಅವರ ಕ್ಷಮತೆಯ ಬಗ್ಗೆ ಅಪಾರ ನಂಬಿಕೆ ಇದ್ದಿತು. ಅವರ ಪ್ರಕಾರ ಪಟೇಲ್ ಕೂಡಾ ತಮ್ಮನ್ನು ಎರಡನೇ ಸ್ಥಾನಕ್ಕೇ ಸೀಮಿತ ಗೊಳಿಸಿಕೊಂಡು ಅದರಲ್ಲೇ ತೃಪ್ತಿ ಕಂಡುಕೊಳ್ಳಬಲ್ಲರು ಎಂಬ ನಂಬಿಕೆಯಿತ್ತು.

ಗಾಂಧೀಜಿಯವರು ನೆಹರೂ ಮತ್ತು ಪಟೇಲ್ ಇಬ್ಬರೂ ಜೊತೆಯಾಗಿ ಕೆಲಸ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡುತ್ತ 'They will be like two oxen yoked to the governmental cart. One will need the other and both will pull together.” ಎಂದು ಪ್ರತಿಕ್ರಯಿಸಿದ್ದರು. { See remarks by Maniben patel in Durga Das (Ed), Sardar Patel’s Correspondence , vol10, p xxxviii, and Durga Das, India from Curzon to Nehru ( London: Collins, 19690, p.230}

ಗಾಂಧೀಜಿಯವರ ಈ ನೆಹರೂ ಪರ ನಿಲುವಿಗೆ ಮತ್ತೊಂದು ನಿರ್ಧಾರಕ ಕಾರಣ - ಪಟೇಲ್‌ರವರ ಶಿಥಿಲ ಸ್ವಾಸ್ಥ್ಯ!
ಒಟ್ಟಾರೆ ನೋಡಿದಲ್ಲಿ , ಮೊದಲು ೧೯೨೯ ನಂತರ ೧೯೩೭ ಮತ್ತೆ ಈದೀಗ ಮೂರನೆ ಬಾರಿ ಪಟೇಲ್ ತಮ್ಮ ಆಶೋತ್ತರಗಳನ್ನು ಬದಿಗೊತ್ತಿ ಗಾಂಧೀಜಿಯವರ ಆಜ್ಞಾನುಸಾರ ನೆಹರೂಗೆ ನೇತೃತ್ವ ಬಿಟ್ಟುಕೊಟ್ಟಿದ್ದರು. ಆದರೆ ಮೂರನೆ ಸಾರಿಯೂ ತಮ್ಮ ಆಶಯ ಮೂರಾಬಟ್ಟೆಯಾಗುತ್ತಿರುವುದನ್ನು ನೋಡುವುದು ಪಟೇಲ್‍ರಿಗೆ ಸುಲಭವಾಗೇನಿರಲಿಲ್ಲ. ಆದರೂ ಈ ಯೋಧ ಎಲ್ಲವನ್ನೂ ನುಂಗಿಕೊಂಡು ಕೇವಲ ಒಂದು ವಾರಾನಂತರ ಎಲ್ಲರೊಡನೆ ನಗುನಗುತ್ತಾ ಬೆರೆತದ್ದುಂಟು. ನೆಹರೂಗಾಗಿ ತಮ್ಮ ಹಕ್ಕು ಬಿಟ್ಟು ಕೊಟ್ಟಿದ್ದರೂ, ಪಕ್ಷದಲ್ಲಿ ತಮಗಿರುವ ಪ್ರತಿಷ್ಠೆ, ವ್ಯಕ್ತಿಸ್ವಾತಂತ್ರ್ಯ, ಮತ್ತು ಶಕ್ತಿಯ ಪೂರ್ಣ ಅರಿವು ಪಟೇಲರಿಗಿತ್ತು.

******************************************************************

ಹೆಚ್ಚಿನ ಪ್ರತಿಕ್ರಿಯೆ ಅನಗತ್ಯ ಎಂದು ಭಾವಿಸುವೆ.