ಯೂಟ್ಯೂಬ್ ಈಗ ನೇರ ಪ್ರಸಾರಕ್ಕೂ ಅಣಿ

ಯೂಟ್ಯೂಬ್ ಈಗ ನೇರ ಪ್ರಸಾರಕ್ಕೂ ಅಣಿ

ಬರಹ


    ಯೌತುಬೆನವೆಂಬರ್ ಇಪ್ಪತ್ತೆರಡು ಯುಟ್ಯೂಬ್ ಅಂತರ್ಜಾಲ ತಾಣದ ಮಟ್ಟಿಗೆ ಹೊಸಶಕೆ ತೆರೆಯಲಿದೆ. ಅಂದು ಯುಟ್ಯೂಬ್ ಜಾಲತಾಣದಲ್ಲಿ ಸಂಗೀತದ ನೇರ ಪ್ರಸಾರ ಸಿಗಲಿದೆ. ಲೈವ್ ವೆಬ್‌ಕಾಸ್ಟ್ ಮೂಲಕ ಯುಟ್ಯೂಬಿನ ಜನಪ್ರಿಯ ಹಾಡುಗಾರ್ತಿ ಪೆರ್ರಿ ಮತ್ತು ವಿಲ್ ಐ ಆಮ್ ಮುಂತಾದವರ ಸಂಗೀತ ಸುಧೆ ಯುಟ್ಯೂಬ್ ತಾಣದ ಮೂಲಕ ನೇರ ಪ್ರಸಾರವಾಗಲಿದೆ. ಯಾಹೂ, ಅಮೆರಿಕಾ ಆನ್‌ಲೈನ್ ,ಮೈಸ್ಪೇಸ್ ಮುಂತಾದ ಜಾಲತಾಣಗಳು ಇದೀಗಲೆ ಇಂತಹ ಪ್ರಯತ್ನ ನಡೆಸಿ ಯಶಸ್ಸು ಕಂಡಿವೆ. ಯುಟ್ಯೂಬ್ ಗೂಗಲ್ ಗುಂಪಿನದ್ದಾಗಿದ್ದು, ಇದು ಮೊದಲ ಪ್ರಯತ್ನ. ನೇರ ಪ್ರಸಾರವನ್ನು ಎರಡೂವರೆ ಬಿಲಿಯನ್ ಜನ ವೀಕ್ಷಿಸುವ ದಾಖಲೆಯಿದೆ.ಒಂದೇ ಸಲ ಇಷ್ಟು ಸಂಖ್ಯೆಯಲ್ಲಿ ವೀಕ್ಷಕರ ಬೇಡಿಕೆ ಬಂದಾಗ ಅವನ್ನು ನಿಭಾಯಿಸುವುದು, ತಾಣದ ಸರ್ವರುಗಳಿಗೆ ಹರಸಾಹಸವೇ ಸರಿ. ಅಂತರ್ಜಾಲ ವ್ಯವಸ್ಥೆಯ ಬ್ಯಾಂಡ್‌ವಿಡ್ತ್ ಮೇಲೆಯೂ ಇದರ ಪರಿಣಾಮವಿದ್ದೇ ಇದೆ. ಭಾರೀ ಜನದಟ್ಟಣೆಯ ಸಾರಿಗೆ ವ್ಯವಸ್ಥೆಗೆ ಇದನ್ನು ಹೋಲಿಸಿದರೆ ತಪ್ಪಿಲ್ಲ.
--------------------------------------------------
ಮೈಕ್ರೋಸಾಫ್ಟ್ ತಂತ್ರಾಂಶಗಳು ಅಂತರ್ಜಾಲ ಮೂಲಕ ಡೌನ್‌ಲೋಡಿಗೆ ಲಭ್ಯ
    ಮೈಕ್ರೋಸಾಫ್ಟ್ ಕಂಪೆನಿಯು ತನ್ನ ತಂತ್ರಾಂಶ ಮತ್ತು ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯ ತಂತ್ರಾಂಶವನ್ನು ಆನ್‌ಲೈನ್ ಮೂಲಕ ಲಭ್ಯವಾಗಿಸುವತ್ತ ಮತ್ತೊಂದು ಹೆಜ್ಜೆಯಿಟ್ಟಿದೆ.ಬ್ರಿಟನ್,ಜರ್ಮನಿ ಮತ್ತು ಕೊರಿಯಾದ ಆನ್‌ಲೈನ್ ಅಂಗಡಿಗಳ ಪಟ್ಟಿಗೆ ಅಮೆರಿಕಾದ ಅಂಗಡಿಯು ಹೊಸತಾಗಿ ಸೇರ್ಪಡೆಯಾಗಿದೆ. ಕಂಪ್ಯೂಟರ್ ಮೂಲಕ ಹಣ ಪಾವತಿಸಿ, ಒಡನೆಯೇ ತಂತ್ರಾಂಶ ಇಳಿಸಿಕೊಳ್ಳುವ ಸವಲತ್ತು ಪಡೆದುಕೊಳ್ಳಬಹುದು. ಮೈಕ್ರೋಸಾಫ್ಟ್ ಕಂಪೆನಿಯ ಯಂತ್ರಾಂಶಗಳಾದ ಕಂಪ್ಯೂಟರ್ ಆಟದ ಕನ್ಸೋಲ್ ಎಕ್ಸ್‌ಬಾಕ್ಸ್‌ನಟವೂ ಇಲ್ಲಿ ಲಭ್ಯ. ಅವನ್ನು ಕೊರಿಯರ್ ಸೇವೆ ಮೂಲಕ ಖರೀದಿಸಿದವರಿಗೆ ಮುಟ್ಟಿಸುವ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ಮಾಡುತ್ತದೆ.
--------------------------------------

ಸೌರವ್ಯೂಹದ ಹೊರಗಿನ ಗ್ರಹಗಳ ಚಿತ್ರ ಸೆರೆಹಿಡಿದ ಹಬಲ್ಪ್ಲನೆತ್
ಹಬಲ್ ಬಾಹ್ಯಾಕಾಶ ವಾಹನವು ಸೌರವ್ಯೂಹದ ಹೊರಗೆ ಇರುವ ಗ್ರಹಗಳ ಚಿತ್ರವನ್ನು ತೆಗೆದಿದೆ.ಇದುವರೆಗೆ ಸೌರವ್ಯೂಹದ ಹೊರಗೆ ಗ್ರಹಗಳು ಪತ್ತೆ ಆಗಿರಲಿಲ್ಲ. ಈಗ ಒಂದೇ ಪೆಟ್ಟಿಗೆ  ಮೂರು ಗ್ರಹಗಳು ಸೌರವ್ಯೂಹದ ಹೊರಗೆ ಪತ್ತೆಯಾಗಿರುವುದು ವಿಶೇಷ.ಇವು ಬರಿಗಣ್ಣಿಗೆ ಕಾಣದಿರುವಷ್ಟು ದೂರದಲ್ಲಿವೆ.ಅವುಗಳ ಪೈಕಿ ಒಂದು ಗ್ರಹ ಗುರುಗ್ರಹದ ಮೂರು ಪಟ್ಟು ದೊಡ್ದದು ಎಂದು ಅಂದಾಜಿಸಲಾಗಿದೆ.ಮೊದಲ ವರದಿಗಳ ಪ್ರಕಾರ ಈ ಹೊಸ ಗ್ರಹಗಳು ಅನಿಲರೂಪದಲ್ಲಿವೆ. ಸಂಶೋಧನೆಯ ವಿಷಯ ಸಯನ್ಸ್ ಎಕ್ಸ್‌ಪ್ರೆಸ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.
-------------------------------------------------------
ಕಾರ್ ಪಾರ್ಕಿಂಗ್‌ಗೆ ಸೆಲ್ ಫೋನ್ ಮೂಲಕ ಪಾವತಿ
     ಅಟ್ಲಾಂಟಾ ನಗರದಲ್ಲಿ ಪಾರ್ಕಿಂಗ್ ಸ್ಥಳಗಳ ಬಾಡಿಗೆ ಪಾವತಿಗೆ ಮೊಬೈಲ್ ಫೋನ್ ಮೂಲಕ ವ್ಯವಸ್ಥೆಯಿದೆ.ಕಾರನ್ನು ಪಾರ್ಕ್ ಮಾಡಿ,ಅಲ್ಲಿರುವ ಮೀಟರಿನಲ್ಲಿ ಪ್ರದರ್ಶಿತವಾಗುವ ನಂಬರಿಗೆ ಕರೆ ಮಾಡಿ,ಹಣ ಪಾವತಿಸಿದರೆ ಮುಗಿಯಿತು. ಪಾವತಿಸಿದ ಬಾಡಿಗೆಯನ್ನವಲಂಬಿಸಿ,ಎಷ್ಟು ಹೊತ್ತಿನ ಬಾಡಿಗೆ ಪಾವತಿಯಾಗಿದೆ ಎಂದು ಮೀಟರ್ ಪ್ರದರ್ಶಿಸಲಾರಂಭಿಸುತ್ತದೆ. ಅಲ್ಲಿರುವ ಕಾವಲುಗಾರ, ಕಂಪ್ಯೂಟರ್ ವ್ಯವಸ್ಥೆಯ ಮೂಲಕ, ನಿಮ್ಮ ಅವಧಿ ತೀರುತ್ತಿದ್ದಂತೆಯೇ ಮೊಬೈಲ್ ಮೂಲಕ ಸಂಪರ್ಕಿಸಿ, ಅವಧಿಯ ವಿಸ್ತರಣೆ ಅಗತ್ಯವಿದ್ದರೆ ಮಾಡಲು ಸೂಚಿಸಲೂ ಸಾಧ್ಯ.ಪ್ರತಿ ಕಾರಿನ ಜಾಗಕ್ಕೆ ಅಗತ್ಯವಾದ ಸಂವೇದಕ ಮತ್ತಿತರ ಯಂತ್ರಾಂಶ ಸ್ಥಾಪನಾ ಖರ್ಚು ಇನ್ನೂರು ಡಾಲರು ಬರುತ್ತದೆ.ಹಳೆ ಪದ್ಧತಿಯಂತೆ ನಾಣ್ಯ ಬಳಸಿ, ಪಾವತಿಸುವ ಆಯ್ಕೆಯೂ ಇದೆ.ಮೊದಲ ಎರಡು ಗಂಟೆಗೆ ಸೆಲ್ ಫೊನ್ ಕರೆ ದರ ಇಲ್ಲ. ನಂತರ ಪ್ರತಿ ಸಲ ಕಾಲು ಡಾಲರ್ ಹೆಚ್ಚು ಪಾವತಿಸಬೇಕಾಗುತ್ತದೆ.
--------------------------------------------
ವಿದ್ಯುತ್ ಗ್ರಿಡ್ ವಿಕೇಂದ್ರೀಕರಣ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಬಲ್ಲುದೇ?
    ಫಿಲಿಪ್ ರೋಸ್ಡೇಲ್ ಸೆಕೆಂಡ್ ಲೈಫ್ ಎನ್ನುವ ಅಂತರ್ಜಾಲ ತಾಣದ ಸ್ಥಾಪಕರಲ್ಲೋರ್ವರು.ಇವರ ತಾಣವು ಮೂರು ಆಯಾಮಗಳ ಅನುಭವ ನೀಡುತ್ತದೆ. ಮಾತ್ರವಲ್ಲ, ಇದರಲ್ಲಿ ಪ್ರತಿ ಬಳಕೆದಾರನೂ, ತನ್ನ "ಅವತಾರ"ವನ್ನು ಆಯ್ದುಕೊಳ್ಳಬಹುದು. ಈ ಮಿಥ್ಯಾ ಪ್ರಪಂಚದಲ್ಲಿ ಆತನೂ ಒಂದು ಪಾತ್ರವಾಗಿ ಮೂಡುತ್ತಾನೆ. ಅಂತರ್ಜಾಲ ಜಾಲಾಡುವುದು ಎಂದರೆ, ಪ್ರವಾಸಾನುಭವವಾಗಿಸುವುದು ಸೆಕೆಂಡ್ ಲೈಫ್ ವೈಶಿಷ್ಟ್ಯ.ಈ ತಾಣದಲ್ಲಿ ಬಳಕೆದಾರನಿಗೆ ತನ್ನದೇ ಆದ ಪರಿಣಾಮಗಳನ್ನು ಮೂಡಿಸುವ ಮುಕ್ತ ಅವಕಾಶ ನೀಡಲಾಗಿದೆ. ಉದಾಹರಣೆಗೆ ಓರ್ವ ಬಳಕೆದಾರ ಸೆಕೆಂಡ್ ಲೈಫಿನ ತಾಣದಲ್ಲಿ ಗಾಳಿ ಬೀಸುವ ಅನುಭವವನ್ನು ಮೂಡಿಸಿದ. ಹೀಗೆ ಜನರ ಕೊಡುಗೆಯಿಂದ ಸೆಕೆಂಡ್ ಲೈಫ್ ಅತ್ಯಂತ ಜನಪ್ರಿಯ ತಾಣವಾಗಿ ಬೆಳೆಯುತ್ತಿದೆ.ಫಿಲಿಪ್ ಅವರ ಅಭಿಪ್ರಾಯದಲ್ಲಿ ವಿದ್ಯುತ್ ಉತ್ಪಾದನೆಗೂ ಇದೇ ಮಾದರಿ ಅನುಸರಿಸುವುದು ವಿಹಿತ.
    ಈಗ ವಿದ್ಯುತ್ ಉತ್ಪಾದನೆ ಮುಖ್ಯವಾಗಿ ಸರಕಾರದ ಕೈಯಲ್ಲಿ ಕೇಂದ್ರೀಕೃತವಾಗಿದೆ.ಹೆಚ್ಚಿನ ಸ್ಥಾವರಗಳು ದೊಡ್ದ ಮಟ್ಟದವು. ಸಣ್ಣ ಸ್ಥಾವರಗಳ ಬಗ್ಗೆ ನಿರಾಸಕಿ ಎದ್ದು ಕಾಣಿಸುತ್ತದೆ. ಇಂತಹ ಸಣ್ಣ ಸ್ಥಾವರಗಳು ಹೆಚ್ಚಿನ ಬೇಡಿಕೆ ಬಂದಾಗಲೂ ಕುಸಿಯದಿರಲು,ಅವುಗಳಿಂದ ಉತ್ಪಾದನೆಯಾದ ವಿದ್ಯುತ್ತನ್ನೂ ಗ್ರಿಡ್‌ಗೆ ಸೇರಿಸಬೇಕು.ಮನೆಮನೆಗಳಲ್ಲಿ ಸೌರವಿದ್ಯುತ್ ವ್ಯವಸ್ಥೆಯಿದ್ದು,ಅವನ್ನೆಲ್ಲಾ   ಗ್ರಿಡ್‌ಗೆ ಸೇರಿಸುವ ವ್ಯವಸ್ಥೆಯಿದ್ದರೆ,ಆಗ ವಿದ್ಯುತ್ ಕೊರತೆ ಬಾಧಿಸದು ಎನ್ನುವುದು ಫಿಲಿಪ್ ಲೆಕ್ಕಾಚಾರ.ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಅನ್ನುವುದು ಅವರ ನಿರೀಕ್ಷೆ .


ashokworld

udayavani

 ಇ-ಲೋಕ17/11/2008

*ಅಶೋಕ್‌ಕುಮಾರ್ ಎ