ರವಿ ಕಂಡದ್ದು - ರವಿ ಕಾಣದ್ದು
![](https://saaranga-aws.s3.ap-south-1.amazonaws.com/s3fs-public/styles/medium/public/IMG_20211222_092451.jpg?itok=s0oqSwt5)
ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು ತಲಸ್ಪರ್ಶಿಯಾಗಿ ನೋಡುವ ಕ್ರಮ. ಕಂಡದ್ದನ್ನು ಚುರುಕಾಗಿ, ಆಸಕ್ತ ಪೂರ್ಣವಾಗಿ ದಾಖಲಿಸುವ ಅಭಿವ್ಯಕ್ತಿ ವಿಧಾನ ಮತ್ತು ಇವೆಲ್ಲಕ್ಕೂ ಒಂದು ಆರೋಗ್ಯಪೂರ್ಣ ವ್ಯಂಗ್ಯವನ್ನು ಬೆರೆಸಿ ಹೇಳಬಲ್ಲ ಜೀವಂತ ಶೈಲಿ. ಲಾಲ್ ಬಾಗ್ ಪ್ರೇಮಿಗಳ ಬಗ್ಗೆಯಾಗಲೀ, ಶೆಟ್ಟರುಗಳ ಬಗ್ಗೆಯಾಗಲೀ, ಸಮಾನ ತೀವ್ರತೆಯಿಂದ ರವಿ ಬೆಳಗೆರೆ ಬರೆದಿದ್ದಾರೆ.
‘ರವಿ ಕಂಡದ್ದು' ರವಿ ಬೆಳಗೆರೆಯವರು ತಮ್ಮ ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಬರೆದ ಬರಹಗಳು. ಬಹಳ ಮೊನಚಾದ, ಕೊಂಚ ಹಾಸ್ಯ, ವ್ಯಂಗ್ಯ ಭರಿತ ಈ ಬರಹಗಳನ್ನು ಓದುವುದೇ ಚಂದ. ಬೆಂಗಳೂರಿನ ಲಾಲ್ ಬಾಗ್ ಬಗ್ಗೆ ಅವರು ಬರೆದ ‘ಸಸ್ಯಕಾಶಿಯಲ್ಲ... ಪ್ರೇಮಕಾಶಿ! ಲಾಲ್ ಬಾಗ್ ನ ಲವರ್ ಜೋಡಿಗಳು' ಲೇಖನದಲ್ಲಿ ರವಿ ಕಂಡದ್ದು ಬಹಳಷ್ಟು. ಒಂದು ಸ್ಯಾಂಪಲ್ ನಿಮಗಾಗಿ ಇಲ್ಲಿದೆ “ಲಾಲ್ ಬಾಗಿನ ಸ್ವರೂಪವೇ ಅಂಥದ್ದು. ಬೆಳಿಗ್ಗೆ ವಾಕಿಂಗಿಗೆ, ಜಾಗಿಂಗಿಗೆ ತಾಣವಾಗುತ್ತದೆ. ಆಮೇಲೆ ಮೌನವಾಗುತ್ತದೆ. ಗಂಟೆ ಹನ್ನೊಂದಾಯಿತೆಂದರೆ ನಿಧಾನವಾಗಿ ಸಿಂಗರಗೊಳ್ಳತೊಡಗುತ್ತದೆ. ಸಂತೆಗೆ ಮುಂಚೆ ನೆರೆಯುವ ಗಂಟು ಕಳ್ಳರಂತೆ ಐಸ್ ಕ್ರೀಮು, ಚಿಪ್ಪು-ಸಂಡಿಗೆ, ಹುರಿದ-ಕುಚ್ಚಿದ ಕಳ್ಳೇಕಾಯಿ, ಪುರಿಟೊಮ್ಯಾಟೋ, ಮೆಕ್ಕೆ ಜೋಳ ಇತ್ಯಾದಿಗಳನ್ನು ತೆಕ್ಕೆಗೆ ತುಂಬಿಕೊಂಡು ಬರುವ ಒಂದಿಷ್ಟು ಜನ ಸಂಜೆಯೊಳಗಾಗಿ ಎಷ್ಟು ಮಾರಬಹುದು, ಅದರಲ್ಲಿ ಲಾಭವೆಷ್ಟು, ಕಟ್ಟಬೇಕಾದ ಬಡ್ಡಿಯೆಷ್ಟು ಎಂಬ ಲೆಕ್ಕಾಚಾರದೊಂದಿಗೆ ಲಾಲ್ ಬಾಗನ್ನು ಪ್ರವೇಶಿಸುತ್ತಾರೆ. ಗಿಡಕ್ಕೊಬ್ಬ ಗಿರಾಕಿಯನ್ನು ಕಲ್ಪಿಸಿಕೊಂಡು ಲಾಲ್ ಬಾಗಿನ ಉದ್ದಗಲ ಅಲೆಯತೊಡಗುತ್ತಾರೆ.
ಹನ್ನೆರಡು ಮುಗಿದು ನೆರಳು ನಡುನೆತ್ತಿಯ ಮೇಲೆ ತಿರುಗಲು ಆರಂಭಿಸುವ ಹೊತ್ತಿಗೆ ನಿಧಾನವಾಗಿ, ಒಂದೊಂದಾಗಿ ಬಂದು ನಿಲ್ಲತೊಡಗುತ್ತವೆ. ಸ್ಕೂಟರುಗಳಲ್ಲಿ, ಮೊಬೈಕುಗಳಲ್ಲಿ ಹುಡುಗರ ಬೆನ್ನು ತಬ್ಬಿ ಕುಳಿತ ಹುಡುಗಿ ಸ್ಕೂಟರ್ ಸ್ಟ್ಯಾಂಡಿನಲ್ಲಿ ಇಳಿಯುವಾಗಲೇ ಕಣ್ಣಲ್ಲಿ ಕಾತರ, ಅನುಮಾನ, ಭಯದ ಫೋಟೋಗಳನ್ನು ಹರವುತ್ತಾಳೆ. ಬೆಂಗಳೂರು ಎಷ್ಟೇ ದೊಡ್ಡ ಊರೆಂದುಕೊಂಡರೂ ಯಾರೋ ಪರಿಚಿತರನ್ನು ಲಾಲ್ ಬಾಗಿನ ಬಾಗಿಲಲ್ಲಿ ಹಠಾತ್ತನೆ ಎದುರುಕೊಳ್ಳುವುದು (ಅದರಲ್ಲೂ ಹುಡುಗ ಜೊತೆಯಲ್ಲಿದ್ದಾಗ) ವಿಪರೀತ ಮುಜುಗರದ ಸಂಗತಿ.”
ಇಂತಹದ್ದೇ ವಿವಿಧ ಸ್ವಾರಸ್ಯಕರ ವಿಷಯಗಳನ್ನು ಹೊತ್ತ ಈ ಪುಸ್ತಕವನ್ನು ಓದುವುದೇ ಒಂದು ಮಜಾ. ವಿಶ್ವೇಶ್ವರಪುರಂ ಶೆಟ್ರು, ಮಲ್ಲೇಶ್ವರಂ 8th ಕ್ರಾಸ್ ಹುಡುಗಿಯರು, ಓ... ಮೆಜೆಸ್ಟಿಕ್, ಪ್ರೇಮ ಪತ್ರಗಳು, ಓ ಹುಡುಗಿಯರೇ... ನೀವೆಂಥ ಹುಡುಗಿಯರು? ಹೀಗೆ ಹತ್ತಾರು ಲೇಖನಗಳಿವೆ.
‘ರವಿ ಕಾಣದ್ದು’ ವಿಭಾಗದಲ್ಲಿ ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಜೋಗಿಯವರು ಬರೆದ ಅಂಕಣ ಬರಹಗಳು. ಇದು ಕೂಡಾ ಅಪಾರ ಜನಪ್ರಿಯತೆ ಗಳಿಸಿದ ಅಂಕಣ. ಜೋಗಿಯವರ ವೈಶಿಷ್ಟ್ಯವೆಂದರೆ ಕಂಡದ್ದನ್ನು ಕಂಡ ಹಾಗೆ, ಆದಷ್ಟೂ ಕಡಿಮೆ ಶಬ್ದಗಳಲ್ಲಿ ಹೇಳುವುದು. ಇದು ಅಂಕಣ ಬರಹಗಳಿಗೆ ತೀರಾ ಅಗತ್ಯವಾದ ಶೈಲಿ. ಬದುಕಿನ ಕುರಿತ ಈ ಕಿರು ಟಿಪ್ಪಣಿಗಳು ಓದುಗರನ್ನು ಬದುಕಿನತ್ತ ಹೊರಳಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ.
ರವಿ ಕಂಡದ್ದನ್ನು ರವಿ ಕಾಣದ್ದು ಮೂಲಕ ತೋರಿಸ ಹೊರಟಿದ್ದಾರೆ ಜೋಗಿ. ಇಲ್ಲೂ ಪುಟ್ಟ ಪುಟ್ಟ ಅಧ್ಯಾಯಗಳ ಮೂಲಕ ಓದುಗರನ್ನು ಕಟ್ಟಿಹಾಕಲು ಲೇಖಕರು ಸಫಲರಾಗಿದ್ದಾರೆ. ‘ಬದುಕಿಗೆ ಅದೆಂಥ ಆಕರ್ಷಣೆಗಳು..!’ ಎಂಬ ಪುಟ್ಟ ಅಧ್ಯಾಯದಲ್ಲಿ ಜೋಗಿ ಹೀಗೆ ಬರೆಯುತ್ತಾರೆ..." ಮನುಷ್ಯನೊಬ್ಬ ಬಾವಿಗೆ ಇಳಿಬಿದ್ದಿರುವ ಹಗ್ಗದಲ್ಲಿ ನೇತಾಡುತ್ತಿದ್ದಾನೆ. ಬಾವಿಯಲ್ಲಿ ಬಿದ್ದಿರುವ ಹುಲಿಯೊಂದು ಹಸಿದುಕೊಂಡು ಕಾಯುತ್ತಿದೆ. ದಂಡೆಯಲ್ಲಿ ಇಲಿಯೊಂದು ಹಗ್ಗವನ್ನು ಕತ್ತರಿಸುತ್ತಿದೆ. ನೇತಾಡುವ ಮನುಷ್ಯ ಪಕ್ಕದಲ್ಲೇ ಬಾವಿಯ ಒಳಗಡೆ ಜೋತಾಡುತ್ತಿರುವ ದ್ರಾಕ್ಷಿ ಬಳ್ಳಿಯಿಂದ ಹಣ್ಣೊಂದನ್ನು ಕಿತ್ತು ಬಾಯಿಗೆ ಹಾಕಿಕೊಂಡರೆ, ಆ ಹಣ್ಣು ಅದೆಷ್ಟು ರುಚಿಯಾಗಿತ್ತು" ಇದು ಝೆನ್ ಕತೆಯೊಂದರ ಸಾರಾಂಶ. ಬದುಕಿಗೆ ಅದೆಂಥ ಆಕರ್ಷಣೆಗಳು. ಅದೆಂಥ ಸೆಳೆತಗಳು.
ನೊಂದವನಿಗೆ ಸಹಾನುಭೂತಿ, ನಾಲ್ಕು ಸಾಂತ್ವನದ ಮಾತು ನೆಮ್ಮದಿ ನೀಡುತ್ತದೆ. ಪರಿಸ್ಥಿತಿಯನ್ನು ಎದುರಿಸಬಲ್ಲ ವ್ಯೂಹವೊಂದನ್ನು ರಚಿಸಲು ಕಲಿಸಿ ಕೊಡುತ್ತದೆ. ಆದರೆ ಮಾತಿಗೆ ಮೀರಿದ ಸಾಂತ್ವನವೊಂದಿದೆ. ಅದು ಶಬ್ದಗಳಿಗೆ ನಿಲುಕದ್ದು. ಕೂಡಾ. ಆ ಸಹಸ್ಪಂದನದ ಎದುರು ಅನುಭೂತಿಗಳೂ ಕೇವಲ.” ಇದು ಜೋಗಿಯವರು ಬರೆದ ಕೆಲವು ಸಾಲುಗಳು. ೨೦೦ ಪುಟಗಳ ಈ ಪುಸ್ತಕವನ್ನು ‘ಹಾಯ್ ಬೆಂಗಳೂರು' ಪತ್ರಿಕೆಯ ಓದುಗರಿಗೆ ಅರ್ಪಣೆ ಮಾಡಿದ್ದಾರೆ.