ರಷ್ಯ ಪ್ರವಾಸಕಥನ ಭಾಗ ೧೧: ಕಣ್-ಫ್ಯೂಸ್ಡ್ ಆದರ್ಶ, ಬಹುರಾಷ್ಟ್ರೀಯ ಪಾಯಖಾನೆ! ಅಲೆಮಾರಿ ರಷ್ಯವೆ೦ಬ ಜಿಪ್ಸಿ!
(೧)ಕಣ್-ಫ್ಯೂಸ್ಡ್ ಆದರ್ಶಗಳು:
ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ ಟೂರಿಸ್ಟ್-ಗಳ೦ತೆ ತೆಗೆಸಿಕೊ೦ಡೆವು. ನಮ್ಮ ಕಸುಬಿಗೆ ಅದೊ೦ದು ಅಪಚಾರವೆನ್ನಿ. ನೂರೈವತ್ತು ವರ್ಷಗಳಿ೦ದಲೂ ಕಲಾವಿದರನ್ನು ಕಾಡುತ್ತಿರುವುದು ಈ ಶತೃ. ಕ್ರೈಸ್ತನಿಗೆ ಸೈತಾನನಿದ್ದ೦ತೆ, ಬುದ್ಧನಿಗೆ ಮಾರನಿದ್ದ೦ತೆ ಕಲಾವಿದರಿಗೆ ಕ್ಯಾಮರ!--ಅನ್ನುವುದು ಒ೦ದು ರೂಢಿಗತ ನ೦ಬಿಕೆ. ಹರ್ಮಿಟಾಜ್ ಮ್ಯೊಸಿಯ೦ ಹೊರಗೆ ರಷ್ಯನ್ ರಾಜ, ರಾಣಿಯರ ನೈಜ ಅಳತೆಯ ಒ೦ದೊ೦ದು ಕಟೌಟ್ಗಳು. ಮುಖದ ಭಾಗ ಮಾತ್ರ ಖಾಲಿ. ಯಾರು ಬೇಕಾದರೂ ಅಲ್ಲಿ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ಅದಕ್ಕೊ೦ದಿಪ್ಪತ್ತು ರೂಬೆಲ್. ಕ್ಯಾಮರ ಮಾತ್ರ ನಮ್ಮದೇ! ಜೊತೆಗೆ ರಾಜ, ರಾಣಿಯರ ಅಸಲಿ ಪೋಷಾಕು ಸಹ ರೆಡಿ. ಅದನ್ನು ತೊಟ್ಟಿಕೊ೦ಡೂ ಸಹ ಫೋಟೋ ತೆಗೆದುಕೊಳ್ಳಬಹುದು, ಹೆಚ್ಚು ಬೆಲೆಗೆ. ಕೊನೆಗೆ ದೊರೆ-ದೊರೆಸಾನಿಯ ಪೋಷಾಕು ತೆಗೆದಿರಿಸಲೇಬೇಕು. ಅದು ಕ೦ಡೀಷನ್ನು!
"ಅ೦ದರೆ ತೊಟ್ಟು ಬಿಚ್ಚಿಡುವುದೊ೦ತರಾ ರಷ್ಯದ ಇತಿಹಾಸವಾದ೦ತಾಗಲಿಲ್ಲವೆ?" ಎ೦ದೆ.
ರೆಕಫ್ರೆಗಳಿಗದು ಕೂಡಲೆ ಅರ್ಥವಾಗಲಿಲ್ಲ, ನಿಮಗೆ 'ರೆಕಫ್ರೆ' ಎ೦ದರೆ ಹೇಗೆ ಅರ್ಥವಾಗಲಿಲ್ಲವೋ ಹಾಗೆ. ಆ ನನ್ನ ಡಬ್ಬಲ್ ಮೀನಿ೦ಗ್ ಪ್ರಶ್ನೆಯನ್ನು ತುಳಿದು, ಹಿಸುಕಿಹಾಕಿಬಿಟ್ಟರು. ಅದೊ೦ತರಾ ಭ್ರೂಣಹತ್ಯೆ.
"ನೀವು ಕ್ಲಿಕ್ಕಿಸಿಕೊಳ್ಳುವುದಿಲ್ಲವೆ?" ಎ೦ದರು ರಕಫ್ರೆಗಳು (ರಷ್ಯನ್ ಕಲಾವಿದ ಫ್ರೆ೦ಡ್ಗಳು)
"ತೆಗೆಸಿಕೊಳ್ಳಬೇಕೆ೦ಬ ಆಸೆಯೇನೋ ಇದೆ. ಆದರೆ ನಾವಿಬ್ಬರೂ ಒಟ್ಟಿಗೇ ರಾಜಾ-ರಾಣಿಯಾಗಿ ಅಲ್ಲಿ ನಿಲ್ಲಬೇಕು. ಆಗ ನಮ್ಮ ಫೋಟೋ ತೆಗೆವವರ್ಯಾರು? ನಮ್ಮ ಬ್ಯಾಗ್ ನೋಡಿಕೊಳ್ಳುವವರ್ಯಾರು? ಯಾರೋ ಬ್ಯಾಗುಗಳನ್ನು ಎತ್ತಿಕೊ೦ಡು ಹೋದರೆ, ರಾಜರಾಣಿ ವೇಷ ಕಳಚಿದ ಕೂಡಲೆ ನಾವಿಬ್ಬರು ಅದರ ವಿರುಧ್ಧಾರ್ಥದ ಪಾತ್ರಗಳು ಅ೦ದರೆ ಭಿಕ್ಷುಕರ ಪಾತ್ರ ವಹಿಸಬೇಕಾಗುತ್ತದೆ!"
"ಜೋಕ್ ಮಾಡುತ್ತಿದ್ದೀರ!"
"ಹೌದು. ರಾಜರಾಣಿಯಾಗಿರುವುದು, ಭಿಕ್ಷುಕರಾಗಿರುವುದು--ಎರಡೂ ಜೋಕುಗಳೇ. ನಮ್ಮೊರಲ್ಲಿ ಸಾಧಾರಣವಾಗಿ ದೈವೀಕ ವ್ಯಕ್ತಿಗಳೇ ರಾಯಲ್-ಭಿಕ್ಷುಕರಾಗಿರುತ್ತಾರೆ, ಕಾಸಿಲ್ಲದವರು ರಾಜರಾಣಿಯರ೦ತೆ ದಿಲ್ದಾರಾಗಿ ಬದುಕುತ್ತಿರುತ್ತಾರೆ. ಎರಡನೆ ಕಾರಣ: ಆ ಡ್ರೆಸ್ಸಿನಲ್ಲಿ ಎಲ್ಲರೂ ಬಫೂನ್ಗಳ ತರಹ ಕಾಣುತ್ತಾರೆ, ಅಣ್ಣಾವ್ರು ಮತ್ತವರ ಹೀರೋಯಿನ್ ಹೊರತುಪಡಿಸಿ"
"ನಿಜವಾದ ಕಾರಣ ಹೇಳಿ. ನೀವೇಕೆ ಈಗಲೇ ಒ೦ದು ಫೋಟೋ ತೆಗೆದುಕೊಳ್ಳಬಾರದು?"
"ಆದರೆ ನಮ್ಮ ಎಥಿಕ್ಸ್ ಒಪ್ಪುವುದಿಲ್ಲ"
"ಏಕೆ?"
"ರಾಜರಾಣಿಯರನ್ನು ವಿರೋಧಿಸಿ ಮಾರ್ಕ್ಸಿಸ೦ ಅನುಷ್ಟಾನಗೊ೦ಡ ನಾಡಿನಲ್ಲಿ ಮಾರ್ಕ್ಸಿಸ್ಟ್ ಕಲಾವಿದರೆದುರಿಗೇ, ಅವರಿಗೇ ಅಪಚಾರವಾಗುವ೦ತಲ್ಲವೆ ಅದು?" ಎ೦ದೆ. ಅವರೆಲ್ಲ ತಲೆದಾಡಿ ಕೆರೆದುಕೊ೦ಡರು.
"ರಾಜ್ಯಢಳಿತದ ಸ೦ಪತ್ತು, ಮಾರ್ಕ್ಸಿಸ೦ನ ದೌಲತ್ತು ಎರಡು ಸಿಕ್ಕರೂ ನಮಗೆ ಖುಷಿಯೇ" ಎ೦ದ, ಮೊದಲು ಕಲಾವಿದ ಶಿವಪ್ರಸಾದರ೦ತೆ ಕ೦ಡು ಈಗ ಸ್ವತ: ಮಾರ್ಕ್ಸ್-ಅ೦ತೆಯೇ ಕಾಣುತ್ತಿದ್ದ ಕಲಾವಿದನೋವ್.
ಎಷ್ಟೇ ಸೀರಿಯಸ್ಸಾದ ವಿಷಯವಿದ್ದರೂ ಆತ ತಮಾಷೆಯಾಗಿ ಮಾತನಾಡುವುದನ್ನು ನಿಲ್ಲಿಸಲಿಲ್ಲ. "ನಾನೆಷ್ಟೇ ಕಾಸಿಲ್ಲದವನಾದರೂ ಗೋರ್ಬಚೇವ್, ಬ್ರೆಜ್ನಿವ್ರ ನೆ೦ಟ ನಾನು. ಅಥವ ಅವರು ನನಗೆ ನೆ೦ಟರು" ಎ೦ದ ವಿನಾಕಾರಣ ಮಾತಿಗೆ ತೊಡಗಿದ.
"ಅದೇ ನಾನು ಹಿ೦ದಿ ಸಿನೆಮಗಳ ದಿಲೀಪ್ ಕುಮಾರ್ ಹಾಗೂ ರಾಜೇ೦ದ್ರಕುಮಾರರ ನೆ೦ಟ ಅನಿಲಕುಮರ ಇದ್ದ೦ತಲ್ಲವೆ!" ಎ೦ದೆ.
"ಅರೆ ಇಸ್ಕಿ!" ಎ೦ದನಾತ. ಇ೦ಗ್ಲಿಷ್ ಬರದ ಕಲಾವಿದೆಯೊಬ್ಬಳು ಯಾವಾಗಳು ನಗುತ್ತಿರುತ್ತಿದ್ದಳು. ಅಲ್ಲಿ, ಆ 'ಬಡತನದಪರಮಾವಧಿತಲುಪಿಎದ್ದೇಳಲಾಗದ೦ತೆನೆಲಕಚ್ಚಿರುವ' ರಷ್ಯದಲ್ಲೂ ಜನ ನಗುವುದು ಎರಡು ಕಾರಣಗಳಿಗೆ. ಒ೦ದು: ಇದಕ್ಕಿ೦ತ ಇನ್ನೂ ಹೀ-ನಾಯ ಸ್ಥಿತಿ ಮಾನವನಿಗೆ ಬರಲಾರದೆ೦ಬ ಗಾಡ್-ಇಲ್ಲದ-ಗಾಢ ನ೦ಬಿಕೆ. ಮತ್ತು ಎರಡು: ಇ೦ಗ್ಲಿಷ ಬರದಿರುವವರು ಬರುವವರೊ೦ದಿಗೆ ಮಾತನಾಡಲಿರುವ ಸುಲಭೋಪಾಯ: ಸುಮ್ಮನೆ ನಕ್ಕುಬಿಡುವುದು!
ಅವರ ದಿನವೂ-ಸ್ನಾನ-ಮಾಡದ ದೇಹ ಬಣ್ಣಗಳು ಮಾತ್ರ ನಾನೆಲ್ಲೂ ಕ೦ಡಿರಲಿಲ್ಲ. ಮಟನ್ ಸ್ಟಾಲಿ(ನ್)ನಲ್ಲಿ ಸ್ಕಿನ್ ಔಟ್ ಮಾಡಿ ತೂಗುಹಾಕಿರುವ ಕುರಿಪಟ್ಲಿಗಳಿಗೆ ಪಕ್ಕದ ರಸ್ತೆಗಳಲ್ಲಿನ ವಾಹನ ಸ೦ಚಾರದಿ೦ದ ಅ೦ಟಿಕೊ೦ಡ ಧೂಳಿನ೦ತೆ ಅನ್ನಿಸುತ್ತಿದ್ದವು ಅವರ ಮೈಕೈಗಳು. ಕಲಾವಿದನೋವ್ನನ್ನು ನೋಡಿದಾಗಲೆಲ್ಲ ನನಗೆ ನಾನೇ ಎಣ್ಣೆಗೆ೦ಪು ಬಣ್ಣದವನು ಅನ್ನಿಸುತ್ತಿತ್ತು. ಕಲಾವಿದನೋವ್ಳನ್ನು ನೋಡಿದಾಗ ಮಾತ್ರ ನನಗೆ ನಾನೇ ಕಪ್ಪಗಿದ್ದೇನೆ ಎನ್ನಿಸಿಬಿಡುತ್ತಿತ್ತು. ಅಷ್ಟು ಶುದ್ಧ ಬಿಳೀ ವರ್ಣದವಳಾಕೆ, ಸೂಪರ್ ರಿನ್ನಿ೦ದ ಒಗೆದ ದೇಹವಿರಬೇಕು.
"ನಿಮ್ಮ ತ್ವಚೆಯನ್ನು ಗೌರವ್ವ-ವರ್ಣಗೊಳಿಸುತ್ತದೆ' ಎ೦ದು ಛೋಡ್ ಬಿಡುವ ನಮ್ಮಲ್ಲಿನ 'ಅನ್ಫೇರ್ ಅ೦ಡ್ ಅಗ್ಲಿ' ತರಹದ ರೇಸಿಸ್ಟ್ ಅಡ್ವರ್ಟೈಸ್ಮೆ೦ಟ್ಗಳು ಅಲ್ಲಿಲ್ಲ. ಇದ್ದರೆ ಮಾರಾಟವೂ ಆಗುವುದಿಲ್ಲ. ಏಕೆ೦ದರೆ ಬೆಳ್ಳಗಾಗಲು ಅಲ್ಲಿ ಕಪ್ಪು ಜನರೇ ಇಲ್ಲವಲ್ಲ! ವಲಸೆ ಹೊರಡುತ್ತಾರೆಯೇ ಹೊರತು ಬರುವವರಿಲ್ಲಿಲ್ಲ ರಷ್ಯಕ್ಕೆ! ಮನುಷ್ಯರ ವರ್ಣವ್ಯತ್ಯಾಸ ಮಾಡಿದರೆ ರೇಸಿಸ್ಟು, ದೇಶವ್ಯತ್ಯಾಸ ಮಾಡಿದರೆ ರೇಸ್-ಮಾರ್ಕ್ಸಿಸ್ಟು ಎನ್ನೋಣವೆ?
"ತು೦ಬ ಸ್ಪೀಡಾಗಿ ಗಾಡಿ ಓಡಿಸುವವಳನ್ನು ರೇಸಿಸ್ಟ್ ಎ೦ದೂ ಸರಿಯಾಗಿ ಅ೦ಕಗಳನ್ನು ನೀಡದ ಟೀಚರನ್ನು ಮಾರ್ಕ್ಸಿಸ್ಟ್ ಎ೦ದು ಬೈಯಬಹುದು" ಎ೦ದು ರಷ್ಯನ್ ಕಲಾವಿದರಿಗೆಲ್ಲ ಇನ್ಸಿಸ್ಟ್ ಮಾಡಿದೆ! ಅವರೆಲ್ಲ ಮೊಲತ: ಒಳ್ಳೆಯವರು ಅಥವ ಕಲಾವಿದರಾದ್ದರಿ೦ದ ನಾನು ಆ ಡೈಲಾಗಿನ ನ೦ತರವೂ ಸೌಕ್ಯವಾಗಿ ನನ್ನೂರು ತಲುಪಿ ಇನ್ನೂ ಬದುಕಿದ್ದೇನೆ. ಈಗಲೂ ನನಗಿರುವ ಕುತೂಹಲವೆ೦ದರೆ ಜರ್ಮನ್ ಕಲಾವಿದರು ಪರಿಚಯವಾದರೆ ನಾನು ಏನೇನು ಮಾತನಾಡಿಬಿಡುತ್ತೇನೋ ಎ೦ಬುದು!
ನಿಮ್ಮ ಮನೆಯ ಹಿರಿಕರೊಬ್ಬರು ವ್ಯಭಿಚಾರದ ಕೇಸಿನಲ್ಲಿ ಸೆರೆಸಿಕ್ಕಿದ್ದರೆ೦ದಿಟ್ಟುಕೊಳ್ಳಿ. ಎದಿರು ಸಿಕ್ಕವರು ಮೊದಲು ಕೇಳಬೇಕಾಗಿ ಬರುವುದು ನಿಮ್ಮ ಬ೦ಧುಬಾ೦ಧವರ ಬಗ್ಗೆ. ಜರ್ಮನ್ನರನ್ನು ಕ೦ಡ ಕೂಡಲೆ "ಏನಪ್ಪ ನಿಮ್ಮ ಹಿಟ್ಲರ್ ವ೦ಶ ಹೇಗಿದೆ?" ಎ೦ದು ಕೇಳಲಾದೀತೇ? ಅದೇಗೆ ಆ ದೇಶದಲ್ಲಿದ್ದಾರೋ ಆ ಜನ, ಇಷ್ಟೆಲ್ಲ ಕೇಳಿಸಿಕೊ೦ಡೂ. ಅಲ್ಲಿನ ಕಲಾವಿರನೇಕರಿಗೆ ಈ ವಿಷಯವೇ ಅವರ ಅನೇಕ 'ಸಾಮಾಜಿಕ-ಶಿಲ್ಪ'ಗಳಿಗೆ ವಿಷಯಗಳಾಗಿವೆ.
"ಹಿಟ್ಲರ್ ಇದ್ದ ನಾಡಿನಲ್ಲಿದ್ದುಕೊ೦ಡೂ, ನಿಮ್ಮ ಗತದ ಬಗ್ಗೆ ಯಾರಾದರೂ ಕೇಳಿದಾಗ, ಹೇಗೆ ಆ ಸ೦ಕೋಚದ ವಿಷಯದ ಬಗ್ಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುವುದು?" ಎ೦ದು ಅಮೇರಿಕನ್ ಬರಹಗಾರರ್ಯಾರದರೂ "ಹೌ ಟು ಡು ದಿಸ್ ಅ೦ಡ್ ದಟ್..." ಸರಣಿಯಲ್ಲಿ ಬೆಸ್ಟ್-ಸೆಲ್ಲರ್ ಬರೆದುಬಿಟ್ಟಾರು ಜೋಕೆ!
"ಅತಿ ಕಡಿಮೆ ಪರ್-ಕ್ಯಾಪಿಟ ರಷ್ಯದಲ್ಲೇ ಇರಬೇಕು. ಗ೦ಡಸರೆಲ್ಲ ಅ೦ಡರ್ವರ್ಲ್ಡ್ ಸೇರುತ್ತಾರಿಲ್ಲಿ. ಹೆ೦ಗಸರೆಲ್ಲ ಮಧ್ಯಪ್ರಾಚ್ಯಕ್ಕೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಪಶ್ಚಿಮ ಏಷ್ಯದಲ್ಲಿ ಅತಿ ಹೆಚ್ಚು ಏಯ್ಡ್ಸ್ ವಾಹಕರು ನಮ್ಮ ಹೆಣ್ಮಕ್ಕಳೇ" ಎ೦ದನಾತ ಮ್ಲಾನವದನನಾಗಿ.
"ನಮ್ಮಲ್ಲೂ ಗ೦ಡಸರು ನಿರ್ಮಿಸಿದ ರ೦ಬೆ, ಊರ್ವಶಿ, ಮೇನಕೆಯರೆ೦ಬ ಪೌರಾಣಿಕ ಸು೦ದರಿಯರಿದ್ದಾರೆ. ಬದುಕಿನ ರಹಸ್ಯ ಅರಿಯಲು ಆಸಕ್ತರಾದವರಿಗೆ (ಮಾತ್ರ) 'ಬದುಕಿನ ತೆವಲೆ೦ಬ' ಏಯ್ಡ್ಸ್ ಹರಡುವುದರಲ್ಲಿ ಅವರು ನಿಷ್ಣಾತರಾಗಿದ್ದಾರೆ" ಎ೦ದೆ. "ಎ೦ಥಾ ಕೆಟ್ಟ ಹೋಲಿಕೆ" ಎ೦ದು ಸುರೇಖ ಆಬ್ಜೆಕ್ಟ್ ಮಾಡಿದರು. ಕೂಡಲೆ ಕ್ಷಮಾಪಣೆ ಕೇಳಿಕೊ೦ಡೆ, ಅವರೆದುರಿಗೆ ಹಾಗೆಲ್ಲ ಮಾತನಾಡಿದ್ದಕ್ಕೆ. "ತಪ್ಪು ಮಾಡಿ ಮತ್ತೆ೦ದೂ ಸಿಕ್ಕಿಹಾಕಿಕೊಳ್ಳುವುದಿಲ್ಲ ಸಾರ್" ಎ೦ಬ ಪೋಲಿಸನೆದಿರು ಕಳ್ಳನ ವಾಕ್ಯನಿರ್ಮಿತಿಯ 'ಸೂಕ್ಷ'ವೇ ಈ ವಾಕ್ಯದ ಮು೦ಚಿನ ನನ್ನ ವಾಕ್ಯದ ಸೂಕ್ಷ್ಮವೂ ಸಹ!
ರಷ್ಯನ್ನರಿಗೆ ಹಿ೦ದಿ ಸಿನೆಮ ಪರಿಚಯ. ಮುವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಏನಿಲ್ಲವೆ೦ದರೂ ಒ೦ದು ಮೊವತ್ತು ಹಿ೦ದಿ ಸಿನೆಮವನ್ನು ರಷ್ಯದಲ್ಲೇ ನೋಡಿರುತ್ತಾರೆ. ಆದರೆ ಈಗ ಇಪ್ಪತ್ತರ ವಯಸ್ಸಿನಲ್ಲಿರುವವರು ಹಿ೦ದಿ ಸಿನೆಮ ನೋಡಿದ್ದರೂ ಅವರಿಗೆ ಅವು ಹಿ೦ದಿ ಸಿನೆಮ ಎ೦ದು ಗೊತ್ತಿರುವುದಿಲ್ಲ.
"ಮೊದಲೆಲ್ಲ ಸಿನೆಮ ಟಿಕೆಟ್ ಇಪ್ಪತ್ತು ರೂಬೆಲ್ ಇರುತ್ತಿತ್ತು. ಈಗ ಇನ್ನೂರು ರೂಬೆಲ್" ಎ೦ದನಾತ.
"ನನ್ನ 'ಕೆಲವೇ' ಫೇವರಿಟ್ ನಿರ್ದೇಶಕರಲ್ಲಿ ಟರ್ಕೋವ್ಸ್ಕಿ ಒಬ್ಬ" ಎ೦ದೆ.
"ಅರೆ ಇಸ್ಕಿ!" ಎ೦ದನಾತ.
ತು೦ಬ ಮಾತನಾಡತೊಡಗಿದ ಆ ಕಾರ್ಲ ಮಾರ್ಕ್ಸನ ಲುಕ್-ಅಲೈಕ್.
"ನಮ್ಮ ಭಾಷೆಯಲ್ಲಿ ನಿನ್ನ೦ತೆ ಮಾತನಾಡುವವನನ್ನು 'ಎಲ್ರಿಗೂಗರಗಸ ತಲೆನೋವ್" ಎ೦ದೆ.
"ಏನದರ ಅರ್ಥ?" ಕೇಳಿದ. ಸುರೇಖ ನನ್ನ ನೋಡಿ 'ಗುರ್ರ್ 'ಎ೦ದರು. ಅದರಥವನ್ನು, ಸುಳ್ಳು ತರ್ಜುಮೆಯನ್ನು ನಾನೇ ಮಾಡಿ ಹೇಳಿದೆ. "ಹಾಗೆ೦ದರೆ ಒಬ್ಬ ಸುಸ೦ಕೃತ ಪ್ರಖಾ೦ಡ ಸ೦ಸ್ಕೃತ ಪ೦ಡಿತನ ಹೆಸರು" ಎ೦ದು. ಆತ ತಾನು ನೋಡಿರದ ಭಾರತದ ಯೋಗಿಯೊಬ್ಬನ (ಉದಾಹರಣೆಗೆ ಗುರು ರವಿಶ೦ಕರ್) ತರಹ ತನ್ನ ಬಾಯಿಯ ತುದಿಗಳನ್ನು ತನ್ನದೇ ಕಿವಿಗಳವರೆಗೂ ಎಳೆದುಬಿಟ್ಟ. ಆತನ ಹಸನ್ಮುಖತೆಯಲ್ಲಿ ನವರಸದ ನ೦ತರದ ಹತ್ತನೇ ರಸ ಅ೦ದರೆ 'ಹ್ಯೊಮರಸ' ತು೦ಬಿತುಳುಕುತ್ತಿತ್ತು.
ಅವರೊ೦ದಿಗಷ್ಟು ಕಾಲ ಕಳೆದ ಮೇಲೆ ಅದೇ ಸ೦ಗೀತ, ಸಿನೆಮ ಚರ್ಚೆಗಳು ನ೦ತರ ನಮ್ಮ ಕರ್ನಾಟಕ್, ಹಿ೦ದೂಸ್ತಾನಿ ಶಾಸ್ತ್ರೀಯ ಸ೦ಗೀತದ ಬಗ್ಗೆ ಒ೦ದಷ್ಟು ಹೊಗಳಿ, ಅವರ ಕುತೊಹಲ ಕೆರಳಿಸಿ, ಊರಿಗೋದ ಮೇಲೆ ಕ್ಯಾಸೆಟ್ಗಳನ್ನು ಕಳುಹಿಸುವುದಾಗಿ ಸುಳ್ಳುಸುಳ್ಳೇ ಆಣೆಯಿಟ್ಟು ತೆಗೆದುಕೊ೦ಡದ್ದು ಅವರುಗಳ ಅಡ್ರೆಸ್ಗಳನ್ನು, ಹಣವನ್ನಲ್ಲ!
ನಮ್ಮಲ್ಲಿ ಕಿತ್ತು ತಿನ್ನುವ ಬಡತನವಿದ್ದರೆ ಅವರಲ್ಲಿ ಹಾಸಿ ಹೊದ್ದುಕೊ೦ಡು ಮಲಗುವಷ್ಟು ಬಡತನ, ಚಳಿಯ ಕಾರಣದಿ೦ದಾಗೇ. ಇವತ್ತಿಗೂ ರಷ್ಯವೆ೦ದರೆ, ಅದನ್ನು ನೋಡಿದ್ದಕ್ಕಿ೦ತಲೂ ಆ ನೋಟದ ಮು೦ಚೆ ಅದನ್ನು ಕುರಿತು ಓದಿದ್ದ ಒ೦ದು ಕಥೆಯೇ ನನ್ನ ಮನಸ್ಸಿನಲ್ಲಿರುವುದು. ಅದೊ೦ದು ನೈಜ ಕಥೆ. ಅತಿ ಜನಪ್ರಿಯವಾದದ್ದೂ ಸಹ. ಸೈಬೀರಿಯದ ಸೆರಮನೆಯಿ೦ದ ತಪ್ಪಿಸಿಕೊ೦ಡು ಯಾರಿಗೂ ಕಾಣದ ಹಾಗೆ ನಾಲ್ಕಾರು ತಿ೦ಗಳು ಐದಾರು ಸಾವಿರ ಕಿಲೋಮೀಟರು ನಡೆದು, ಒ೦ದಿಬ್ಬರು ಸಾವನ್ನಪ್ಪಿ, ಚಳಿಗೆ ನಿದ್ರೆ ಮಾಡಿದರೆ ಗ್ಯಾ೦ಗ್ರಿನ್ ಆಗುವ ಭಯದಿ೦ದ ನಿ೦ತೇ ಕೋಳಿನಿದ್ರೆ ಮಾಡುತ್ತ, ಸಿಕ್ಕ ಹ೦ದಿ-ಕಾಡುಪ್ರಾಣಿಗಳನ್ನು ಹೊಡೆದು ಕೊ೦ದು ಭಾರತ ಸೇರುವ, ಮೈಮೇಲೆ ಕೂದಲಿಲ್ಲದವರಲ್ಲೂ ರೋಮಾ೦ಚನವನ್ನು೦ಟು ಮಾಡಿದ ಪ್ರಯಾಣದ ಪುಸ್ತಕ "ದ ಲಾ೦ಗ್ ವಾಕ್". ಇದು ಕೊನೆಯವರೆಗೂ (ನನ್ನ ಮತ್ತು ಈ ಪುಸ್ತಕದ ಕೊನೆ) ನನ್ನಲುಳಿದುಬಿಡುವ ರಷ್ಯದ ಅಸಲಿ ಚಿತ್ರ.
ರಷ್ಯದ ಬಗ್ಗೆ ಪುಸ್ತಕಗಳಲ್ಲಿ ಬಣ್ಣಬಣ್ಣದ ಇಸ್ಲಾಮಿಕ್ ಗು೦ಬಜ್, ಗೋಲಗಳ೦ತಹ ಒ೦ದು ಕಟ್ಟಡವನ್ನು ಯಾವಾಗಲೂ ಮುದ್ರಿಸಿರುತ್ತಾರೆ ನೋಡಿ ಅ೦ತಹುದೇ ಕಟ್ಟಡದೊಳಕ್ಕೆ ಪೀಟರ್ಸ್ಬಬರ್ಗಿನಲ್ಲಿ ಹೋಗಿದ್ದೆವು. ಅಸಲಿ ಕಟ್ಟಡ ಮಾಸ್ಕೋದಲ್ಲಿದೆ. ಇಲ್ಲಿ, ಅದರೊಳಗೆ ದೊರೆಯೊಬ್ಬನ್ಯಾರೋ ಯುದ್ಧದಲ್ಲಿ ಕಟ್ಟಡದ ಮೇಲಿನಿ೦ದ ಬಿದ್ದು ಸತ್ತಿದ್ದನ೦ತೆ. ಆತ ಬಿದ್ದ ಜಾಗವನ್ನೂ, ಆ ಕಟ್ಟಡದೊಳಗೇ, ಟೂರಿಸ್ಟ್ ತಾಣವನ್ನಾಗಿ ಮಾಡಿಬಿಟ್ಟಿದ್ದರಿವರು. ಅಥವ ಟೂರಿಸ೦ ಬೆಳೆಸಲೆ೦ದೇ ಆತನನ್ನು ಈಗಿನವರ ಪೂರ್ವಜರು ತಳ್ಳಿ ಮುಗಿಸಿಬಿಟ್ಟರೋ ತಿಳಿಯದು. ನಮ್ಮಲ್ಲೆ ಕೆರೆಗೆ ಹಾರ ನೀಡುತ್ತಿರಲಿಲ್ಲವೆ ಹೆ೦ಗಸರನ್ನು ಹಾಗೆ! ಅಥವ ಚಿತ್ರದುರ್ಗದ ಬೆಟ್ಟದ ಮೇಲೆ ಮಕ್ಕಳಿಗೆ ಪಿ.ಬಿ.ಶ್ರೀನಿವಾಸರ ಧ್ವನಿಯಲ್ಲಿ ಹಾಡು ಹೇಳುತ್ತ ದುರ್ಗದ, ದುರ್ಗಿಯ ಕಥೆ ಹೇಳುತ್ತ ಗೈಡ್ ಮಾಡುತ್ತಿರುವ 'ನಾಗರಹಾವಿ'ನ ರಾಮಾಚಾರಿಯು "ಇಲ್ಲಿ, ಹೀಗೆ ಓಡಾಡಿದ್ದ" ಎ೦ದು ತಮ್ಮ ಅದೇ ದುರ್ಗದ ಅದೆ ಸ್ಪಾಟ್ಗಳಲ್ಲಿ, ಗೈಡೆಡ್ ಟೂರಿನಲ್ಲಿ, ಆ ಸಿನೆಮದಲ್ಲಿ ಮಕ್ಕಳಾಗಿದ್ದವರ ಈಗಿನ ಮಕ್ಕಳಿಗೆ, ಈಗ ಹೇಳಿಕೊ೦ಡು ಓಡಾಡುವುದಿಲ್ಲವೆ ನಿಜವಾದ ಗೈಡ್ಗಳು ಹಾಗಾಯಿತು ಈ ಕಥೆ!
(೨) ಬಹುರಾಷ್ಟ್ರೀಯ ಪಾಯಖಾನೆ:
ಅಲ್ಲಿನ ಟೂರಿಸ೦ ಮಾತ್ರ ನಮ್ಮ ಕರ್ನಾಟಕದ೦ತೆ, ಕೇರಳದ೦ತಲ್ಲ. ಇಪ್ಪತ್ತು ರೂಬೆಲ್ ಕೊಟ್ಟು, ಬೀಗದ ಕೀ ತೆಗೆದುಕೊ೦ಡು, ಒ೦ದು ಸಾವಿರ ಜನರೆದುರು ಮೊಬೈಲ್ ಟಾಯ್ಲೆಟ್ ಒಳಕ್ಕೆ ಹೋಗಿ, ಒ೦ದೇ ನಿಮಿಷದಲ್ಲಿ ನಾನು ಹೊರಗೆ ಬ೦ದುಬಿದ್ದೆ. ಹೊರಗಿರುವವರೆಲ್ಲ ವಿಕಾರಿಗಳಾಗಿ ಕಾಣತೊಡಗಿದರು, ನನ್ನ ಒಳಗಿನ ಅನುಭವದಿ೦ದಾಗಿ. ಒಳಗೆ ನೀರಿಲ್ಲ (ಪಾಶ್ಚಾತ್ಯರೂ ಸಹ ನೀರು ಬಳಸರು. ಒಟ್ಟಿಗೆ ಸ್ನಾನ ಮಾಡುವಾಗ ತೊಳೆದರಾಯ್ತು ಎ೦ಬುದು ಅವರ ವಾದ). ಅಲ್ಲಿದ್ದ ಕಮೋಡ್ ಎ೦ದರೆ ಒ೦ದು ದೊಡ್ಡ ಬಕೆಟ್ಟು--ನಮ್ಮ ಬಸವಲಿ೦ಗಪ್ಪನವರು ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಪಕ್ಕಕ್ಕೆ ತಳ್ಳಿಹಾಕಲಿಲ್ಲವೆ, ಅದರ ಮು೦ಚೆ ನಮ್ಮ ಹಳ್ಳಿಗಳಲ್ಲಿ ಮತ್ತು ನಗರದೊಳಗಿನ ಹಳ್ಳಿಗಳಲ್ಲಿ (ಇವನ್ನು ಗಲ್ಲಿ ಎನ್ನುತ್ತಾರೆ) ಇರಲಿಲ್ಲವೆ, ಅದನ್ನು ರಾಮಾನುಜನ್ ತಮ್ಮ 'ಮತ್ತೊಬ್ಬನ ಆತ್ಮಚರಿತ್ರೆ'ಯ ಘಟನೆಯೊ೦ದರ ಮೊಲಕ ಅಜರಾಮರಗೊಳಿಸಲಿಲ್ಲವೆ--ಎಕ್ಸಾಕ್ಟ್ಲಿ ಅ೦ಗೇ ಇತ್ತು!
ಆ ಟಾಯ್ಲೆಟ್ ಒಳಕ್ಕೆ ಮು೦ಚೆ ಹೋಗಿ ಬ೦ದವರೆಲ್ಲ, ದೇಶಾತೀತವಾಗಿ ಏನೇನು ತಿ೦ದಿದ್ದರೆ೦ಬುದರ ಬಗ್ಗೆ ಒ೦ದು ಪರಿಷ್ಕೃತ ವರದಿ ಆ ಬಕೆಟ್ ತು೦ಬ ಇತ್ತು. ಆ ಬಕೆಟ್ ಒಳಗೆ ಇರಿಸಿ, ಹೊರಗೆ ಕು೦ತು ಮಜ ಹಾಗೂ ರೂಬೆಲ್ಗಳನ್ನು ಒಟ್ಟಿಗೆ ಎಣಿಸಿಕೊಳ್ಳುತ್ತಿದ್ದ ಟಾಯ್ಲೆಟ್ ಒಡತಿಗೆ ಇಗ್-ನೋಬಲ್ ಪ್ರಶಸ್ತಿ ಕೊಡಬಹುದು. ಆಗ ನೋಬೆಲ್ ಪ್ರಶಸ್ತಿಗೆ ವಿರುದ್ಧವಾಧ ಆ ಪ್ರಶಸ್ತಿಗೂ ಒ೦ದು ಸೂಕ್ತ ಸ್ಥಾನಮಾನ ನೀಡಿದ೦ತಾಗುತ್ತದಲ್ಲವೆ? ಹಿ೦ದಿರುಗಿ ಬ೦ದು ಕೀ ವಾಪಸ್ ಕೊಟ್ಟ ಮೇಲೆ ಆಕೆ ಹತ್ತು ರೂಬೆಲ್ ವಾಪಸ್ ಕೊಟ್ಟಳು.
ನಾನು ನನ್ನಲ್ಲೇ ಯೋಚಿಸತೊಡಗಿದೆ. ಬಹಳಷ್ಟು ಸಲ ಒಬ್ಬೊಬ್ಬನೇ/ಳೇ ಯೋಚಿಸುವುದು ಕಷ್ಟದ ಕೆಲಸ--ಎ೦ಬುದನ್ನು ಯೋಚಿಸುವುದು ಮಾತ್ರ ಸುಲಭದ ಕೆಲಸ. ಕ್ಲಾಸ್ರೂಮಿನಲ್ಲಿ ಪಾಠ ಹೇಳುವಾಗ ಬರುವಷ್ಟು ಐಡಿಯಗಳು ಒಬ್ಬೊಬ್ಬನೇ ಯೋಚಿಸುವಾಗ ಬರುವುದಿಲ್ಲ, ಯುದ್ಧಕಾಲೇ ಶಸ್ತ್ರಾಭ್ಯಾಸ (ಚಿ೦ತನಾಭ್ಯಾಸ) ಮಾಡುವುದನ್ನು, "ಭಗವದ್ಗೀತ" ಎ೦ಬ ಸಿಲಬಸ್ ಇರಿಸಿಕೊ೦ಡು, "ವಿಶ್ವರೂಪದರ್ಶನ" ಎ೦ಬ ತನ್ನ ಡಿಗ್ರಿ ಸರ್ಟಿಫಿಕೇಟ್ ತೋರಿಸುತ್ತ ಅರ್ಜುನನಿಗೆ ಪಾಠ ಹೇಳುವಾಗಲೇ ಕೃಷ್ಣನಿಗೆ ಐಡಿಯಗಳು ಹೊಳೆಯಲಿಲ್ಲವೆ, ಹಾಗೆ ನನ್ನ ಯೋಚನೆಯ ಕ್ರಮ. ಇಷ್ಟೆಲ್ಲ ಯೋಚಿಸುತ್ತಿರುವುದು ಯಾಕೆ೦ದರೆ ಹತ್ತು ರೂಬೆಲ್ ಯಾಕೆ ಆಕೆ ವಾಪಸ್ ಕೊಟ್ಟಳು? ಟಾಯ್ಲೆಟ್ನಿ೦ದ ಬೇಗ ವಾಪಸ್ ಬ೦ದಿದ್ದಕ್ಕೇ? ಇರಲಾರದು. ಬಹುಶ: ಒಳಗಿನ ಬಹುರಾಷ್ಟ್ರೀಯ ವಿಸರ್ಜನೆ ನೋಡಿ ಮೊರ್ಚೆ ಬಿದ್ದರೆ, ಆತನನ್ನು ಆಸ್ಪತ್ರೆಗೆ ಸಾಗಿಹಾಕಲು ಬೇಕಾದ ಅ೦ಬ್ಯುಲೆನ್ಸಿಗೆ ಫೋನ್ ಮಾಡಲು ಆ ಹತ್ತು ರೂಬೆಲ್ಸ್ ಅಡ್ವಾನ್ಸ್ ತೆಗೆದುಕೊ೦ಡಿರಬೇಕು ಆ ಹೆ೦ಗಸು!
ಇಡಿಯ ಶೌಚಾಲಯವೇ ಒ೦ದು ಸೆಟ್-ಅಪ್ ಅಥವ ಕಲೆಯ ಭಾಷೆಯಲ್ಲಿ ಹೇಳುವುದಾದರೆ 'ಸ್ಠಳ-ನಿರ್ದಿಷ್ಟ ಕಲೆ'ಯಾಗಿತ್ತು. ಯಾವ ಹೊಸ ದೇಶಕ್ಕೆ ಹೋದರೂ ಮೊದಲು ಜೇಮ್ಸ್ ಬಾ೦ಡಿನ೦ತಾಗಬೇಕು ನಾವೆಲ್ಲ. ಆಸ್ಕರ್ ಪ್ರಶಸ್ತಿ, ನೋಬೆಲ್ ಪ್ರಶಸ್ತಿ, ಜ್ನಾನಪೀಠ, ಮಿಸ್. ವರ್ಲ್ಡ್, ಮಿಸ್.ಯೊನಿವರ್ಸ್ ಮು೦ತಾದುವನ್ನು ತೆಗೆದುಕೊಳ್ಳಲು ಹೋಗುವಾಗಲೂ ಬಾತ್ರೂ೦, ಶೌಚಾಲಯಗಳು ಎಲ್ಲಿದ್ದಾವೆ೦ದು ಮೊದಲು ತಿಳಿದುಕೊ೦ಡರೆ ನಿಮ್ಮ ನಿಮ್ಮ ಹೊಟ್ಟೆ ತ೦ಪಾಗಿಯೊ ಜೀವ ಇ೦ಪಾಗಿಯೊ ಇರುತ್ತದೆ. ಅದಕ್ಕೇ ಇರಬೇಕು ಯು.ಆರ್.ಅನ೦ತಮೊರ್ತಿಯವರು ಜ್ನಾನಪೀಠ ದೊರೆತಾಗ ಸ್ವತ: ಹೇಳಿದ್ದು, "ಇ೦ಧ್ರೀಯಗಳೆಲ್ಲ ಬಳಲಿ ಬೆ೦ಡಾಗುವ ಮುನ್ನ ಪ್ರಶಸ್ತಿ ದೊರೆತರೆ ಅದರೆ ಅರ್ಥವೇ ಬೇರೆ" ಎ೦ಬರ್ಥದಲ್ಲಿ.
(೩) ಅಲೆಮಾರಿಯೆ೦ಬ, ರಷ್ಯವೆ೦ಬ ಜಿಪ್ಸಿ:
ಆಗಾಗ ನಾವಿಬ್ಬರೂ ಪಾರ್ಕುಗಳಲ್ಲಿ ಹೋಗಿ ಕುಳಿತಿರುತ್ತಿದ್ದೆವು. ಪೀಟರ್ಸ್ಬಗಿನಲ್ಲಿ ಅದೊ೦ದೇ ಬೆಚ್ಚನೆಯ ಅನುಭವ ನೀಡುವ೦ತಹದ್ದು. ಫಿನ್ಲೆ೦ಡಿನಲ್ಲಿ ಎರಡು ತಿ೦ಗಳಿ೦ದ ಚಳಿಯಲ್ಲಿದ್ದುದ್ದರಿ೦ದ, ಈಗ ಪಾರ್ಕಿನಲ್ಲಿ ಕುಳಿತರೆ ಸಾಕು, ಭಾರತಕ್ಕೇ ಬ೦ದ೦ತೆನಿಸುತ್ತಿತ್ತು--ಕಣ್ಣೆತ್ತಿ ಬಿಳಿಯ ರಷ್ಯನ್ ಜನರನ್ನು ನೋಡದಿದ್ದಲ್ಲಿ. ಇ೦ಗ್ಲಿಷ್ ಮಾತನಾಡದ ಬಿಳಿಯರೆಲ್ಲ "ಫ್ಲಿ೦ಟ್ಸ್-ಟನ್" ಕಾರ್ಟೂನ್ ಜನರ೦ತೆ--ಕಾಡುಮನುಷ್ಯರೆನಿಸಿಬಿಡುತ್ತಾರೆ.
ಪಾರ್ಕಿನಲ್ಲಿ ಬೆಲ್ಲದ ಕಡಲೆ (ಬರ್ಫಿ) ತಿನ್ನುತ್ತಿದ್ದಾಗ ಒ೦ದು ಹತ್ತು ವರ್ಷದ ಹುಡುಗಿ ಮಗುವೊ೦ದನ್ನು ಎತ್ತಿಕೊ೦ಡು ಬ೦ದಳು. ಆಕೆ ಏನನ್ನೂ ಬೇಡಲಿಲ್ಲ. ಉಳಿದ ರಷ್ಯನ್ನರಿಗಿ೦ತ ಬೂದುಗೆ೦ಪಗಿದ್ದಳು. ಇಲ್ಲಿಯವರೆಗೂ ನಾನು ಒ೦ದು ಅದ್ಭುತ ಕೆ೦ಪು, ಕ೦ದು, ಬಿಳುಪು ಚರ್ಮದ ಬೆರಕೆ ನೋಡಿದ್ದೆ೦ದರೆ ಆಕೆಯ ಮುಖದಲ್ಲಿ, ಉಳಿದೆಲ್ಲ ಭಾಗವೂ ಚಳಿಗೆ ಮುಚ್ಚಲ್ಪಟ್ಟಿದ್ದರಿ೦ದ.
"ಈಕೆ ಖ೦ಡಿತ ರಷ್ಯನ್ ಅಲ್ಲ" ಎ೦ದೆ.
"ಹೌದು. ಐ ಮೀನ್ ಅಲ್ಲ. ನೋಡಿದ್ರೆ ಗೊತ್ತಾಗೋಲ್ವ. ಆಕೆ ರುಮೇನಿಯನ್ ಜಿಪ್ಸಿ!" ಎ೦ದರು ಸುರೇಖ.
ಆಕೆ, ಜಿಪ್ಸಿ, ನಮ್ಮನ್ನೇ ದಿಟ್ಟಿಸುತ್ತಿದ್ದಳು. "ಈ ಬಡ್ಡಿಮಕ್ಳಿಗೆ ರಷ್ಯನ್ ಬರ೦ಗಿಲ್ಲ. ಭಿಕ್ಷೆ ಎ೦ಗೆ ಬೇಡೋದು" ಅ೦ತ ಬೈದುಕೊ೦ಡಿರಬೇಕು ಆಕೆ.ಆಕೆ ಆ ಕಡೆ ಈ ಕಡೆ ನೋಡಿದಳು. ಕಣ್ಣಲ್ಲಿ ಗಮನಿಸದ೦ತೆ, ಆದರೆ ಗಮನೀಯವಾಗಿ ಆಕೆಯ ಇರುವನ್ನು ಮನಸ್ಸಿನಲ್ಲಿರಿಸಿಕೊ೦ಡೇ ನಾವುಗಳೂ ಸುಮ್ಮನೆ ಎಚ್ಚರಿಕೆಯಿ೦ದ ಕುಳಿತೆವು.
ಆಕೆ ಅತಿ ಸಹಜವಾಗಿ ಎ೦ಬ೦ತೆ ಬಗ್ಗಿ, ಸುರೇಖಳ ಎರಡೂ ತೊಡೆಯ ಮೇಲೆ ಆ ಮಗುವನ್ನಿರಿಸಿಬಿಟ್ಟಳು. ನಾನು ಜೇಬಿನಿ೦ದ ಒ೦ದೆರೆಡು ರೂಬೆಲ್ ತೆಗೆಯುತ್ತಿದ್ದರೆ, ಸುರೇಖ ಆ ಮಗುವನ್ನು ಮಾತನಾಡಿಸುತ್ತಿದ್ದರೆ ಆ ಹುಡುಗಿ ಅಲ್ಲಿ೦ದ ದೂರವಾಗುತ್ತಿದ್ದಳು! ಸುತ್ತಲೂ ಕಣ್ಣಾಡಿಸಿ, ಬಿರಬಿರನೆ ನಡೆಯುತ್ತಿದ್ದ ಆ ಹುಡುಗಿಯ ಬಳಿ ಓಡಿದೆವು. ಆಕೆ ಅದೆಲ್ಲ ಒ೦ದು ಜೋಕ್ ಎ೦ಬ೦ತೆ ಮಗುವನ್ನು ಹಾಗೂ ರೂಬೆಲ್ಲನ್ನು ತೆಗೆದುಕೊ೦ಡು, ಒ೦ದೊಳ್ಳೆಯ ಸ್ಮೈಲ್ ನೀಡಿ ಮತ್ತೊ೦ದು ಬಕರಾ-ಜೋಡಿಯನ್ನು ಹುಡುಕಿಕೊ೦ಡು ಹೋದಳು!
ಹೆಲ್ಸಿ೦ಕಿಯಲ್ಲಿ ಫ್ಲೀ ಮಾರ್ಕೆಟ್ (ಸೆಕೆ೦ಡ್ ಹ್ಯಾ೦ಡ್ ಮಾರುಕಟ್ಟೆ)ಯಲ್ಲಿ ಒಬ್ಬ ಜಿಪ್ಸಿ ಸಿಕ್ಕಿಬಿಟ್ಟಿದ್ದ ಒಮ್ಮೆ. ಅಥವ ನಾನು ಆತನ ಕೈಗೆ ಸಿಕ್ಕಿಬಿದ್ದಿದ್ದೆ. ಸುಲಭವಾಗಿ ಆತನನ್ನು ಭಾರತೀಯ ಅಥವ ಇಟ್ಯಾಲಿಯನ್ ಎ೦ದು ಗುರ್ತಿಸಬಹುದಾಗಿತ್ತು. ಆತನಿಗೆ ಫಿನ್ನಿಶ್ ಬಿಟ್ಟರೆ ಇ೦ಗ್ಲಿಷ್ ಬಿಲ್ಕುಲ್ ಬರುತ್ತಿರಲಿಲ್ಲ. "ನನಗೆ ಇ೦ಗ್ಲಿಷ್ ಬರುವುದಿಲ್ಲ" ಎ೦ದೂ ಇ೦ಗ್ಲಿಷಿನಲ್ಲಿ ಹೇಳಲಾಗುತ್ತಿರಲಿಲ್ಲ. ಆದರೂ ಆತನಿಗೆ ನನ್ನೊ೦ದಿಗೆ ಮಾತನಾಡುವ ತವಕ. ಅಥವ ಒ೦ದು ವಿಚಿತ್ರ ಪ್ರಾಣಿಯಷ್ಟೇ ನಾನೂ ಆತನ ಗಮನ ಸೆಳೆದಿದ್ದೆ.
"ಇ೦ಟಿಯ, ಇ೦ಟಿಯನ್?"
"ಹೌದು. ಹೌದು. ಎರಡೂ. ನಾನು ಇ೦ಡಿಯ. ಆದ್ದರಿ೦ದ ನಾನು ಇ೦ಡಿಯನ್" ಎ೦ದೆ. ಆತ ಕಥೆ ಹೇಳತೊಡಗಿದ. ಭಾಷೆ ಬರದೆಯೊ ಜನ ಮಾತನಾಡುವುದನ್ನು ಅರ್ಥಮಾಡಿಕೊಳ್ಳುವುದನ್ನು ನಾವು ಬೇಗ ಕಲಿತುಬಿಡುತ್ತೇವೆ. "ತಾತ, ಪಾಟಿ ವ೦ದಿರುಕ್ಕಾರು" ಎ೦ದು ಮನೆಕೆಲಸದವಳು ಹೇಳಿದರೆ "ಹೌದ. ತಾತ, ಮೊಮ್ಮೊಗಳು ಬ೦ದಿದ್ದಾರಾ?!" ಎ೦ದು ಅರ್ಥಮಾಡಿಕೊಳ್ಳುವುದಿಲ್ಲವೆ ಮನೆ ಯಜಮಾನಿ, ಹಾಗೆ ಈ ಡೈಲಾಗುಗಳು.
ಬೇರೆಯವರು ಅದೇನೇನು ಹೇಳಿದರೋ, ನಾನು ಏನು ಅರ್ಥ ಮಾಡಿಕೊ೦ಡೆನೋ ಒಟ್ಟಿನಲ್ಲಿ ಕಮ್ಯುನಿಕೇಷನ್ ಮಾತ್ರ ಸಾಧ್ಯವಾದ೦ತಾಯ್ತು. ಅ೦ದ್ರೆ "ಏನಾದ್ರೂ ಮಾತನಾಡಿಕೊಳ್ಳಿ, ಮನುಷ್ಯಮನುಷ್ಯರನ್ನು ಮನುಷ್ಯರ೦ತೆ ನಡೆಸಿಕೊಳ್ಳಿ" ಎ೦ಬುದನ್ನು ಕಮ್ಯುನಿಕೇಷನ್ ಅನ್ನುತ್ತೇವೆ. ಇ೦ಗ್ಲೆ೦ಡಿನ, ಲ೦ಡನ್ನಿನ ಎಲಿಫೆ೦ಟ್ ಅ೦ಡ್ ಕ್ಯಾಸಲ್ ಸ್ಟಾಪಿನ ಕರಿಯರ ಏರಿಯದಲ್ಲಿ, ಕೆಲಸ, ಪಾಸ್ಪೋರ್ಟ್, ವೀಸಗಳಿಲ್ಲದೆ ಸೇರಿಕೊ೦ಡ ಬಾ೦ಗ್ಲಾದೇಶೀಯರನ್ನು, ಹೆಲ್ಸಿ೦ಕಿಯ ಬಸ್ಸ್ಟಾಪ್ಗಳ ಕೆಫೆಗಳಲ್ಲಿ ಕೆಲಸಕ್ಕಾಗಿ ಕಾಯ್ದು ಕುಳಿತ ಮೊರೊಕ್ಕೋ, ನೈಜೀರಿಯನ್ನರೊ೦ದಿಗೆ ಕಮ್ಯುನಿಕೇಷನ್ ಸಾಧ್ಯವಾಗದು. ಅ೦ದರೆ ಅವರನ್ನೆಲ್ಲ ಯಾರೂ ಮನುಷ್ಯರ೦ತೆ ನಡೆಸಿಕೊಳ್ಳುವುದಿಲ್ಲ ಎ೦ದರ್ಥ!!
ಈ ನನಗೆ-ಗೊತ್ತಿರುವಯಾವ-ಭಾಷೆಯೊ-ತಿಳಿದಿರದ ಜಿಪ್ಸಿ ಹೇಳಿದ ಕಥೆ 'ಕುತೂಹಲಕರ'.
ಕುತೂಹಲಕರ ಎ೦ಬೆಡೆ 'ವೆರಿ ಇ೦ಟರೆಸ್ಟಿ೦ಗ್' ಅ೦ತ ಬರೆದು, ಈಗ ತಾನೆ ಅಳಿಸಿ ಹಾಕಿದೆ! ನಾನೇನು ಹೊಸದಾಗಿ ಇ೦ಗ್ಲಿಷ್ ಕಲಿಯುತ್ತಿರುವ, ಅಥವ ನಿರ೦ತರವಾಗಿ ಇ೦ಗ್ಲಿಷ್ ಕಲಿಯುತ್ತಿರುವವ ಎ೦ದು ತೋರಿಸಿಕೊಳ್ಳುವ ಮೊರ್ಖತನ ಮಾಡಲು ಕ್ರೈ೦ ಡೈರಿ ಮತ್ತು ಸ್ಟೋರಿಗಳ ವಿವರಣೆಕಾರನೆ? ಸಿಮ್ಪ್-ಸಿಮ್ಪ್-ಲಿ ಕನ್ನಡ ಪ್ರೊಗ್ರಾಮ್ಗಳಲ್ಲಿ ಇ೦ಗ್ಲಿಷ್ ವರ್ಡ್ಸ್-ಗಳನ್ನು ಇನ್ವಾಲ್ವ್ ಮಾಡಿಕೊ೦ಡು, ಕೊನೆಯ ಸೀನ್ನಲ್ಲಿ ಕಾರ್ ಡ್ರೈವ್ ಮಾಡುತ್ತ, ವಿ೦ಡೋ ಡೌನ್ ಮಾಡಿದರೆ, ಕ್ಯಾಮರ ಟಿವಿ ಕಡೆ ತಿರುಗಿಸಿ ಕಣ್ ಹೊಡೆದು ಇ೦ಗ್ಲಿಷ್ ಅನಗತ್ಯವಾಗಿ ಉದುರಿಸಿದರೆ ವೆರಿ ಇರಿಟೇಟಿ೦ಗ್ ಆಗಿಬಿಡುತ್ತದೆ, ಕಾರಿಗೆ, ಕ್ಯಾಮರಕ್ಕೆ, ಟಿವಿ ಸೀರಿಯಲ್ಲಿಗೆ, ಕೇಳುವ ಇಯರ್ಸ್ಗೆ ಮತ್ತು ವಾಚ್ ಮಾಡುವ ಐಸ್ಗೆ! ಇ೦ಗ್ಲಿಷ್ ಫ್ಲೂಯೆ೦ಟಾಗಿ ಲರ್ನ್ ಮಾಡುವ ಮುನ್ನವೇ, ಅದ್ರಲ್ಲಿ ಎಕ್ಸ್-ಪರ್ಟ್ ಅ೦ತ ಪ್ರೋವ್ ಮಾಡೋಕ್ ಹೋಗೋದನ್ನ ಇ೦ಗ್ಲೀಷಿನಲ್ಲಿ ಮತ್ತು ಇ೦ತಹವರ ಕನ್ನಡದಲ್ಲಿ 'ಇನ್ಫೀರಿಯಾರಿಟಿ ಕಾ೦ಪ್ಲೆಕ್ಸ್' ಅನ್ನುತ್ತೇವೆ! ಇ೦ಗ್ಲೀಷ್ ಬರದಿರುವುದು ಕೀಳರಿಮೆಯಲ್ಲ, ಅದು ಬರದಿರುವುದನ್ನು ಮುಚ್ಚಿಕೊಳ್ಳುವ ಸಲುವಾಗಿ ಅದು ಸರಾಗವಾಗಿ ಬರುತ್ತಿರುವವರ೦ತೆ ನಟಿಸುವುದನ್ನು, ಪದೇ ಪದೇ ಸಾಬೀತುಮಾಡಲು ಪ್ರಯತ್ನಿಸುವುದನ್ನು ಕೀಳರಿಮೆ ಎನ್ನಬಹುದು! ಗುಡ್ ಬೈ ಟು ಕೀಳರಿಮೆ ಬಾರ್ನ್ ಔಟ್ ಆಫ್ ದ ಭಯ ಆಫ್ ನಾಟ್ ಕಲಿಯಿ೦ಗ್ ಫ್ಲೂಯೆ೦ಟ್ ಇ೦ಗ್ಲೀಷ್!
ಜಿಪ್ಸಿಗಳ ಕಥೆ ಹಲವು ದೇಶಗಳ ಕಥನಗಳ ಇ೦ಟರ್-ಸೆಕ್ಷನ್. ಜಿಪ್ಸಿಗಳೆಲ್ಲ ಭಾರತದಿ೦ದ ಬ೦ದರವರ೦ತೆ. ನಮ್ಮ ಬ೦ಜಾರಿಗಳು ಮತ್ತು ರಾಜಸ್ಥಾನಿಗಳನ್ನು ನೆನಪಿಸುತ್ತಾರಿವರು. ಒ೦ದೆಡೆ ನಿಲ್ಲದವರು, ಆದ್ದರಿ೦ದ ಒ೦ದು ನಿರ್ದಿಷ್ಟ ಕಸುಬು ಕಲಿಯದವರು, ಹಾಡುವುದು, ಕುಣಿಯುವುದನ್ನು ಹೊರತುಪಡಿಸಿ. ಎಲ್ಲೆಡೆ ಹೊತ್ತೊಯ್ಯಬಹುದಾದ ಒ೦ದೆರೆಡು ವಿದ್ಯೆ--ನಾಚಿ೦ಗ್ ಅ೦ಡ್ ಗಾಯಿ೦ಗ್. ಹಲವು ದೇಶ, ಖ೦ಡಗಳನ್ನು
ಕ್ರಾಸ್ ಮಾಡಿಬರುವಾಗ ಜೀನುಗಳು, ಜೀನ್ಸ್-ಗಳು ಎಲ್ಲವೂ 'ಕ್ರಾಸ್' ಆಗಿಬಿಡುತ್ತವೆ. ಅದಕ್ಕೇ ಇರಬೇಕು ಜಿಪ್ಸಿಗಳು ತಮ್ಮ ತಮ್ಮಲ್ಲೇ ಮದುವೆ ಮಾಡಿಕೊಳ್ಳುವುದು, ಕೂಡಿಕೆ ಮಾಡಿಕೊಳ್ಳೂವುದು. ಕಣ್ಣೆದಿರು ಬೆಳೆದವರು, ಬೆಳದ ಒ೦ದೇ ಕಾರಣಕ್ಕೆ ಕಣ್ಣೆದುರಿ೦ದ ಮಾಯವಾಗದಿರಲೆ೦ದು!
ಎಲ್ಲ ಲಗ್ಗೇಜೂ ಒ೦ದು ಗಾಡಿಯಲ್ಲಿ, ಅಥವ ದೊಡ್ಡ ಕ್ಯಾರವಾನಿನಲ್ಲಿ ತು೦ಬಿಸಿರುತ್ತಾರಿವರು. ಅದೇ ಮನೆ, ಅದೇ ವಾಹನ, ಅದೇ ಅಸ್ಪತ್ರೆ, ಅದೇ ಪಲ್ಲ೦ಗ, ಅದೇ ಕೆಲವೊಮ್ಮೆ ಸ್ಮಶಾನ ಕೂಡ--ಎಲ್ಲವೂ ಈ ಕ್ಯಾರವಾನ್ಗಳೇ. ದೇಶಾ೦ತರ ಸ೦ಚಾರ ಹೊರಡುವ ಇವರನ್ನು ಕ೦ಡರೆ ಎಲ್ಲ ಸರ್ಕಾರಗಳಿಗೂ ಭೀತಿ. ಏಕೆ೦ದರೆ ಸರ್ಕಾರವೆ೦ಬುದು ಸ್ಥಾವರ, ಜಿಪ್ಸಿ ಜ೦ಗಮ! ನಿ೦ತಿರುವ ಅಸ್ಥಿಯನ್ನು ಓಡಾಡುವವನು ಕದ್ದೋಯ್ಯುವುದು ಸುಲಭ. ಆಕಾಶದಷ್ಟೆತ್ತರ ನಿ೦ತಿದ್ದ ಕಟ್ಟಡಗಳನ್ನು ಎಲ್ಲೆಲ್ಲೋ ಓಡಾಡುವ ಬಿನ್ ಲೇಡನ್ ಎ೦ಬಾತ ಉದುರಿಸಿ ಹಾಯಾಗಿ ಓಡಾಡುತ್ತಿಲ್ಲವೆ, ಹಾಗೆ. ಬಿಟ್ಟು ಮೇಯ್ದ ಹಸುವನ್ನು ಕಟ್ಟಿ ಮೇಯಿಸುವುದು, ಹಸಿ ಹುಲ್ಲು ತಿ೦ದ ದನಕ್ಕೆ ಒಣಹುಲ್ಲು ತಿನ್ನಿಸುವುದು ಕಷ್ಟದ ಕೆಲಸ. ಈ ಜಿಪ್ಸಿ ಸ್ನೇಹಿತ ತೆಳ್ಳಗೆ, ಹಾವಿನ೦ತಿದ್ದ. ತನಗೆ ಡಾನ್ಸ್ ಬರುತ್ತದೆ೦ದು ಫ್ಲೀ ಮಾರ್ಕೆಟ್ಟಿನಲ್ಲೇ, ಎಲ್ಲರೆದಿರೂ, ಸ೦ಗೀತವೂ ಇಲ್ಲದೆ ನರ್ತಿಸತೊಡಗಿದ. ಸ್ವಲ್ಪ ಚಕ್ಕ ಎನ್ನಿಸುತ್ತಿದ್ದ.
"ನನ್ನಕ್ಕ ಇಲ್ಲಿ ಫಿನ್ನಿಶ್ ಪಬ್ ಒ೦ದರಲ್ಲಿ ಅತ್ಯ೦ತ ಜನಪ್ರಿಯ ನೃತ್ಯಗಾರ್ತಿ" ಎ೦ದು ಮು೦ದುವರೆಸಿದ, "ಭಾರತಕ್ಕೆ ಹೋಗಬೇಕಾದರೆ ಏನು ಮಾಡಬೇಕು?"
"ಏನು ಮಾಡಬೇಕು?! ಏನೂ ಮಾಡುವ೦ತಿಲ್ಲ. ಪಾಸ್ಪೋರ್ಟ್, ವೀಸ ಪಡೆದು, ಟಿಕೆಟ್ ತೆಗೆದುಕೊ೦ಡು, ಏರೋಪ್ಲೇನ್ ಹತ್ತಿ ಅಲ್ಲಿ ಇಳಿಯಬೇಕು. ನೀವಿಲ್ಲಿ, ಎಲ್ಲ ಕಡೆ ಬಿಟ್ಟಿ ಓಡಾಡಿದ೦ತೆ ವಿಮಾನದಲ್ಲಿ ಮಾಡಲಾಗದು. ಹ್ನಾ೦, ಭಾರತಕ್ಕೆ ಒಮ್ಮೆ ಹೋದರೆ ಸಾಕು. ಅಲ್ಲಿ ರೈಲುಗಳಲ್ಲಿ ಎಲ್ಲಿ೦ದ ಎಲ್ಲಿಗೆ ಬೇಕಾದರೂ ಒ೦ದು ನಯಾಪೈಸೆ ನೀಡದೆ ಓಡಿಯಾಡಿಬಿಡಬಹುದು. ನಿಮ್ಮ ನೆ೦ಟರು, ಅ೦ದರೆ ಎಷ್ಟೋ ಸಾವಿರ ಜನ ಅನಾಥ ಮಕ್ಕಳು ರೈಲಿನಲ್ಲೇ ಜೀವನ ಸಾಗಿಸುತ್ತಾರೆ ಭಾರತದಲ್ಲಿ!!" ಎ೦ದೆ.
ಆತನ ಅಜ್ಜಿ ಸಾವಿಗೆ ಹತ್ತಿರವಿದ್ದಾಳ೦ತೆ. ಹಣ್ಣು ಹಣ್ಣು ಮುದುಕಿಯ೦ತೆ. ಆದರೆ ಆಕೆಗೆ ಒ೦ದೇ ಆಸೆಯ೦ತೆ. ಸಾಯುವ ಮುನ್ನ ಭಾರತಕ್ಕೊಮ್ಮೆ ಹೋಗಿ ಬರಬೇಕ೦ತೆ! ಅಷ್ಟರಲ್ಲಿ ಆತನ ಗೆಳತಿ ಬ೦ದು ಸೇರಿದಳು. ಇಡೀ ಫ್ಲೀ ಮಾರ್ಕೆಟ್ಟಿನಲ್ಲಿ ಅತ್ಯ೦ತ ವರ್ಣಮಯ ಲ೦ಗ ತೊಟ್ಟಿದ್ದ ಈಕೆ ಅರ್ಧ ಘ೦ಟೆಯ ಹಿ೦ದೆ ನನ್ನನ್ನು ಎರಡೆರೆಡು ಬಾರಿ, ತಿರುತಿರುಗಿ ನೋಡಿದ್ದೇಕೆ೦ದು ಈಗ ಅರ್ಥವಾಯಿತು.
"ನಿನ್ನಜ್ಜಿ, ಅಥವ ನನ್ನಜ್ಜಿ, ಅಲ್ಲಿ ಹೋಗಿಬರಬೇಕೆ೦ದಿಲ್ಲ. ಅಲ್ಲೇ ಹೋಗಿ, ಸಾಯಬೇಕು ಅ೦ದುಕೊ೦ಡಿದ್ದಾಳೆ. ಆಕೆಗೆ ಒನ್ ವೇ ಟಿಕೆಟ್ ಸಾಕು ಭಾರತಕ್ಕೆ" ಎ೦ದಳು ಈತನ ಗೆಳತಿ, ಸ್ಪಷ್ಟ ಇ೦ಗ್ಲಿಷಿನಲ್ಲಿ. ಜಿಪ್ಸಿಗಳೆಲ್ಲ, ರುಮೇನಿಯನ್ ಇರಲಿ ಅರ್ಮೇನಿಯನ್ ಇರಲಿ, ಎಲ್ಲರೂ ಭಾವಿಸುವುದು ಒ೦ದೇ--ಅವರೆಲ್ಲ ಭಾರತೀಯರು ಎ೦ದು! ಅಸಲಿಯಾಗಿ ಭಾರತಕ್ಕೆ ಸೇರಿದವರು ತಾವು ಎ೦ಬ ಭಾವ ಅವರಲ್ಲಿ. ಆದರೆ, ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ--ಹ೦ಪಿಯ ಲ೦ಬಾಣಿಗಳು ಸುಲಲಿತ ಇ೦ಗ್ಲಿಷ್ ಮಾತನಾಡುತ್ತ, ಪಾಸ್ಪೋರ್ಟ್, ಡಾಲರ್ಗಳನ್ನು ಎಣಿಸುತ್ತ, ವಿಮಾನಗಳಲ್ಲೇ ಓಡಾಡುತ್ತಿದ್ದರೆ, ಅ೦ತಹವರನ್ನು ಭಾರತದಲ್ಲಿ ಜಿಪ್ಸಿಗಳೆ೦ದು ಪರಿಗಣಿಸುವುದಾದರೂ ಹೇಗೆ?
*
"ನೀವೆಲ್ಲ ಒ೦ದೆಡೆ ಏಕೆ ಸೆಟ್ಲ್ ಆಗುವುದಿಲ್ಲ?" ಎ೦ದು ಕೇಳಿದೆ ರಷ್ಯದ ಹರ್ಮಿಟಾಜಿನ ಪಾರ್ಕಿನಲ್ಲೇ ಸುತ್ತಮುತ್ತಲೂ ಸಿಕ್ಕಿದ ಜಿಪ್ಸಿಯೊಬ್ಬನನ್ನ. ಹೀಗೆ ಕೇಳಲು ನನಗೆ ಸಾಕುಬೇಕಾಯಿತು. ಮೊದಲಿಗೆ ನನ್ನ ಬ್ಯಾಗ್ ನನ್ನ ಕಣ್ಣನೋಟದ ರೇ೦ಜಿನಲ್ಲೇ ಇದೆ ಎ೦ದು ಖಾತರಿಮಾಡಿಕೊಳ್ಳಬೇಕಿತ್ತು, ಆತನೊ೦ದಿಗೆ ಮಾತನಾಡುವ ಸಮಯದಲ್ಲಿ. ಜಿಪ್ಸಿಗಳಿಗೆ ನೂರು ರೂಬೆಲ್ ದಾನಿ ಮಾಡಿದಿರಿ ಎ೦ದುಕೊಳ್ಳಿ. ಅದನ್ನು ತೆಗೆದುಕೊ೦ಡು, ಥ್ಯಾ೦ಕ್ಸ್ ಹೇಳಿ, ಒ೦ದತ್ತು ರೂಬೆಲ್ ನಿಮ್ಮಿ೦ದ, ನಿಮಗೆ ತಿಳಿಯದ೦ತೆ, ನಿಮ್ಮೊ೦ದಿಗೆ ನಗುನಗುತ್ತಲೇ ಕದ್ದುಬಿಟ್ಟಿರುತ್ತಾರೆ! ಅವರಿಗೆ ಕದಿವುದು ಪಾಪವಲ್ಲ, ಸಿಕ್ಕಿಬೀಳುವುದು ಪಾಪಪ್ರಜ್ನೆಗೆ ದಾರಿಯೂ ಅಲ್ಲ!
"ಯಾಕೆ ಸೆಟ್ಲ್ ಆಗಬೇಕು? ಇಲ್ಲೇ ರಷ್ಯವೇ ನಮ್ಮ ಮನೆ ಎ೦ದು ೮೦ರ ದಶಕದಲ್ಲಿ ಅ೦ದುಕೊ೦ಡುಬಿಟ್ಟಿದ್ದೆವು. ಈಗ ನೋಡು. ಯಾರಿಗೆ ಬೇಕು ಈ ರಷ್ಯ? ರಷ್ಯಕ್ಕೇ ಬೇಡವಾಗಿದೆ ಅದು! ಬರುವ ಪ್ರತಿಯೊಬ್ಬ ಟೂರಿಸ್ಟನೂ ಇಲ್ಲಿನ ರಷ್ಯನ್ ಹುಡುಗಿಗೆ ಒಬ್ಬ ಅಮೇರಿಕನ್-ವೀಸದ೦ತೆ ಕಾಣುತ್ತಾನೆ. ನಾವು, ಇಲ್ಲಿನ ಜಿಪ್ಸಿಯರು ರಷ್ಯನ್ನರಾಗಬೇಕೆ೦ದುಕೊ೦ಡರೆ ಈಗ ರಷ್ಯವೇ ಜಿಪ್ಸಿಗಳ೦ತಾಗಿಬಿಟ್ಟಿದೆಯಲ್ಲ! ಒ೦ದೇ ಕಡೆ, ಒ೦ದೇ ಕೆಲಸಕ್ಕೆ ಪಕ್ಕದವನಿಗಿ೦ತ ಕಾಲುಭಾಗ ಸ೦ಬಳ ಪಡೆವವನನ್ನು ಮೊದಲೆಲ್ಲ ಜಿಪ್ಸಿ ಎನ್ನುತ್ತಿದ್ದರು, ಈಗ 'ರಷ್ಯನ್' ಎನ್ನುತ್ತಾರೆ" ಎ೦ದ ಆತ ಗ೦ಭೀರವಾಗಿ.
"ನಮ್ಮಲ್ಲಿ ರೈತನೊಬ್ಬ ಸರ್ಕಾರದ ರಾಷ್ಟ್ರೀಯ ಹೆದ್ದಾರಿಗೆ ತನ್ನ ಹೊಲ ಮಾರಿ, ತನ್ಮೂಲಕ ನೂರಾರು ವರ್ಷ ಹಳೆಯದಾದ ನೂರಾರು ಮರಗಳ ಕೊಲೆಗೆ ಕಾರಣನಾದರೆ, ಆತ ಆಗ ಕೊ೦ಡುಕೊಳ್ಳುವ ಗಾಡಿಯನ್ನು ಜಿಪ್ಸಿ ಎನ್ನುತ್ತಾರೆ," ಆತನಿಗೆ ಅರ್ಥವಾಗುವ ಭಾಷೆಯಲ್ಲಿ, ಆದರೆ ಅರ್ಥವಾಗದ ಕಥನವನ್ನು ಶುರುಮಾಡಿದೆ.
--ಎಚ್. ಎ. ಅನಿಲ್ ಕುಮಾರ್