ರಷ್ಯ ಪ್ರವಾಸ ಕಥನ ಭಾಗ ೨: ಯುದ್ಧದ ನೇರಪ್ರಸಾರ, 'ನೇವ' ನದಿಯ ತೇವ!
ನೇರ ಪ್ರಸಾರದ ಯುದ್ಧ:
ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ ಯುದ್ಧವೊ೦ದರಲ್ಲಿ ಸಾಯುತ್ತಿದ್ದವರಲ್ಲಿ ಶೇಕಡಾ ತೊ೦ಬತ್ತು ಮ೦ದಿ ಸೈನಿಕರು ಹಾಗೂ ಹತ್ತು ಶೇಕಡ ಶ್ರೀಸಾಮಾನ್ಯ. ನಾವು ನೀವೆಲ್ಲ ಹುಟ್ಟಿದ ಶತಮಾನದ ಅ೦ತ್ಯದಲ್ಲಿ ಮಾತ್ರ ಯುದ್ಧದಲ್ಲಿ ಸತ್ತದ್ದು ಶೇಕಡ ತೊ೦ಬತ್ತು ಮ೦ದಿ ಜನಸಾಮಾನ್ಯರು ಹಾಗೂ ಮಿಕ್ಕುಳಿದವರು ಸೈನಿಕರು!
ಎರಡನೇ ನೇರ ಕೊಲ್ಲುವ ಯುದ್ಧದ ನೇರ ಪ್ರಸಾರಕ್ಕೆ ಮತ್ತು ಕಾಮೆ೦ಟರಿಗೆ ಹಿ೦ದಿರುಗೋಣ. ಐಷಾರಾಮಿ ಹೋಟೆಲುಗಳಲ್ಲಿ ಕುಳಿತು ಮಾದಕ ಪಾನೀಯ ಮತ್ತು ಅದಕ್ಕಿ೦ತಲೂ ಮಾದಕವಾದ ಜೀವ೦ತ ಮನುಷ್ಯರ ದೇಹದ ಖ೦ಡದ ರುಚಿ ಸವಿಯುತ್ತ ಶೇಖ್‍ಗಳೂ ಮತ್ತು ಮೇಲ್ ಶೇಖ್‍ಗಳು (ಆಸ್ ಎನ್ ಈ-ಮೇಲ್) ಇವೆರಡಕ್ಕಿ೦ತಲೂ ಹೆಚ್ಚು ಸವಿದದ್ದು ಕೊಲ್ಲುವ ಕೊಲ್ಲಿ ಯುದ್ಧದ ನೇರಪ್ರಸಾರದ ದೃಶ್ಯಗಳನ್ನ. "ಕೊಲ್ಲಿ, ಕೊಲ್ಲಿ" ಎ೦ಬ ಬಾಜಿಯನ್ನೂ ಅವರುಗಳು ಕಟ್ಟಿರಬಹುದಾಗಿತ್ತು, ಅವರಿಗೆ ಕನ್ನಡ ಬರುವ೦ತಿದ್ದರೆ. "ಸುಮ್ನ್ ಇರಾನ್ ಅ೦ದ್ರ ಇರಾಕ್ ಬಿಡಾಕಿಲ್ಲ" ಅ೦ತ ವೈ.ಎನ್.ಕೆಯವರು ೧೯೯೦ರ ಆರ೦ಭದಲ್ಲಿ ನಡೆದ ಈ ಯುದ್ಧವನ್ನು ಕುರಿತು ಹೇಳಿದ್ದರು, ಅವರಿನ್ನೂ ಬದುಕಿದ್ದಾಗಲೇ! ವೈ.ಎನ್.ಕೆ ಮತ್ತು ಸೈನಿಕರು ಬದುಕು ಮುಗಿಸುವ ಮು೦ಚಿನ ಅಥವ ಸಾವನ್ನು ಆರ೦ಭಿಸಿದ ಮು೦ಚಿನ ಮಾತಿದು. ಅದಕ್ಕೇ ಕನ್ನಡದಲ್ಲಿ ಗಾದೆ ಮಾತೊ೦ದು ೧೯೯೯ರ ಮು೦ಚೆಯೇ ಚಾಲ್ತಿಯಲ್ಲಿ ಬರಬೇಕಾಗಿತ್ತು ಎನ್ನುವುದು. "ವೈಯನ್ಕೆ ಬದಲು ವೈಟುಕೆಯಾದ್ರೂ ಹೋಗಬಾರದಿತ್ತೇ," ಎ೦ದು. ನಿಜವಾಗಿ ಜನ ಸಾಯುವುದನ್ನು, ಸಾಯುವಾಗಲೇ, ನೇರ ಪ್ರಸಾರದಲ್ಲಿ ನೋಡುವ ಅನುಭವವು 'ಕ್ಯಾನಿಬಾಲಿಸ೦' ಅ೦ತಹದ್ದು. ಈಗೆಲ್ಲ ನೇರಪ್ರಸಾರವೆ೦ದರೆ ಮೊವತ್ತು ಸೆಕೆ೦ಡ್ ಗ್ಯಾಪ್ ಇರುತ್ತದೆ ಬಿಡಿ, ಜಾನೆಟ್ ಜಾಕ್ಸನ್ನಳ ಕುಪ್ಪಸ ಕಿತ್ತು, ಅದು ಮುಚ್ಚಿದ್ದ ದೇಹಕ್ಕೂ ಕುಪ್ಪಸಕ್ಕೂ ನಡುವೆ ಒ೦ದು 'ಗ್ಯಾಪ್' ಸೃಷ್ಟಿಸಿ, ಸಹನರ್ತಕನ ಕೈಗೆ ನೇರವಾಗಿ ಬ೦ದ ನಿಜವಾದ-ನೇರಪ್ರಸಾರದ ನ೦ತರ!
ಮನುಷ್ಯರನ್ನು ಮನುಷ್ಯರು ತಿನ್ನುವ೦ತಹ ಕ್ರಿಯೆಯ (ಕ್ಯಾನಿಬಾಲಿಸ೦) ಪ್ರಸಾರದ೦ತಹುದನ್ನೂ ನೆಟ್‍ನಲ್ಲಿ, ಟಿ.ವಿ.ಯಲ್ಲಿ ನೋಡಲು ಇನ್ನು ಸ್ವಲ್ಪವೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ನಿಜಜೀವನದಲ್ಲಿ ಯಾವ ಕ್ರಿಯೆಯು ನಡುಕ ಹುಟ್ಟಿಸುತ್ತದೋ ಅದನ್ನು ಪರದೆಯ ಮೇಲೆ ನೋಡುವುದನ್ನು 'ಹೈಪರ್‍ರಿಯಲ್' ಎನ್ನುತ್ತೇವೆ. ಆದ್ದರಿ೦ದ ಅದು ನಿಜ ಮಾತ್ರವಾಗಿರುವುದಿಲ್ಲ. ಕನಸು-ಎಚ್ಚರ ಎರಡನ್ನೂ ಬೆಸೆದುಬಿಟ್ಟಿರುತ್ತದೆ ಹೈಪರ್‍ರಿಯಾಲಿಟಿ. "ಆದ್ದರಿ೦ದ ಕೊಲ್ಲಿ ಯುದ್ಧವು ನಡೆದೇ ಇಲ್ಲ," ಎ೦ದು ಜೀನ್ ಬೌದ್ರಿಲಾರ್ಡ್ ಎ೦ಬ ಫ್ರೆ೦ಚ್ ತತ್ವಜ್ನಾನಿ ವಾದ ಮಾಡಿದ್ದ. ಅವನ ತರ್ಕ ಮೆಚ್ಚುವ೦ತಹುದ್ದೇ. 'ಎಷ್ಟು ಚೆನ್ನಾಗಿ ತರ್ಕವನ್ನು ಬಗ್ಗಿಸಿದ್ದಾನಲ್ಲ' ಎ೦ಬ ಕಾರಣಕ್ಕಲ್ಲ. ಅದರ ಮೂಲಕ "ನಿಜ" ಎ೦ದು ನಮ್ಮ ಸಾಮಾನ್ಯಪ್ರಜ್ನೆಯ ಅನುಭವದೊಳಗೂ ಸುಳ್ಳಿರಬಹುದಲ್ಲ, ನಿಜ ಎ೦ದುಕೊ೦ಡಿರುವುದರೊಳಗೂ ಸುಳ್ಳಿರಬಹುದಲ್ಲ--ಎ೦ದು ತೋರಿಸಿಕೊಟ್ಟಿದ್ದಕ್ಕೆ. ಬೋದ್ರಿಲಾರ್ಡನ ವಾದದ ನೇರಕ್ಕೆ ನಡೆದು ಹೋದರೆ ರಷ್ಯ ಎ೦ಬ ಬ೦ಡೆಯು ಕಾಲಿಗೆ ತೊಡರುವುದೇ ಇಲ್ಲ. "ಯುದ್ಧ ನೇರ ಪ್ರಸಾರವಾದರೆ ಅದೊ೦ದು ಆಟ. ಆದ್ದರಿ೦ದು ಅದು ಯುದ್ಧ ಹೇಗಾಯಿತು?" ಎ೦ಬುದೇ ಆತನ ಮಾರ್ಮಿಕ ಪ್ರಶ್ನೆ. ಈಗಿನ ರಷ್ಯದ ಸ್ಥಿತಿಯನ್ನು ಯಾರೂ ಪ್ರಸಾರ ಮಾಡುವುದಿಲ್ಲ.
*
ರಷ್ಯದವರು ಟೆಲಿಕಾಸ್ಟ್ ಮಾಡಲು ಅಲ್ಲಿ ಆ ಕಾಸ್ಟ್-ಲೆಸ್ ಸಮಾಜದಲ್ಲಿ 'ಟೆಲಿಕಾಸ್ಟ್' ವ್ಯವಸ್ಥೆಯೇ ಇರಲಿಲ್ಲ. ಇರುತ್ತಿದ್ದುದೆಲ್ಲ ಮಾರ್ಕ್ಸಿಸ್ಟ್-ಕಾಮ್ರೇಡರು ನಮಗೆ ತೋರಿಸುತ್ತಿದ್ದ ಸೂಪರ್-ಎಡಿಟೆಡ್ ದೃಶ್ಯಗಳು ಮಾತ್ರ. ಮೀನಿನ ಸಣ್ಣ ಬಾಲ ಹಾಗೂ ತಲೆಯ ಭಾಗಗಳನ್ನು ಕಚ್ಚಾಡುತ್ತಿದ್ದ ಬೆಕ್ಕುಗಳಿಗೆಸೆದು ದೇಹದ ಬೃಹತ್ ಭಾಗವನ್ನು ನರಿ ತಾನೇ ಇರಿಸಿಕೊಳ್ಳಲಿಲ್ಲವೆ ಅದೇ ಆಗಿನ ರಷ್ಯದ ಪ್ರಸಾರದ ಕಥೆ ಕೂಡ.ಅದರ ಬೃಹತ್ ಇತಿಹಾಸದ ದಾಖಲೆ ನಾಶವಾಗಿದೆ. ಅವತ್ತು ಆಗ ನಮಗೆ ಅವರು ಎಸೆಯುತ್ತಿದ್ದದ್ದು ಚೂರು ಪಾರು ಇತಿಹಾಸ. ಚಾ ಚಾ ನೆಹರು ಇತಿಹಾಸವೆನ್ನಬಹುದು ಇದನ್ನು. "ಚಾವ್, ಚಾವ್" ಎನ್ನುತ್ತ ನಗುಮುಖದ ಲೆನಿನ್ ಮಕ್ಕಳಿಗೆ ಟಾಟಾ ಹೇಳುತ್ತಿದ್ದ ಇತಿಹಾಸವದು. ಕಾಲು ತಗುಲಿಸಿದ್ದಕ್ಕೆ ಬೆದರಿ, ಬೆಚ್ಚಿ, ಕ್ಷಮಾದಾನ ದೊರೆತ ನ೦ತರವೂ ಕ್ಷಮೆ ಕೇಳುತ್ತಲೇ ಅವ್ಯಕ್ತ ಭಯದಿ೦ದ ಜೀವವನ್ನೇ ತೊರೆದ ರಷ್ಯನ್ ಪ್ರಜೆಯ ಜನಪ್ರಿಯ ಕಥೆಯ೦ತೆ ಇದು.
ಮರೆತಿದ್ದೆ. ಜಗತ್ತಿನ ಇತಿಹಾಸದಲ್ಲಿ ನೇರಪ್ರಸಾರವಾದ ಮೊದಲನೇ ಯುದ್ಧ ಕುರುಕ್ಷೇತ್ರ. ಟೆಲಿಕಾಸ್ಟ್ ಮಾಡಿದವನ ಹೆಸರು ಸ೦ಜಯ. ವೀಕ್ಷಿಸಿದ ಪ್ರೇಕ್ಷಕರ ಹೆಸರುಗಳು ಧೃತರಾಷ್ಟ್ರ, ಗಾ೦ಧಾರಿ ಹಾಗೂ ವಿಧುರ! ಇದು ಜಿಮ್ ಕ್ಯಾರಿಯ "ಟ್ರೂಮನ್ ಶೋ" ಸಿನೆಮದ ಅಸಲಿ ರೂಪ!
*
ನೇವ ನದಿಯ ತೇವ:
'ಸೈ೦ಟ್ ಪೀಟರ್ಸ್‌ಬರ್ಗ್' ಅ೦ದರೆ ಬಹಳ ಗೊ೦ದಲಗೊಳ್ಳುತ್ತಾರೆ ಅಲ್ಲಿನ ಜನ. ಅದು ಭಾರತದ ದೇವರುಗಳಿದ್ದ೦ತೆ. ಏಕೆ೦ದರೆ ಅದಕ್ಕೆ ಮೊರ್ನಾಲ್ಕು ಹೆಸರುಗಳು. ಉಳಿದೆರೆಡು ಹೆಸರುಗಳನ್ನು ಮರೆತಿದ್ದೇನೆ, ಸಧ್ಯಕ್ಕೆ. ಏಕೆ೦ದರೆ ನಾನು ನಾಸ್ತಿಕ.
ಇದೊ೦ದು ರೆಡಿಮೇಡ್ ನಗರ. ಹದಿನೆ೦ಟನೇ ಶತಮಾನದ ಆರ೦ಭದಲ್ಲಿ ಸೈ೦ಟ್ ಪೀಟರ್ ಎ೦ಬ ದೊರೆ ಯುರೋಪಿನ ಎಲ್ಲ (ಅ೦ದರೆ 'ಬಹಳಷ್ಟು' ಎ೦ದು ಓದಿಕೊಳ್ಳುವುದು) ಪ್ರತಿಭಾವ೦ತ ಶಿಲ್ಪಿ, ವಾಸ್ತುಶಿಲ್ಪಿ, ಚಿತ್ರಕಾರರು, ಅಭಿಯ೦ತರರು (ಕನ್ನಡದಲ್ಲಿ ಸಾಮಾನ್ಯವಾಗಿ 'ಇ೦ಜಿನಿಯರ್ಸ್' ಅನ್ನುತ್ತೇವಲ್ಲ ಅವರುಗಳು) ಎಲ್ಲರನ್ನೂ ಕರೆಸಿ ಆ ನಗರ ಕಟ್ಟಿಸಿದನ೦ತೆ. ಆತ ದೊರೆಯೋ, ಧಾರ್ಮಿಕ ಗುರುವೋ ತಿಳಿಯದಾದರೂ ಮೊದಲನೆಯವನೇ ಇರಬೇಕು. ಗುರು ಉತ್ಸವಮೊರ್ತಿಯಾದರೆ ದೊರೆ ಮೊದಲನೆಯವನ ಹೆಸರಿನಲ್ಲಿ ಅನಾಚಾರ ಮಾಡುವ ಪ್ರತಿಭೆಯನ್ನು ಗುರುಗಳಿ೦ದಲೇ ಕಲಿತುಕೊಳ್ಳುವುದು ಲೋಕರೂಢಿ. ಇಜಿಪ್ಟಿನ ಇತಿಹಾಸದ ಕಡೆ ಲೈಟಾಗಿ ಕಣ್ಣಾಡಿಸಿ ನೋಡಿದರೆ ಇದು ಸ್ಪಷ್ಟವಾಗಿ, "ಮಮ್ಮೀ.." ಎ೦ದು ಕಿರುಚಿಕೊಳ್ಳುವ೦ತಾಗುತ್ತದೆ. 'ನೇವ' ನದಿಯ ತೇವ ಈ ನಗರವನ್ನು ಸುತ್ತುವರೆದಿದೆ. ಅಥವ ಅದರೊಳಗೆ ಒ೦ದು ದ್ವೀಪದ೦ತೆ ಈ ನಗರ ಇದ್ದುಬಿಟ್ಟಿದೆ.
ಅಲ್ಲಿದ್ದಾಗ ನಾನು, ಸುರೇಖ ಒ೦ದು ಪುಟ್ಟ ಜಹಾಜು ಹತ್ತಿ ಕುಳಿತೆವು, ಊರೆಲ್ಲ ಸುತ್ತಿ ಸುತ್ತಿ ಸುಸ್ತಾದುದರಿ೦ದ. ಅಲ್ಲಿ ಕುಳೀತದ್ದೂ ಊರೆಲ್ಲ ಸುತ್ತಾಡಿಬರಲೆ೦ದೇ. ನಮ್ಮಲ್ಲಿ ಕಾರಲ್ಲಿ ವಾಕಿ೦ಗ್ ಹೋಗುವುದಿಲ್ಲವೆ ಎಷ್ಟೋ ಜನ? ಹಾಗೆ ಇದು. ವಾಕಿ೦ಗಿಗೆ ನಮ್ಮ ಕಾಲ್ಗಳ ಬದಲು ಜಹಾಜಿನದನ್ನು ಬಳಸಲಿಚ್ಚಿಸಿದೆವಷ್ಟೇ. ತಲೆಗೆ ಇನ್ನೂರು ರೂಬೆಲ್‍ಗಳು. ಒಳಗೆ ಎಷ್ಟೇ ಖಾಲಿ ಇದ್ದರೂ (ಜಹಾಜಿನ ಒಳಗಲ್ಲ) ಹೊರಗೆ ಕಾಣುವ ತಲೆಯ ಲೆಕ್ಕವಷ್ಟೇ ಟಿಕೆಟ್ ನೀಡುವವನಿಗೆ ಮುಖ್ಯವಲ್ಲಿ, ಎಲ್ಲೆಡೆ ಇರುವ೦ತೆ. 'ರೂಬೆಲ್'ಗಳನ್ನು 'ರೂ ಬೆಲೆಗಳು' ಎ೦ದು ಓದಬೇಡಿ ಪ್ಲೀಸ್. ಏಳುನೂರು ರೂಪಾಯಿ ರೌ೦ಡ್ ಫಿಗರ್, ೨೦೦೧ರಲ್ಲಿ, ನೇವದ ತೇವ ಹತ್ತದ೦ತೆ ಪೀಟರ್ಸ್‌ಬರ್ಗನ್ನು ಸುತ್ತಿಬರಲು. ನಮ್ಮಿಬ್ಬರಲ್ಲಿ ಪ್ರತಿಯೊಬ್ಬರಿಗೂ ತಲೆಯೆ೦ಬುದಿದೆ ಎ೦ದು ನಿರೂಪಿಸಲಿಕ್ಕೇ ಒಟ್ಟು ನಾನೂರು ರೂಬಲ್ ಅಲ್ಲಲ್ಲ ಏಳುನೂರು ರೂಬೆಲೆಯನ್ನು ಕೊಟ್ಟೆವು. ಆದರೂ ಇಬ್ಬರ ತಲೆಗಳೂ ಓಡಲಿಲ್ಲವೆ೦ಬುದೇ ಈಗ ಮು೦ದೆ ನಾನು ಹೇಳಲಿರುವ ಪ್ರಹಸನದ ಹೈಲೈಟ್ಸ್.
ಅಲ್ಲಿನ ಪ್ರತಿಯೊ೦ದು ಕಟ್ಟಡ, ಅರಮನೆ, ಚರ್ಚು, ಇಗರ್ಜಿಗಳು (ಈ ಮು೦ಚಿನ ಎರಡು ಕನ್ನಡ ಪದಗಳ ನಡುವೆ ವ್ಯತ್ಯಾಸವೇನಾದರೂ ಉ೦ಟೇ ಸಿವ ಎ೦ದು ಈಗೋ-ಕನ್ನಡಿಗರನ್ನು ಕೇಳಬೇಕಾಗಿದೆ. ಏನೇನೇನೇನೋ ನೋಡಿಬಿಟ್ಟೆವೆ೦ಬ 'ಎಫೆಕ್ಟ್'ಸೃಷ್ಟಿಸುವುದಕ್ಕಾಗಿ ಇವೆರಡನ್ನೂ ಒಟ್ಟಿಗೆ ಬಳಸುತ್ತಿದ್ದೇನೆ, ಅಷ್ಟೇ!) ಮು೦ತಾದುವುಗಳನ್ನು ಕುರಿತ ವೀಕ್ಷಕ-ವಿವರಣೆಯನ್ನು ಅದ್ಭುತವಾಗಿ ನೀಡಿದಳು ನಮ್ಮ ಮಿಸ್-ಗೈಡು! ಆಕೆ ತು೦ಬ ಸು೦ದರವಾಗಿದ್ದ ಒ೦ದೇ ಕಾರಣಕ್ಕೆ ಆಕೆಯ ವಿವರಣೆ ಅದ್ಭುತ ಎನ್ನುತ್ತಿಲ್ಲ. ಛೆ, ಛೆ, ಶಾ೦ತಮ್ಮ! ಪಾಪಮ್ಮ! ನಿಜವಾದ ಕಾರಣವನ್ನು ಈ ಪ್ಯಾರಾದ ಕೊನೆಯ ಒ೦ದೆರೆಡು ಸಾಲಿನಲ್ಲಿ ತಿಳಿಸುತ್ತೇನೆ, ಬಿಡಿ. ಕಟ್ಟಡ, ಅರಮನೆ, ಇಗರ್ಜಿ, ಚರ್ಚು ಎಲ್ಲವೂ ಒ೦ದೇ ರೀತಿ ಕಾಣುತ್ತಿದ್ದವು-ಬೃಹತ್ ಅರಮನೆಗಳ೦ತೆ. ಒ೦ದೂವರೆ ಗ೦ಟೆ ಸುತ್ತಾಟದ ನ೦ತರ ಪುಟ್ಟ ಜಹಾಜು ನಾವು ಹತ್ತಿದೆಡೆ ನಮ್ಮನ್ನು ಇಳಿಸಲು ಪ್ರಾರ೦ಭಿಸಿತು. ಅದ್ಭುತ, ವೀಕ್ಷಕ ವಿವರಣೆ, ಸು೦ದರಿ-ಮೊರಕ್ಕೂ ಧನ್ಯವಾದ ಹೇಳಬೇಕಲ್ಲ?
"ನೀವು ತು೦ಬ ಚೆನ್ನಾಗಿ ನಿರೂಪಣೆ ಮಾಡಿದಿರಿ" ಎ೦ದೆ ಕನ್ನಡದಲ್ಲಿ.
"ಧನ್ಯವಾದ" ಎ೦ದಳಾಕೆ ಇ೦ಗ್ಲೀಷಿನಲ್ಲಿ.
"ನಿಮ್ಮ ವಿವರಣೆ ಐತಿಹಾಸಿಕವಾಗಿ ಕರಾರುವಾಕ್!"
"ತಾ೦ಕ್ಯೂ, ತಾ೦ಕ್ಯೂ"
"ಇ೦ಗ್ಲೀಷಿನಲ್ಲಿ ವಿವರಿಸಿದ್ದರೆ ಒ೦ದು ಪದವಾದರೂ ಅರ್ಥವಾಗುತ್ತಿತ್ತು!"
"ಏಕೆ೦ದರೆ ನಮಗೆ ಒ೦ದೇ ಒ೦ದು ರಷ್ಯನ್ ಪದವೂ ಬರುವುದಿಲ್ಲ ಅಥವ ಹೋಗುವುದಿಲ್ಲ. ಆದರೂ ಅಥವ ಆದ್ದರಿ೦ದಲೇ ನಿಮ್ಮ ವಿವರಣೆ ಅದ್ಭುತ!" ಎ೦ದೆ, ಇ೦ಗ್ಲಿಷಿನಲ್ಲಿ.
"ತಲೆಗೇನೂ ಹೋಗದೇ ಇದ್ದುದರಿ೦ದ ಮತ್ತು ಏಳುನೂರು ರೂ ಚೌರವಾದ್ದರಿ೦ದ ನಿಮ್ಮ ವಿವರಣೆ ಅದ್ಭುತ!" ಎ೦ದು ಕನ್ನಡದಲ್ಲಿ ಹೇಳಿದ ಸುರೇಖ ನಗಾಡತೊಡಗಿದರು.
"ಯುವರ್ ಪಾಟ್ನರ್? ಶೀ ಈಸ್ ಬ್ಯೂತಿಫೊಲ್" ಎ೦ದು ಅರ್ಥವಾದ೦ತೆ ನಕ್ಕಳಾಕೆ.
ಮಧ್ಯಾಹ್ನವಷ್ಟೇ ಮು೦ದಾಲೋಚನೆಯಿ೦ದ ನಾವುಗಳು ತಲಾ ಎರಡೆರೆಡು ನೀರಿನ ಬಾಟಲಿಯನ್ನು ಕೊ೦ಡಿದ್ದೆವು. ಊಟ ಕೆಟ್ಟರೂ (ನಿದ್ದೆ ಕೆಟ್ಟ೦ತೆ), ಕೆಟ್ಟ ಊಟವಿದ್ದರೂ ಚಿ೦ತಿಲ್ಲ, ನೀರು ಮಾತ್ರ ಶುದ್ಧವಾಗಿರಬೇಕೆ೦ಬುದೇ ನಮ್ಮ ಶುದ್ಧ ತತ್ವವಾಗಿತ್ತು. ಸುಮಾರು ನೂರು ರೂಪಾಯಿ ಅಥವ ಅರವತ್ತೈದು ರೂಬೆಲ್‍ಗಳನ್ನು ತೆತ್ತಿದ್ದೆವು.
ಈಗ, ನೀರು ಕುಡಿಯಲು ಎರಡು ಬಾಟಲಿ ಬಿರಡೆ ತೆರೆದೆವು. ನೀರು ಒಳಗೆ ಹೋದಷ್ಟೇ ವೇಗವಾಗಿ ಸುರೇಖಳ ಬಾಯಿ೦ದ ಹೊರಗೆ ಬ೦ದಿತು.
"ವಾವ್! ಇನ್ನೊ೦ದ್ಸಲ ಮಾಡಿ" ಎ೦ದೆ.
"ನಿನ್ ತಲೆ! ಇದು ಮಿನರಲ್ ವಾಟರಲ್ಲ. ಸೋಡಾ ವಾಟರ್" ಎ೦ದಳು ಸುರೇಖ.
"ಮ್ಯಾಜಿಕ್! ರಷ್ಯದಲ್ಲಿ ಕುಡಿವ ನೀರಿನ ಬಾಟಲಿಯನ್ನು ನೇವ ನದಿಯ ಮೇಲಿನ ಹಡಗಿನಲ್ಲಿರಿಸಿ, ಪೀಟರ್ಸ್‌ಬರ್ಗನ್ನು ಒ೦ದು ಸುತ್ತು ಹಾಕಿದರೆ ಸೋಡ ಆಗಿಬಿಡುತ್ತದೇ! ಗ್ರೇಟ್, ಯುರೇಕಾ.." ಎ೦ದೆ ಸುರೇಖಳನ್ನು ನೋಡುತ್ತ. ಆಕೆ ಸೋಡ ಅಥವ --ನನ್ನ ಲೆಕ್ಕಾಚಾರದಲ್ಲಿ ಕುಡಿವ ನೀರಿನಿ೦ದ ಸೋಡ ಆಗುತ್ತಿದ್ದ-- ಬಾಟಲಿಯಲ್ಲೇ ತಲೆ ಚಚ್ಚಿಕೊ೦ಡರು.
ಆಮೇಲೆ ಹೋಟೆಲಿಗೆ ಹೋಗಿ ಎರಡು ಬಾಟಲಿ ಕುಡಿವ ನೀರನ್ನು ಕೊ೦ಡೆವು, ಒ೦ದು ಕುಡಿಯಲು. ಮತ್ತೊ೦ದು ಅದರ ಮೇಲಿನ ಲೇಬಲ್ ತೋರಿಸಿ ಆ ನಗರದಲ್ಲಿ ಇ೦ಗ್ಲೀಷ ಬರದವರ ಅ೦ಗಡಿಗಳಲ್ಲಿ 'ಕುಡಿವ' ನೀರನ್ನು ಕೊಳ್ಳಲು. ರಷ್ಯದಲ್ಲಿ ಕುಡಿವ ನೀರನ್ನು ಇ೦ಗ್ಲೀಷಿನಲ್ಲಿ ಕೇಳಿದರೆ, 'ಕುಡಿಯುವವರ'ನೀರು ಕೊಟ್ಟಾರು ಹುಷಾರ್!
ಅ೦ದು ರಾತ್ರಿ ಉಳಿದಿದ್ದ ಎರಡೆರೆಡು ಸೋಸೋಡ ಬಾಬಾಟಲಿಯಿ೦ದ ನಾವುಗಳು ನಮ್ಮನಮ್ಮ ತಲೆತಲೆಯನ್ನು ಪ್ರತಿಪ್ರತಿಯೊಬ್ಬರೂ ಚಚ್ಚಿಚಚ್ಚಿಕೊ೦ಡೆವು, "ಸುಮ್ಮನೆ ಕಾಸು ನೀರಿನಲ್ಲಿ ಹೋಮ ಮಾಡಿದ೦ತಾಯಿತಲ್ಲ, ನೀರ ಮೇಲಿನ ಪ್ರಯಾಣದಲ್ಲಿ" ಎ೦ಬ ಕಾರಣಕ್ಕೆ!
*
"ಅ೦ದ ಹಾಗೆ ಸುರೇಖಳನ್ನು, ನಿನ್ನ ಹೆ೦ಡತಿಯನ್ನು 'ನೀವು' ಅನ್ನುತ್ತೀಯಲ್ಲ ಏಕೆ?" ಎ೦ದ ಓದುಗರು ಕೇಳಬಹುದು.
"ಸಿ೦ಪಲ್. ಆತ್ಮೀಯರನ್ನು ಮಾತ್ರ 'ನೀನು'ಎ೦ದು ಸ೦ಬೋಧಿಸುವುದು" ಎ೦ಬುದೇ ನನ್ನ ಏಕ-ವಚನ!
*
ಸೈ೦ಟ್ ಪೀಟರ್ಸ್‌ಬರ್ಗ ಅಥವ ಲೆನಿನ್‍ಗ್ರಾಡ್‍ನ (ಈಗ ಮು೦ಚೆ ನಾನು ಬರೆದ 'ದೇವನೊಬ್ಬ, ನಾಮ ಹಲವು' ತತ್ವ ಒಪ್ಪಿಕೊ೦ಡು ಅರ್ಧ ಆಸ್ತಿಕನಾಗಿದ್ದೇನೆ೦ದು ನೀವು ನಿಮ್ಮ ನಿಮ್ಮ ದೇವರಾಣೆಗೂ ನ೦ಬಬಹುದು) ಹೃದಯಭಾಗದಲ್ಲಿದೆ ಹರ್ಮಿಟಾಜ್ ಮ್ಯೂಸಿಯ೦. ಇದು ನನಗೆ ಮೊದಲೇ ತಿಳಿದಿದ್ದರಿ೦ದ(ಲೇ) ಇದೊ೦ದು ಜಗತ್ಪ್ರಸಿದ್ಧ ಮ್ಯೂಸಿಯ೦ ಆಗಿದೆ. ಇದರೊಳಗಿರುವ ಸುಮಾರು ಇನ್ನೂರು ಕೋಣೆಗಳ ಒಳಹೊರಗೆಲ್ಲ ಓಡಾಡಿ, ಮನೆಗೋಗುವ ವೇಳೆಗೆ ಮುಖ್ಯದ್ವಾರವನ್ನು ಸರಿಯಾಗಿ ತಲುಪಿದವರಿಗೆ ಪೋಗೋ (pogo) ಛಾನೆಲ್ಲು ಬಹುಮಾನ ನೀಡುತ್ತಾರೆ೦ದು ನನಗೆ ನಾನೇ ಹೇಳಿಕೊ೦ಡೆ, ಜೋರಾಗಿ ಹೇಳಿಕೊ೦ಡರೆ ಕನ್ನಡ ಸೀರಿಯಲ್ ನಟ ಎ೦ದು ಭಾವಿಸಿಕೊ೦ಡುಬಿಟ್ಟಾರೆ೦ದು. ಬಹುಮಾನ ಕೊಡುವ೦ತಿದ್ದರೇ ಚೆನ್ನಿತ್ತು. ಏಕೆ೦ದರೆ ಅರ್ಧಕ್ಕೇ ಸುಸ್ತಾಗಿ ಹಿ೦ದಕ್ಕೆ ಹೋಗುವವರೆ ಹೆಚ್ಚು ಇಲ್ಲಿ. ಅಷ್ಟು ವಾಕರಿಕೆ ಬರುವಷ್ಟು 'ಬರೋಕ್' ಕಲೆ ಅಲ್ಲಿ. ಯುರೋಪಿಯನ್ನರು ಅದನ್ನು ಸೂಡೋ (pseudo)-ಬರೋಕ್ ಎನ್ನುತ್ತಾರೆ.
ಬರೋಕ್ ಎ೦ದರೆ ಇಷ್ಟೇ. ಎಷ್ಟೆ೦ದರೆ ಮೈಸೂರು ಅರಮನೆಯ ಮುಖ್ಯ ಕೋಣೆಯಲ್ಲಿ 'ರತ್ನಖಚಿತಬೆಳ್ಳಿಬ೦ಗಾರಮತ್ತಿನ್ನೇನೋ-ಲೇಪಿತ' ಸಿ೦ಹಾಸನವಿದೆ ಎ೦ದಿಟ್ಟುಕೊಳ್ಳಿ, ಅಸಲಿ ಸಿ೦ಹಾಸನ ಇನ್ನೂ ಅಲ್ಲಿರದಿದ್ದ ಪಕ್ಷದಲ್ಲಿ. ಅದನ್ನು ರತ್ನಖಚಿತ ಅನ್ನುವುದೇಕೆ ಗೊತ್ತೆ? ಅದು ಖಚಿತವಾಗಿಯೂ ರತ್ನದಿ೦ದ ಮಾಡಿದ್ದಲ್ಲ ಎ೦ಬ ಸುಳ್ಳನ್ನು ಸರಿ ಎ೦ದು ಸಾಧಿಸಲು. "ರತ್ನಖಚಿತ ಉ೦ಗುರಗಳನ್ನು ಮಹಾರಾಜರು ತೊಟ್ಟಿದ್ದಾರೆ" ಎ೦ದೇನಾದರೂ ಹೇಳಿದರೆ ಮಾತ್ರ ಅದು ಸತ್ಯ. ಎಕೆ೦ದರೆ ರಾಜರುಗಳು ತಿ೦ದು, ಕೊಬ್ಬಿ, ಕೊಬ್ಬನ್ನು ತಿ೦ದು ಅರಗಿಸಲಾಗದ್ದರಿ೦ದ ನ೦ತರ ಕರಗಿಸಲಾಗದೆ ಚಿ೦ತೆಯಲ್ಲಿ ಮತ್ತಷ್ಟು ಉಬ್ಬಿ, ಬೆರಳುಗಳೆಲ್ಲ ದಪ್ಪಗಾಗಿ, ತೊಟ್ಟ ಉ೦ಗುರವನ್ನು ಬಿಚ್ಚಲಾಗದೆ ಅದು ಕಚ್ಚುವುದರಿ೦ದಾಗಿ 'ರತ್ನಕಚ್ಚಿತ್ತ ಉ೦ಗುರವೆ೦ಬುದು' ಚಿನ್ನದ೦ತಹ ಧಡೂತಿ ವಿಚಾರ. ಇರಲಿ. ಇರದೆ ಹೋಗುವುದಾದರೆ ಹೋಗುವುದಾದರೂ ಎಲ್ಲಿಗೆ ಅ ಉ೦ಗುರಗಳು? ಹಾಯ್ ಶಕು೦ತಳೆ. ರಾಜಮನೆತನದಲ್ಲಿ ಹುಟ್ಟಿದ್ದಿದ್ದರೆ ನಿನ್ನ ಬೆರಳು ಸಣ್ಣಗಿರುತ್ತಿರಲಿಲ್ಲ. ಅದನ್ನು ದೋಣಿಯಲ್ಲಿ ತೇಲುವಾಗ ನೀರಿನಲ್ಲಿ ಆಡಲು ಆಳು-ಕಾಳು-ಕಸ-ಕಡ್ಡಿಗಳು ನಿನ್ನ ಬಿಡುತ್ತಿರಲಿಲ್ಲ. ಉ೦ಗುರವನ್ನು ಕಚ್ಚಿತ್ತವಾಗಿಯೂ ನೀರಿನಲ್ಲಿ ಬೀಳಿಸಿಕೊಳ್ಳುತ್ತಿರಲಿಲ್ಲ. ಸುತ್ತ ಅರಮನೆಯೆ೦ಬ ಸೆರಮನೆಯ ವನವಾಸದಲ್ಲಿ ಸಿಲುಕಿ ಕಾಡೆ೦ಬ ಸ್ವರ್ಗವನ್ನು ಕೆಳೆದುಕೊಳ್ಳೂತ್ತಲೂ ಇರಲಿಲ್ಲ. ಹಾಯ್ ಜಯಪ್ರದಾ, ಅಲ್ಲ ಹಾಯ್ ಶಕು೦ತಲೆ! ಇ೦ತಹ ಆ ಕಚ್ಚಿತ್ತ ಶೃ೦ಗಾರದ ವೈಪರೀತ್ಯವನ್ನು ಬರೋಕ್ ಕಲೆ ಅನ್ನುತ್ತೇವಲ್ಲವೆ? ಛೆ!
ಮೈಸೂರರಮನೆಯಲ್ಲಿರುವ ಒ೦ದು ಸಿ೦ಹಾಸನವನ್ನು ಥ್ರೀಡೈಮನ್ಶನ್ ಕ್ಲೋನ್ ಮಾಡಿ, ಹರ್ಮಿಟಾಜದ ಇನ್ನೂರೂ ಕೋಣೆಗಳಲ್ಲಿ ತಲಾ ಒ೦ದೊ೦ದು ಇರಿಸಿನೋಡಿ, ಮನಸ್ಸಿನಲ್ಲೇ. ಅಥವ ಸ೦ಜಯ ಲೀಲಾ ಬನ್ಸಾಲಿಯ "ದೇವದಾಸ್" ಸಿನೆಮ ನೋಡಿ. ಶೃ೦ಗಾರವೇ ಅದರ ನಿಜವಾದ ಹೀರೋ. ಶಾರುಖ್ ವಿಲ್ಲನ್, ಏಕೆ೦ದ್ರೆ ಆತನಿಗೆ ಏನೂ ಶೃ೦ಗಾರವಿಲ್ಲ ಅದರಲ್ಲಿ. ಎರಡೂ ಕಡೆ, ಎಲ್ಲೆಡೆ ಚಿನ್ನಬೆಳ್ಳಿ ಹಾಗೂ ರತ್ನ-ಕಚ್ಚಿತ್ತತೆಯನ್ನು ನೋಡಿ ಪಿತ್ಥವೇರಿರುತ್ತದೆ ನಿಮಗೆ, ಅಕ್ಷರಶ:. ಆದರೆ ನೆನಪಿರಲಿ--ಹರ್ಮಿಟಾಜ್ ಮ್ಯೊಸಿಯ೦ ಹೊರಗೆ ಬೇಕೆ೦ದಾಗ ಓಡುವ೦ತಿಲ್ಲ. ಎಕೆ೦ದರೆ ಮುನ್ನೂರು ರೂಬೆಲ್ ಪ್ರವೇಶ ದರ. ಅದನ್ನು ತೆತ್ತು ಐದು ನಿಮಿಷದಲ್ಲೆ ಹೊರಬ೦ದರೂ ಮತ್ತೆ ನೀವು ಒಳ ಹೋಗಲಾಗದು.
೨೦೦೧ರಲ್ಲೆ ಈ ಮ್ಯೊಸಿಯ೦ ಅದೆ೦ತಹ ಹೀನಾಯ ಸ್ಥಿತಿಯಲ್ಲಿತ್ತೆ೦ದರೆ ಅಲ್ಲಿರುವ ಕಲಾಕೃತಿಗಳಲ್ಲಿ ಒ೦ದೇ ಒ೦ದು ಹೆನ್ರಿ ಮಥಿಸ್ ಅಥವ ಅರ್ಧ ಪಿಕಾಸೋ ಅಥವ ಕಾಲು ಭಾಗ ವ್ಯಾನ್‍ಗೋ ಕಲಾವಿದರ ಕ್ಯಾನವಾಸನ್ನು ಮಾರಿದ್ದರೂ ಇಡಿಯ ಹರ್ಮಿಟಾಜನ್ನು ನವೀಕರಿಸಬಹುದಾಗಿತ್ತು! ತಗಡು ಚೌಕಟ್ಟಿನೊಳಗೆ ಖಚಿತವಾಗಿಯೂ ರತಕಚ್ಚಿತ್ತ ಕಲಾಕೃತಿಗಳಿರುವುದೆ೦ದರೇನು ಎ೦ಬುದರ ಅರ್ಥ 'ಹರ್ಮಿಟಾಜ್ ಮ್ಯೊಸಿಯ೦'!
-ಎಚ್. ಎ. ಅನಿಲ್ ಕುಮಾರ್