ರಸ-ವಿರಸ
ಕವನ
ಸಂಜೆಗತ್ತಲು ಕವಿಯೆ
ಸುಳಿದು ಬಹ ತಂಗಾಳಿ
ವೀಣೆಯಿನಿದನಿಯನನುಕರಿಸುತಿಹುದು
ಜೀರುಂಡೆ ಕೊರೆತವನು
ಮೀರಿಸುತ ಮರದಲ್ಲಿ
ಬಾವಲಿಯ ಗುಂಪು ಕಲಕಲಗೈವುದು [೧]
ಒಳ ಮನೆಯ ಕತ್ತಲಲಿ
ತಾಯ ಜೋಗುಳ ಹಾಡು
ಪಸರಿಸಿದೆ ಗೃಹವ ಸಂಗೀತದಂತೆ
ಹಠ ಬಿಡದ ಹಸುಗೂಸು
ಕೈಕಾಲ ಫಡಫಡಿಸಿ
ತೊಟ್ಟಿಲನು ತುಳಿಯುತಿದೆ ತಾಳದಂತೆ [೨]
ದೂರದಿಂ ಕೇಳುತಿದೆ
ಯಕ್ಷಗಾನದ ಪದ್ಯ
ಸುರಿಯುತಿಹ ಮಳೆಯ ಅಬ್ಬರದ ಹಾಗೆ
ಅರ್ಥಕ್ಕೆ ತಲೆದೂಗಿ
ಹೂಮ್ಗುಡಲು ಭಾಗವತ
ಸೇರಿಸುತ್ತಿದೆ ತನ್ನ ದನಿಯ ಗೂಗೆ! [೩]
ಬೆಳಕಿನೊಂದಿಗೆ ತಮವು
ಹೂವಿನೊಡನಿದೆ ಮುಳ್ಳು
ಜೀವನದಿ ಸುಖ-ದುಃಖವಿರಲೆಬೇಕು
ಇದನರಿತು ನಾವೆಲ್ಲ
ಸಿಹಿಕಹಿಯ ಸಮಗೊಳಿಸಿ
ಸಮರಸದ ಸಹಬಾಳ್ವೆ ನಡೆಸಬೇಕು [೪]