ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಬರಹ

ಹೇಳಿ ಕೇಳಿ ನಮ್ಮ ಭಾರತ ಬಡರಾಷ್ಟ್ರ. ಹಾಗಂತ ಶ್ರೀಮಂತರಿಗೇನೂ ಕಡಿಮೆ ಇಲ್ಲ. ಶ್ರೀಮಂತಿಕೆ ಸ್ವ್ಲಲ್ಪಮಟ್ಟಿನದಾದರೂ ತೋರಿಕೆ ಮಾತ್ರ ಬೆಟ್ಟದಷ್ಟು.

ನಮ್ಮಲ್ಲಿ ಬಹುಪಾಲು ಶ್ರೀಮಂತರೆಂದರೆ ರಾಜಕಾರಣಿಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಶ್ರೀಮಂತರಾಗಲು ಈ ಕ್ಷೇತ್ರ ಇಂದಿನ ದಿನಗಳಲ್ಲಿ ಹೆಸರುವಾಸಿಯಾಗಿದೆ.

ಹಲವಾರು ವರ್ಷಗಳ ಹಿಂದೆ ಕೇವಲ ಸಾಮಾನ್ಯ ವ್ಯಕ್ತಿಯಾಗಿದ್ದ ಒಬ್ಬ ಮನುಷ್ಯನನ್ನು ಈ ರಾಜಕೀಯದಿಂದ ಬಂದ ಅಧಿಕಾರ ಎಂಬುದು ಆತನನ್ನು ಅವನಿಗೇ ಗೊತ್ತಿಲ್ಲದಂತೆ ಶ್ರೀಮಂತನನ್ನಾಗಿ ಮಾಡಿಬಿಡುತ್ತದೆ. ಶ್ರೀಮಂತನಾಗಲು ಪ್ರೇರೇಪಿಸುತ್ತದೆ. ಅಷ್ಟೊಂದು ಶಕ್ತಿಶಾಲಿ ಅದು!

ಇಲ್ಲಿನ ವ್ಯವಸ್ಠೆಯೂ ಹಾಗೆಯೇ ಮಾಡುತ್ತದೆ ಕೂಡಾ. ಸಾಮಾನ್ಯವಾಗಿ ನಾವು ಒಬ್ಬ ರಾಜಕಾರಣಿ ಪ್ರಾಮಾಣಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದರೆ ನಂಬುವುದಿಲ್ಲ. ಆತ ನಿಜವಾಗಿಯೂ ಪ್ರಾಮಾಣಿಕನಾಗಿಯೇ ಇರುತ್ತಾನೆ. ನಾವೇ ಅವನನ್ನು ಅನುಮಾನಿಸಿ, ಕೊನೆಗೆ ಅವನನ್ನು ಅಪ್ರಾಮಾಣಿಕನನ್ನಾಗಿಸಲು ಪ್ರಯತ್ನ ಮಾಡುತ್ತೇವೆ. ಇದಿರಲಿ ಈಗ ವಿಷಯಕ್ಕೆ ಬರೋಣ,

ಹೀಗೆ ಬೆಳವಣಿಗೆಯಾದ ರಾಜಕಾರಣಿಗಳು ತಮ್ಮ ತನವನ್ನು ತೋರಿಸಿಕೊಳ್ಳಲು ಹಪತಪಿಸುತ್ತಿರುತ್ತಾರೆ. ಜನಸಾಮಾನ್ಯರಿಗೆ ತುತ್ತು ಅನ್ನ ಕೂಡಾ ಹಾಕದ ಇವರುಗಳು, ದೊಡ್ಡ ದೊಡ್ಡ ಸಮಾರಂಭಗಳನ್ನು ಆಯೋಜನೆ ಮಾಡಿ, ತಮ್ಮಲ್ಲಿರುವ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುತ್ತಾರೆ ಅವರಿಗಿಂತ ಹೆಚ್ಚು ಶ್ರೀಮಂತರ ಮುಂದೆ, ಜನಸಾಮಾನ್ಯರ ಬಳಿ ಅಲ್ಲ!

ತಾವು ಗೆದ್ದು ಬಂದ ಕ್ಷೇತ್ರದ ಜನ ಸಾಯುತ್ತಿರಲಿ, ಅದು ಅವರಿಗೆ ಬೇಡ, ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವುದು ಅವರಿಗೆ ಬಹುಮುಖ್ಯ.

ದೇಶವನ್ನು ಮುನ್ನಡೆಸುತ್ತೇವೆಂದುಕೊಂಡು ಜನತೆಯಿಂದ ಆಯ್ಕೆಯಾಗಿ ಬರುವ ಇವರು, ಆಯ್ಕೆಯಾದ ಮೇಲೆ ತಾವು ಸ್ಪರ್ದಿಸುವ ಕ್ಷೇತ್ರವನ್ನೇ ಮರೆತುಬಿಡುತ್ತಾರೆ. ಅದು ಅವರ ಚಾಳಿಯೂ ಕೂಡ.

ಇಂತಹಾ ರಾಜಕಾರಣಿಗಳು ನಮ್ಮ ದೇಶಕ್ಕೆ ಅವಶ್ಯವೇ? ನಮಗೆ ಬೇಕೆ? ಒಮ್ಮೆ ಯೋಚಿಸಿ. ಪಾರ್ಟಿ, ಸಮಾರಂಭ ಮುಂತಾದವುಗಳನ್ನು ಆಯೋಜಿಸಿ, ಕೋಟಿಗಟ್ಟಲೆ ಖರ್ಚು ಮಾಡುವ ಇವರು, ಒಬ್ಬ ಬಡವನನ್ನು ಮೇಲಕ್ಕೆ ತರಲು ಪ್ರಯತ್ನ ಮಾಡುವುದಿಲ್ಲ.

ಮುಂದಾದರೂ ಈ ವ್ಯವಸ್ತೆ ಬದಲಾಗುವುದೇ ಕಾದುನೋಡಬೇಕಾಗಿದೆ.