ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ ಆಶಾದಾಯಕ ಸಂಗತಿ

ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ೨ನೇ ಸ್ಥಾನದಲ್ಲಿರುವ ಕರ್ನಾಟಕ ಗಜ ಸಂತತಿಯಲ್ಲಿ ಈ ಬಾರಿಯೂ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ರಾಜ್ಯದಲ್ಲಿ ೬೩೯೫ ಆನೆಗಳು ಇದ್ದು, ಕಳೆದ ಆರು ವರ್ಷಗಳಲ್ಲಿ ಇವುಗಳ ಸಂಖ್ಯೆ ೩೪೬ರಷ್ಟು ಹೆಚ್ಚಳವಾಗಿದೆ. ಬಂಡೀಪುರ ಅಭಯಾರಣ್ಯದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ೧೧೧೬ ಆನೆಗಳು ಗಣತಿ ವೇಳೆ ಪತ್ತೆಯಾಗಿವೆ. ಹೆಚ್ಚುತ್ತಿರುವ ನಗರೀಕರಣ ಹಾಗೂ ಜನಸಂಖ್ಯೆಯಿಂದಾಗಿ ವನ್ಯಜೀವಿ ಸಂಪತ್ತು ಕುಸಿಯುತ್ತಿದೆ ಎಂಬ ಕಳವಳದ ನಡುವೆಯೂ ರಾಜ್ಯದಲ್ಲಿ ಕಾಡುಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಈ ಭೂಮಿಯ ಮೇಲೆ ಬಾಳಲು ಮಾನವರಿಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ವನ್ಯಜೀವಿಗಳಿಗೂ ಇದೆ. ಬೇಟೆ ಮತ್ತಿತರ ಕಾರಣಗಳಿಂದಾಗಿ ವನ್ಯಜೀವಿಗಳಿಗೆ ಆತಂಕ ಎದುರಾಗಿತ್ತು. ಆದರೆ ಸರ್ಕಾರಗಳು ಕೈಗೊಳ್ಳುತ್ತಿರುವ ಸಂರಕ್ಷಣಾ ಕ್ರಮಗಳಿಂದಾಗಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕಾಡು ಪ್ರಾಣಿಗಳ ಸಂಖ್ಯೆ ವೃದ್ಧಿಯಾದಷ್ಟು ಅರಣ್ಯ ಸಂಪತ್ತು ಚೆನ್ನಾಗಿದೆ ಎಂದರ್ಥ. ಹೀಗಾಗಿ ವನ್ಯಜೀವಿ ಸಂಪತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾದ ಕ್ರಮಗಳು ಫಲ ನೀಡಲು ಆರಂಭಿಸಿವೆ. ಈ ಪ್ರಯತ್ನವನ್ನು ಸರ್ಕಾರ ಮುಂದುವರೆಸುತ್ತಿರಬೇಕು. ಸಂಖ್ಯೆ ಹೆಚ್ಚಳವಾಗಿದೆಯಲ್ಲ ಎಂದು ಮೈಮರೆಯಬಾರದು.
ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾದಷ್ಟೂ ಕಾಡಂಚಿನ ಜನರಿಗೆ ಸಮಸ್ಯೆಯಾಗುತ್ತದೆ. ಕಾಡುಜೀವಿಗಳು ಊರಿಗೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತವೆ ಎಂಬುದು ಅವರ ಪ್ರಮುಖ ದೂರು. ರಾಜ್ಯದ ಕೆಲವು ಭಾಗಗಳಲ್ಲಿ ಈ ಸಮಸ್ಯೆ ಯಾವಾಗಲೂ ಕಂಡುಬರುತ್ತಲೇ ಇರುತ್ತದೆ. ವನ್ಯಜೀವಿಗಳು ಜನರನ್ನು ಕೊಲ್ಲುವುದು, ದಾಂಧಲೆ ನಡೆಸುವುದು, ಜನರು ಅವನ್ನು ಹಿಂಸಿಸುವುದು ವರ್ಷವಿಡೀ ವರದಿಯಾಗುತ್ತಲೇ ಇರುತ್ತದೆ. ವನ್ಯಜೀವಿ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದರ ಜತೆಯಲ್ಲೇ ಮಾನವ-ಪ್ರಾಣಿ ಸಂಘರ್ಷ ನಿಗ್ರಹಿಸುವ ನಿಟ್ಟಿನಲ್ಲೂ ಸರ್ಕಾರದ ಕಡೆಯಿಂದ ಗಂಭೀರ ಪ್ರಯತ್ನಗಳು ಆಗಬೇಕಿದೆ. ರೈಲ್ವೇ ಬೇಲಿ, ಕಂದಕ ನಿರ್ಮಾಣದಂತಹ ಕೆಲಸಗಳನ್ನು ಅರಣ್ಯ ಇಲಾಖೆ ಮಾಡಿದ್ದರೂ, ಪೂರ್ಣಪ್ರಮಾಣದಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿಂತಿಲ್ಲ. ದೇಶದ ಇತರೆ ಭಾಗ, ವಿಶ್ವದ ಇತರೆಡೆಯಲ್ಲಿ ಇಂತಹ ಸಮಸ್ಯೆಗಳನ್ನು ಯಾವ ರೀತಿ ನಿಯಂತ್ರಿಸಲಾಗಿದೆ ಎಂಬುದರ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯವಿದೆ. ಕಾಡು ಪ್ರಾಣಿಗಳ ಆವಾಸಸ್ಥಾನದ ಒತ್ತುವರಿಯಿಂದಾಗಿ ಈ ಸಮಸ್ಯೆ ಇದೆ ಎಂಬುದೇನೋ ನಿಜ. ಹೀಗಾಗಿ ಸಾಧ್ಯವಿರುವ ಕಡೆ ಒತ್ತುವರಿ ತೆರವು ಮಾಡುವುದರ ಜತೆಗೆ ವನ್ಯಜೀವಿ ಕಾರಿಡಾರ್ ಗಳ ಪುನರುತ್ಥಾನಕ್ಕೆ ಆಸ್ಪದ ಮಾಡಿಕೊಡಬೇಕು. ವನ್ಯಜೀವಿಗಳ ಆವಾಸ ಸ್ಥಾನಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಕೊಳಿಸಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೦೮-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ