ರಾಜ್‌ಕುಮಾರ್ ಎಂಬ ಕವಿತೆ

ರಾಜ್‌ಕುಮಾರ್ ಎಂಬ ಕವಿತೆ

ಬರಹ

(ರಾಜ್‌ಕುಮಾರ್ ಬಗ್ಗೆ ಬಹಳ ಹಿಂದೆಯೇ ನಾನೊಂದು ಕವನ ಬರೆದಿದ್ದೆ. ಎಲ್ಲೂ ಪ್ರಕಟಣೆಗೆ ಕಳಿಸಲಿಲ್ಲ. ಅದೀಗ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಆದರೆ ಈಗಷ್ಟೇ ನಾನು ಈ ಪೋರ್ಟಲ್‌ನಲ್ಲಿ ಮಿತ್ರ ಡಿ.ಎಸ್.ರಾಮಸ್ವಾಮಿಯವರ ’ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)’ ಬರಹ ಓದಿದೆ. ಓದಿದ ತಕ್ಷಣ ನನ್ನ ಮನದಲ್ಲಿ ಕವನವೊಂದು ಸ್ಫುರಿಸಿತು. ಅದನ್ನು ಅಕ್ಷರಗಳಲ್ಲಿಳಿಸಿ ಇದೋ ಇಲ್ಲಿ ತಮ್ಮೆದುರಿಗಿಡುತ್ತಿದ್ದೇನೆ.)

ರಾಜ್‌ಕುಮಾರ್ ಎಂಬ ಕವಿತೆ

ಅಣ್ಣಾ,
ನಿನ್ನ ’ಅಭಿಮಾನಿ ದೇವರು’ಗಳಲ್ಲಿ
ಒಬ್ಬನಾಗಿರುವ ಈ ಹುಲುಮಾನವ
ನ ಪಾಲಿಗೆ ನೀನು
ಕಲಾದೇವತೆ,
ಸತ್ತ್ವ ಮತ್ತು ಸೌಂದರ್ಯಭರಿತ
ಕವಿತೆ.

ಇದು ಸತ್ಯ.
ನೀನೆನ್ನ ಬಾಳಿನಲಿ
ನಾ ಕಂಡ ಒಂದು
ಸತ್ಯ.
ಬಾಳಿಗೊಂದರ್ಥ ಕೊಡಬಲ್ಲ,
ಬಾಳು ಸಾರ್ಥಕಗೊಳಿಸಬಲ್ಲ
ವಿಷಯ-ವಿಶೇಷಗಳಲ್ಲೊಂದಾಗಿ
ಬೆಳಗುತ್ತಿರುವೆ ನೀ
ನನ್ನ ಬಾಳಿನಲಿ
ನಿತ್ಯ.

ನಟನೆಯೆಂಬುದೆ ನಿಜ,
ನಿಜವೆಂಬುದೇ ನಟನೆ,
ದಿಟವೆಂಬುದದು ಭಾವ
ಮತ್ತು ಭಾವುಕತೆ.
ನಟಿಸುವುದು ದೈವಕೃಪೆ,
ಘಟಿಸುವುದು ದೈವೇಚ್ಛೆ
ಎಂಬ ಭಾವದ ನಿನ್ನ
ಬಾಳೊಂದು ಕವಿತೆ.

ಹಾಡಿದೆ ನೀನು,
ಹಾಡಾದೆ.
ಕುಣಿದೆ, ಮನಗಳ
ಕುಣಿಸಿದೆ.
ದಣಿದೆ, ಮನಗಳ
ತಣಿಸಿದೆ.
ಕಾಡಿನ ಪಾಲಾದೆ,
ನಾಡಿನ ಮುತ್ತಾದೆ,
ನನ್ನ ಮುತ್ತುರಾಜಾ,
ಅನ್ಯಾದೃಶ ಕಲೆಯಿಂದ,
ಅಧ್ಯಾತ್ಮದ ಹೊಳಪಿಂದ,
ಸಮರ್ಪಣಭಾವದಿಂದ
ನಮ್ಮ ಹೃದಯದೊಂದು
ಅಮೂಲ್ಯ ಸೊತ್ತಾದೆ.

ಅಣ್ಣಾ,
ನೀನು
ಅರ್ಥಗರ್ಭಿತ ಕವಿತೆ.
ನಿನ್ನಿಂದ
ನಾನು
ಬಾಳ ಕಾವ್ಯವ ಕಲಿತೆ.