ರಾಜ ಮತ್ತು ಮಂಗಗಳು



ನೂರಾರು ವರುಷಗಳ ಹಿಂದೆ ಬನಾರಸಿನಲ್ಲಿ ಒಬ್ಬ ರಾಜ ರಾಜ್ಯವಾಳುತ್ತಿದ್ದ. ಅವನು ಮಹಾ ಸ್ವಾರ್ಥಿ. ಅವನಿಗೆ ತನ್ನ ಸುಖದ್ದೇ ಯೋಚನೆ ಹೊರತು ಅವನು ತನ್ನ ಪ್ರಜೆಗಳ ಹಿತದ ಬಗ್ಗೆ ಯೋಚಿಸುತ್ತಿರಲಿಲ್ಲ.
ಅದೊಂದು ದಿನ ಅರಮನೆಯ ಪಕ್ಕದ ನದಿಯಲ್ಲಿ ಸ್ನಾನ ಮಾಡುತ್ತಿದಾಗ, ಅವನು ಕೆಲವು ವಿಚಿತ್ರ ಹಣ್ಣುಗಳು ನೀರಿನಲ್ಲಿ ತೇಲುತ್ತಿದ್ದುದನ್ನು ಕಂಡ. ರಾಜ ಆ ಹಣ್ಣುಗಳನ್ನು ಬಾಚಿಕೊಂಡ. ನಂತರ ತನ್ನ ಆಸ್ಥಾನಿಕರನ್ನು ಕರೆಯಿಸಿ, ಅವರಿಗೆ ಅದನ್ನು ತೋರಿಸಿ "ಇದ್ಯಾವ ಹಣ್ಣು?” ಎಂದು ಕೇಳಿದ. ಅವರು ಯಾರಿಗೂ ಅದರ ಬಗ್ಗೆ ಗೊತ್ತಿರಲಿಲ್ಲ.
ಕೊನೆಗೆ ಅರಣ್ಯದ ಕಾವಲುಗಾರರನ್ನು ಕರೆಸಿ, ಆ ಹಣ್ಣನ್ನು ತೋರಿಸಲಾಯಿತು. ಅವರು ಅದನ್ನು ಪರಿಶೀಲಿಸಿ ಹೇಳಿದರು, "ಇದೊಂದು ಅಪರೂಪದ ಹಣ್ಣು. ಮಾವಿನ ಜಾತಿಗೆ ಸೇರಿದ ಈ ಹಣ್ಣು ಜಗತ್ತಿನಲ್ಲೇ ಅತ್ಯಂತ ಸಿಹಿ ಮತ್ತು ರುಚಿಯಾದ ಹಣ್ಣು.”
ರಾಜನಿಗೆ ಅದರ ರುಚಿ ನೋಡುವ ಆಶೆ. ಆದರೆ ಅವನಿಗೆ ಯಥಾಪ್ರಕಾರ ತನ್ನದೇ ಜೀವದ ಯೋಚನೆ. ಹಾಗಾಗಿ ಅದರ ಒಂದು ತುಂಡನ್ನು ಒಬ್ಬ ಆಸ್ಥಾನಿಕನಿಗೆ ಕೊಟ್ಟ. ಅದನ್ನು ತಿಂದಾಗ ಅವನಿಗೆ ಏನೂ ತೊಂದರೆ ಆಗಲಿಲ್ಲ. ಆದ್ದರಿಂದ ರಾಜನೂ ಅದರ ಒಂದು ತುಂಡನ್ನು ತಿಂದ. “ಓ, ಇಷ್ಟು ರುಚಿಯಾದ ಹಣ್ಣನ್ನು ನಾನು ತಿಂದೇ ಇಲ್ಲ. ಕಾವಲುಗಾರರೇ, ಈ ಹಣ್ಣು ಕೊಡುವ ಮರ ಎಲ್ಲಿದೆ?” ಎಂದು ಕೇಳಿದ ರಾಜ.
"ನದಿಯಲ್ಲಿ ಹಲವು ದಿನ ಪ್ರಯಾಣಿಸಿದರೆ, ನದಿ ದಡದಲ್ಲಿ ಈ ಹಣ್ಣು ಕೊಡುವ ಒಂದು ಅಪರೂಪದ ಮರ ಕಾಣ ಸಿಗುತ್ತದೆ” ಎಂದು ಉತ್ತರಿಸಿದರು ಅರಣ್ಯದ ಕಾವಲುಗಾರರು. “ಹಾಗಾದರೆ ನಾಳೆಯೇ ದೋಣಿಯಲ್ಲಿ ಹೊರಡೋಣ” ಎಂದ ರಾಜ.
ಮರುದಿನ ಬೆಳಗ್ಗೆ ರಾಜ, ಕೆಲವು ಆಸ್ಥಾನಿಕರು ಮತ್ತು ಕಾವಲುಗಾರರು ದೋಣಿಯಲ್ಲಿ ಯಾನ ಹೊರಟರು. ಮೂರು ದಿನ ಪ್ರಯಾಣಿಸಿದರು. ಮೂರನೆಯ ದಿನ ಸಂಜೆಯ ಹೊತ್ತಿಗೆ, “ನೋಡಿ, ಆ ಅಪರೂಪದ ಹಣ್ಣಿನ ಮರ ಅಲ್ಲಿದೆ” ಎಂದು ಕೂಗಿದರು ಕಾವಲುಗಾರರು. ದೋಣಿಯನ್ನು ನದಿ ದಡದಲ್ಲಿ ನಿಲ್ಲಿಸಲಾಯಿತು. ರಾಜ ಮತ್ತು ಉಳಿದವರು ದೋಣಿಯಿಂದ ಇಳಿದರು. ಆ ಮರದಲ್ಲಿ ಹಣ್ಣುಗಳು ತೊನೆದಾಡುತ್ತಿದ್ದವು.
ಆದರೆ ಆಗಲೇ ಕತ್ತಲಾವರಿಸಿತ್ತು. ಹಾಗಾಗಿ ಆ ಮರವನ್ನು ಕಾಯಲು ಕಾವಲುಗಾರರನ್ನು ನೇಮಿಸಿ, ರಾಜ ವಿರಮಿಸಿದ. ರಾಜನಿಗೆ ನಿದ್ದೆ ಬರುವಷ್ಟರಲ್ಲಿ ಸದ್ದುಗದ್ದಲ ಕೇಳಿಸಿತು - ಮಂಗಗಳು ಕಿರಿಚುತ್ತಿದ್ದವು ಮತ್ತು ಕಾವಲುಗಾರರು ಬೊಬ್ಬೆ ಹಾಕುತ್ತಿದ್ದರು. ರಾಜ ಡೇರೆಯಿಂದ ಹೊರಬಂದು ನೋಡಿದಾಗ, ಆ ಮಾವಿನ ಮರದಲ್ಲಿ ಹಲವು ಮಂಗಗಳು ಕುಳಿತು ಕೊಂಡು ಮಾವಿನ ಹಣ್ಣುಗಳನ್ನು ಕಿತ್ತುಕಿತ್ತು ತಿನ್ನುತ್ತಿದ್ದವು!
"ಆ ಮಂಗಗಳನ್ನು ತಕ್ಷಣವೇ ಓಡಿಸಿ” ಎಂದು ಆದೇಶಿಸಿದ ರಾಜ. ಕಾವಲುಗಾರರು ಕೆಲವು ಮಂಗಗಳಿಗೆ ತಮ್ಮ ಈಟಿಗಳನ್ನು ಬೆಳದಿಂಗಳಿನಲ್ಲಿ ಗುರಿಯಿಟ್ಟರು. ಇದನ್ನು ಕಂಡ ಆ ಮಂಗಗಳ ಗುಂಪಿನ ನಾಯಕ-ಮಂಗನಿಗೆ ಅಪಾಯದ ಅರಿವಾಯಿತು. ಆ ಮಾವಿನ ಮರದ ಹತ್ತಿರ ಇನ್ನೊಂದು ಮರವಿತ್ತು. ಅದರಾಚೆಗೆ ಹಲವು ಮರಗಳಿದ್ದವು. ಈಗ ನಾಯಕ-ಮಂಗ ಮಾವಿನ ಮರದ ಒಂದು ಕೊಂಬೆಯನ್ನು ಕಾಲುಗಳಿಂದ ಬಲವಾಗಿ ಹಿಡಿದುಕೊಂಡು, ಜಿಗಿದು ಇನ್ನೊಂದು ಮರದ ಕೊಂಬೆಯನ್ನು ಹಿಡಿಯಿತು. ಎಲ್ಲ ಮಂಗಗಳಿಗೂ ತನ್ನ ಮೈ ಮೇಲೆ ನಡೆದು ಹೋಗಿ ಅಲ್ಲಿಂದ ಪಾರಾಗಲು ಆದೇಶಿಸಿತು. ಎಲ್ಲ ಮಂಗಗಳೂ ಪಾರಾದವು.
ಇದನ್ನೆಲ್ಲ ನೋಡುತ್ತಿದ್ದ ರಾಜನೂ ಇತರರೂ ಮೂಕವಿಸ್ಮಿತರಾದರು. “ಇತರರನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಡುವ ನಾಯಕನಿಗೆ ಉಡುಗೊರೆ ಕೊಡಲೇ ಬೇಕು” ಎಂದ ಬನಾರಸಿನ ರಾಜ. ನಾಯಕ-ಮಂಗನನ್ನು ಹಿಡಿದು ರಾಜನ ಡೇರೆಗೆ ಒಯ್ಯಲಾಯಿತು. ಅದರ ಗಾಯಗಳಿಗೆ ಎಣ್ಣೆ ಹಚ್ಚಿ ಆರೈಕೆ ಮಾಡಲಾಯಿತು.
ಅನಂತರ ರಾಜ, ನಾಯಕ-ಮಂಗನಿಗೆ ಒಂದು ತಟ್ಟೆಯಲ್ಲಿ ಹಣ್ಣುಗಳನ್ನಿತ್ತು ಪ್ರಶ್ನಿಸಿದ, "ಉದಾತ್ತ ಮಂಗವೇ, ನಿನ್ನ ಗುಂಪಿನವರು ಪಾರಾಗಲಿಕ್ಕಾಗಿ ನೀನು ನಿನ್ನ ಪ್ರಾಣವನ್ನೇ ಅಪಾಯಕ್ಕೆ ಒಡ್ದಿದೆ. ಯಾಕೆ?" ನಾಯಕ-ಮಂಗ ಉತ್ತರಿಸಿತು, "ನಾನು ಅವರ ನಾಯಕ. ತನ್ನ ಅನುಯಾಯಿಗಳಿಂದ ಗೌರವ ಪಡೆಯುವುದು ನಾಯಕನ ಹಕ್ಕು; ಆದರೆ ಗಂಡಾಂತರದ ಸಂದರ್ಭಗಳಲ್ಲಿ, ತನ್ನ ಪ್ರಾಣವನ್ನೇ ಅಪಾಯಕ್ಕೆ ಒಡ್ದಿಯಾದರೂ, ಅವನು ಅನುಯಾಯಿಗಳ ಗೌರವ ಗಳಿಸಬೇಕು.”
ಬನಾರಸಿನ ರಾಜನಿಗೆ ಒಮ್ಮೆಲೇ ನಾಚಿಕೆಯಾಯಿತು. ತನ್ನ ಪ್ರಜೆಗಳ ಹಿತದ ಯೋಚನೆಯನ್ನೇ ಮಾಡದ ತಾನೆಷ್ಟು ಸ್ವಾರ್ಥಿ ಎಂದು ಅವನಿಗೆ ಅರ್ಥವಾಯಿತು.
ನಾಯಕ-ಮಂಗ ಮತ್ತು ಅದರ ತಂಡದ ಎಲ್ಲ ಮಂಗಗಳನ್ನೂ ರಾಜ ಬನಾರಸಿನ ತನ್ನ ಅರಮನೆಯ ಉದ್ಯಾನಕ್ಕೆ ಕರೆದೊಯ್ದ. ಅಲ್ಲೊಂದು ಕಲ್ಲಿನ ಶಾಸನ ಸ್ಥಾಪಿಸಿದ. ಅದರಲ್ಲಿ ಹೀಗೆ ಬರೆಯಿಸಿದ: "ಯಾರು ಇತರರನ್ನು ಗೌರವಿಸುತ್ತಾನೆಯೋ ಅವನು ಮಾತ್ರ ಇತರರಿಂದ ಗೌರವಿಸಲ್ಪಡುತ್ತಾನೆ.”
ಅಂದಿನಿಂದ ಬನಾರಸಿನ ರಾಜ, ತನ್ನ ಪ್ರಜೆಗಳ ಕುಂದುಕೊರತೆಗಳ ನಿವಾರಣೆ ಮಾಡುತ್ತಾ ನ್ಯಾಯದಿಂದ ಮತ್ತು ದಕ್ಷತೆಯಿಂದ ರಾಜ್ಯಭಾರ ನಡೆಸಿ, ಪ್ರಜೆಗಳ ಗೌರವಕ್ಕೆ ಪಾತ್ರನಾದ.