ರಾಮಾಯಣದಲ್ಲಿ 'ಶತ್ರುಘ್ನ' ನಿಮಗೆಷ್ಟು ಗೊತ್ತು?

ರಾಮಾಯಣದಲ್ಲಿ 'ಶತ್ರುಘ್ನ' ನಿಮಗೆಷ್ಟು ಗೊತ್ತು?

ಅಯೋಧ್ಯೆಯ ರಾಜಾ ದಶರಥನಿಗೆ ಕೌಶಲ್ಯ, ಸುಮಿತ್ರಾ, ಕೈಕೇಯಿ ಎಂಬ ಮೂವರು ಪತ್ನಿಯರು ಅವರಿಂದ ನಾಲ್ಕು ಮಂದಿ ಪುತ್ರರು. ಅವರ ಹೆಸರು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಎಂಬ ವಿಚಾರವನ್ನು ನಾವು ರಾಮಾಯಣದ ಕಥೆಗಳಲ್ಲಿ ಸಹಸ್ರಾರು ಬಾರಿ ಓದಿರುತ್ತೇವೆ ಅಥವಾ ಕೇಳಿರುತ್ತೇವೆ. ರಾಮ ಕೌಶಲ್ಯಳ, ಭರತ ಕೈಕೇಯಿಯ ಹಾಗೂ ಲಕ್ಷ್ಮಣ, ಶತ್ರುಘ್ನ ಇವರು ಸುಮಿತ್ರಾಳ ಸುಪುತ್ರರು. ಆದರೆ ನಿಮಗೆ ರಾಮ, ಲಕ್ಷ್ಮಣ, ಭರತರ ಬಗ್ಗೆ ತಿಳಿದಿರುವಷ್ಟು ಶತ್ರುಘ್ನನ ಬಗ್ಗೆ ತಿಳಿದಿದೆಯೇ ಎಂಬುದೇ ನನ್ನ ಪ್ರಶ್ನೆ. ಆತ ರಾಮಾಯಣದಲ್ಲಿ ಎಷ್ಟು ಪ್ರಸ್ತುತ ಎಂಬ ವಿಷಯ ಕೆಲವು ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಕೇಳಿ ಕಂಡುಕೊಂಡೆ. ಅದರಲ್ಲಿ ಭಾಗವಹಿಸಿದ ಒಬ್ಬನಂತೂ ಹಿಂದಿ ಚಿತ್ರರಂಗದ ಶತ್ರುಘ್ನ ಸಿನ್ಹಾ ಬಗ್ಗೆ ತಿಳಿದಷ್ಟು ವಿಷಯ ರಾಮಾಯಣದ ಶತ್ರುಘ್ನನ ಬಗ್ಗೆ ತಿಳಿದಿಲ್ಲ ಎಂದು ಬಿಟ್ಟ. ಇದು ನಮ್ಮ ಮಾಹಿತಿ ಕೊರತೆಯೋ ಅಥವಾ ನಾವು ನೋಡಿದ ರಾಮಾಯಣ ಧಾರವಾಹಿಯ ಪ್ರಭಾವವೋ ತಿಳಿಯದು. ದಶರಥನ ಮೂರು ಮಕ್ಕಳಿಗೆ ಇರುವಷ್ಟು ಮಹತ್ವ ಶತ್ರುಘ್ನನಿಗೆ ಇಲ್ಲದೇ ಹೋದರೂ, ಆತನು ರಾಮಾಯಣದಲ್ಲಿ ಸದಾಕಾಲ ತನ್ನ ಛಾಪನ್ನು ಬೀರುತ್ತಲೇ ಇರುತ್ತಾನೆ.  

ಶತ್ರುಘ್ನ ಹಾಗೂ ಲಕ್ಷ್ಮಣ ಅವಳಿ ಜವಳಿಗಳು. ಆದರೆ ಶತ್ರುಘ್ನನಿಗೆ ಸಲುಗೆ ಇದ್ದುದು ಕೈಕೇಯಿಯ ಮಗ ಭರತನ ಜೊತೆ. ಆದರೆ ಆತ ಲಕ್ಷ್ಮಣನಂತೆ ಮುಂಗೋಪಿಯೂ, ಉತ್ತಮ ಧನುರ್ಧಾರಿಯೂ ಆಗಿದ್ದ. ಮಿತಭಾಷಿಯೂ, ಸರಳ ಜೀವಿಯೂ, ಹಠವಾದಿಯೂ, ತೇಜಸ್ವಿಯೂ ಆಗಿದ್ದ ಆತ ಬಾಲ್ಯದಿಂದಲೂ ಭರತನ ಜೊತೆ ಕಾಲಕಳೆಯುವುದನ್ನು ಇಷ್ಟ ಪಡುತ್ತಿದ್ದ. ಈ ಕಾರಣದಿಂದಲೇ ಎಲ್ಲಾ ಸಹೋದರರ ವಿವಾಹವಾದ ಬಳಿಕ ಭರತ ತನ್ನ ಮಾವನಾದ ಯುಧಾಜಿತ್ತುವಿನ ಅರಮನೆಗೆ ಹೋಗುವಾಗಲೆಲ್ಲಾ ಶತ್ರುಘ್ನನೂ ಹೋಗುತ್ತಿದ್ದ. ಇದೇ ಕಾರಣದಿಂದ ದಶರಥನು ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಮಾಡುತ್ತಿರುವಾಗ ಭರತ ಹಾಗೂ ಶತ್ರುಘ್ನರು ಅರಮನೆಯಲ್ಲಿರಲಿಲ್ಲ. ತನ್ನ ಮಗ ಭರತ ರಾಜನಾಗಬೇಕೆಂಬ ಏಕೈಕ ಉದ್ದೇಶದಿಂದ ಕೈಕೇಯಿ, ದಶರಥನ ಹಿಂದೆ ನೀಡಿದ್ದ ಮಾತನ್ನು ನೆನಪಿಸಿಕೊಳ್ಳುತ್ತಾಳೆ. ಇದರಿಂದ ರಾಜಾ ದಶರಥ ಚಿಂತೆಗೀಡಾಗುತ್ತಾನೆ. ಅಪ್ಪನ ಮಾತನ್ನು ಉಳಿಸಲು ರಾಮ ವನವಾಸಕ್ಕೆ ತೆರಳಿದಾಗ ಆತನ ಜೊತೆ ಸೀತೆ ಹಾಗೂ ಲಕ್ಷ್ಮಣರೂ ಹೋಗುತ್ತಾರೆ. ಈ ನೋವಿನಿಂದ ದಶರಥ ಕೊನೆಯುಸಿರೆಳೆಯುತ್ತಾನೆ. 

ಭರತ ಹಾಗೂ ಶತ್ರುಘ್ನರು ಮರಳಿ ಅಯೋಧ್ಯೆಗೆ ಬಂದಾಗ ಅಲ್ಲಿ ದಶರಥನ ನಿಧನ ವಾರ್ತೆ ಹಾಗೂ ರಾಮ ಕಾಡಿಗೆ ಹೋದ ವಿಚಾರ ತಿಳಿದು ಬರುತ್ತದೆ. ಈ ಎಲ್ಲಾ ಸಂಚಿನ ಹಿಂದೆ ಇರುವುದು ಕೈಕೇಯಿಯ ಆಪ್ತ ಸಹಾಯಕಿ ಮಂಥರೆ ಎನ್ನುವ ವಿಚಾರ ಶತ್ರುಘ್ನನಿಗೆ ತಿಳಿದು ಬರುತ್ತದೆ. ಆತ ಕೂಡಲೇ ಮಂಥರೆಯ ಮುಡಿಯನ್ನು ತನ್ನ ಕೈಯಲ್ಲಿ ಹಿಡಿದು ಅವಳನ್ನು ಎಳೆದು ತಂದು, ಆಕೆಯನ್ನು ವಧೆ ಮಾಡಿ ಬಿಡುತ್ತೇನೆ ಎಂದಾಗ ಭರತ ಸಮಾಧಾನ ಮಾಡುತ್ತಾನೆ. ನಿನ್ನ ಕೈಯಿಂದ ಈಕೆ ಹತಳಾದರೆ ಅಣ್ಣನಾದ ರಾಮನು ಕೂಡಾ ನಿನ್ನನ್ನು ಕ್ಷಮಿಸಲಿಕ್ಕಿಲ್ಲ, ಆತ ನಮ್ಮ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾನೆ ಎಂದು ಹೇಳಿ ಮಂಥರೆಯನ್ನು ಶತ್ರುಘ್ನನ ಕೈಯಿಂದ ಬಿಡಿಸುತ್ತಾನೆ. 

ನಂತರ ಕಾಡಿನಲ್ಲಿದ್ದ ರಾಮನ ಮನವೊಲಿಸಿ ವಾಪಾಸು ಕರೆತರಲು ಭರತ ಹೋಗುವಾಗ ಆತನ ಜೊತೆ ಶತ್ರುಘ್ನ ಸಹಾ ಹೋಗುತ್ತಾನೆ. ಆದರೆ ಈ ಸಂಧಾನ ಯಶಸ್ವಿಯಾಗದೇ ಭರತನೇ ರಾಜ್ಯವಾಳಬೇಕು ಎಂದು ರಾಮನು ಅಂದಾಗ, ನೀವು ಕುಳಿತುಕೊಳ್ಳಬೇಕಾದ ಸಿಂಹಾಸನದಲ್ಲಿ ನಾನೆಂದೂ ಕುಳಿತುಕೊಳ್ಳಲಾರೆ ಎಂದು ಭರತ ರಾಮನ ಪಾದುಕೆಯನ್ನು ತರುತ್ತಾನೆ. ಅವರೆಲ್ಲಾ ಕಾಡಿನಿಂದ ಹಿಂದಿರುಗುವ ಸಮಯದಲ್ಲಿ ರಾಮನು ಶತ್ರುಘ್ನನನ್ನು ಪ್ರತ್ಯೇಕವಾಗಿ ಕರೆದು, ' ನೀನು ಕೈಕೇಯಿ ಮಾತೆಯ ಮೇಲೆ ಕೋಪಿಸಿಕೊಳ್ಳಬಾರದು, ಅವಳ ಸೇವೆ ಮಾಡಿಕೊಂಡಿರಬೇಕು ಎಂದು ಸೀತೆಯ ಮೇಲೆ ಪ್ರಮಾಣ ಮಾಡಿ ಕೇಳಿಕೊಳ್ಳುತ್ತೇನೆ' ಎಂದು ಆಣೆ ಮಾಡಿಸಿಕೊಳ್ಳುತ್ತಾನೆ. ಏಕೆಂದರೆ ರಾಮನಿಗೆ ಶತ್ರುಘ್ನ ಸಹಾ ಲಕ್ಷ್ಮಣನಂತೆಯೇ ಶೀಘ್ರವಾಗಿ ಕೋಪಗೊಳ್ಳುವವನೆಂದು ತಿಳಿದಿತ್ತು. 

ರಾಮನ ಪಾದುಕೆಯನ್ನು ಮುಂದಿಟ್ಟು ಭರತ ರಾಜ್ಯಭಾರ ಮಾಡುವಾಗ ಇಡೀ ರಾಜ್ಯದ ಜವಾಬ್ದಾರಿಯನ್ನು ಶತ್ರುಘ್ನ ನೋಡಿಕೊಳ್ಳುತ್ತಿದ್ದನಂತೆ. ನಂತರ ರಾವಣನ ವಧೆ ನಡೆದು, ರಾಮನ ಪಟ್ಟಾಭಿಷೇಕವಾದ ಬಳಿಕ ಒಂದು ದಿನ ಲವಣಾಸುರ ಎಂಬ ದಾನವನ ಉಪಟಳ ಪ್ರಾರಂಭವಾಗುತ್ತದೆ. ಆತನ ವಧೆಗಾಗಿ ಯಾರನ್ನು ಕಳಿಸುವುದು ಎಂದು ಪ್ರಸ್ತಾಪ ಬಂದಾಗ ಶತ್ರುಘ್ನ ತಾನೇ ಮುಂದೆ ಬರುತ್ತಾನೆ. 'ನೀವು (ರಾಮ ಲಕ್ಷ್ಮಣ) ಈಗಷ್ಟೇ ಕಾಡಿನಿಂದ ಬಂದಿರುವಿರಿ, ಅಣ್ಣ ಭರತ ರಾಜ್ಯಭಾರ ಹಾಗೂ ರಾಮನ ಅಗಲುವಿಕೆಯಲ್ಲಿ ಬಳಲಿದ್ದಾನೆ. ಅದಕ್ಕಾಗಿ ನಾನೇ ಹೋಗಿ ಲವಣಾಸುರನ ವಧೆ ಮಾಡಿ ಬರುವೆ' ಎನ್ನುತ್ತಾನೆ ಶತ್ರುಘ್ನ. ಅದಕ್ಕೆ ರಾಮ 'ಸರಿ ಹಾಗಾದರೆ ನೀನು ಲವಣಾಸುರನನ್ನು ಕೊಂದು ಅವನ ನಗರಿಗೆ ರಾಜನಾಗು' ಎಂದು ನುಡಿಯುತ್ತಾನೆ. ನೀವೆಲ್ಲಾ ನನ್ನ ಹಿರಿಯ ಅಣ್ಣಂದಿರು ಇರುವಾಗ ನಾನು ರಾಜನಾಗುವುದು ಸರಿಯಲ್ಲ ಎನ್ನುವ ಶತ್ರುಘ್ನ, ನಿಮ್ಮಿಂದ ದೂರವಿರುವುದೇ ನನ್ನ ದುರ್ಗತಿ ಎಂದು ನುಡಿಯುತ್ತಾನೆ. ರಾಮನು ಅವನನ್ನು ಸಮಾಧಾನ ಮಾಡಿ 'ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಲೇ ಬೇಕು ಶತ್ರುಘ್ನ' ಸ್ವಲ್ಪ ಸಮಯ ನೀನು ಅಲ್ಲಿ ರಾಜ್ಯಭಾರ ಮಾಡಿ ನಂತರ ಇಲ್ಲಿಗೆ ಬಾ' ಎನ್ನುತ್ತಾನೆ.

ಅದೇ ರೀತಿ ಶತ್ರುಘ್ನನು ಲವಣಾಸುರನನ್ನು ಕೊಂದು ಅವನ ನಗರವನ್ನು ಮಧುರಾಪುರ ಎಂಬ ಸುಂದರ ನಗರವನ್ನಾಗಿಸಿ ಹನ್ನೆರಡು ವರ್ಷಗಳ ಕಾಲ ಆಳಿ ಅಯೋಧ್ಯೆಗೆ ಮರಳುತ್ತಾನೆ. ರಾಮನನ್ನು ಕಂಡು 'ನಿನ್ನ ಮಾತಿನಂತೆ ನಾನು ನಡೆದುಕೊಂಡಿದ್ದೇನೆ ಇನ್ನಾದರೂ ನಿನ್ನ ಜೊತೆ ಇರಿಸಿಕೋ' ಎನ್ನುತ್ತಾನೆ ಶತ್ರುಘ್ನ. ಅದಕ್ಕೆ ರಾಮ ಹೇಳುತ್ತಾನೆ 'ರಾಜನಾದವನು ಜವಾಬ್ದಾರಿಗಳಿಂದ ಓಡಿ ಹೋಗಬಾರದು. ನೀನು ಪ್ರಜೆಗಳ ಪಾಲನೆ ಮಾಡುತ್ತಾ, ಆಗಾಗ ಇಲ್ಲಿಗೆ ಬಂದು ನಮ್ಮ ಜೊತೆ ಇದ್ದು ಹೋಗು, ಯಾವತ್ತೂ ರಾಜಧರ್ಮದಿಂದ ಹಿಂದೆ ಸರಿಯಬೇಡ' ಎನ್ನುತ್ತಾನೆ. ಈ ಮಾತಿನಿಂದ ಶತ್ರುಘ್ನನ ಕಣ್ಣು ತೆರೆಯುತ್ತದೆ. ತನ್ನ ಅಣ್ಣನ ಮಾತನ್ನು ಶಿರಸಾವಹಿಸಿ ಆತ ಮರಳಿ ಮಧುರಾಪುರಕ್ಕೆ ತೆರಳಿ ಅಲ್ಲಿ ರಾಜ್ಯಭಾರ ನಡೆಸುತ್ತಾನೆ. 

ಈ ರೀತಿ ಶತ್ರುಘ್ನನಿಗೆ ತನ್ನ ಅಣ್ಣನಾದ ರಾಮನ ಮಾತಿಗೆ ಗೌರವ ನೀಡಬೇಕೆಂಬ ಪರಿಜ್ಞಾನ ಇತ್ತು. ಅದೇ ಸಮಯ ಆತನ ಜೊತೆ ಇರಬೇಕೆಂಬ ಸಹೋದರತೆಯ ಮಮಕಾರದ ಗುಣವೂ ಇತ್ತು. ರಾಮಾಯಣದಲ್ಲಿ ಶತ್ರುಘ್ನ ಎಂಬ ಪಾತ್ರವು ಅತೀ ಕಡಿಮೆ ಪ್ರಸ್ತಾಪವಾದರೂ ಕೆಲವೊಂದು ಮಹತ್ವದ ಸಂದೇಶವನ್ನು ನೀಡಲು ಸಫಲವಾಗಿದೆ. ಅವುಗಳೆಂದರೆ ಗುರು ಹಿರಿಯರಲ್ಲಿ ವಿಧೇಯತೆ, ಸರಳತೆ, ಅನುಕಂಪ. ಈ ಕಾರಣದಿಂದ ಶತ್ರುಘ್ನನಿಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ