ರ್ರೀ! ಅರ್ಜಂಟಾಗಿ ನಂಬರ್ ಬೇಕಿತ್ತು !
ಕೆಲವೊಮ್ಮೆ ದೂರವಾಣಿ ಕರೆಗಳು "ಏನಿಲ್ಲ ಸುಮ್ನೆ ಕಾಲ್ ಮಾಡಿದೆ" ಎಂದೇ ಶುರುವಾಗಿ, ಹೇಗೆ ಭೂಮಂಡಲವೆಲ್ಲ ಸುತ್ತಿ ಬಂದು ಕರೆ ಮಾಡಿದ ಮೂಲ ವಿಷಯವನ್ನೇ ಮರೆಮಾಚಿ ಕೊನೆಗೊಳ್ಳುತ್ತದೆ ಎಂಬುದಕ್ಕೆ ಸುಮ್ಮನೆ ಹಾಗೆ ಒಂದು ಉದಾಹರಣೆ ಇಲ್ಲಿ. ಇರ್ಲಿ ಬಿಡಿ ಜನಕ್ಕೆ ಕನಿಷ್ಟ ಮಾತನಾಡುವಷ್ಟು ಸಮಯ ಇದೆಯೆಲ್ಲ ಅದೇ ಸಮಾಧಾನ.
ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಸುನಂದಳಿಗೆ ಕರೆ ಬಂತು ...
"ಹಲೋ! ಸುನಂದಾನಾ?"
"ಹೌದು ಸುನಂದಾನೇ ... ಯಾರು? ಶಾಂತನೇ?"
"ಹೌದ್ರೀ! ನನಗೆ ಅರ್ಜಂಟಾಗಿ ಸುಶೀಲಳ ಮನೆ ನಂಬರ್ ಬೇಕಿತ್ತು ಅಂತ ಕಾಲ್ ಮಾಡಿದೆ"
"ಅಷ್ಟೇನಾ ... ಬರ್ಕೊಳ್ಳಿ ... ನಾಲಿಗೆ ತುದೀಲ್ಲೇ ಇದೆ ... ಥೂ ಅಂದ್ರೆ ಬರುತ್ತೆ"
"ಒಂದು ನಿಮಿಷ, ಅಲ್ಲೇ ಇಟ್ಕೊಂಡಿರಿ ... ಪೆನ್ನು-ಹಾಳೆ ತೊಗೋತೀನಿ"
"ಅದು ಸರಿ, ಯಾಕೆ? ಏನಾಯ್ತು ಗಂಟಲಿಗೇ? ಮೊದಲಿಗೆ ನೀವು ಅಂತ ಗೊತ್ತೇ ಆಗಲಿಲ್ಲ. ಆರೋಗ್ಯಾ ಸರೀ ಇಲ್ವೋ?"
"ಹಾಗೇನಿಲ್ರೀ ... ಮೊನ್ನೆ ಶುಕ್ರವಾರ ಮದುವೆ ಮನೆಗೆ ಹೋಗಿದ್ವಲ್ಲ ... ಅಲ್ಲಿ ತರಹಾವರಿ ಜ್ಯೂಸ್ ಇಟ್ಟಿದ್ರು ... ದ್ರಾಕ್ಷಿ ಹಣ್ಣಿನ ಜ್ಯೂಸ್ ಇತ್ತು ... ಸ್ವಲ್ಪ ಜಾಸ್ತಿ ಆಯ್ತೇನೋ ಅದಕ್ಕೇ ಗಂಟಲು ಗರ ಗರ ಅಂತಿದೆ"
"ಹೌದೇ! ಅಂದ ಹಾಗೇ ! ನೆನ್ನೆ ಮಧ್ಯಾಹ್ನ ಆಂಜನೇಯನ ಗುಡಿಗೆ ಬರಲೇ ಇಲ್ಲ ನೀವು. ನಾವು ನಿಮಗಾಗಿ ಸ್ವಲ್ಪ ಹೊತ್ತು ಕಾದಿದ್ವಿ ..."
"ಅದೇನೋ ಗೊತ್ತಿಲ್ರೀ ... ಮದುವೆ ಮುಗಿಸಿಕೊಂಡು ಬಂದು ಮಲಗಿದ್ದು ನೋಡೀ ... ಏನೋ ಮಂಪರು .... ಬೆಳಿಗ್ಗೆ ಹಾಲಿನವನು ಕೂಗಿದಾಗ ಎಚ್ಚರವಾಯ್ತು ಅಂತ ನೋಡಿದರೆ ನಮ್ ಯಜಮಾನ್ರು ... ಬೆಳಗಿನ ಶಿಪ್ಟ್'ಗೆ ಕೆಲಸಕ್ಕೆ ಹೋದೋವ್ರು ಮಧ್ಯಾನ್ನ ಮೂರು ಘಂಟೆಗೆ ಮನೆ ಒಳಗೆ ಬಂದು ಹಾಲಿನ ಪ್ಯಾಕೆಟ್ ಹೊರಗೇ ಇದೆ ಅಂದ್ರು ... ರಾತ್ರಿ ಮಲಗಿದ್ದು ಮಧ್ಯಾಹ್ನಕ್ಕೆ ಎಚ್ಚರವಾಯ್ತು ... ಎಂದೂ ಇಲ್ಲದ್ ನಿದ್ದೆ"
"ಜ್ಯೂಸ್ ಜಾಸ್ತಿ ಆಯ್ತೇನೋ ... ಈಚೆಗೆ ಹಣ್ಣನ್ನೂ ನಂಬೋ ಹಾಗಿಲ್ಲ ನೋಡಿ"
"ಕರೀ ದ್ರಾಕ್ಷಿ ರಸ ಚೆನ್ನಾಗಿರುತ್ತದೆ ಅಂತ ತೊಗೊಂಡೆ"
"ಅಂದ ಹಾಗೇ ಯಾರ ಮದುವೆ ?"
"ನಮ್ ಯಜಮಾನರ ಮ್ಯಾನೇಜರ್ ಮಗಳ ಮದುವೆ. ಸಂಜೆ ಹೋಗಿದ್ವಿ. ಬೆಳಿಗ್ಗೆ ಹೋಗೋಣ ಅಂದೆ. "ಕೆಲಸ ಬಿಟ್ಟು ಯಾಕ್ರೀ ಬಂದ್ರಿ" ಅಂತ ಮ್ಯಾನೇಜರ್ ಬೈತಾರೆ, ಬೇಡಾ ಸಂಜೆಗೆ ಹೋಗೋಣ ಅಂದ್ರು ಅದಕ್ಕೇ ಸಂಜೆಗೆ ಹೋದ್ವಿ ... "
"ಹೋಗ್ಲಿ ಬಿಡಿ ... ನಂಬರ್ ಹೇಳ್ಳಾ?"
"ಪೆನ್ ಸಿಕ್ರೆ ಹಾಳೆ ಸಿಗಲ್ಲ, ಹಾಳೆ ಸಿಕ್ರೆ ಪೆನ್ ಸಿಗೋಲ್ಲ ... ಎರಡೂ ಇದ್ದಾಗ ನಮಗೆ ಬೇಕಾಗೋಲ್ಲ ... ಈಗ ಹಾಳೆ ಇದೆ, ಪೆನ್ ಇದೆ ... ಆದ್ರೆ ಪೆನ್ ಬರೀತಿಲ್ಲ!"
"ಒಳ್ಳೇ ಕಥೆ ಆಯ್ತು!"
"ಈಗಿನವರು ಕುಟು ಕುಟು ಅಂತ ಕುಟ್ಕೊಂಡು ಮೆಸೇಜ್ ಮಾಡಿಬಿಡ್ತಾರೆ ... ಪೆನ್ ಯಾಕೆ ಹಾಳೆ ಯಾಕೆ? "
"ಅದು ಸರಿ ಅನ್ನಿ. ಇನ್ನು ಕೆಲವರು ಸದಾ ಫೇಸ್-ಬುಕ್' ಅಂತ ಅದರಲ್ಲೇ ಮುಳುಗಿರ್ತಾರೆ"
"ಬುಕ್ಕಲ್ಲೇ ಮುಳುಗಿರ್ತಾರೆ ಅನ್ನೋಕ್ಕೆ ಅದೇನು ರಾಮಾಯಣವೋ ಮಹಾಭಾರತವೋ ಅಲ್ಲ ... ಆದರೂ ಅದರಲ್ಲಿ ಎಲ್ಲರ ಮನೆ ರಾಮಾಯಣ ಇರುತ್ತೆ ... ಎಲ್ಲರ ಜಗಳದ ಮಹಾಭಾರತ ಅಲ್ಲಿ ಸೇರಿರುತ್ತೆ ... "
"ಸತ್ಯ ಕಣ್ರೀ ... ಬಸ್ ಸ್ಟಾಂಡಿನಲ್ಲಿ ನಿಂತಿದ್ದೀನಿ ಅಂತ ಒಬ್ಬರು ಬರೆದ್ರೆ ಮೂಗು ಒರೆಸಿಕೊಳ್ತಿದ್ದೀನಿ ಅಂತ ಮತ್ತೊಬ್ಬರು ಬರೀತಾರೆ. "
"ನೀವು ಹೇಳಿದ ವಿಷ್ಯ ಕೇಳಿ ಒಂದು ವಿಷಯ ನೆನಪಿಗೆ ಬಂತು. ಮೊನ್ನೆ ನಮ್ ಕಡೆಯವರು ಒಬ್ಬರು ತೀರಿ ಕೊಂಡ್ರು ಕಣ್ರೀ ... ಎರಡು ದಿನವಾದ ಮೇಲೆ ಅವರಿಗೆ ಯಾರೊ ಬರೆದಿದ್ರು 'ವೀ ಮಿಸ್ ಯು' ಅಂತ. ಹೋದೋವ್ರು ಎಲ್ರೀ ಓದ್ತಾರೆ ಅದನ್ನ? "
"ಹೋದೋವ್ರ ವಿಷಯ ಹಾಗಿರ್ಲಿ ಕಣ್ರೀ ... ಮೊನ್ನೆ ಎದುರು ಮನೆ ರಂಗರಾವ್ ಇದ್ದಾರಲ್ಲ ಅವರಿಗೆ ಹೇಳಿದೆ "ನೋಡೀ ನಿಮ್ಮ ಗೋಡೆ ಮೇಲೆ ಯಾರೋ ಏನೋ ಬರೆದಿದ್ದಾರೆ' ಅಂತ. ಹೇಳಿದ ತಕ್ಷಣ ಒಳಗೆ ಎದ್ದು ಹೋದರು. ನಾನೇನು ತಪ್ಪು ಮಾತಾಡಿದೆ ಅಂತ ಅಂದುಕೊಂಡು ಸ್ವಲ್ಪ ಹೊತ್ತು ಕಾದೆ. ವಾಪಸ್ ಬಂದು, ಏನೂ ಇಲ್ಲವಲ್ಲ ಅಂದ್ರು ... ನಾನೆಂದೆ "ರಾಯರೇ... ನಿಮ್ಮ ಕಾಂಪೌಂಡ್ ಗೋಡೆ ಮೇಲೆ ನಿಮ್ಮ ಹೆಸರನ್ನ ಠಂಗಠಾವ್ ಅಂತ ಬರೆದಿದ್ದಾರೆ ಅಂತ. "
"ಹೌದೆ? ಪಾಪ ... ಮೊನ್ನೆ ತಾನೇ ಸುಣ್ಣ ಹೊಡೆಸಿದ್ದರು ... ಅದು ಸರಿ ಅವರು ಒಳಗೆ ಹೋಗಿದ್ಯಾಕೆ?"
"ರಾತ್ರಿಯೆಲ್ಲ ರಾಮಾಯಣ ಕೇಳಿ ರಾಮನಿಗೂ ಸೀತೆಗೂ ಏನು ಸಂಬಂಧ ಅಂದ ಹಾಗಾಯ್ತು ನಿಮ್ಮ ಮಾತು ... ನಾನು ಗೋಡೆ ಅಂದದ್ದಕ್ಕೆ ಅವರು ಫೇಸ್ ಬುಕ್ ತೆರೆದು ಆ ಗೋಡೆ ಮೇಲೆ ಏನು ಬರೆದಿದ್ದಾರೆ ಅಂತ ನೋಡೋಕ್ಕೆ ಹೋಗಿದ್ದರು. ಕತ್ತೆ ತಪ್ಪಿಸಿಕೊಂಡ್ರೆ ಹಾಳು ಗೋಡೆ ಅಂತ ಹೇಳ್ತಾರಲ್ಲ ಹಾಗಾಯ್ತು ... ಎಲ್ಲೂ ಸಿಗಲಿಲ್ಲ ಮಂದಿ ಅಂದರೆ ಫೇಸ್ ಬುಕ್ ಗೋಡೆ ಬಳಿ ಸಿಕ್ತಾರೆ ನೋಡಿ"
"ಸರಿ ಕಣ್ರೀ ಶಾಂತ ... ನಮ್ ಯಜಮಾನ್ರು ಗೋಡೆಗೆ ಬೆನ್ನು ಹಾಕಿ ಆ ಗೋಡೆ ಮುಂದೆ ಕೂತ್ರೆ ಏಳೋದೇ ಇಲ್ಲ .. ಹೋಗಿ ನೋಡ್ತೀನಿ ... ನಿಮ್ಮ ಪೆನ್ನು ಬರೀಲಿಕ್ಕೆ ಶುರು ಮಾಡಿದ್ರೆ ಮತ್ತೆ ಕರೆ ಮಾಡ್ರಿ ... ನಾನು ನಂಬರ್ ಹೇಳ್ತೀನಿ"
"ಅದು ಬರೀವಲ್ದು ಕಣ್ರೀ ... ಫೇಸ್ ಬುಕ್'ನಲ್ಲಿ ಒಂದು ಮೆಸೇಜ್ ಹಾಕ್ರಲ್ಲ ಮತ್ತೆ"
"???"
Comments
ಭಲ್ಲೆಯವರೆ, ಬರಹ ಚೆನ್ನಾಗಿದೆ.
In reply to ಭಲ್ಲೆಯವರೆ, ಬರಹ ಚೆನ್ನಾಗಿದೆ. by spr03bt
ಫೇಸ್ ಬುಕ್ ದೇವೀ ಮಾಹಾತ್ಮೆ ಅಂತ
ಗಂಡಸರುಗಳು ಪೋನ್ ಮಾಡಿದ್ರೆ ಈ
In reply to ಗಂಡಸರುಗಳು ಪೋನ್ ಮಾಡಿದ್ರೆ ಈ by sathishnasa
ಭಲ್ಲೆ ಅವ್ರೆ ಸೂಪರ್...!
In reply to ಭಲ್ಲೆ ಅವ್ರೆ ಸೂಪರ್...! by venkatb83
ಖಂಡಿತ ನಂಬರ್ ಕೂಡ ಬರುತ್ತೆ
In reply to ಗಂಡಸರುಗಳು ಪೋನ್ ಮಾಡಿದ್ರೆ ಈ by sathishnasa
ಸತೀಶರೇ
In reply to ಸತೀಶರೇ by bhalle
:) :) >>>ಅದ್ಯಾಕೋ ನಾವು ಕರೆ
In reply to :) :) >>>ಅದ್ಯಾಕೋ ನಾವು ಕರೆ by ಗಣೇಶ
ಅಲ್ವೇ ಮತ್ತೆ? ನಮ್ಮ ಕರ ಇರುವುದೇ
ನಿಮ್ಮ ಗೋಡೆ ಮೇಲೆ
In reply to ನಿಮ್ಮ ಗೋಡೆ ಮೇಲೆ by kavinagaraj
ಧನ್ಯವಾದಗಳು ಕವಿಗಳೇ ... ಕಲ್ಲು
ಭಲ್ಲೆ ಅವರೆ ನಿಮ್ಮ ಬರಹ ತುಂಬ
In reply to ಭಲ್ಲೆ ಅವರೆ ನಿಮ್ಮ ಬರಹ ತುಂಬ by roopa r joshi
ಅನಂತ ಧನ್ಯವಾದಗಳು ರೂಪ ಅವರೇ